ಪದ್ಯ ೨೩: ಭೀಷ್ಮರಿಗೆ ಕೃಷ್ಣನು ಏನು ಹೇಳಿದನು?

ಮನ್ನಿಸುವಡೀ ಉಭಯರಾಯರು
ನಿನ್ನ ಮೊಮ್ಮಂದಿರುಗಳದರೊಳು
ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು
ನಿನ್ನನೇ ನಂಬಿಹರು ನೀನೇ
ಮುನ್ನ ಶಿಶುತನದಲ್ಲಿ ಸಲಹಿದೆ
ಮನ್ನಣೆಯ ನೀ ಬಲ್ಲೆಯೆಂದನು ದಾನವಧ್ವಂಸಿ (ಭೀಷ್ಮ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಕೌರವ ಪಾಂಡವರಿಬ್ಬರೂ ನಿನ್ನ ಮೊಮ್ಮಕ್ಕಳು. ಇವರಲ್ಲಿ ಪಾಂಡವರ ಜೀವನ ನಿನ್ನ ಕುಣಿಕೆಯಲ್ಲಿದೆ. ಅವರು ನಿನ್ನನ್ನೇ ನಂಬಿದ್ದಾರೆ, ಬಾಲ್ಯದಲ್ಲಿ ನೀನೇ ಅವರನ್ನು ಬೆಳೆಸಿದೆ, ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ನೀನೇ ಬಲ್ಲೆ, ಎಂದು ಭೀಷ್ಮನಿಗೆ ಕೃಷ್ಣನು ಹೇಳಿದನು.

ಅರ್ಥ:
ಮನ್ನಿಸು: ಗೌರವಿಸು; ಉಭಯ: ಎರಡು; ರಾಯ: ರಾಜ; ಮೊಮ್ಮಂದಿರು: ಮೊಮ್ಮಕ್ಕಳು; ಕುಣಿಕೆ: ಕೊನೆ, ತುದಿ; ಸುತ: ಮಕ್ಕಳು; ಜೀವನ: ಬದುಕು; ನಂಬು: ವಿಶ್ವಾಸವಿಡು; ಮುನ್ನ; ಮೊದಲು; ಶಿಶು: ಮಗು; ಸಲಹು: ಪೋಷಿಸು, ರಕ್ಷಿಸು; ಮನ್ನಣೆ: ಮರ್ಯಾದೆ; ಬಲ್ಲೆ: ತಿಳಿ; ದಾನವ: ರಾಕ್ಷಸ; ಧ್ವಂಸಿ: ಸಂಹಾರ ಮಾಡುವವ;

ಪದವಿಂಗಡಣೆ:
ಮನ್ನಿಸುವಡ್+ಈ+ ಉಭಯ+ರಾಯರು
ನಿನ್ನ +ಮೊಮ್ಮಂದಿರುಗಳ್+ಅದರೊಳು
ನಿನ್ನ +ಕುಣಿಕೆಯೊಳ್+ಇಹುದು+ ಕುಂತೀಸುತರ +ಜೀವನವು
ನಿನ್ನನೇ +ನಂಬಿಹರು +ನೀನೇ
ಮುನ್ನ +ಶಿಶುತನದಲ್ಲಿ+ ಸಲಹಿದೆ
ಮನ್ನಣೆಯ +ನೀ +ಬಲ್ಲೆಯೆಂದನು +ದಾನವ+ಧ್ವಂಸಿ

ಅಚ್ಚರಿ:
(೧) ಭೀಷ್ಮರನ್ನು ಭಾವನಾತ್ಮಕವಾಗಿ ಮರುಕಗೊಳಿಸುವ ಪರಿ – ನಿನ್ನ ಮೊಮ್ಮಂದಿರು, ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು, ನಿನ್ನನೇ ನಂಬಿಹರು, ನೀನೇ ಮುನ್ನ ಶಿಶುತನದಲ್ಲಿ ಸಲಹಿದೆ

ಪದ್ಯ ೪: ಉತ್ತರನು ದೂತರಿಗೆ ಏನು ಹೇಳಿದನು?

ಎನಲು ನೀನೇ ಬಲ್ಲೆ ಕರಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಮಿಸುತ್ತಿರ್ದನತ್ತಲು
ಜನಪ ಕುಂತೀಸುತನ ಸಹಿತೈತಂದನರಮನೆಗೆ (ವಿರಾಟ ಪರ್ವ, ೧೦ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನು ಅಪ್ಪಣೆ ನೀಡಲು, ಉತ್ತರನು ನೀನೇ ಬಲ್ಲೆ ಒಳ್ಳೆಯದು ಹಾಗೇ ಮಾಡುತ್ತೇನೆಂದು ಹೇಳಿ ದೂತರನ್ನು ಕರೆದು, ನಮ್ಮ ತಂದೆಯ ಬಳಿಗೆ ಹೋಗಿ ನಿಮ್ಮ ಮಗನು ಕೌರವ ಸೈನ್ಯವನ್ನು ಜಯಿಸಿದೆನೆಂದು ಹೇಳಿರಿ ಎಂದು ಅಪ್ಪಣೆ ಕೊಟ್ಟನು, ಇತ್ತ ವಿರಾಟನು ಕಂಕನೊಡನೆ ಅರಮನೆಗೆ ಬಂದನು.

