ಪದ್ಯ ೩೪: ಕಮಲಗಳೇಕೆ ಸಂತಸಗೊಂಡವು?

ಬಗೆಯಲರಿದಿದು ಗರ್ಭ ಬಲಿಯದೆ
ಹಗಲನೀದುದೊ ರಾತ್ರಿ ಕುಡಿಕುಡಿ
ದುಗುಳುತಿರ್ದುವು ತಿಮಿರವನು ಕರದೀಪ್ತಿಕಾಳಿಗಳು
ಹೊಗರುಗೆಟ್ಟುದು ಕುಮುದ ಕಮಳದ
ಬಿಗುಹು ಬಿಟ್ಟುದು ಚಕ್ರವಾಕದ
ತಹಗು ಕೆಟ್ಟುದು ಹೇಳೆನಲು ರಂಜಿಸಿತು ದೀಪಾಳಿ (ದ್ರೋಣ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಗರ್ಭ ಬಲಿಯುವ ಮುನ್ನವೇ ರಾತ್ರಿಯು ಹಗಲನ್ನು ಈಯಿತೋ ಎಂಬಮ್ತೆ ಕೈಪಂಜುಗಳು ಬೆಳಕನ್ನು ಬೀರುತ್ತಿದ್ದವು. ಕುಮುದದ ಸಂತೋಷ ಕುಗ್ಗಿತು. ಕಮಲಗಳು ಅರಳಿದವು. ಚಕ್ರವಾಕಗಳ ಬೆದರಿಗೆ ಬಿಟ್ಟಿತು ಎನ್ನುವಂತೆ ದೀಪಗಳು ಹೊಳೆದವು.

ಅರ್ಥ:
ಬಗೆ: ರೀತಿ; ಅರಿ: ತಿಳಿ; ಗರ್ಭ: ಹೊಟ್ಟೆ, ಉದರ; ಬಲಿ: ಗಟ್ಟಿ, ದೃಢ; ಹಗಲು: ದಿನ; ರಾತ್ರಿ: ಇರುಳು; ಕುಡಿ: ಪಾನಮಾಡು; ತಿಮಿರ: ರಾತ್ರಿ; ಕರ: ಹಸ್ತ; ದೀಪ್ತಿ: ಬೆಳಕು, ಕಾಂತಿ; ಉಗುಳು: ಹೊರಹಾಕು; ಹೊಗರು: ಕಾಂತಿ, ಪ್ರಕಾಶ; ಕೆಟ್ಟು: ಹಾಳು; ಕುಮುದ: ಬಿಳಿಯ ನೈದಿಲೆ; ಕಮಳ: ತಾವರೆ; ಬಿಗುಹು: ಬಿಗಿ; ಚಕ್ರವಾಕ: ಕೋಕ ಪಕ್ಷಿ; ತಗಹು: ತಡೆ, ಪ್ರತಿಬಂಧಿಸು; ರಂಜಿಸು: ಶೋಭಿಸು; ದೀಪಾಳಿ: ದೀವಗಳ ಸಾಲು;

ಪದವಿಂಗಡಣೆ:
ಬಗೆಯಲ್+ಅರಿದಿದು +ಗರ್ಭ +ಬಲಿಯದೆ
ಹಗಲನ್+ಈದುದೊ +ರಾತ್ರಿ +ಕುಡಿ+ಕುಡಿದ್
ಉಗುಳುತಿರ್ದುವು +ತಿಮಿರವನು +ಕರ+ದೀಪ್ತಿಕಾಳಿಗಳು
ಹೊಗರು+ಕೆಟ್ಟುದು +ಕುಮುದ +ಕಮಳದ
ಬಿಗುಹು +ಬಿಟ್ಟುದು +ಚಕ್ರವಾಕದ
ತಹಗು +ಕೆಟ್ಟುದು+ ಹೇಳೆನಲು +ರಂಜಿಸಿತು +ದೀಪಾಳಿ

