ಪದ್ಯ ೩೮: ಅಭಿಮನ್ಯುವು ಏನೆಂದು ಉತ್ತರಿಸಿದನು?

ಬಿಡು ಮರೀಚಿಯ ತೊರೆಗೆ ಹರುಗೋ
ಲಿಡುವರುಂಟೇ ಲೆಪ್ಪದುರಗನ
ಹಿಡಿವಡೇತಕೆ ಗರುಡಮಂತ್ರವು ಚಪಲನೆನ್ನದಿರು
ಕೊಡನ ಮಗನ ಕುಮಂತ್ರದೊಡ್ಡಿನ
ಕಡಿತಕಾನಂಜುವೆನೆ ವೆಗ್ಗಳ
ನುಡಿಯಲಮ್ಮೆನು ತನ್ನನೀಗಳೆ ಬಿಟ್ಟು ನೋಡೆಂದ (ದ್ರೋಣ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಭಿಮನ್ಯು ಧರ್ಮಜನಿಗೆ ಉತ್ತರಿಸುತ್ತಾ, ಬಿಸಿಲು ಕುದುರೆಯ ಹಳ್ಲಕ್ಕೆ ಹರಿಗೋಲನ್ನು ಯಾರಾದರೂ ಹಾಕುತ್ತಾರೆಯೇ? ಹಾವಿನ ಗೊಂಬೆಯನ್ನು ಹಿಡಿಯಲು ಗರುಡ ಮಂತ್ರವೇಕೆ ಬೇಕು? ನಾನು ಚಲಪನೆನ್ನಬೇಡ, ದ್ರೋಣನ ಮಗನ ಕುತಂತ್ರದ ಪದ್ಮವ್ಯೂಹದಲ್ಲಿ ಹೊಕ್ಕು ಶತ್ರುಗಲನ್ನು ಕಡಿಯಲು ನಾನು ಹೆದರುವೆನೇ? ಹೆಚ್ಚು ಮಾತನಾಡಲಾರೆನು, ಪದ್ಮವ್ಯೂಹವನ್ನು ಗೆಲ್ಲಲು ನನ್ನನ್ನು ಬಿಟ್ಟು ನೋಡು.

ಅರ್ಥ:
ಬಿಡು: ತೊರೆ; ಮರೀಚಿ: ಕಿರಣ, ರಶ್ಮಿ, ಬಿಸಿಲುಗುದುರೆ, ಮೃಗಜಲ; ತೊರೆ: ಹಳ್ಳ; ಹರಿಗೋಲು: ದೋಣಿ, ದೇಹ; ಲೆಪ್ಪ: ಗೊಂಬೆ, ಪ್ರತಿಮೆ; ಉರಗ: ಹಾವು; ಹಿಡಿ: ಗ್ರಹಿಸು; ಗರುಡ: ಒಂದು ಬಗೆಯ ಪಕ್ಷಿ; ಚಪಲ: ಚಂಚಲ ಸ್ವಭಾವ; ಕೊಡ: ಗಡಿಗೆ, ಕುಂಭ; ಮಗ: ಪುತ್ರ; ಕುಮಂತ್ರ: ಕುತಂತ್ರ; ಒಡ್ಡು: ಸೈನ್ಯ, ಪಡೆ; ಕಡಿ: ತುಂಡು, ಹೋಳು; ಆನು: ನಾನು; ಅಂಜು: ಹೆದರು; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ನುಡಿ: ಮಾತು; ಬಿಟ್ಟು: ತೊರೆ; ನೋಡು: ವೀಕ್ಷಿಸು;

ಪದವಿಂಗಡಣೆ:
ಬಿಡು+ ಮರೀಚಿಯ +ತೊರೆಗೆ +ಹರುಗೋ
ಲಿಡುವರುಂಟೇ+ ಲೆಪ್ಪದ್+ಉರಗನ
ಹಿಡಿವಡ್+ಏತಕೆ+ ಗರುಡಮಂತ್ರವು +ಚಪಲನೆನ್ನದಿರು
ಕೊಡನ ಮಗನ+ ಕುಮಂತ್ರದ್+ಒಡ್ಡಿನ
ಕಡಿತಕ್+ಆನ್+ಅಂಜುವೆನೆ +ವೆಗ್ಗಳ
ನುಡಿಯಲಮ್ಮೆನು +ತನ್ನನ್+ಈಗಳೆ+ ಬಿಟ್ಟು+ ನೋಡೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿಡು ಮರೀಚಿಯ ತೊರೆಗೆ ಹರುಗೋಲಿಡುವರುಂಟೇ; ಲೆಪ್ಪದುರಗನ
ಹಿಡಿವಡೇತಕೆ ಗರುಡಮಂತ್ರವು
(೨) ಅಶ್ವತ್ಥಾಮನನ್ನು ಕೊಡನ ಮಗ ಎಂದು ಕರೆದಿರುವುದು

