ಪದ್ಯ ೩೯: ಅಶ್ವತ್ಥಾಮನು ಹೇಗೆ ಸೇನೆಯನ್ನು ಕೊಂದನು?

ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ (ಗದಾ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಲಾಯವನ್ನು ಹೊಕ್ಕು ಆನೆ ಕುದುರೆಗಳನ್ನು ಕೊಚ್ಚಿ ಕೊಂದನು. ಭೂಮಿಯು ಒಂಬತ್ತು ಖಂಡಗಳಿಂದ ಕೂಡಿದಂತೆ ಪಾಂಡವ ಸೇನೆಯು ನವ ಖಂಡಮಯವಾಯಿತು. ಬೇಸರವಿಲ್ಲದೆ ಅಶ್ವತ್ಥಾಮನು ಸೇನೆಯನ್ನು ಕೊಂದನು.

ಅರ್ಥ:
ಲಾಯ: ಅಶ್ವಶಾಲೆ; ಹೊಕ್ಕು: ಸೇರು; ಕುದುರೆ: ಅಶ್ವ; ಬೀಯ: ವ್ಯಯ, ಖರ್ಚು; ಅಂತಕ: ಯಮ; ಆಯುಧ: ಶಸ್ತ್ರ; ಧಾರೆ: ವರ್ಷ; ಕೊಡು: ನೀಡು; ಕುಂಜರ: ಆನೆ; ವ್ರಜ: ಗುಂಪು; ರಾಯ: ರಾಜ; ದಳ: ಸೈನ್ಯ; ಧರೆ: ಭೂಮಿ; ನವ: ಹೊಸ; ಖಂಡ: ಮಾಂಸ; ಕಟಕ: ಸೈನ್ಯ; ಕೊಂದು: ಕೊಲ್ಲು; ಬೇಸರ: ನೋವು;

ಪದವಿಂಗಡಣೆ:
ಲಾಯದಲಿ +ಹೊಕ್ಕಿರಿದು +ಕುದುರೆಯ
ಬೀಯ +ಮಾಡಿದನ್+ಅಂತಕಂಗೆ+
ಅಡಾಯುಧದ +ಧಾರೆಯಲಿ +ಕೊಟ್ಟನು+ ಕುಂಜರ+ವ್ರಜವ
ರಾಯದಳ +ಧರೆಯಂತೆ+ ನವ+ಖಂಡ
ಆಯಮಾನವಿದಾಯ್ತು +ಪಾಂಡವ
ರಾಯ +ಕಟಕವ +ಕೊಂದನ್+ಅಶ್ವತ್ಥಾಮ +ಬೇಸರದೆ

ಅಚ್ಚರಿ:
(೧) ಲಾಯ, ಬೀಯ, ರಾಯ – ಪ್ರಾಸ ಪದಗಳು
(೨) ಸಾಯಿಸಿದನು ಎಂದು ಹೇಳುವ ಪರಿ – ಅಂತಕಂಗೆಯಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ

ಪದ್ಯ ೧೧: ಭೀಮನ ಪರಾಕ್ರಮವು ಹೇಗಿತ್ತು?

ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತ ಮೋಹರವ
ಗುರಜು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ (ಶಲ್ಯ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಜದಳವು ಯುದ್ಧಕ್ಕೆ ಬಂದರೆ ಭೀಮನು ಹಿಂದೆಮುಂದೆ ನೋಡುವನೇ? ಆನೆ ಕುದುರೆಗಳನ್ನು ಹೊಡೆದು ಚೆಂಡಾಡಿದನು. ಆ ಸೇನೆಯ ಮಳೆಯು ಭೀಮನ ಪರಾಕ್ರಮದ ಅಗ್ನಿಯ ಝಳಕ್ಕೆ ಒಣಗಿ ಹೋಯಿತು.

ಅರ್ಥ:
ಗಜ: ಆನೆ; ದಳ: ಸೈನ್ಯ; ಘಾಡಿಸು: ವ್ಯಾಪಿಸು; ವಾಜಿ: ಕುದುರೆ; ವ್ರಜ: ಗುಂಪು; ವೇಡೆ: ಆಕ್ರಮಣ; ಗಜಬಜಿಸು: ಹಿಂದುಮುಂದು ನೋಡು, ಗೊಂದಲಕ್ಕೀಡಾಗು; ಹೊಡೆ: ಹೋರಾಡು; ಅಹಿತ: ವೈರಿ; ಸೆಂಡನಾಡು: ಚೆಂಡಾಡು; ಮೋಹರ: ಯುದ್ಧ; ಗುಜುರು: ಕೆದಕಿದ; ಗುಲ್ಮ: ಸೇನೆಯ ಒಂದು ಘಟಕ; ಕುಂಜರ: ಆನೆ; ಅಶ್ವ: ಕುದುರೆ; ವ್ರಜ: ಗುಂಪು; ಮೆಳೆ: ಗುಂಪು; ಒಣಗು: ಸತ್ವವಿಲ್ಲದ;ಪವಮಾನಜ: ಭೀಮ; ಪರಾಕ್ರಮ: ಶೌರ್ಯ; ಶಿಖಿ: ಬೆಂಕಿ; ಝಳ: ಕಾಂತಿ; ಝೊಂಪಿಸು: ಮೈಮರೆ; ನಿಮಿಷ: ಕ್ಷಣ ಮಾತ್ರ;

