ಪದ್ಯ ೨೩: ಭೀಷ್ಮರಿಗೆ ಕೃಷ್ಣನು ಏನು ಹೇಳಿದನು?

ಮನ್ನಿಸುವಡೀ ಉಭಯರಾಯರು
ನಿನ್ನ ಮೊಮ್ಮಂದಿರುಗಳದರೊಳು
ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು
ನಿನ್ನನೇ ನಂಬಿಹರು ನೀನೇ
ಮುನ್ನ ಶಿಶುತನದಲ್ಲಿ ಸಲಹಿದೆ
ಮನ್ನಣೆಯ ನೀ ಬಲ್ಲೆಯೆಂದನು ದಾನವಧ್ವಂಸಿ (ಭೀಷ್ಮ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಕೌರವ ಪಾಂಡವರಿಬ್ಬರೂ ನಿನ್ನ ಮೊಮ್ಮಕ್ಕಳು. ಇವರಲ್ಲಿ ಪಾಂಡವರ ಜೀವನ ನಿನ್ನ ಕುಣಿಕೆಯಲ್ಲಿದೆ. ಅವರು ನಿನ್ನನ್ನೇ ನಂಬಿದ್ದಾರೆ, ಬಾಲ್ಯದಲ್ಲಿ ನೀನೇ ಅವರನ್ನು ಬೆಳೆಸಿದೆ, ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ನೀನೇ ಬಲ್ಲೆ, ಎಂದು ಭೀಷ್ಮನಿಗೆ ಕೃಷ್ಣನು ಹೇಳಿದನು.

ಅರ್ಥ:
ಮನ್ನಿಸು: ಗೌರವಿಸು; ಉಭಯ: ಎರಡು; ರಾಯ: ರಾಜ; ಮೊಮ್ಮಂದಿರು: ಮೊಮ್ಮಕ್ಕಳು; ಕುಣಿಕೆ: ಕೊನೆ, ತುದಿ; ಸುತ: ಮಕ್ಕಳು; ಜೀವನ: ಬದುಕು; ನಂಬು: ವಿಶ್ವಾಸವಿಡು; ಮುನ್ನ; ಮೊದಲು; ಶಿಶು: ಮಗು; ಸಲಹು: ಪೋಷಿಸು, ರಕ್ಷಿಸು; ಮನ್ನಣೆ: ಮರ್ಯಾದೆ; ಬಲ್ಲೆ: ತಿಳಿ; ದಾನವ: ರಾಕ್ಷಸ; ಧ್ವಂಸಿ: ಸಂಹಾರ ಮಾಡುವವ;

ಪದವಿಂಗಡಣೆ:
ಮನ್ನಿಸುವಡ್+ಈ+ ಉಭಯ+ರಾಯರು
ನಿನ್ನ +ಮೊಮ್ಮಂದಿರುಗಳ್+ಅದರೊಳು
ನಿನ್ನ +ಕುಣಿಕೆಯೊಳ್+ಇಹುದು+ ಕುಂತೀಸುತರ +ಜೀವನವು
ನಿನ್ನನೇ +ನಂಬಿಹರು +ನೀನೇ
ಮುನ್ನ +ಶಿಶುತನದಲ್ಲಿ+ ಸಲಹಿದೆ
ಮನ್ನಣೆಯ +ನೀ +ಬಲ್ಲೆಯೆಂದನು +ದಾನವ+ಧ್ವಂಸಿ

ಅಚ್ಚರಿ:
(೧) ಭೀಷ್ಮರನ್ನು ಭಾವನಾತ್ಮಕವಾಗಿ ಮರುಕಗೊಳಿಸುವ ಪರಿ – ನಿನ್ನ ಮೊಮ್ಮಂದಿರು, ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು, ನಿನ್ನನೇ ನಂಬಿಹರು, ನೀನೇ ಮುನ್ನ ಶಿಶುತನದಲ್ಲಿ ಸಲಹಿದೆ

ಪದ್ಯ ೧೦೦: ಊರ್ವಶಿಯು ದೂತನಿಗೆ ಏನೆಂದು ಹೇಳಿದಳು?

ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯಗತಿಗಳ
ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆಂ
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ (ಅರಣ್ಯ ಪರ್ವ, ೮ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಊರ್ವಶಿಯು ಚಿತ್ರಸೇನನಿಗೆ, ನೀನು ಇಲ್ಲಿಗೆ ಬಂದಿರುವುದೇನು ಹುಡುಗಾಟವಲ್ಲ ತಾನೆ? ರಾಜನು ಹೇಳಿದ ಕರ್ತವ್ಯಕ್ಕಾಗಿ ಇಲ್ಲಿಗೆ ಬಂದೆಯೋ, ನಿನ್ನದೇನಾದರೂ ಕೆಲಸವಿದೆಯೋ? ನೀವು ಯಾವ ಕಾರ್ಯಕ್ಕಾಗಿ ಬಂದಿರಿ ಎಂದು ಕೇಳಲು, ಚಿತ್ರಸೇನನು ನಾಚಿಕೆಗೊಂಡು ನಸುನಗುತ್ತಾ ನಮಸ್ಕರಿಸುತ್ತಾ ಹೀಗೆ ಹೇಳಿದನು.

ಅರ್ಥ:
ಅಣಕ: ಕುಚೋದ್ಯ; ರಾಯ: ರಾಜ; ಅಟ್ಟು: ಕಳುಹಿಸು; ಮಣಿಹ: ಉದ್ಯೋಗ; ಕಾರ್ಯ: ಕೆಲಸ; ಗತಿ: ಸಂಚಾರ; ಕುಣಿಕೆ: ಜೀರುಗುಣಿಕೆ; ಕರ್ತವ್ಯ: ಕೆಲಸ; ಗುಣ: ನಡತೆ; ಭರಿತ: ತುಂಬಿದ; ಹೇಳು: ತಿಳಿಸು; ನಸುನಗೆ: ಹಸನ್ಮುಖ; ಕುಣಿ: ನರ್ತಿಸು; ಮುಖ: ಆನನ; ಮಾನಿನಿ: ಹೆಂಗಸು, ಸ್ತ್ರೀ; ವೆಂಟಣಿಸು: ನಮಸ್ಕರಿಸು; ಲಜ್ಜೆ: ನಾಚಿಕೆ, ಸಂಕೋಚ; ನುಡಿ: ಮಾತಾಡು; ದೂತ: ಸೇವಕ; ಮಾತು: ವಾಣಿ;

ಪದವಿಂಗಡಣೆ:
ಅಣಕವಲ್ಲಿದು +ರಾಯನ್+ಅಟ್ಟಿದ
ಮಣಿಹವೋ +ನಿಜಕಾರ್ಯಗತಿಗಳ
ಕುಣಿಕೆಯೋ +ಕರ್ತವ್ಯವ್+ಆವುದು+ ನಿಮಗೆ+ ನಮ್ಮಲ್ಲಿ
ಗುಣಭರಿತ+ ಹೇಳೆನಲು+ ನಸುನಗೆ
ಕುಣಿಯೆ+ ಮುಖದಲಿ +ಮಾನಿನಿಗೆ +ವೆಂ
ಟಣಿಸಿ+ ಲಜ್ಜಾಭರದಿ+ ನುಡಿದನು+ ದೂತನ್+ಈ+ ಮಾತ

ಅಚ್ಚರಿ:
(೧) ನಕ್ಕನು ಎಂದು ಹೇಳಲು – ನಸುನಗೆ ಕುಣಿಯೆ ಮುಖದಲಿ

ಪದ್ಯ ೭೮: ವಿದುರನು ದುರ್ಯೋಧನನಿಗೆ ಏನೆಂದು ಎಚ್ಚರಿಸಿದನು?

