ಪದ್ಯ ೧೭: ನಾರಾಯಣಾಸ್ತ್ರದ ತಾಪ ಎಂತಹದು?

ಒಳಗೆ ಜಲಚರವೊದರೆ ಕುದಿದುದು
ಜಲಧಿ ಕಾದುದು ಧರಣಿ ಸೀದುದು
ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ
ನೆಲಕೆ ದಾಡೆಯ ಕೊಟ್ಟು ಕುಂಭ
ಸ್ಥಳವ ತೆಗೆದವು ದಿಗಿಭತತಿ ಹೆಡೆ
ನಳಿಯೆ ಮಣಿಗಳಲಾಂತನವನಿಯನುರಗಪತಿಯಂದು (ದ್ರೋಣ ಪರ್ವ, ೧೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಕಾವಿಗೆ ಸಮುದ್ರವು ಕುದಿದು ಜಲಚರಗಳು ನೋವಿನಿಂದ ಒದರಿದವು. ಭೂಮಿ ಅರಣ್ಯಗಳು ಸೀದುಹೋದವು. ಕುಲಪರ್ವತಗಳು ಸಿಡಿದವು. ಅಷ್ಟ ದಿಗ್ಗಜಗಳು ತಾಪವನ್ನು ತಾಳಲಾರದೆ ನೆತ್ತಿಯನ್ನು ತಗ್ಗಿಸಿ ದಾಡೆಯಿಂದ ಭೂಮಿಯನ್ನು ಎತ್ತಿ ಹಿಡಿದವು. ಆದಿಶೇಷನು ಹೆಡೆಬಾಗಿ ಮಣಿಗಳಿಂದಲೇ ಭೂಮಿಯನ್ನು ಹೊತ್ತನು.

ಅರ್ಥ:
ಒಳಗೆ: ಆಂತರ್ಯ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ಕುದಿ: ಮರಳು; ಜಲಧಿ: ಸಾಗರ; ಕಾದು: ಬಿಸಿಯಾಗು; ಧರಣಿ: ಭೂಮಿ; ಸೀದು: ಕರಕಲಾಗು; ಕುಲಗಿರಿ: ದೊಡ್ಡ ಬೆಟ್ಟ; ಉರೆ: ಹೆಚ್ಚು; ಸಿಡಿ: ಸೀಳು; ಸೀಕರಿ: ಸೀಕಲು, ಕರಿಕು; ವನ: ಕಾಡು; ನಿಕರ: ಗುಂಪು; ನೆಲ: ಭೂಮಿ; ದಾಡೆ: ದವಡೆ, ಒಸಡು; ಕೊಟ್ಟು: ನೀದು; ಕುಂಭಸ್ಥಳ: ಆನೆಯ ನೆತ್ತಿ; ತೆಗೆ: ಹೊರತರು; ದಿಗಿಭ: ದಿಕ್ಕಿನ ಆನೆ, ದಿಗ್ಗಜ; ತತಿ: ಗುಂಪು; ಹೆಡೆ: ಹಾವಿನ ಬಿಚ್ಚಿದ ತಲೆ, ಫಣಿ; ನಳಿ: ಬಾಗು; ಮಣಿ: ಬೆಲೆಬಾಳುವ ರತ್ನ; ಅವನಿ: ಭೂಮಿ; ಉರಗಪತಿ: ಆದಿಶೇಷ;

ಪದವಿಂಗಡಣೆ:
ಒಳಗೆ +ಜಲಚರವೊದರೆ +ಕುದಿದುದು
ಜಲಧಿ +ಕಾದುದು +ಧರಣಿ+ ಸೀದುದು
ಕುಲಗಿರಿಗಳ್+ಉರೆ +ಸಿಡಿದು +ಸೀಕರಿವೋಯ್ತು +ವನ+ನಿಕರ
ನೆಲಕೆ +ದಾಡೆಯ +ಕೊಟ್ಟು +ಕುಂಭ
ಸ್ಥಳವ +ತೆಗೆದವು +ದಿಗಿಭತತಿ+ ಹೆಡೆ
ನಳಿಯೆ +ಮಣಿಗಳಲಾಂತನ್+ಅವನಿಯನ್+ಉರಗಪತಿ+ಅಂದು

