ಪದ್ಯ ೨೮: ಅರ್ಜುನನಿಗೆ ಯಾರು ಶುಭ ನುಡಿಯಲೆಂದು ಧರ್ಮಜನು ಹೇಳಿದನು?

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರಮಹೋರಗ ಯಕ್ಷ ಮನುಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ (ಅರಣ್ಯ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಿವನು ನಿನಗೆ ದಯೆತೋರಿ ಶ್ರೇಷ್ಠವಾದ ಆಯುಧವನ್ನು ನೀಡಲಿ. ಇಂದ್ರ, ಯಮ, ಸೂರ್ಯ, ಅಗ್ನಿ, ನಿರುತಿ, ವರುಣ, ಕುಬೇರ, ವಾಯು, ವಸುಗಳು, ಸಿದ್ಧರು, ವಿದ್ಯಾಧರರು, ಮಹಾಸರ್ಪಗಳು, ಯಕ್ಷರು, ಮನುಗಳು, ದೇವತೆಗಳು, ಕಿಂಪುರುಷರು ನಿನಗೆ ಶುಭನುಡಿಗಳಿಂದ ಹರಸಲಿ ಎಂದು ಧರ್ಮಜನು ನುಡಿದನು.

ಅರ್ಥ:
ಕರುಣಿಸು: ದಯೆತೋರು, ಆಶೀರ್ವದಿಸು; ಕಾಮ: ಮನ್ಮಥ; ಅರಿ: ವೈರಿ; ಕಾಮಾರಿ: ಶಿವ; ಕೃಪೆ: ದಯೆ, ಕರುಣೆ; ವರ: ಶ್ರೇಷ್ಠ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಇಂದ್ರ: ಶಕ್ರ; ಭಾಸ್ಕರ: ಸೂರ್ಯ; ಹುತಾಶನ: ಹವಿಸ್ಸನ್ನು ಸೇವಿಸುವವನು, ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಮಾರುತ: ವಾಯುದೇವತೆ; ಸುರರು: ದೇವತೆಗಳು; ವಸು: ದೇವತೆಗಳ ಒಂದು ವರ್ಗ; ಸಿದ್ಧ: ದೇವತೆಗಳಲ್ಲಿ ಒಂದು ಪಂಗಡ; ವಿದ್ಯಾಧರ: ದೇವತೆಗಳ ಗುಂಪು; ಉರಗ: ಹಾವು; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ಮನು: ಬ್ರಹ್ಮನ ಹದಿನಾಲ್ಕು ಜನ ಮಾನಸಪುತ್ರರಲ್ಲಿ ಪ್ರತಿಯೊಬ್ಬ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ, ಕಿನ್ನರ; ವಿಮಳ: ಶುದ್ಧ; ಸ್ವಸ್ತಿ: ಒಳ್ಳೆಯದು, ಶುಭ; ವಾಚನ: ನುಡಿ;

ಪದವಿಂಗಡಣೆ:
ಕರುಣಿಸಲಿ +ಕಾಮಾರಿ +ಕೃಪೆಯಿಂ
ವರ+ ಮಹಾಸ್ತ್ರವನ್+ಇಂದ್ರ +ಯಮ +ಭಾ
ಸ್ಕರ+ ಹುತಾಶನ+ ನಿರುತಿ +ವರುಣ +ಕುಬೇರ +ಮಾರುತರು
ಸುರರು +ವಸುಗಳು +ಸಿದ್ಧ +ವಿದ್ಯಾ
ಧರ+ಮಹ+ಉರಗ +ಯಕ್ಷ +ಮನು+ಕಿಂ
ಪುರುಷರ್+ಈಯಲಿ +ನಿನಗೆ +ವಿಮಳ +ಸ್ವಸ್ತಿ+ವಾಚನವ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣಿಸಲಿ ಕಾಮಾರಿ ಕೃಪೆಯಿಂ
(೨) ಮಹಾಸ್ತ್ರ, ಮಹೋರಗ – ಮಹ ಪದದ ಬಳಕೆ

ಪದ್ಯ ೮: ಯಾವ ದೇವತಾ ಪುರುಷರು ಯಾರ ಪರವಾಗಿ ನಿಂತರು?

