ಪದ್ಯ ೩೦: ಭಗವಂತನ ದಯೆ ಎಂತಹುದು?

ಅರಸುತಾಯಾಮ್ನಾಯ ತತಿಕು
ಕ್ಕುರಿಸಿದವು ಮುನಿಗಳ ಸಮಾಧಿಗೆ
ಕರುಬುವವರಾವಲ್ಲ ಕಾಣರು ನಖದ ಕೊನೆಗಳನು
ಅರಸ ತಾನೇ ಹರಿಹರಿದು ತ
ನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ ರಾಯಗದುಗಿನ ವೀರನಾರಣನ (ಅರಣ್ಯ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ವೇದಗಳು ಭಗವಂತನನ್ನು ಹುಡುಕಲು ಹೊರಟು ಮುಂದೆ ಹೋಗಲು ದಾರಿ ಕಾಣದೇ ಸೋತು ಕುಳಿತುಬಿಟ್ಟವು, ಮುನಿಗಳು ಸಮಾಧಿ ಸ್ಥಿತಿಯನ್ನು ಹೋದುವರಲ್ಲಾ, ಅದನ್ನು ಕಂಡು ನಮಗೇನೂ ಹೊಟ್ಟೆಕಿಚ್ಚಿಲ್ಲ, ಆದರೆ ಅವರಿಗೆ ಭಗವಂತನ ಉಗುರುಗಳ ತುದಿಯೂ ಕಾಣಲಿಲ್ಲಾ, ಶ್ರೀ ಹರಿಯು ತನ್ನ ಭಕ್ತರನ್ನು ತಾನೆ ಮುಂದೆ ಬಂದು ಸಲಹುತ್ತಾನೆ, ಭಕ್ತರ ಮೇಲೆ ವೀರನಾರಾಯಣನ ಕರುಣೆ ಎಷ್ಟೋ ಯಾರು ಬಲ್ಲರು ಎಂದು ಜನಮೇಜಯ ರಾಜನಿಗೆ ವೈಶಂಪಾಯನರು ತಿಳಿಸಿದರು.

ಅರ್ಥ:
ಅರಸು: ಹುಡುಕು; ಆಮ್ನಾಯ: ಶೃತಿ; ತತಿ: ಸಮೂಹ; ಕುಕ್ಕುರಿಸು; ಕುಳಿತುಕೊಳ್ಳು; ಮುನಿ: ಋಷಿ; ಸಮಾಧಿ: ಏಕಾಗ್ರತೆ, ತನ್ಮಯತೆ; ಕರುಬು: ಹೊಟ್ಟೆಕಿಚ್ಚು ಪಡು; ಕಾಣು: ತೋರು; ನಖ: ಉಗುರು; ಕೊನೆ: ತುದಿ; ಅರಸ: ರಾಜ; ಹರಿಹರಿದು: ಮುಂದೆ ಬಂದು, ಚಲಿಸು; ಎರಕ: ಪ್ರೀತಿ, ಅನುರಾಗ; ಬಿಡು: ತೊರೆ; ಸಲಹು: ಕಾಪಾಡು; ಕರುಣ: ದಯೆ; ರಾಯ: ರಾಜ;

ಪದವಿಂಗಡಣೆ:
ಅರಸುತಾ+ಆಮ್ನಾಯ +ತತಿ+ಕು
ಕ್ಕುರಿಸಿದವು +ಮುನಿಗಳ +ಸಮಾಧಿಗೆ
ಕರುಬುವವರಾವಲ್ಲ+ ಕಾಣರು +ನಖದ +ಕೊನೆಗಳನು
ಅರಸ+ ತಾನೇ +ಹರಿಹರಿದು +ತನ್
ಎರಕದವರನು +ಬಿಡದೆ+ ಸಲಹುವ
ಕರುಣವೆಂತುಟೊ +ರಾಯ+ಗದುಗಿನ+ ವೀರನಾರಣನ

ಅಚ್ಚರಿ:
(೧) ಭಗವಂತನ ದಯೆ – ತಾನೇ ಹರಿಹರಿದು ತನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