ಅರ್ಥ:
ಬಲ್ಲೆ: ತಿಳಿದಿರುವೆ; ದೂತ: ಸೇವಕ; ಕರೆ: ಬರೆಮಾಡು; ತನಯ: ಕುಮಾರ, ಪುತ್ರ; ಪೇಳು: ಹೇಳು; ಜನಕ: ತಂದೆ; ಪೋಗಿ: ಹೋಗಿ; ನಿಯಮ: ಕಟ್ಟುಪಾಡು; ಜನಪ: ರಾಜ; ಸುತ: ಮಗ; ಐತಂದು: ಬಂದು ಸೇರು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಎನಲು+ ನೀನೇ +ಬಲ್ಲೆ +ಕರ+ಲೇ
ಸೆನುತ +ದೂತರ +ಕರೆದು +ಮತ್ಸ್ಯನ
ತನಯ +ಕೌರವ +ಬಲವ +ಜಯಿಸಿದನೆಂದು +ಪೇಳುವುದು
ಜನಕನಲ್ಲಿಗೆ +ಪೋಗಿ+ಎಂದ್
ಆತನು +ನಿಯಮಿಸುತ್ತಿರ್ದನ್+ಅತ್ತಲು
ಜನಪ +ಕುಂತೀಸುತನ +ಸಹಿತ್+ಐತಂದನ್+ಅರಮನೆಗೆ

ಅಚ್ಚರಿ:
(೧) ತನಯ, ಸುತ – ಸಮನಾರ್ಥಕ ಪದ

ಪದ್ಯ ೪೩: ದೂರ್ವಾಸ ಮುನಿಗಳು ಯಾರನ್ನು ಭೇಟಿ ಮಾಡಿದರು?

ಬಂದನೇ ಗೋವಿಂದ ಭಕ್ತರ
ಬಂಧುವಲ್ಲಾತನೊಳು ಮನಸಿಗೆ
ಸಂದ ಮನುಜರ ಸೆಣಸಮಾಡುವರಾರು ಭುವನದಲಿ
ಎಂದೆನುತ ದೂರ್ವಾಸ ಮುನಿಪತಿ
ಬಂದು ಕಂಡನು ಕೃಷ್ಣರಾಯನ
ನಂದು ಕುಂತೀಸುತ ಸಹಾಯನ ಪರ್ಣಶಾಲೆಯಲಿ (ಅರಣ್ಯ ಪರ್ವ, ೧೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನನ್ನು ತನ್ನ ದಿವ್ಯ ದೃಷ್ಟಿಯಲ್ಲಿ ನೋಡಿದ ದೂರ್ವಾಸರು, ಶ್ರೀಕೃಷ್ಣನು ಆಗಮಿಸಿದನಲ್ಲವೇ? ಅವನು ಭಕ್ತರ ಬಂಧು. ಅವನು ಮನಸ್ಸಿನಲ್ಲಿ ಮೆಚ್ಚಿದ ಭಕ್ತರೊಡನೆ ಲೋಕದಲ್ಲಿ ಸೆಣಸುವವರಾರು? ಎಂದು ಯೋಚಿಸುತ್ತಾ ದೂರ್ವಾಸನು ಧರ್ಮರಾಯನ ಪರ್ಣಶಾಲೆಗೆ ಬಂದು ಕುಂತೀಸುತರಿಗೆ ಸಹಾಯಕನಾದ ಶ್ರೀಕೃಷ್ಣನನ್ನು ನೋಡಿದನು.

ಅರ್ಥ:
ಬಂದು: ಆಗಮಿಸು; ಗೋವಿಂದ: ಕೃಷ್ಣ; ಭಕ್ತ: ಆರಾಧಕ; ಬಂಧು: ಹತ್ತಿರದವ, ಸಂಬಂಧಿಕ; ಮನಸು: ಮನಸ್ಸು; ಸಂದ: ಮೆಚ್ಚು; ಮನುಜ: ಮಾನವ; ಸೆಣಸು: ಹೋರಾಡು; ಭುವನ: ಭೂಮಿ; ಮುನಿ: ಋಷಿ; ಕಂಡು: ನೋಡು; ರಾಯ: ರಾಜ; ಸುತ: ಮಕ್ಕಳು; ಸಹಾಯ: ನೆರವು; ಪರ್ಣಶಾಲೆ: ಕುಟೀರ;