ಯಾತುಧಾನ ಕುಬೇರ ಕಿನ್ನರ
ಮಾತೃಗಣ ಕರ್ಣನಲಿ ಸುಮನೋ
ಜಾತ ಚಿತ್ರ ರಥಾದಿ ಗಂಧರ್ವರು ವಿಪಕ್ಷದಲಿ
ಭೂತಗಣವೀಚೆಯಲಿ ದೆಸೆ ದಿಗು
ಜಾತ ಮನು ವಸು ನಾರದಾದಿ ಮ
ಹಾತಪಸ್ವಿಗಳತ್ತಲಾಯಿತು ರಾಯ ಕೇಳೆಂದ (ಕರ್ಣ ಪರ್ವ, ೨೨ ಸಂಧಿ, ೮ ಪದ್ಯ)

ತಾತ್ಪರ್ಯ:
ನಿರಋತಿ, ಕುಬೇರ, ಕಿನ್ನರ, ಮಾತೃಗಣಗಳು, ಕರ್ಣನ ಪರ ನಿಂತವು, ಸುಮನೋಜಾತ ಚಿತ್ರರಥನೇ ಮೊದಲಾದ ಗಂಧರ್ವರು ಅರ್ಜುನನ ಪರ ನಿಂತರು. ಭೂತಗಣಗಳು ನಮ್ಮ ಕಡೆ, ದಿಕ್ಕುಗಳು ಮನು, ವಸು ನಾರದಾದಿ ಮಹಾತಪಸ್ವಿಗಳು ಅವರ ಕಡೆ ನಿಂತರೆಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮಾತೃ: ತಾಯಿ; ಗಣ: ಗುಂಪು; ಆದಿ: ಮುಂತಾದ; ವಿಪಕ್ಷ: ವಿರುದ್ಧ ಗುಂಪು; ವೀಚಿ: ಸಣ್ಣಅಲೆ, ತರಂಗ; ದೆಸೆ: ದಿಕ್ಕು; ಜಾತ: ಹುಟ್ಟಿದ; ವಸು: ದೇವತೆಗಳ ಒಂದು ವರ್ಗ, ಐಶ್ವರ್ಯ; ಮನು: ಮನುಷ್ಯ ಕುಲದ ಮೂಲಪುರುಷ, ಬ್ರಹ್ಮನ ಮಾನಸ ಪುತ್ರ; ಮಹಾ: ಶ್ರೇಷ್ಠ; ತಪಸ್ವಿ: ಮುನಿ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಯಾತುಧಾನ +ಕುಬೇರ +ಕಿನ್ನರ
ಮಾತೃಗಣ+ ಕರ್ಣನಲಿ +ಸುಮನೋ
ಜಾತ +ಚಿತ್ರ +ರಥಾದಿ +ಗಂಧರ್ವರು +ವಿಪಕ್ಷದಲಿ
ಭೂತಗಣ+ವೀಚೆಯಲಿ +ದೆಸೆ +ದಿಗು
ಜಾತ +ಮನು +ವಸು +ನಾರದಾದಿ +ಮ
ಹಾ+ತಪಸ್ವಿಗಳ್+ಅತ್ತಲಾಯಿತು +ರಾಯ +ಕೇಳೆಂದ

ಪದ್ಯ ೯೨: ವರುಣ ಮತ್ತು ಕುಬೇರರ ಸಭೆಯು ಹೇಗಿತ್ತು?