ಅಚ್ಚರಿ:
(೧) ರೂಪಕದ ಪ್ರಯೋಗ – ಗರ್ಭ ಬಲಿಯದೆ ಹಗಲನೀದುದೊ ರಾತ್ರಿ; ಕುಡಿಕುಡಿ ದುಗುಳುತಿರ್ದುವು ತಿಮಿರವನು ಕರದೀಪ್ತಿಕಾಳಿಗಳು
(೨) ರೂಪಕದ ಪ್ರಯೋಗ – ಹೊಗರುಗೆಟ್ಟುದು ಕುಮುದ; ಕಮಳದ ಬಿಗುಹು ಬಿಟ್ಟುದು; ಚಕ್ರವಾಕದ
ತಹಗು ಕೆಟ್ಟುದು

ಪದ್ಯ ೧೦: ಧರ್ಮಜನು ಯಾರನ್ನು ಕರೆದನು?

ಭೀಮ ಬಾ ಕುರುರಾಜ ಕುಲ ಚೂ
ಡಾಮಣಿಯ ತಾ ಹೋಗು ಕದನೋ
ದ್ದಾಮ ದರ್ಪನ ತಾ ನಿಜಾನ್ವಯ ಕುಮುದ ಚಂದ್ರಮನ
ತಾ ಮನೋವ್ಯಥೆ ಬೇಡ ನೃಪ ಚಿಂ
ತಾಮಣಿಯ ತಾಯೆನಲು ಕರಯುಗ
ತಾಮರಸವನು ಮುಗಿದು ಬಿನ್ನಹ ಮಾಡಿದನು ಭೀಮ (ಅರಣ್ಯ ಪರ್ವ, ೨೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭಾನುಮತಿಯ ಅಳಲನ್ನು ಕೇಳಿ, ಧರ್ಮರಾಯನು ಭೀಮನನ್ನು ಕರೆದು, ಕುರುವಂಶ ಚೂಡಾಮಣಿಯನ್ನು, ಯುದ್ಧದಲ್ಲಿ ದರ್ಪವುಳ್ಳವನನ್ನು, ಚಂದ್ರವಂಶದ ಕುಮುದಕ್ಕೆ ಚಂದ್ರನನ್ನು ಕರೆದುಕೊಂಡು ಬಾ, ಮನಸ್ಸಿನ ದುಗುಡವ ತೊರೆದು, ಶ್ರೇಷ್ಠನಾದವನನ್ನು ಕರೆದು ತಾ ಎನ್ನಲು, ಭೀಮನು ಕೈಮುಗಿದು ತನ್ನ ಮನವಿಯನ್ನು ಮುಂದಿಟ್ಟನು.

ಅರ್ಥ:
ಕುಲ: ವಂಶ; ಚೂಡಾಮಣಿ: ಶ್ರೇಷ್ಠ ವ್ಯಕ್ತಿ; ಕದನ: ಯುದ್ಧ; ಉದ್ದಾಮ: ಶ್ರೇಷ್ಠ; ಹೋಗು: ತೆರಳು; ದರ್ಪ: ಅಹಂಕಾರ; ಅನ್ವಯ: ವಂಶ; ಕುಮುದ: ಚಂದ್ರ, ಬಿಳಿಯ ನೈದಿಲೆ; ಚಂದ್ರ: ಶಶಿ; ಮನ: ಮನಸ್ಸು; ವ್ಯಥೆ: ದುಃಖ; ಬೇಡ: ತೋರೆ; ನೃಪ: ರಾಜ; ತಾ: ಕರೆದುಕೊಂಡು ಬಾ; ಕರ: ಹಸ್ತ; ಯುಗ: ಜೊತೆ, ಜೋಡಿ; ತಾಮರಸ: ಕಮಲ; ಮುಗಿ: ನಮಸ್ಕರಿಸು; ಬಿನ್ನಹ: ಮನವಿ;

ಪದವಿಂಗಡಣೆ:
ಭೀಮ+ ಬಾ +ಕುರುರಾಜ +ಕುಲ +ಚೂ
ಡಾಮಣಿಯ +ತಾ +ಹೋಗು +ಕದನ
ಉದ್ದಾಮ +ದರ್ಪನ+ ತಾ +ನಿಜಾನ್ವಯ +ಕುಮುದ +ಚಂದ್ರಮನ
ತಾ+ ಮನೋವ್ಯಥೆ +ಬೇಡ +ನೃಪ +ಚಿಂ
ತಾಮಣಿಯ +ತಾಯೆನಲು+ ಕರಯುಗ
ತಾಮರಸವನು+ ಮುಗಿದು+ ಬಿನ್ನಹ+ ಮಾಡಿದನು+ ಭೀಮ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳಿದ ಪರಿ – ಕುರುರಾಜ ಕುಲ ಚೂಡಾಮಣಿಯ, ಕದನೋ
ದ್ದಾಮ ದರ್ಪನ, ನಿಜಾನ್ವಯ ಕುಮುದ ಚಂದ್ರಮನ

