ಪದ್ಯ ೧೩: ಕುಂತಿ ಯಾರ ಬಳಿ ಬೆಳೆಯುತ್ತಿದ್ದಳು?

ಇತ್ತ ಕುಂತಿಭೋಜನೆಂಬ ನೃ
ಪೋತ್ತಮನ ಭವನದಲಿ ಮುರಹರ
ನತ್ತೆ ಬೆಳೆವುತ್ತಿರ್ದಳಾ ವಸುದೇವ ನೃಪನನುಜೆ
ಹೆತ್ತವರಿಗೋಲೈಸುವರಿಗೆ ಮ
ಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ (ಆದಿ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ವಸುದೇವನ ತಂಗಿಯಾದ, ಶ್ರೀಕೃಷ್ಣನ ಅತ್ತೆಯಾದ ಕುಂತಿಯು ಕುಂತೀಭೋಜನನೆಂಬ ರಾಜನಲ್ಲಿ ಬೆಳೆಯುತ್ತಿದ್ದಳು. ತನ್ನನ್ನು ಹೆತ್ತ ತಂದೆ ತಾಯಿಗಳಿಗೂ, ಸಾಕು ತಂದೆ ತಾಯಿಗಳಿಗೂ, ಶ್ರೇಷ್ಠರಾದವರಿಗೂ ಸಮಸ್ತಲೋಕಕ್ಕೂ ಮೆಚ್ಚುಗೆಯಾಗುವಂತೆ ಉತ್ತಮ ಗುಣಶಾಲಿಯಾಗಿದ್ದಳು.

ಅರ್ಥ:
ನೃಪ: ರಾಜ; ಉತ್ತಮ: ಶ್ರೇಷ್ಠ; ಭವನ: ಆರಮನೆ, ಆಲಯ; ಮುರಹರ: ಕೃಷ್ಣ; ಅತ್ತೆ: ತಂದೆಯ ತಂಗಿ; ಬೆಳೆ: ಏಳಿಗೆ ಹೊಂದು; ಅನುಜೆ: ತಂಗಿ; ಹೆತ್ತ: ಹುಟ್ಟಿಸಿದ; ಓಲೈಸು: ಉಪಚರಿಸು; ಮಹೋತ್ತಮ: ಶ್ರೇಷ್ಠ; ಉಳಿದ: ಮಿಕ್ಕ; ಅಖಿಳ: ಎಲ್ಲಾ; ಲೋಕ: ಜಗತ್ತು; ಚಿತ್ತ: ಮನಸ್ಸು; ಅಹುದು: ಒಪ್ಪಿಗೆಯಾಗುವಂತೆ; ನಡೆ: ನಡಗೆ, ಆಚರಣೆ; ಗುಣ: ನಡತೆ, ಸ್ವಭಾವ; ಮೆರೆ: ಶೋಭಿಸು;

ಪದವಿಂಗಡಣೆ:
ಇತ್ತ +ಕುಂತಿಭೋಜನೆಂಬ +ನೃಪ
ಉತ್ತಮನ +ಭವನದಲಿ +ಮುರಹರನ್
ಅತ್ತೆ+ ಬೆಳೆವುತ್ತಿರ್ದಳಾ +ವಸುದೇವ+ ನೃಪನ್+ಅನುಜೆ
ಹೆತ್ತವರಿಗ್+ಓಲೈಸುವರಿಗೆ +ಮ
ಹೋತ್ತಮರಿಗ್+ಉಳಿದ್+ಅಖಿಳ +ಲೋಕದ
ಚಿತ್ತಕ್+ಅಹುದ್+ಎನೆ +ನಡೆವ +ಗುಣದಲಿ +ಮೆರೆದಳಾ +ಕುಂತಿ

ಅಚ್ಚರಿ:
(೧) ಕುಂತಿಯನ್ನು ಕರೆದ ಪರಿ – ಮುರಹರನತ್ತೆ, ವಸುದೇವ ನೃಪನನುಜೆ
(೨) ಕುಂತಿಯನ್ನು ಹೊಗಳಿದ ಪರಿ – ಹೆತ್ತವರಿಗೋಲೈಸುವರಿಗೆ ಮಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