ವರುಣ ಸಭೆಯೊಳಗಿಹವು ಭುಜಗೇ
ಸ್ವ್ಹರ ಸಮುದ್ರ ನದೀ ನದಾವಳಿ
ಗಿರಿ ತರುವ್ರಜವೆನಿಪ ಸಂಖ್ಯಾರಹಿತ ವಸ್ತುಗಳು
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೯೨ ಪದ್ಯ)

ತಾತ್ಪರ್ಯ:
ವರುಣನ ಸಭೆಯೊಳಗೆ ನಾಗರಾಜರು, ನದೀನದಗಳು, ಬೆಟ್ಟಗಳ ಗುಂಪು, ಮರಗಿಡಗ ಕಾಡುಗಳ ಸಮೂಹ ಮುಂತಾದ ಅಸಂಖ್ಯಾತ ವಸ್ತುಗಳಿವೆ. ಕುಬೇರನ ಸಭೆಯು ಎಂಬತ್ತು ಯೋಜನ ಅಗಲವಾಗಿದ್ದು, ಶಿವನ ಮಿತ್ರನಾದ ಅವನ ಐಶ್ವರ್ಯ ಎಣಿಕೆಗೆ ಸಿಗುವುದಿಲ್ಲ.

ಅರ್ಥ:
ವರುಣ: ನೀರಿನ ಅಧಿದೇವತೆ; ಸಭೆ: ದರ್ಬಾರು; ಭುಜಗ: ಹಾವು; ಸಮುದ್ರ: ಜಲಧಿ, ಸಾಗರ; ನದಿ: ಹೊಳೆ, ತೊರೆ; ಗಂಡು ಹೊಳೆ, ನದ: ನದಿಯ ಪುಲ್ಲಿಂಗ ರೂಪ, ಗಂಡು ಹೊಳೆ (ಉದಾ: ಬ್ರಹ್ಮಪುತ್ರ); ಆವಳಿ: ಗುಂಪು; ಗಿರಿ: ಬೆಟ್ಟ; ತರು: ಮರ; ವ್ರಜ: ಗುಂಪು; ಸಂಖ್ಯಾರಹಿತ: ಎಣಿಕೆಗೆಬಾರದ; ವಸ್ತು: ಸಾಮಾನು; ಅರಸ: ರಾಜ; ಕುಬೇರ:ಧನಪತಿ; ಪರಿ: ರೀತಿ; ಅಗಲ: ವಿಸ್ತಾರ; ಯೋಜನ: ದೂರದ ಅಳತೆಯ ಒಂದು ಪ್ರಮಾಣ, ಸುಮಾರು ೧೨ ಮೈಲಿ; ಹರ: ಈಶ್ವರ; ಸಖ: ಮಿತ್ರ; ಸಿರಿ: ಐಶ್ವರ್ಯ; ಸದರ:ಸಲಿಗೆ, ಸುಲಭ; ಭೂಪಾಲ: ರಾಜ;

ಪದವಿಂಗಡಣೆ:
ವರುಣ+ ಸಭೆಯೊಳಗ್+ಇಹವು +ಭುಜಗೇ
ಶ್ವರ +ಸಮುದ್ರ +ನದೀ +ನದಾವಳಿ
ಗಿರಿ +ತರು+ವ್ರಜವ್+ಎನಿಪ +ಸಂಖ್ಯಾರಹಿತ +ವಸ್ತುಗಳು
ಅರಸ+ ಕೇಳು +ಕುಬೇರ +ಸಭೆಯಾ
ಪರಿ+ಅಗಲವ್+ಎಂಭತ್ತು +ಯೋಜನ
ಹರಸಖನ +ಸಿರಿ +ಸದರವೇ +ಭೂಪಾಲ +ಕೇಳೆಂದ

ಅಚ್ಚರಿ:
(೧) ಅರಸ, ಭೂಪಾಲ – ಸಮನಾರ್ಥಕ ಪದ
(೨) ಎಣಿಸಕ್ಕಾಗದ ಎಂದು ತಿಳಿಸಲು – ಸಂಖ್ಯಾರಹಿತ ಪದದ ಬಳಕೆ

ಪದ್ಯ ೮೯: ಯುಧಿಷ್ಠಿರನು ನಾರದರಿಗೆ ಯಾವ ಪ್ರಶ್ನೆ ಕೇಳಿದನು?

ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ (ಸಭಾ ಪರ್ವ, ೧ ಸಂಧಿ, ೮೯ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ನಾರದರ ಹಿರಿಮೆಯನ್ನು ಹೇಳುತ್ತಾ, “ಎಲೈ ಮುನೀಂದ್ರ, ನಿಮ್ಮಲ್ಲಿ ನನ್ನದೊಂದು ಪ್ರಾರ್ಥನೆ, ನೀವು ಇಂದ್ರನ, ಬ್ರಹ್ಮನ, ಯಮನ, ವರುಣನ, ಕುಬೇರನ, ಆದಿಶೇಷನ ಸಭೆಗಳಲ್ಲಿ ನಡೆದಾಡಿದವರು, ಈ ನನ್ನ ಆಸ್ಥಾನಭವನವು ಅವರ ಆಸ್ಥಾನ ಭವನಗಳಿಗೆ ಸರಿಯೋ, ಹೆಚ್ಚೋ, ಅಥವ ಮನುಷ್ಯರಿಗೆ ತಕ್ಕದ್ದೋ ಹೇಳಿ”, ಎಂದು ಕೇಳಿದನು.

ಅರ್ಥ:
ಮುನಿ: ಋಷಿ; ಬಿನ್ನಹ:ಅರಿಕೆ, ವಿಜ್ಞಾಪನೆ; ಇಂದ್ರ: ಶಕ್ರ; ವಿರಿಂಚಿ: ಬ್ರಹ್ಮ; ಯಮ: ಕಾಲ; ವರುಣ: ನೀರಿನ ಅಧಿದೇವತೆ; ಧನಪತಿ: ಕುಬೇರ; ಶೇಷ: ಆದಿಶೇಷ; ಸಭ: ಆಸ್ಥಾನ; ಮಧ್ಯ: ನಡು; ಸುಳಿ: ನಡೆದಾಡು; ಇನಿತು: ಸ್ವಲ್ಪ; ರಚನೆ: ಕಟ್ಟು; ಸರಿ: ಸಮ; ಮೇಣ್: ಅಥವ; ಯೋಗ್ಯ: ಅರ್ಹತೆ; ಮನುಜ: ಮಾನವ; ನಗು: ಹರ್ಷ;

ಪದವಿಂಗಡಣೆ:
ಮುನಿಯೆ+ ಬಿನ್ನಹವ್+ಇಂದು +ನೀವ್
ಇಂದ್ರನ +ವಿರಿಂಚಿಯ +ಯಮನ +ವರುಣನ
ಧನಪತಿಯ+ ಶೇಷನ+ ಸಭಾ+ಮಧ್ಯದಲಿ+ ಸುಳಿವಿರಲೆ
ಇನಿತು+ ರಚನೆಗೆ +ಸರಿಯೊ +ಮಿಗಿಲೋ
ಮನುಜ+ಯೋಗ್ಯ+ಸ್ಥಾನವೋ +ಮೇಣ್
ಎನಲು +ನಗುತ+ಎಂದನು +ಮುನೀಶ್ವರನ್+ಆ+ ಯುಧಿಷ್ಠಿರಗೆ

ಅಚ್ಚರಿ:
(೧) ೩,೪,೫ ಸಾಲಿನ ಮೂರನೆ ಪದ “ಸ” ಕಾರದಿಂದ ಪ್ರಾರಂಭ: ಸಭಾಮಧ್ಯ, ಸರಿಯೊ, ಸ್ಥಾನವೊ
(೨) ೬ ದೇವತೆಗಳ ಹೆಸರನ್ನು ತಿಳಿಸಿರುವುದು