ಪದವಿಂಗಡಣೆ:
ಗಜದಳದ+ ಘಾಡಿಕೆಗೆ +ವಾಜಿ
ವ್ರಜದ +ವೇಢೆಗೆ +ಭೀಮನೇ +ಗಜ
ಬಜಿಸುವನೆ +ಹೊಡೆ+ಸೆಂಡನಾಡಿದನ್+ಅಹಿತ +ಮೋಹರವ
ಗುರಜು +ಗುಲ್ಮದ +ಕುಂಜರ+ಅಶ್ವ
ವ್ರಜದ +ಮೆಳೆ+ಒಣಗಿದುದು +ಪವಮಾ
ನಜ+ ಪರಾಕ್ರಮ+ಶಿಖಿಯ +ಝಳ +ಝೊಂಪಿಸಿತು +ನಿಮಿಷದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕುಂಜರಾಶ್ವವ್ರಜದ ಮೆಳೆಯೊಣಗಿದುದು ಪವಮಾನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು
(೨) ಘಾಡಿಕೆಗೆ, ವೇಢೆಗೆ – ಪದಗಳ ಬಳಕೆ
(೩) ಜೋಡಿ ಪದಗಳ ಬಳಕೆ – ಗುರಜು ಗುಲ್ಮದ; ಝಳ ಝೊಂಪಿಸಿತು

ಪದ್ಯ ೨೭: ಸುಪ್ರತೀಕವು ಹೇಗೆ ಶತ್ರುಗಳನ್ನು ಸಂಹರಿಸಿತು?

ಬಾಲರೆಸುಗೆಯ ಮಿಟ್ಟೆಯಂಬಿಗೆ
ಸೋಲುವುದೆ ಗಿರಿ ವೈರಿ ಸುಭಟರ
ಕೋಲ ಕೊಂಬುದೆ ವೀರ ಕುಂಜರ ಮತ್ತೆ ಮೊಗ ನೆಗಹಿ
ಆಳೊಳಗೆ ಬೆರಸಿತು ಮಹಾರಥ
ರೋಳಿ ಮುರಿದುದು ಕುರಿಯ ಹಿಂಡಿನ
ತೋಳನೈ ನಿನ್ನಾನೆ ಸವರಿತು ಮತ್ತೆ ಮಾರ್ಬಲವ (ದ್ರೋಣ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಬಾಲಕರು ಹೊಡೆದ ಕವಣೆಗಲ್ಲಿಗೆ ಬೆಟ್ಟವು ಸೋತೀತೇ? ವೈರಿಗಳ ಬಾಣವನ್ನು ಸುಪ್ರತೀಕವು ಲೆಕ್ಕಿಸಿತೇ? ಅದು ಸೊಂಡಿಲನ್ನು ಮೇಲೆತ್ತಿ ವೈರಿಗಳ ನದುವೆ ನುಗ್ಗಿ ಕುರಿಯ ಹಿಂಡಿನೊಳಗೆ ಹೊಕ್ಕು ತೋಳನಂತೆ ಶತ್ರುಗಳನ್ನು ಸಂಹರಿಸಿತು.

ಅರ್ಥ:
ಬಾಲ: ಬಾಲಕ; ಎಸುಗೆ: ಬಾಣದ ಹೊಡೆತ; ಮಿಟ್ಟೆ: ಮಣ್ಣಿನ ಹೆಂಟೆ; ಅಂಬು: ಬಾಣ; ಸೋಲು: ಪರಾಭವ; ಗಿರಿ: ಬೆಟ್ಟ; ವೈರಿ: ಶತ್ರು; ಸುಭಟ: ಪರಾಕ್ರಮಿ; ಕೋಲು: ಬಾಣ; ವೀರ: ಪರಾಕ್ರಮ; ಕುಂಜರ: ಆನೆ; ಮೊಗ: ಮುಖ; ನೆಗಹು: ಮೇಲಕ್ಕೆತ್ತು; ಆಳು: ಸೇವಕ; ಬೆರಸು: ಸೇರಿಸು; ಮಹಾರಥ: ಪರಾಕ್ರಮಿ; ಮುರಿ: ಸೀಳು; ಕುರಿ: ಮೇಷ; ಹಿಂಡು: ಗುಂಪು; ತೋಳು: ಬಾಹು; ಆನೆ: ಗಜ; ಸವರು: ನಾಶ; ಮಾರ್ಬಲ: ಶತ್ರು ಸೈನ್ಯ, ದೊಡ್ಡ ಸೈನ್ಯ;

