ಪದ್ಯ ೪೩: ಸೂರ್ಯೋದಯವು ಹೇಗೆ ಕಂಡಿತು?

ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ (ದ್ರೋಣ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಾತ್ರಿಯಲ್ಲಿ ಚಂದ್ರನು ರಾಜ್ಯಭಾರ ಮಾಡುತ್ತಿದ್ದನು. ಅವನು ಹೋಗಲು ಅರಾಜಕತೆಯುಂಟಾಯಿತು. ಕುಮುದಗಳು ಬಾಗಿಲುಗಳು ಮುಚ್ಚಿದವು. ದುಂಬಿಗಳು ಮಕರಂದದ ಸಿರಿವಂತರಾದ ಕಮಲಗಳ ಅರಮನೆಗಳನ್ನು ಮುತ್ತಿದವು. ಆಕಾಶವನ್ನು ಸೂರ್ಯರಶ್ಮಿಗಳು ತುಂಬಿದವು. ಜನರ ಕಣ್ಣುಗಳನ್ನು ಮುಚ್ಚಿದ್ದ ರೆಪ್ಪೆಗಳು ತೆರೆದವು. ಚಕ್ರವಾಕ ಪಕ್ಷಿಗಳ ಸೆರೆಯನ್ನು ಬಿಡಿಸಿದರು.

ಅರ್ಥ:
ಜಗ: ಪ್ರಪಂಚ; ಅರಾಜಕ: ಅವ್ಯವಸ್ಥೆ; ಕುಮುದ: ಬಿಳಿಯ ನೈದಿಲೆ, ನೈದಿಲೆ; ಆಳಿ: ಸಮೂಹ; ಬಾಗಿಲು: ದ್ವಾರ; ಹೂಡು: ಅಣಿಗೊಳಿಸು; ಸೂರು: ಧ್ವನಿ, ಉಲಿ, ಸ್ವರ; ಕವಿ: ಆವರಿಸು; ದುಂಬಿ: ಭ್ರಮರ; ಸಿರಿ: ಸಂಪತ್ತು; ಅರಮನೆ: ರಾಜರ ಆಲಯ; ಉಗಿ: ಹೊರಹಾಕು; ಅಂಬರ: ಆಗಸ; ಮಯೂಖ: ಕಿರಣ, ರಶ್ಮಿ; ಆಳಿ: ಗುಂಪು; ಭುವನ: ಭೂಮಿ; ಜನ: ಮನುಷ್ಯ; ಕಂಗಳು: ಕಣ್ಣು; ತಗಹು: ಅಡ್ಡಿ, ತಡೆ; ತೆಗೆ: ಹೊರಹಾಕು; ಸೆರೆ: ಬಂಧನ; ಜಕ್ಕವಕ್ಕಿ: ಚಕ್ರವಾಕ ಪಕ್ಷಿ;

ಪದವಿಂಗಡಣೆ:
ಜಗವ್+ಅರಾಜಕವಾಯ್ತು+ ಕುಮುದಾ
ಳಿಗಳ +ಬಾಗಿಲು +ಹೂಡಿದವು +ಸೂ
ರೆಗರು+ ಕವಿದುದು +ತುಂಬಿಗಳು +ಸಿರಿವಂತರ್+ಅರಮನೆಯ
ಉಗಿದವ್+ಅಂಬರವನು +ಮಯೂಖಾ
ಳಿಗಳು +ಭುವನದ +ಜನದ+ ಕಂಗಳ
ತಗಹು+ ತೆಗೆದುದು +ಸೆರೆಯ +ಬಿಟ್ಟರು +ಜಕ್ಕವಕ್ಕಿಗಳ

ಅಚ್ಚರಿ:
(೧) ಸೂರ್ಯೋದಯವನ್ನು ಅತ್ಯಂತ ಸೃಜನಾತ್ಮಕತೆಯಲ್ಲಿ ವರ್ಣಿಸಿರುವುದು

ಪದ್ಯ ೪: ಐದು ಮತ್ತು ಆರನೆಯ ದಿನದ ಯುದ್ಧವು ಹೇಗೆ ನಡೆಯಿತು?