ಅಚ್ಚರಿ:
(೧) ಕುದಿದುದು, ಕಾದುದು, ಸೀದುದು, ಸಿಡಿದು – ಪದಗಳ ಬಳಕೆ
(೨) ಒಂದೇ ಪದದ ಪ್ರಯೋಗ – ಮಣಿಗಳಲಾಂತನವನಿಯನುರಗಪತಿಯಂದು

ಪದ್ಯ ೯೦: ಹಾರಗಳೇಕೆ ದಿಕ್ಕುದಿಕ್ಕಿಗೆ ಹರಡಿತು?

ಶೂರ ಜೋದರ ಮೇಲುವಾಯಿದು
ವೀರಸಿರಿ ಬಿಗಿಯಪ್ಪೆ ಮುತ್ತಿನ
ಹಾರ ಹರಿಯಲು ಕೆದರಿದವು ದೆಸೆದೆಸೆಗೆ ಮುತ್ತುಗಳು
ವಾರಣದ ಕುಂಭಸ್ಥಳಂಗಳ
ಚಾರುಮೌಕ್ತಿಕನಿಕರವೋ ಮೇಣ್
ಭಾರತಾಹವ ಕೌತುಕೋದಯರಸಕೆ ನೆಲೆಯಾಯ್ತೋ (ಭೀಷ್ಮ ಪರ್ವ, ೪ ಸಂಧಿ, ೯೦ ಪದ್ಯ)

ತಾತ್ಪರ್ಯ:
ಶೂರನಾದ ಜೋಧರು ಪರಾಕ್ರಮವನ್ನು ಮೆಚ್ಚಿ ವೀರಲಕ್ಷ್ಮಿಯು ಮೇಲೆ ಬಿದ್ದು ಆರನ್ನಪ್ಪಿದಾಗ ಹಾರಗಳು ಹರಿದು ದಿಕ್ಕು ದಿಕ್ಕಿಗೆ ಚೆಲ್ಲಿದವು. ಆನೆಗಳ ಸೊಂಡಿಲುಗಳನ್ನಲಂಕರಿಸಿದ್ದ ಮುತ್ತುಗಳೋ ಭಾರತಯುದ್ಧ ಕೌತುಕದ ಆರಂಭವೋ ಎಂಬಂತಿತ್ತು.

ಅರ್ಥ:
ಶೂರ: ಧೀರ, ಪರಾಕ್ರಮಿ; ಜೋದ: ಯೋಧ; ಮೇಲ್ವಾಯಿ: ಮೇಲೆ ಬೀಳು; ವೀರ: ಶೂರ; ಸಿರಿ: ಐಶ್ವರ್ಯ; ಬಿಗಿದಪ್ಪಿ: ಗಟ್ಟಿಯಾಗಿ ಅಪ್ಪಿಕೊಳ್ಳು; ಮುತ್ತು: ಬೆಲೆಬಾಳುವ ರತ್ನ; ಹಾರ: ಮಾಲೆ; ಹರಿ: ಮುತ್ತಿಗೆ ಹಾಕು; ಕೆದರು: ಹರಡು; ದೆಸೆ: ದಿಕ್ಕು; ವಾರಣ: ಆನೆ; ಕುಂಭಸ್ಥಳ: ಆನೆಯ ನೆತ್ತಿ; ಚಾರು: ಸುಂದರ; ಮೌಕ್ತಿಕ: ಮುತ್ತಿನ; ನಿಕರ: ಗುಂಪು; ಮೇಣ್: ಮತ್ತು, ಅಥವಾ; ಆಹವ: ಯುದ್ಧ; ಕೌತುಕ: ಆಶ್ಚರ್ಯ; ಉದಯ: ಹುಟ್ಟು; ರಸ: ಸಾರ, ಸತ್ವ; ನೆಲೆ: ಭೂಮಿ;