ಮಣಿಯೆ ನೀನಿಲ್ಲೀಯನರ್ಥವ
ಕುಣಿಕೆಗೊಳಿಸಿದ ನೀ ಸಹಿತ ನಿ
ನ್ನೆಣೆಗಳಹ ಸೈಂಧವನನೀ ರಾಧೇಯ ಶಕುನಿಗಳ
ರಣದೊಳಗೆ ಭೀಮಾರ್ಜುನರ ಮಾ
ರ್ಗಣದ ಧಾರೆಗೆ ವೀರನಾರಾ
ಯಣನೆ ಸೇರಿಸಿಕೊಡುವನರಿದಿರುಯೆಂದನಾ ವಿದುರ (ಸಭಾ ಪರ್ವ, ೧೪ ಸಂಧಿ, ೭೮ ಪದ್ಯ)

ತಾತ್ಪರ್ಯ:
ಅಯ್ಯೋ ದುರ್ಯೋಧನ ನೀನು ನನ್ನ ಮಾತಿಗೆ ಬೆಲೆಕೊಡುವುದಿಲ್ಲ. ಈಗ ನಡೆಯುತ್ತಿರುವ ಅನರ್ಥಕ್ಕೆ ಕೊನೆಗೊಳಿಸದೆ ನಿಂತಿರುವ ನೀನು ಮತ್ತು ನಿನ್ನ ಸಹಚರರಾದ ಜಯದ್ರಥ, ಶಕುನಿ, ಕರ್ಣ, ನೀವೆಲ್ಲರೂ ಯುದ್ಧದಲ್ಲಿ ಭೀಮಾರ್ಜುನರ ಬಾಣಗಳಿಗೆ ಪರಮಾತ್ಮ ಶ್ರೀಕೃಷ್ಣನೇ ಬಲಿಕೊಡುತ್ತಾನೆ, ಇದನ್ನು ನೆನಪಿನಲ್ಲಿಟ್ಟುಕೋ ಎಂದು ವಿದುರನು ಕೋಪದಿಂದ ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಣಿ: ಬಾಗು, ಬಗ್ಗು; ಅನರ್ಥ: ಕೇಡು; ಕುಣಿಕೆ: ಕೊನೆ, ತುದಿ; ಸಹಿತ: ಜೊತೆ; ಎಣೆ: ಸಮ, ಸಾಟಿ, ಜೊತೆ; ಸೈಂಧವ: ಜಯದ್ರಥ; ರಾಧೇಯ: ಕರ್ಣ; ರಣ: ಯುದ್ಧ; ಮಾರ್ಗಣ: ಬಾಣ, ಅಂಬು; ಧಾರೆ: ಪ್ರವಾಹ; ಸೇರಿಸು: ಜೊತೆಗೂಡು; ಅರಿ: ತಿಳಿ;

ಪದವಿಂಗಡಣೆ:
ಮಣಿಯೆ +ನೀನಿಲ್ಲ್+ಈ+ಅನರ್ಥವ
ಕುಣಿಕೆಗೊಳಿಸಿದ +ನೀ +ಸಹಿತ +ನಿನ್
ಎಣೆಗಳಹ+ ಸೈಂಧವನನ್+ಈ+ ರಾಧೇಯ +ಶಕುನಿಗಳ
ರಣದೊಳಗೆ+ ಭೀಮಾರ್ಜುನರ+ ಮಾ
ರ್ಗಣದ +ಧಾರೆಗೆ +ವೀರನಾರಾ
ಯಣನೆ +ಸೇರಿಸಿ+ಕೊಡುವನ್+ಅರಿದಿರು+ಎಂದನಾ+ ವಿದುರ

ಅಚ್ಚರಿ:
(೧) ನೀನಿಲ್ಲೀ, ನೀ, ನಿನ್ನೆಣೆ – ನೀ ಪದದ ಬಳಕೆ