ಪದ್ಯ ೩೬: ದ್ರೋಣನು ಯಾವ ಪಣವನ್ನು ತೊಟ್ಟನು?

ಪಟುಗಳೋ ಮಝ ಪೂತು ಪಾಂಡವ
ಭಟರು ಖರೆಯರಲಾ ಯುಧಿಷ್ಠಿರ
ನಟಮಟಿಸಿ ತಾ ಚುಕ್ಕಿಗಿಕ್ಕುವ ಲೆಕ್ಕ ಲೇಸಾಯ್ತು
ಕುಟಿಲತನದಲಿ ಗೆಲುವೆನೇ ಹುಲು
ಕುಟಿಗರಿವದಿರ ಹೊಯ್ದು ತನ್ನನು
ನಿಟಿಲಲೋಚನನಡ್ಡ ಹಾಯ್ದರೆ ಹಿಡಿವೆನೆನುತೆಚ್ಚ (ದ್ರೋಣ ಪರ್ವ, ೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಪಾಂಡವ ಭಟರು ಕುಶಲರು, ಸಮರ್ಥರು, ಶ್ರೇಷ್ಠರು. ವಂಚನೆಯಿಂದ ಯುಧಿಷ್ಠಿರನು ಈ ಕೆಲಸಕ್ಕೆ ಬಾರದವರನ್ನು ಬಲಿಕೊಡುತ್ತಿದ್ದಾನೆ. ಇಂಥವರಿಂದ ಮೋಸದಿಂದ ತಪ್ಪಿಸಿಕೊಳ್ಳುವುದಿಲ್ಲ. ಹುಲ್ಲುತಿನ್ನುವ ಇವರನ್ನು ಬಿಟ್ಟರೆ ನನ್ನಿಂದ ಧರ್ಮಜನು ತಪ್ಪಿಸಿಕೊಂಡನೇ? ಶಿವನೇ ಅಡ್ಡಬಂದರೂ ಅವನನ್ನು ಹಿಡಿಯುತ್ತೇನೆ ಎಂದು ದ್ರೋಣನು ಬಾಣ ಪ್ರಯೋಗ ಮಾಡಿದನು.

ಅರ್ಥ:
ಪಟು: ಸಮರ್ಥನಾದವನು, ಕುಶಲನಾದವನು; ಮಝ: ಭಲೇ; ಪೂತು: ಕೊಂಡಾಟದ ಮಾತು; ಭಟ: ಸೈನಿಕ; ಖರೆ: ನಿಜ, ಸತ್ಯ; ಅಟಮಟಿಸು: ಮೋಸ ಮಾಡು; ಚುಕ್ಕಿಗಿಕ್ಕು: ಗುರಿಗೆ ಹೊಡೆ; ಲೆಕ್ಕ: ಎಣಿಕೆ; ಲೇಸು: ಒಳ್ಳಿತು; ಕುಟಿಲ: ಮೋಸ; ಗೆಲುವು: ಜಯ; ಹುಲು: ಕ್ಷುಲ್ಲಕ; ಇವದಿರ: ಇಷ್ಟುಜನ; ಹೊಯ್ದು: ಹೊಡೆ; ನಿಟಿಲ: ಹಣೆ, ಫಾಲ; ಲೋಚನ: ಕಣ್ಣು; ನಿಟಿಲಲೋಚನ: ಶಿವ; ಹಾಯಿ: ಮೇಲೆಬೀಳು; ಹಿಡಿ: ಬಂಧಿಸು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಪಟುಗಳೋ +ಮಝ +ಪೂತು +ಪಾಂಡವ
ಭಟರು +ಖರೆಯರಲ್+ಆ+ ಯುಧಿಷ್ಠಿರನ್
ಅಟಮಟಿಸಿ+ ತಾ +ಚುಕ್ಕಿಗಿಕ್ಕುವ +ಲೆಕ್ಕ +ಲೇಸಾಯ್ತು
ಕುಟಿಲತನದಲಿ +ಗೆಲುವೆನೇ +ಹುಲು
ಕುಟಿಗರ್+ಇವದಿರ +ಹೊಯ್ದು +ತನ್ನನು
ನಿಟಿಲಲೋಚನನ್+ಅಡ್ಡ+ ಹಾಯ್ದರೆ +ಹಿಡಿವೆನ್+ಎನುತ್+ಎಚ್ಚ