ಬಿದ್ದುದಗಣಿತ ಸೇನೆ ಪಡುವಲು
ಹೊದ್ದಿದನು ರವಿ ಮತ್ತೆ ಮೂಡಣ
ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ
ಬಿದ್ದುದದ್ಭುತರಣ ಕೃತಾಂತಗೆ
ಬಿದ್ದನಿಕ್ಕಿದನದಟನಬುಧಿಯೊ
ಳದ್ದ ಸೂರ್ಯನ ಬಿಂಬವೆದ್ದುದು ಮೂಡಣದ್ರಿಯಲಿ (ಭೀಷ್ಮ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಐದನೆಯ ದಿನವೂ ಲೆಕ್ಕವಿಲ್ಲದಷ್ಟು ಸೈನ್ಯ ನಿರ್ನಾಮವಾಯಿತು. ಸೂರ್ಯನು ಮುಳುಗಲು ಕುಮುದಗಲರಳಿದವು. ಮತ್ತೆ ಸೂರ್ಯನು ಹುಟ್ಟಿದನು. ಕುಮುದಗಳು ಮುಚ್ಚಿದವು, ಆರನೆಯ ದಿನ ಭೀಷ್ಮನು ಶತ್ರು ಸೈನ್ಯವನ್ನು ಕಡಿದು ಯಮನಿಗೆ ಔತಣವನ್ನು ನೀಡಿದನು. ಮುಳುಗಿದ ಸೂರ್ಯಬಿಂಬವು ಪೂರ್ವದಲ್ಲಿ ಮೂಡಿತು.

ಅರ್ಥ:
ಬಿದ್ದು: ಬೀಳು; ಅಗಣಿತ: ಅಸಂಖ್ಯಾತ; ಸೇನೆ: ಸೈನ್ಯ; ಪಡುವಣ: ಪಶ್ಚಿಮದಿಕ್ಕು; ಹೊದ್ದು: ಹೊಂದು, ಸೇರು; ಮೂಡಣ: ಪೂರ್ವ; ಗದ್ದುಗೆ: ಪೀಠ; ವೆಂಠಣಿಸು: ಮುತ್ತಿಗೆ ಹಾಕು; ಕುಮುದಾಳಿ: ಬಿಳಿಯ ನೈದಿಲೆಗಳ ಗುಂಪು; ಕಂಠಣಿಸು: ಗೋಳಾಡು, ದುಃಖಿಸು; ಬಿದ್ದು: ಬೀಳು; ಅದ್ಭುತ: ಅತ್ಯಾಶ್ಚರ್ಯಕರವಾದ ವಸ್ತು; ಕೃತಾಂತ: ಯಮ; ಇಕ್ಕು: ಇರಿಸು, ಇಡು; ಅದಟ: ಶೂರ, ಪರಾಕ್ರಮಿ; ಅಬುಧಿ: ಸಾಗರ; ಸೂರ್ಯ: ರವಿ; ಬಿಂಬ: ಕಿರಣ; ಮೂಡಣ: ಪೂರ್ವ; ಅದ್ರಿ: ಬೆಟ್ಟ;

ಪದವಿಂಗಡಣೆ:
ಬಿದ್ದುದ್+ಅಗಣಿತ +ಸೇನೆ +ಪಡುವಲು
ಹೊದ್ದಿದನು +ರವಿ +ಮತ್ತೆ +ಮೂಡಣ
ಗದ್ದುಗೆಯ +ವೆಂಠಣಿಸಿದನು +ಕುಮುದಾಳಿ +ಕಂಠಣಿಸೆ
ಬಿದ್ದುದ್+ಅದ್ಭುತ+ರಣ +ಕೃತಾಂತಗೆ
ಬಿದ್ದನ್+ಇಕ್ಕಿದನ್+ಅದಟನ್+ಅಬುಧಿಯೊಳ್
ಅದ್ದ +ಸೂರ್ಯನ +ಬಿಂಬವ್+ಎದ್ದುದು +ಮೂಡಣ್+ಅದ್ರಿಯಲಿ

ಅಚ್ಚರಿ:
(೧) ಸೂರ್ಯೋದಯ ಎಂದು ಹೇಳುವ ಪರಿ – ರವಿ ಮತ್ತೆ ಮೂಡಣ ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ, ಅಬುಧಿಯೊಳದ್ದ ಸೂರ್ಯನ ಬಿಂಬವೆದ್ದುದು ಮೂಡಣದ್ರಿಯಲಿ
(೨) ಸೂರ್ಯಾಸ್ತವನ್ನು ಹೇಳುವ ಪರಿ – ಪಡುವಲು ಹೊದ್ದಿದನು ರವಿ
(೩) ವೆಂಠಣಿ, ಕಂಠಣಿ – ಪ್ರಾಸ ಪದಗಳು

ಪದ್ಯ ೨೮: ಸೂರ್ಯನು ಏನು ನೋಡಲು ಉದಯಿಸಿದನು?