ಪದ್ಯ ೩೯: ಕೀಲಗಿರಿಯ ಸುತ್ತವಿರುವ ಗಿರಿಗಳಾವುವು?

ವರ ಸಿತಾಂತರ ಬಿಂದು ಮಂದರ
ಕುರು ರುಚಕಗಳಿವು ಇಂದ್ರದಿಕ್ಕಿನ
ಲುರು ಕಳಿಂಗ ಪತಂಗ ನಿಷಧ ನಿಷಾದ ತಾಮಿಂತು
ತಿರುಗಿ ದಕ್ಷಿಣದಲ್ಲಿ ಮಧುಮಾ
ನ್ಯರಸ ಕುಮುದ ಸುಪಾರ್ಶ್ವವಾ ಪಿಂ
ಜರಗಳಿವು ವಾರುಣ ದಿಶಾಭಾಗದಲಿ ರಂಜಿಪುವು (ಅರಣ್ಯ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಸಿತಾಂತರ, ಬಿಂದು, ಮಂದರ, ಕುರುರುಚಕಗಳು ಪೂರ್ವದಲ್ಲೂ ಕಳಿಂಗ, ಪತಂಗ, ನಿಷಧ, ನಿಷಾದಗಳು ದಕ್ಷಿಣದಲ್ಲೂ ಮಧುಮಾನ್ಯ, ಕುಮುದ, ಸುಪಾರ್ಶ್ವ, ಪಿಂಜರಗಳು ಪಶ್ಚಿಮದಲ್ಲೂ ಇರುವ ಗಿರಿಗಳು.

ಅರ್ಥ:
ವರ: ಶ್ರೇಷ್ಠ; ಇಂದ್ರದಿಕ್ಕು: ಪೂರ್ವ; ಇಂದ್ರ: ಸುರಪತಿ; ದಿಕ್ಕು: ದಿಶೆ; ಉರು: ಶ್ರೇಷ್ಠವಾದ; ವಾರುಣದಿಶ: ಪಶ್ಚಿಮದಿಕ್ಕು; ರಂಜಿಸು: ಶೋಭಿಸು;

ಪದವಿಂಗಡಣೆ:
ವರ +ಸಿತಾಂತರ +ಬಿಂದು +ಮಂದರ
ಕುರು +ರುಚಕಗಳಿವು+ ಇಂದ್ರದಿಕ್ಕಿನಲ್
ಉರು +ಕಳಿಂಗ +ಪತಂಗ +ನಿಷಧ +ನಿಷಾದ +ತಾಮಿಂತು
ತಿರುಗಿ +ದಕ್ಷಿಣದಲ್ಲಿ+ ಮಧು+ಮಾ
ನ್ಯರಸ+ ಕುಮುದ +ಸುಪಾರ್ಶ್ವವಾ +ಪಿಂ
ಜರಗಳಿವು +ವಾರುಣ+ ದಿಶಾಭಾಗದಲಿ+ ರಂಜಿಪುವು

ಅಚ್ಚರಿ:
(೧) ಗಿರಿಗಳ ಹೆಸರು: ಸಿತಾಂತರ, ಬಿಂದು, ಮಂದರ, ಕುರುರುಚಕ, ಕಳಿಂಗ, ಪತಂಗ, ನಿಷಧ, ನಿಷಾದ,ಮಧುಮಾನ್ಯ, ಕುಮುದ, ಸುಪಾರ್ಶ್ವ, ಪಿಂಜರ

ಪದ್ಯ ೭೨: ಭೀಮನ ಮುಖದಲ್ಲಿ ನಸುನಗೆ ಬರಲು ಕಾರಣವೇನು?