ಅಚ್ಚರಿ:
(೧) ಪಾಂಡವರನ್ನು ಹೊಗಳುವ ಪರಿ – ಪಟುಗಳೋ ಮಝ ಪೂತು ಪಾಂಡವಭಟರು

ಪದ್ಯ ೫: ಸಂಜಯನು ಧೃತರಾಷ್ಟ್ರನಿಗೆ ಹೇಗೆ ತನ್ನ ತಪ್ಪನ್ನು ತೋರಿದನು?

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ (ದ್ರೋಣ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ರಾಜ ನೀನೇಕೆ ಈಗ ದುಃಖಿಸುವೆ? ಅವಿವೇಕತನದಿಂದ ಮಗನನ್ನು ಉಬ್ಬಿಸಿ, ಬೆಳೆಸಿ, ಕುಹಕದ ಕುಟಿಲದ ವಿದ್ಯೆಗಳನ್ನು ಕಲಿಸಿದೆ, ವಿವೇಕಿಗಳಿಗೆ ವೀರರಿಗೆ ನಿಮ್ಮಲ್ಲಿ ಸ್ಥಳವಿಲ್ಲ, ಈಗ ದುಃಖಿಸಿ ಏನು ಬಂತು? ಸಹಿಸಿಕೋ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಶೋಕ: ದುಃಖ; ಜೀಯ: ಒಡೆಯ; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಮಗ: ಸುತ; ಹೆಚ್ಚಿಸು: ಏರಿಸು; ಸಾಕು: ಸಲಹು, ರಕ್ಷಿಸು; ಕಲಿಸು: ಹೇಳಿಕೊಟ್ಟ; ಕುಟಿಲ: ಮೋಸ, ವಂಚನೆ; ಕುಹಕ: ಮೋಸ, ವಂಚನೆ; ವಿದ್ಯೆ: ಜ್ಞಾನ; ಆಕೆವಾಳ: ವೀರ, ಪರಾಕ್ರಮಿ; ಹೊರಿಗೆ: ಭಾರ, ಹೊರೆ, ಹೊಣೆಗಾರಿಕೆ; ವಿವೇಕ: ಯುಕ್ತಾಯುಕ್ತ ವಿಚಾರ; ಸಲ್ಲು: ಸರಿಹೊಂದು; ಸಾಕು: ತಡೆ; ಸೈರಿಸು: ತಾಳು; ನೃಪ: ರಾಜ;

ಪದವಿಂಗಡಣೆ:
ಶೋಕವೇತಕೆ+ ಜೀಯ +ನೀನ್+ಅವಿ
ವೇಕಿತನದಲಿ +ಮಗನ +ಹೆಚ್ಚಿಸಿ
ಸಾಕಿ +ಕಲಿಸಿದೆ+ ಕುಟಿಲತನವನು+ ಕುಹಕ +ವಿದ್ಯೆಗಳ
ಆಕೆವಾಳರು +ಹೊರಿಗೆಯುಳ್ಳ +ವಿ
ವೇಕಿಗಳು+ ನಿಮ್ಮಲ್ಲಿ+ಸಲ್ಲರು
ಸಾಕ್+ಇದೇತಕೆ +ಸೈರಿಸೆಂದನು+ ಸಂಜಯನು +ನೃಪನ

ಅಚ್ಚರಿ:
(೧) ಅವಿವೇಕ, ವಿವೇಕ – ವಿರುದ್ಧ ಪದಗಳು
(೨) ಕ ಕಾರದ ತ್ರಿವಳಿ ಪದ – ಕಲಿಸಿದೆ ಕುಟಿಲತನವನು ಕುಹಕ
(೩) ಸ ಕಾರದ ಸಾಲು ಪದ – ಸಲ್ಲರು ಸಾಕಿದೇತಕೆ ಸೈರಿಸೆಂದನು ಸಂಜಯನು