ಪದ್ಯ ೨೦: ಭೀಮಾರ್ಜುನರು ಶಕುನಿಗೆ ಹೇಗೆ ಉತ್ತರಿಸಿದರು?

ದೇಹಿಗೆರವೇ ದೇಹವೆಲವೋ
ದೇಹಿಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರಭಾಷಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ (ಸಭಾ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲವೋ ಶಕುನಿ, ದೇಹವು ದೇಹವನ್ನು ಧರಿಸಿರುವ ಜೀವವನ್ನು ಬಿಟ್ಟಿರುವುದೇ? ನಮ್ಮ ಅಣ್ಣನೇ ನಮಗೆ ಜೀವು ಅವನ ದೇಹಗಳು ನಾವು. ನಿನ್ನ ದುರ್ಮಂತ್ರದ ಮಾತು ಈ ನಮ್ಮ ನಿಲುವನ್ನು ತಿಳಿದೀತೇ? ನೀನು ಎಲ್ಲವನ್ನೂ ಕಪಟ ದೃಷ್ಟಿಯಿಂದ ನೋಡುವೆ. ಇನ್ನು ನಿನ್ನ ಭ್ರಮೆಯನ್ನು ಬಿಡು. ನಮ್ಮ ಮೇಲೆ ನಿನ್ನ ಪ್ರಯೋಗವೇನೂ ನಡೆಯುವುದಿಲ್ಲ ಎಂದು ಭೀಮಾರ್ಜುನರು ಶಕುನಿಯನ್ನು ಜರೆದರು.

ಅರ್ಥ:
ದೇಹ: ತನು, ಒಡಲು; ಎರವು: ಸಾಲು; ದೇಹಿ: ಶರೀರವನ್ನುಳ್ಳದ್ದು; ಭೂಪತಿ: ರಾಜ; ಪುತ್ರ: ಮಗ; ಒಳಗೆ: ಅಂತರ್ಯ; ಕುಮಂತ್ರ: ಕೆಟ್ಟ ವಿಚಾರ; ಭಾಷಿತ: ಹೇಳಿದ, ಪ್ರತಿಜ್ಞಮಾಡಿದ; ಊಹೆ: ಎಣಿಕೆ, ಅಂದಾಜು; ಕಪಟ: ಮೋಸ; ಅವಗಾಹ: ಮಗ್ನ, ಮುಳುಗು; ಸಾಕು: ತಡೆ; ಮೇಲಣ: ಮೇಲೆ ಹೇಳಿದ; ಗಾಹುಗತಕ: ಮೋಸ, ಭ್ರಾಂತಿ; ಜರೆ: ಬಯ್ಯು; ಸೌಬಲ: ಶಕುನಿ;

ಪದವಿಂಗಡಣೆ:
ದೇಹಿಗ್+ಎರವೇ+ ದೇಹವ್+ಎಲವೋ
ದೇಹಿಭೂಪತಿ +ಧರ್ಮಪುತ್ರನ
ದೇಹವಾವ್+ಇದರೊಳಗೆ +ನಿನ್ನ +ಕುಮಂತ್ರ+ಭಾಷಿತದ
ಊಹೆಗೊಂಬುದೆ +ಕಪಟದಿಂದ್+ಅವ
ಗಾಹಿಸುವೆ +ಸಾಕಿನ್ನು +ಮೇಲಣ+
ಗಾಹುಗತಕಗಳ್+ಎಮ್ಮೊಳ್+ಎಂದರು +ಜರೆದು +ಸೌಬಲನ

ಅಚ್ಚರಿ:
(೧) ದೇಹಿ, ದೇಹ – ೧-೩ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ದೇಹಿಗೆರವೇ ದೇಹ
(೩) ಶಕುನಿಯನ್ನು ಬಯ್ಯುವ ಪರಿ – ನಿನ್ನ ಕುಮಂತ್ರಭಾಷಿತದ ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