ಪದವಿಂಗಡಣೆ:
ಬಾಲರ್+ಎಸುಗೆಯ +ಮಿಟ್ಟೆ+ಅಂಬಿಗೆ
ಸೋಲುವುದೆ +ಗಿರಿ +ವೈರಿ +ಸುಭಟರ
ಕೋಲ +ಕೊಂಬುದೆ +ವೀರ +ಕುಂಜರ +ಮತ್ತೆ +ಮೊಗ +ನೆಗಹಿ
ಆಳೊಳಗೆ +ಬೆರಸಿತು+ ಮಹಾರಥರ್
ಓಳಿ +ಮುರಿದುದು +ಕುರಿಯ +ಹಿಂಡಿನ
ತೋಳನೈ +ನಿನ್ನಾನೆ +ಸವರಿತು +ಮತ್ತೆ +ಮಾರ್ಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಾಲರೆಸುಗೆಯ ಮಿಟ್ಟೆಯಂಬಿಗೆ ಸೋಲುವುದೆ ಗಿರಿ

ಪದ್ಯ ೭: ಭೀಮನು ಶತ್ರುಸೇನಕ್ಕೆ ಹೇಗೆ ತೋರಿದನು?

ಭುಜವನೊದರಿಸಿ ಸಿಂಹರವದಲಿ
ಗಜರಿ ಗದೆಯನು ತಿರುಹಿ ರಿಪು ಭೂ
ಭುಜರನರಸಿದನಳವಿಗಾಮ್ತರೆ ಕೊಂದನತಿಬಳರ
ತ್ರಿಜಗ ಮಝ ಭಾಪೆನಲು ಪವಮಾ
ನಜನು ತಿರುಗಿಟ್ಟಣಿಸೆ ಸೇನಾಂ
ಬುಜಕೆ ಕುಂಜರನಾದನೈ ಜನಮೇಜಯ ಕ್ಷಿತಿಪ (ಭೀಷ್ಮ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ತೋಳನ್ನು ತಟ್ಟಿ, ಸಿಂಹನಾದ ಮಾಡಿ, ಗದೆಯನ್ನು ತಿರುವಿ ಶತ್ರು ರಾಜರನ್ನು ಹುಡುಕಿ ಯುದ್ಧದಲ್ಲಿ ಕೊಂದನು. ಭೀಮನು ಮತ್ತೆ ಆಕ್ರಮಿಸಿ ಶತ್ರುಸೇನಾ ಕಮಲವನಕ್ಕೆ ಮದದಾನೆಯಾದನು.

ಅರ್ಥ:
ಭುಜ: ತೋಳು; ಒದರು: ಕೊಡುವು; ಸಿಂಹ: ಕೇಸರಿ; ರವ: ಶಬ್ದ; ಗಜರಿ: ಗರ್ಜಿಸು; ಗದೆ: ಮುದ್ಗರ; ತಿರುಹಿ: ತಿರುಗಿಸು; ರಿಪು: ವೈರಿ; ಭೂಭುಜ: ಅರಸು; ಅರಸಿ: ಹುಡುಕಿ; ಅಳವಿ: ಯುದ್ಧ; ಕೊಂದು: ಸಾಯಿಸು; ಅತಿಬಲ: ಪರಾಕ್ರಮಿ; ತ್ರಿಜಗ: ಮೂರು ಲೋಕ; ಮಝ: ಭಲೇ; ಪವಮಾನಜ: ವಾಯು ಪುತ್ರ; ತಿರುಗು: ಅಲೆದಾಡು; ಸೇನ: ಸೈನ್ಯ; ಅಂಬುಜ: ಕಮಲ; ಕುಂಜರ: ಆನೆ; ಕ್ಷಿತಿಪ: ರಾಜ;

ಪದವಿಂಗಡಣೆ:
ಭುಜವನ್+ಒದರಿಸಿ +ಸಿಂಹ+ರವದಲಿ
ಗಜರಿ+ ಗದೆಯನು +ತಿರುಹಿ +ರಿಪು +ಭೂ
ಭುಜರನ್+ಅರಸಿದನ್+ಅಳವಿಗಾಂತರೆ +ಕೊಂದನ್+ಅತಿಬಳರ
ತ್ರಿಜಗ +ಮಝ +ಭಾಪೆನಲು +ಪವಮಾ
ನಜನು +ತಿರುಗಿಟ್ಟಣಿಸೆ +ಸೇನಾಂ
ಬುಜಕೆ +ಕುಂಜರನಾದನೈ+ ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪವಮಾನಜನು ತಿರುಗಿಟ್ಟಣಿಸೆ ಸೇನಾಂಬುಜಕೆ ಕುಂಜರನಾದನೈ

ಪದ್ಯ ೩೪: ಪತ್ರದಲ್ಲಿ ಕೃಷ್ಣನನ್ನು ಹೇಗೆ ಹೊಗಳಿದ್ದಾರೆ?