ಘನಪರಾಕ್ರಮಿ ಭೀಮಸೇನಗೆ
ವಿನುತ ಭುಜಗೇಂದ್ರಂಗೆ ದುಶ್ಯಾ
ಸನನ ಜೀವಾನಿಳನ ಪಾರಣೆ ಸಮರಭೂಮಿಯಲಿ
ಮುನಿವನಾರಿವನೊಳಗೆ ಕರುಳಿನ
ಘನ ನಿಶಾಕರಬಿಂಬದುದಯದೊ
ಳನಿಲಜನ ಮುಖ ಕುಮುದ ನಸುನಗೆಯೆಸಳು ಪಸರಿಸಿತು (ಕರ್ಣ ಪರ್ವ, ೧೯ ಸಂಧಿ, ೭೨ ಪದ್ಯ)

ತಾತ್ಪರ್ಯ:
ಘನ ಪರಾಕ್ರಮಿಯಾದ ಭೀಮಸೇನನೆಂಬ ಸರ್ಪಕ್ಕೆ ದುಶ್ಯಾಸನನ ಜೀವವಾಯುವಿನಿಂದ ಯುದ್ಧರಂಗದಲ್ಲಿ ಪಾರಣೆಯಾಯಿತು. ಅವನ ಮೇಲೆ ಯಾರು ಕೋಪಗೊಳ್ಳಲು ಸಾಧ್ಯ. ದುಶ್ಯಾಸನನ ಕರುಳೆಂಬ ಚಂದ್ರೋದಯದಿಂದ ಭೀಮನ ಮುಖಕುಮುದದ ನಸುನಗೆಯ ದಳಗಳರಳಿದವು.

ಅರ್ಥ:
ಘನ: ದೊಡ್ಡ, ಶ್ರೇಷ್ಠ; ಪರಾಕ್ರಮಿ: ಶೂರ; ವಿನುತ: ಸ್ತುತಿಗೊಂಡ; ಭುಜಗೇಂದ್ರ: ಸರ್ಪಗಳ ರಾಜ, ನಾಗರಾಜ; ಜೀವ: ಉಸಿರಾಡುವ; ಅನಿಲ: ವಾಯು; ಪಾರಣೆ: ತೃಪ್ತಿ, ಸಂತೋಷ; ಸಮರಭೂಮಿ: ರಣರಂಗ; ಮುನಿ: ಸಿಟ್ಟಾಗು, ಕೋಪಗೊಳ್ಳು; ಕರುಳು: ಒಂದು ಜೀರ್ಣಾಂಗ; ನಿಶಾಕರ: ಚಂದ್ರ; ಬಿಂಬ: ಪ್ರಕಾಶ; ಉದಯ: ಹುಟ್ಟು; ಅನಿಲಜ: ವಾಯುಪುತ್ರ (ಭೀಮ); ಮುಖ: ಆನನ; ಕುಮುದ: ನೈದಿಲೆ, ಕೆಂದಾವರೆ; ನಸುನಗೆ: ಮಂದಸ್ಮಿತ; ಎಸಳು: ಕವಲು; ಪಸರಿಸು: ಹರಡು;

ಪದವಿಂಗಡಣೆ:
ಘನಪರಾಕ್ರಮಿ +ಭೀಮಸೇನಗೆ
ವಿನುತ+ ಭುಜಗೇಂದ್ರಂಗೆ +ದುಶ್ಯಾ
ಸನನ +ಜೀವಾನಿಳನ +ಪಾರಣೆ +ಸಮರ+ಭೂಮಿಯಲಿ
ಮುನಿವನ್+ಆರಿವನೊಳಗೆ +ಕರುಳಿನ
ಘನ +ನಿಶಾಕರ+ಬಿಂಬದ್+ಉದಯದೊಳ್
ಅನಿಲಜನ +ಮುಖ +ಕುಮುದ +ನಸುನಗೆ+ಎಸಳು +ಪಸರಿಸಿತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕರುಳಿನ ಘನ ನಿಶಾಕರಬಿಂಬದುದಯದೊಳನಿಲಜನ ಮುಖ ಕುಮುದ ನಸುನಗೆಯೆಸಳು ಪಸರಿಸಿತು
(೨) ಉಪಮಾನದ ಪ್ರಯೋಗ – ಭೀಮಸೇನಗೆ ವಿನುತ ಭುಜಗೇಂದ್ರಂಗೆ ದುಶ್ಯಾ
ಸನನ ಜೀವಾನಿಳನ ಪಾರಣೆ ಸಮರಭೂಮಿಯಲಿ

ಪದ್ಯ ೧೦೯: ಭೀಮ ಜರಾಸಂಧರ ಸಾಧನೆ ಹೇಗಿತ್ತು?