ಪದವಿಂಗಡಣೆ:
ಬಂದನೇ +ಗೋವಿಂದ +ಭಕ್ತರ
ಬಂಧುವಲ್ಲಾ+ಆತನೊಳು +ಮನಸಿಗೆ
ಸಂದ +ಮನುಜರ +ಸೆಣಸ+ಮಾಡುವರಾರು+ ಭುವನದಲಿ
ಎಂದೆನುತ+ ದೂರ್ವಾಸ +ಮುನಿಪತಿ
ಬಂದು +ಕಂಡನು +ಕೃಷ್ಣ+ರಾಯನನ್
ಅಂದು +ಕುಂತೀಸುತ +ಸಹಾಯನ +ಪರ್ಣಶಾಲೆಯಲಿ

ಅಚ್ಚರಿ:
(೧) ಬಂದು, ಅಂದು, ಬಂಧು – ಪ್ರಾಸ ಪದಗಳು
(೨) ಕೃಷ್ಣನನ್ನು ಹೊಗಳುವ ಪರಿ – ಭಕ್ತರ ಬಂಧು, ಕುಂತೀಸುತ ಸಹಾಯನ

ಪದ್ಯ ೩೯: ಧರ್ಮಜನು ಭೀಮನನ್ನು ಹೇಗೆ ವಿಚಾರಿಸಿದನು?

ಏನು ಕುಂತೀಸುತನಪಾಯವ
ದೇನು ಫಣಿ ಬಂಧದ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವಶಿವಯೆನುತ ನುಡಿಸಿದನನಿಲ ನಂದನನ (ಅರಣ್ಯ ಪರ್ವ, ೧೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನನ್ನು ನೋಡಿ, ಏನು ಭೀಮ ಇದೇನು ಅಪಾಯಕ್ಕೆ ಸಿಲುಕಿದೆ, ಹಾವಿನ ಹಿಡಿತದಲ್ಲಿ ವಿನೋದದಿಂದ ಸಿಕ್ಕಿದೆಯೋ, ಮನುಷ್ಯರ ಬಲವನ್ನಡಗಿಸುವ ವಿಧಿಯ ಲೀಲೆಯೋ? ನಮಗಿಂತಹ ಹೀನದೆಸೆ ಬರಲು ಕಾರಣವೇನು? ಯಾವ ಪಾಪದಿಂದ ನಿನಗೀ ಗತಿಯು ಬಂದಿತು ಎಂದು ಭೀಮನನ್ನು ಕೇಳಿದನು.

ಅರ್ಥ:
ಸುತ: ಮಗ; ಅಪಾಯ: ತೊಂದರೆ; ಫಣಿ: ಹಾವು; ಬಂಧ: ಕಟ್ಟು, ಪಾಶ; ವಿಧಾನ: ರೀತಿ; ವಿನೋದ: ಸಂತಸ; ತ್ರಾಣಾಪಚಯ: ಶಕ್ತಿಕುಂದುವಿಕೆ; ವಿಧಿ: ನಿಯಮ; ಕರ್ತವ್ಯ: ಕಾಯಕ, ಕೆಲಸ; ಹೀನ: ಅಲ್ಪ, ಕ್ಷುದ್ರ; ದೆಸೆ: ಸ್ಥಿತಿ; ನಿಮಿತ್ತ: ನೆಪ, ಕಾರಣ; ದುಷ್ಕೃತ: ಕೆಟ್ಟ ಕೆಲಸ; ನುಡಿಸು: ಮಾತಾಡಿಸು; ಅನಿಲನಂದನ: ವಾಯುಪುತ್ರ (ಭೀಮ);

ಪದವಿಂಗಡಣೆ:
ಏನು +ಕುಂತೀಸುತನ್+ಅಪಾಯವದ್
ಏನು+ ಫಣಿ +ಬಂಧದ +ವಿಧಾನವ್
ಇದೇನು +ನಿನಗೆ +ವಿನೋದವೋ +ತ್ರಾಣಾಪಚಯ+ ವಿಧಿಯೊ
ಏನಿದಕೆ+ ಕರ್ತವ್ಯ +ನಮಗೀ
ಹೀನ +ದೆಸೆಗೆ +ನಿಮಿತ್ತ +ದುಷ್ಕೃತ
ವೇನು+ ಶಿವಶಿವಯೆನುತ +ನುಡಿಸಿದನ್+ಅನಿಲನಂದನನ

ಅಚ್ಚರಿ:
(೧) ಕುಂತೀಸುತ, ಅನಿಲನಂದನ – ಭೀಮನನ್ನು ಕರೆದ ಪರಿ
(೨) ಭೀಮನ ಬಲದ ಬಗ್ಗೆ ಹೇಳುವ ಪರಿ – ಇದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