ಪದ್ಯ ೨೮: ಊರ್ವಶಿಯು ಅರ್ಜುನನನ್ನು ಹೇಗೆ ಬೈದಳು?

ಮರೆಯ ಮಾತಂತಿರಲಿ ಸಾಕದ
ಮರೆದು ಕಳೆ ಮಾನಿನಿಯರಿಚ್ಛೆಯ
ನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ
ಕುರಿಕಣಾ ಫಡ ಖೂಳ ನೀನೆಂ
ತರಿವೆಯೆನೆ ನಡನಡುಗಿ ಕೈಮುಗಿ
ದೆರಗಿ ಮಗುಳೀಮಾತನೆಂದನು ಪಾರ್ಥ ಕೈಮುಗಿದು (ಅರಣ್ಯ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ವಿಷಯವನ್ನು ಮುಚ್ಚಿ ಆಡುವ ಮಾತುಗಳನ್ನು ಮರೆತು ಬಿಡು, ಯುವತಿಯರ ಇಚ್ಛೆಯನ್ನು ಅರ್ಥಮಾಡಿಕೊಳ್ಳದವನು ಇಂದ್ರನೇ ಆಗಿರಲಿ, ಚಂದ್ರನೇ ಆಗಿರಲಿ ಅವನೊಬ್ಬ ಕುರಿ. ಕೋಪಗೊಂಡ ಊರ್ವಶಿ ಅರ್ಜುನನಿಗೆ, ನೀಚಾ, ನೀನು ಇದನ್ನು ತಿಳಿದುಕೊಳ್ಳಲು ಅಸಾಧ್ಯ ಎಂದು ಹೇಳಲು, ಅರ್ಜುನನು ಹೆದರಿ ನಡುಗುತ್ತಾ ಕೈಮುಗಿದು ನಮಸ್ಕರಿಸಿ ಹೀಗೆ ಹೇಳಿದನು.

ಅರ್ಥ:
ಮರೆ: ನೆನಪಿನಿಂದ ದೂರ ಮಾಡು; ಮಾತು: ವಾಣಿ, ನುಡಿ; ಸಾಕು: ಕೊನೆ, ಅಂತ್ಯ; ಕಳೆ: ತೊರೆ, ಹೋಗಲಾಡಿಸು; ಮಾನಿನಿ: ಹೆಣ್ಣು; ಇಚ್ಛೆ: ಆಸೆ; ಅರಿ: ತಿಳಿ; ಸುರೇಂದ್ರ: ಇಂದ್ರ; ಚಂದ್ರ: ಶಶಿ; ಕುರಿ: ಮೇಷ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಖೂಳ: ದುಷ್ಟ; ನಡನಡುಗು: ಹೆದರು; ಕೈಮುಗಿ: ಹಸ್ತಗಳನ್ನು ಜೋಡಿಸಿ; ಎರಗು: ನಮಸ್ಕರಿಸು; ಮಗುಳು:ಪುನಃ, ಮತ್ತೆ; ಮಾತು: ನುಡಿ;

ಪದವಿಂಗಡಣೆ:
ಮರೆಯ +ಮಾತಂತಿರಲಿ +ಸಾಕದ
ಮರೆದು +ಕಳೆ +ಮಾನಿನಿಯರ್+ಇಚ್ಛೆಯನ್
ಅರಿಯದವನು+ ಸುರೇಂದ್ರನಾಗಲಿ+ ಚಂದ್ರನಾಗಿರಲಿ
ಕುರಿ+ಕಣಾ +ಫಡ+ ಖೂಳ +ನೀನೆಂತ್
ಅರಿವೆ+ಎನೆ +ನಡನಡುಗಿ +ಕೈಮುಗಿದ್
ಎರಗಿ+ ಮಗುಳ್+ಈ+ಮಾತನ್+ಎಂದನು +ಪಾರ್ಥ +ಕೈಮುಗಿದು

ಅಚ್ಚರಿ:
(೧) ಕೈಮುಗಿ – ೫, ೬ ಸಾಲಿನ ಕೊನೆ ಪದ
(೨) ಅರ್ಜುನನನ್ನು ಬೈದ ಪರಿ – ಮಾನಿನಿಯರಿಚ್ಛೆಯನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ ಕುರಿಕಣಾ ಫಡ ಖೂಳ ನೀನೆಂತರಿವೆ