ಆವ ಸಾಧನೆಯೋ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ
ತಾವರೆಯತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲು ನೋಟದೊ
ಳಾವಿಗಡರುಗಳಡಸಿ ತಿವಿದಾಡಿದರು ಬೇಸರದೆ (ಸಭಾ ಪರ್ವ, ೨ ಸಂಧಿ, ೧೦೯ ಪದ್ಯ)

ತಾತ್ಪರ್ಯ:
ಭೀಮ ಜರಾಸಂಧರು ಅದೆಂಥ ಸಾಧನೆಯನ್ನು ಮಾಡಿದ್ದರೋ! ಅವರ ಹೊಡೆತದ ಭರಕ್ಕೆ ಬೆಟ್ಟಗಳು ಬಿರುಕುಬಿಟ್ಟವು. ಪರಾಕ್ರಮ ಮಹಾಕೋಪಗಳು ಅವರ ಮೈದುಂಬಿ ಉಕ್ಕಿ ಬಂದವು. ಸೂರ್ಯ ಚಂದ್ರರಿಬ್ಬರೂ ಆಕಾಶದಿಂದ ನೋಡುತ್ತಿರಲು ಅವರು ಮುಷ್ಟಾಮುಷ್ಟಿ ಯುದ್ಧವನ್ನು ಬೇಸರವಿಲ್ಲದೆ ಮುಂದುವರೆಸಿದರು.

ಅರ್ಥ:
ಸಾಧನೆ: ಪರಿಶ್ರಮ, ಅಭ್ಯಾಸ; ವಿಘಾತಿ: ಹೊಡೆತ, ವಿರೋಧ; ಅದ್ರಿ: ಬೆಟ್ಟ; ಬಿರಿ: ಸೀಳು ಬಿಡು; ಮೈವಳಿ: ವಶ, ಅಧೀನ; ಉಕ್ಕು: ಹೆಚ್ಚಾಗು; ಕಡುಹು: ಪರಾಕ್ರಮ; ಖತಿ: ರೇಗುವಿಕೆ, ಕೋಪ;ಕೈಮಸಕ: ಮಾಟ; ತಾವರೆ: ಕಮಲ; ಕುಮುದ:ಬಿಳಿಯ ನೈದಿಲೆ; ಜೀವಿ: ಪ್ರಾಣಿ, ಪಕ್ಷಿ; ಮಿಗೆ: ಮತ್ತು; ನೋಟ: ದೃಷ್ಟಿ; ಬೇಸರ: ಬೇಜಾರು; ತಿವಿದಾಡು: ಹೋರಾಡು;

ಪದವಿಂಗಡಣೆ:
ಆವ +ಸಾಧನೆಯೋ +ವಿಘಾತಿಯಲ್
ಆವಣಿಗೆಗ್+ಅದ್ರಿಗಳು +ಬಿರಿದವು
ಮೈವಳಿಯಲ್+ಉಕ್ಕಿದುದು +ಕಡುಹಿನ+ ಖತಿಯ +ಕೈಮಸಕ
ತಾವರೆಯತ್+ಎತ್ತಿಗನ+ ಕುಮುದದ
ಜೀವಿಗನ +ಮಿಗೆ +ಮೇಲು +ನೋಟದೊಳ್
ಆವಿಗಡರ್+ಉಗಳಡಸಿ +ತಿವಿದಾಡಿದರು+ ಬೇಸರದೆ

ಅಚ್ಚರಿ:
(೧) ಸೂರ್ಯ ಚಂದ್ರರು ಎಂದು ಹೇಳಲು – ತಾವರೆಯತೆತ್ತಿಗನ ಕುಮುದದ ಜೀವಿಗನ