ಪದವಿಂಗಡಣೆ:
ಶೂರ +ಜೋದರ +ಮೇಲುವಾಯಿದು
ವೀರಸಿರಿ+ ಬಿಗಿಯಪ್ಪೆ+ ಮುತ್ತಿನ
ಹಾರ +ಹರಿಯಲು +ಕೆದರಿದವು +ದೆಸೆದೆಸೆಗೆ +ಮುತ್ತುಗಳು
ವಾರಣದ +ಕುಂಭಸ್ಥಳಂಗಳ
ಚಾರು+ಮೌಕ್ತಿಕ+ನಿಕರವೋ+ ಮೇಣ್
ಭಾರತ+ಆಹವ +ಕೌತುಕ+ಉದಯ+ರಸಕೆ +ನೆಲೆಯಾಯ್ತೋ

ಅಚ್ಚರಿ:
(೧) ರೂಪಕದ ಪ್ರಯೋಗ – ಶೂರ ಜೋದರ ಮೇಲುವಾಯಿದು ವೀರಸಿರಿ ಬಿಗಿಯಪ್ಪೆ ಮುತ್ತಿನ
ಹಾರ ಹರಿಯಲು ಕೆದರಿದವು ದೆಸೆದೆಸೆಗೆ ಮುತ್ತುಗಳು

ಪದ್ಯ ೮: ದುಶ್ಯಾಸನ ಸೈನ್ಯವು ಏನು ಹೇಳುತ್ತಾ ಮುನ್ನುಗ್ಗಿತು?

ಸಾರಹೇಳೋ ರಾಯಕುವರಮು
ರಾರಿ ದುಶ್ಯಾಸನ ಕಣಾ ಫಡ
ವೈರಿ ಭೀಮ ದ್ವಿರದ ಕುಂಭಸ್ಥಳಕೆ ಪಂಚಮುಖ
ವೀರಮನ್ಮಥ ತ್ರಿಪುರಹರ ಜ
ಜ್ಝಾರ ಭಟ ಜಗಜಟ್ಟಿಗಿದಿರೆ ವಿ
ಕಾರಿಯೇ ಫಡ ಭೀಮನೆನುತೈದಿತು ಭಟಸ್ತೋಮ (ಕರ್ಣ ಪರ್ವ, ೧೯ ಸಂಧಿ, ೮ ಪದ್ಯ)

ತಾತ್ಪರ್ಯ:
ಜೋರಾಗಿ ಹೇಳಿ ರಾಜಪುತ್ರರಲ್ಲಿ ವಿಷ್ಣುವಿನಂತಿರುವ ದುಶ್ಯಾಸನನು ಬಂದಿದ್ದಾನೆ, ಶತ್ರುವಾದ ಭೀಮನೆಂಬ ಆನೆಯ ಕುಂಭಸ್ಥಳವನ್ನು ಹಿಡಿಯಬಲ್ಲ ಸಿಂಹ, ವೀರ ಮನ್ಮಥನನ್ನು ದಹಿಸಬಲ್ಲ ಶಿವನರೂಪದಲ್ಲಿ ಜಗಜಟ್ಟಿ ಬಂದಿದ್ದಾನೆ, ದುಷ್ಟನಾದ ಭೀಮನು ಎದುರು ಬರಹೇಳಿರಿ ಎಂದು ದುಶ್ಯಾಸನ ಸೈನಿಕ ವೃಂದ ಕೂಗುತ್ತಾ ಮುನ್ನುಗ್ಗಿತು.