ಮಗನೊಡನೆ ಮೂದಲಿಸಿ ಭೀಷ್ಮನು
ಹೊಗುವ ಗಡ ಪರಸೇನೆಯನು ಕಾ
ಳೆಗವ ನೋಡುವೆನೆಂಬವೊಲು ತಲೆದೋರಿದನು ದಿನಪ
ನಗೆಯಡಗಿ ನಾಚಿದವು ಕುಮುದಾ
ಳಿಗಳು ಮುಂಗಾಣಿಕೆಯ ಹರುಷದೊ
ಳಗಿದು ವಿರಹವ ಬೀಳುಕೊಟ್ಟವು ಜಕ್ಕವಕ್ಕಿಗಳು (ಭೀಷ್ಮ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸೂರ್ಯನು ತನ್ನ ಮಗ ಕರ್ಣನೊಡನೆ ಮೂದಲೆಯ ವಾಗ್ವಾದವನ್ನು ಮಾಡಿ ಈ ದಿನ ಭೀಷ್ಮನು ಪರ ಸೈನ್ಯಕ್ಕೆ ನುಗ್ಗುತ್ತಾನೆ, ಈ ಯುದ್ಧವನ್ನು ನೋಡುತ್ತೇನೆ ಎಂದು ಹೇಳುವಂತೆ ಸೂರ್ಯನು ಉದಯಿಸಿದನು. ಕನ್ನೈದಿಲೆಗಳು ನಾಚಿ ಮುಚ್ಚಿಕೊಂಡವು, ಚಕ್ರವಾಕ ಪಕ್ಷಿಗಳ ವಿರಹ ಕೊನೆಗೊಂಡಿತು.

ಅರ್ಥ:
ಮಗ: ಸುತ; ಮೂದಲಿಸು: ಹಂಗಿಸು; ಹೊಗು:ಪ್ರವೇಶಿಸು; ಗಡ: ಅಲ್ಲವೆ; ಪರಸೇನೆ: ಶತ್ರುಸೈನ್ಯ; ಕಾಳೆಗ: ಯುದ್ಧ; ನೋಡು: ವೀಕ್ಷಿಸು; ತಲೆದೋರು: ಕಾಣಿಸಿಕೊ; ದಿನಪ: ಸೂರ್ಯ; ನಗೆ: ಸಂತಸ; ಅಡಗು: ಕಡಿಮೆಯಾಗು; ನಾಚು: ಅವಮಾನ ಹೊಂದು; ಕುಮುದ: ನೈದಿಲೆ; ಆಳಿ: ಗುಂಪು; ಮುಂಗಾಣಿಕೆ: ಮುಂದಾಗುವುದನ್ನು ತಿಳಿಯುವಿಕೆ; ಹರುಷ: ಸಂತಸ; ಅಗಿ: ಅಲುಗಾಡು, ಆವರಿಸು; ವಿರಹ:ಅಗಲಿಕೆ, ವಿಯೋಗ; ಬೀಳುಕೊಡು: ತೆರಳು; ಜಕ್ಕವಕ್ಕಿ: ಚಕ್ರವಾಕ ಪಕ್ಷಿಗಳು;

ಪದವಿಂಗಡಣೆ:
ಮಗನೊಡನೆ +ಮೂದಲಿಸಿ +ಭೀಷ್ಮನು
ಹೊಗುವ +ಗಡ +ಪರಸೇನೆಯನು +ಕಾ
ಳೆಗವ+ ನೋಡುವೆನೆಂಬವೊಲು+ ತಲೆದೋರಿದನು +ದಿನಪ
ನಗೆಯಡಗಿ +ನಾಚಿದವು+ ಕುಮುದಾ
ಳಿಗಳು+ ಮುಂಗಾಣಿಕೆಯ +ಹರುಷದೊಳ್
ಅಗಿದು +ವಿರಹವ +ಬೀಳುಕೊಟ್ಟವು +ಜಕ್ಕವಕ್ಕಿಗಳು

ಅಚ್ಚರಿ:
(೧) ಸುರ್ಯೋದಯವನ್ನು ವಿವರಿಸುವ ಪರಿ – ನಗೆಯಡಗಿ ನಾಚಿದವು ಕುಮುದಾಳಿಗಳು ಮುಂಗಾಣಿಕೆಯ ಹರುಷದೊಳಗಿದು ವಿರಹವ ಬೀಳುಕೊಟ್ಟವು ಜಕ್ಕವಕ್ಕಿಗಳು