ಪದ್ಯ ೧೦೧: ಇಂದ್ರನು ಊರ್ವಶಿಗೆ ಯಾವ ಸಂದೇಶವನ್ನು ಕಳಿಸಿದ್ದನು?

ಎಮಗೆ ಮಗನರ್ಜುನನು ನೀನಿಂ
ದೆಮಗೆ ಸೊಸೆಯಹುದಾತನಂತ
ಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿಲಹರಿಯಲಿ
ಕಮಲಮುಖಿನೀ ಕಮಲವಾತನು
ಭ್ರಮರ ನೀ ಸುರವನದ ಸಿರಿಮಧು
ಸಮಯವರ್ಜುನನೆಂದು ಬೆಸಸಿದನಮರಪತಿಯೆಂದ (ಅರಣ್ಯ ಪರ್ವ, ೮ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಚಿತ್ರಸೇನನು ಊರ್ವಶಿಯನ್ನುದ್ದೇಶಿಸಿ ಇಂದ್ರನು ಹೇಳಿದ ಮಾತುಗಳನ್ನು ಹೇಳಿದನು, ಅರ್ಜುನನು ನನಗೆ ಮಗ, ಇಂದು ನೀನು ನಮಗೆ ಸೊಸೆಯಾಗಬೇಕು, ಅವನ ಅಂತರಂಗದ ಕತ್ತಲನ್ನು ನಿನ್ನ ಸ್ತನಗಳ ಕಾಂತಿಯ ತರಂಗದಿಂದ ಬೆಳಗಬೇಕು. ಊರ್ವಶಿ, ನೀನು ಕಮಲ, ಅವನು ದುಂಬಿ, ನೀನು ಸ್ವರ್ಗದ ನಂದನವನದ ಐಸಿರಿ, ಅವನು ನಂದನವನಕ್ಕೆ ಬಂದ ವಸಂತಕಾಲ, ಹೀಗೆಂದು ದೇವೇಂದ್ರನು ಹೇಳಿದನೆಂದು ಚಿತ್ರಸೇನನು ಊರ್ವಶಿಗೆ ತಿಳಿಸಿದನು.

ಅರ್ಥ:
ಎಮಗೆ: ನನಗೆ; ಮಗ: ಸುತ; ಸೊಸೆ: ಮಗನ ಹೆಂಡತಿ; ಅಂತಸ್ತಿಮಿರ: ಒಳಗಿನ ಕತ್ತಲೆ; ಕಳೆ: ನಿವಾರಿಸು; ಕುಚ: ಮೊಲೆ, ಸ್ತನ; ಯುಗ: ಎರಡು; ಕಾಂತಿ: ಪ್ರಕಾಶ; ಲಹರಿ: ತರಂಗ; ಕಮಲಮುಖಿ: ಸುಂದರಿ; ಕಮಲ: ತಾವರೆ; ಭ್ರಮರ: ದುಂಬಿ; ಸುರವನ: ಸ್ವರ್ಗದ ಕಾಡು; ಸಿರಿ: ಶ್ರೇಷ್ಠ, ಐಶ್ವರ್ಯ; ಮಧು: ಜೇನು; ಸಮಯ: ಕಾಲ; ಬೆಸಸು: ಹೇಳು, ಆಜ್ಞಾಪಿಸು; ಅಮರಪತಿ: ಇಂದ್ರ; ಅಮರ: ದೇವತೆ; ಪತಿ: ಒಡೆಯ;

ಪದವಿಂಗಡಣೆ:
ಎಮಗೆ +ಮಗನ್+ಅರ್ಜುನನು+ ನೀನ್
ಇಂದ್+ಎಮಗೆ +ಸೊಸೆಯಹುದ್+ಆತನ್+ಅಂತ
ಸ್ತಿಮಿರವನು+ ಕಳೆ+ ನಿನ್ನ+ ಕುಚಯುಗ+ ಕಾಂತಿ+ಲಹರಿಯಲಿ
ಕಮಲಮುಖಿ+ ನೀ +ಕಮಲವ್+ಆತನು
ಭ್ರಮರ+ ನೀ +ಸುರವನದ +ಸಿರಿಮಧು
ಸಮಯವ್+ಅರ್ಜುನನೆಂದು +ಬೆಸಸಿದನ್+ಅಮರಪತಿ+ಎಂದ

ಅಚ್ಚರಿ:
(೧) ಊರ್ವಶಿಯನ್ನು ಕಮಲಮುಖಿ, ಸುರವನದ ಸಿರಿಮಧಿ ಎಂದು ಕರೆದಿರುವುದು
(೨) ಅರ್ಜುನನೊಂದಿಗೆ ಸೇರು ಎಂದು ಹೇಳುವ ಪರಿ – ನೀನಿಂದೆಮಗೆ ಸೊಸೆಯಹುದಾತನಂತ
ಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿಲಹರಿಯಲಿ
(೩) ಊರ್ವಶಿಯನ್ನು ಹೊಗಳುವ ಪರಿ – ಕಮಲಮುಖಿನೀ ಕಮಲವಾತನುಭ್ರಮರ ನೀ ಸುರವನದ ಸಿರಿಮಧು ಸಮಯವರ್ಜುನನೆಂದು