ಅರ್ಥ:
ಸಾರ: ಔಚಿತ್ಯ, ಜೋರು; ಹೇಳು: ತಿಳಿಸು; ರಾಯ: ರಾಜ; ಕುವರ: ಮಗ; ಮುರಾರಿ: ಕೃಷ್ಣ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ವೈರಿ: ರಿಪು; ದ್ವಿರದ: ಎರಡು ಹಲ್ಲುಗಳನ್ನು ಹೊಂದಿದ, ಆನೆ; ಕುಂಭಸ್ಥಳ: ಆನೆಯ ತಲೆಯ ಭಾಗ; ಪಂಚ: ಐದು; ಮುಖ: ಆನನ; ವೀರ: ಶೂರ; ಮನ್ಮಥ: ಕಾಮ, ರತೀಶ; ಜಜ್ಝಾರ: ಪರಾಕ್ರಮಿ; ಭಟ: ಸೈನಿಕ; ಜಗಜಟ್ಟಿ: ಶೂರ, ಪರಾಕ್ರಮಿ; ವಿಕಾರಿ: ದುಷ್ಟ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಭಟಸ್ತೋಮ: ಸೈನಿಕರ ಗುಂಪು;

ಪದವಿಂಗಡಣೆ:
ಸಾರ+ಹೇಳೋ +ರಾಯಕುವರ+ಮು
ರಾರಿ +ದುಶ್ಯಾಸನ+ ಕಣಾ+ ಫಡ
ವೈರಿ +ಭೀಮ +ದ್ವಿರದ+ ಕುಂಭಸ್ಥಳಕೆ+ ಪಂಚಮುಖ
ವೀರ+ಮನ್ಮಥ+ ತ್ರಿಪುರಹರ+ ಜ
ಜ್ಝಾರ +ಭಟ +ಜಗಜಟ್ಟಿಗ್+ಇದಿರೆ +ವಿ
ಕಾರಿಯೇ +ಫಡ +ಭೀಮನೆನುತ್+ಐದಿತು+ ಭಟಸ್ತೋಮ

ಅಚ್ಚರಿ:
(೧) ಜ ಕಾರದ ಜೋಡಿ ಪದ – ಜಜ್ಝಾರ ಭಟ ಜಗಜಟ್ಟಿಗಿದಿರೆ
(೨) ಮುರಾರಿ, ವೈರಿ, ವಿಕಾರಿ – ಪ್ರಾಸ ಪದಗಳು

ಪದ್ಯ ೧೮: ದ್ರೌಪದಿಯ ಸೌಂದರ್ಯವು ಏಕೆ ಚಿತ್ರಿಸಲು ಅಸಾಧ್ಯ?

ಸರಸಲಾವಣ್ಯಾಂಬುಮಯ ತನು
ಸರಸಿಯಲಿ ಮುಳುಗಿರ್ದ ಯೌವನ
ಕರಿಯ ಕುಂಭಸ್ಥಳವೊ ವಿಪುಳ ಪಯೋಧರ ದ್ವಯವೊ
ತರಳ ನಯನವೊ ಶಫರಿಗಳೊ ತಾ
ವರೆಯೊಮುಖವೋ ತುಂಬಿಗಳೊ ನಿರಿ
ಗುರುಳುಗಳೊ ಮಣಿಗಣವೊ ರದನವೊ ಚಿತ್ರವಾಯ್ತೆಂದ (ಆದಿ ಪರ್ವ, ೧೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೌಂದರ್ಯ, ಚೆಲುವಿನಿಂದ ಕೂಡಿದ ನೀರು ತುಂಬಿದ ದೇಹವೆಂಬ ಸರೋವರದಲ್ಲಿ ಮುಳುಗಿರುವ ಯೌವನವೆಂಬ ಆನೆಯ ತಲೆಯೋ ಅಥವ ತುಂಬು ಸ್ತನವೋ, ಚಂಚಲವಾದ ಕಣ್ನುಗಳೊ ಅಥವ ಮೀನುಗಳೊ, ಸರೋವರದಲ್ಲಿರುವ ಕಮಲವೋ ಅಥವ ಮುಖವೋ, ಕಮಲಕ್ಕೆ ಆಕರ್ಷಿತವಾಗಿ ಬರುವ ಮರಿದುಂಬಿಯೋ ಅಥವ ಆಕೆಯ ಮುಂಗುರುಳೊ, ಸರೋವರದಲ್ಲಿ ಸಿಗುವ ಮಣಿಯೋ ಅಥವ ಆಕೆಯ ಹಲ್ಲೋ, ಹೀಗೆ ಯಾವುದೆಂದು ಹೇಳಲು ಬಾರದಂತೆ ದ್ರೌಪದಿಯ ಸೌಂದರ್ಯವು ಚಿತ್ರಿತವಾಗಿತ್ತು.

ಅರ್ಥ:
ಸರಸ: ಚೆಲುವು, ವಿನೋದ; ಲಾವಣ್ಯ: ಸೌಂದರ್ಯ, ಚೆಲುವು; ಅಂಬು: ನೀರು; ತನು: ಮೈ, ದೇಹ; ಸರಸಿ: ಸರೋವರ; ಮುಳುಗು: ಒಳಸೇರು, ಮುಚ್ಚಿಹೋಗು; ಯೌವನ: ಹರಯ, ತಾರುಣ್ಯ, ಪ್ರಾಯ; ಕರಿ: ಆನೆ; ಕುಂಭ: ಕಲಶ, ಆನೆಯ ನೆತ್ತಿ; ವಿಪುಳ: ತುಂಬ; ಪಯೋಧರ: ಮೊಲೆ, ಸ್ತನ; ದ್ವಯ: ಎರಡು; ತರಳ: ಚಂಚಲತೆ, ಬೆರಗು; ನಯನ: ಕಣ್ಣು; ಶಫರಿ: ಮೀನು; ತಾವರೆ: ಕಮಲ; ಮುಖ: ವಕ್ತ್ರ, ಆನನ; ತುಂಬಿ: ದುಂಬಿ, ಭ್ರಮರ; ನಿರಿಗುರುಳು: ಗುಂಗುರಾದ ಮುಂಗುರುಳು; ಮಣಿ: ಮುತ್ತು; ರದನ: ಹಲ್ಲು; ಚಿತ್ರ: ಆಕೃತಿ;

ಪದವಿಂಗಡಣೆ:
ಸರಸ+ಲಾವಣ್ಯ+ಅಂಬುಮಯ+ ತನು
ಸರಸಿಯಲಿ +ಮುಳುಗಿರ್ದ +ಯೌವನ
ಕರಿಯ+ ಕುಂಭಸ್ಥಳವೊ+ ವಿಪುಳ+ ಪಯೋಧರ +ದ್ವಯವೊ
ತರಳ+ ನಯನವೊ +ಶಫರಿಗಳೊ +ತಾ
ವರೆಯೊ+ಮುಖವೋ +ತುಂಬಿಗಳೊ+ ನಿರಿ
ಗುರುಳುಗಳೊ +ಮಣಿಗಣವೊ +ರದನವೊ +ಚಿತ್ರವಾಯ್ತೆಂದ

ಅಚ್ಚರಿ:
(೧) ಸೌಂದರ್ಯವನ್ನು ವರ್ಣಿಸಲು ಉಪಯೋಗಿಸಿರುವ ಉಪಮಾನಗಳು – ಲಾವಣ್ಯವೆಂಬ ನೀರು ತುಂಬಿದ ದೇಹವೆಂಬ ಸರೋವರ
(೨) ಅಂಬು, ಸರಸಿ – ನೀರು ಪದದ ಸಮಾನಾರ್ಥಕ
(೩) ಸರಸ, ಲಾವಣ್ಯ – ಚೆಲುವು; ಸರಸ, ತರಳ – ಚಂಚಲತೆ; – ಸಮಾನಾರ್ಥಕ ಪದಗಳು
(೪) ಕುಂಭಸ್ಥಳ – ಮೊಲೆ, ನಯನ – ಕಣ್ಣು, ತಾವರೆ – ಮುಖ, ದುಂಬಿ – ಗುಂಗುರು, ಮಣಿ – ಹಲ್ಲು – ಸೌಂದರ್ಯವನ್ನು ಹೋಲಿಸುವ ಉಪಮಾನ ಪದಗಳು