ಸ್ವಸ್ತಿ ದಾನವರಾಯಕುಂಜರ
ಮಸ್ತಕಾಂಕುಶ ಖೇಲನಾ ಪರಿ
ಯಸ್ತ ಯದುಕುಲಸಿಂಹ ಸಂಹೃತಜನ್ಮದುರಿತಭಯ
ಹಸ್ತ ಕಲಿತ ಸುದರುಶನೋರ್ದ್ವಗ
ಭಸ್ತಿ ಲವ ಶಮಿತಾರ್ಕಶತ ಪರಿ
ವಿಸ್ತರಣ ಚಿತ್ತೈಸು ಕುಂತಿಯ ಸುತರ ಬಿನ್ನಪವ (ವಿರಾಟ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ದೂತರು ಧರ್ಮಜನು ಕಳಿಸಿದ ಓಲೆಯನ್ನು ಓದಲಾರಂಭಿಸಿದರು: ಸ್ವಸ್ತಿ, ರಾಕ್ಷಸರಾಜರೆಂಬ ಆನೆಗಳ ಮಸ್ತಕದ ಮೇಲೆರಗಿ ಅಂಕುಶದಂತೆ ಘಾತಿಸುವ ಯದುಕುಲ ಸಿಂಹನೇ, ಹುಟ್ಟು ಸಾವು ಪಾಪಗಳ ಭಯವನ್ನು ನಿವಾರಿಸುವವನೇ, ತನ್ನ ಲವಮಾತ್ರ ತೇಜಸ್ಸಿನಿಂದ ನೂರು ಸೂರ್ಯರ ತೇಜಸ್ಸನ್ನು ಮೀರಿಸುವ ಸುದರ್ಶನ ಚಕ್ರವನ್ನು ಹಿಡಿದವನೇ, ಓ ಪರಾತ್ಪರನಾದ ಶ್ರೀಕೃಷ್ಣನೇ ಕುಂತಿಯ ಮಕ್ಕಳ ಬಿನ್ನಹವನ್ನು ಕೇಳು ಎಂದು ಶುರುವಾಯಿತು.

ಅರ್ಥ:
ಸ್ವಸ್ತಿ: ಒಳ್ಳೆಯದು, ಕ್ಷೇಮ, ಶುಭ; ದಾನವ: ರಾಕ್ಷಸ; ರಾಯ: ರಾಜ; ಕುಂಜರ: ಆನೆ; ಮಸ್ತಕ: ಶಿರ, ತಲೆ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಖೇಲ: ಆಟ; ಅಸ್ತ: ಕೊನೆ; ಕುಲ: ವಂಶ; ಸಿಂಹ: ಕೇಸರಿ; ಸಂಹೃತ: ನಾಶ, ಸಂಹಾರ; ಜನ್ಮ: ಹುಟ್ಟು; ದುರಿತ: ಪಾಪ, ಪಾತಕ; ಭಯ: ಅಂಜಿಕೆ; ಹಸ್ತ: ಕೈ; ಕಲಿತ: ಒಡಗೊಂಡ; ದರುಶನ: ನೋಟ; ಊರ್ಧ್ವ: ಮೇಲ್ಭಾಗ; ಗಭಸ್ತಿ: ಕಿರಣ, ರಶ್ಮಿ; ಲವ: ಅಲ್ಪ, ಸ್ವಲ್ಪ; ಶಮಿತ: ನೆಮ್ಮದಿ, ಸಮಾಧಾನ; ಅರ್ಕ: ಸೂರ್ಯ; ಶತ: ನೂರು; ಪರಿ: ರೀತಿ; ವಿಸ್ತೀರ್ಣ: ವಿಸ್ತಾರ, ಹರಡು; ಚಿತ್ತೈಸು: ಗಮನವಿಟ್ಟು ಕೇಳು; ಸುತ: ಮಕ್ಕಳು; ಬಿನ್ನಪ: ವಿಜ್ಞಾಪನೆ, ಮನವಿ;

ಪದವಿಂಗಡಣೆ:
ಸ್ವಸ್ತಿ +ದಾನವರಾಯ+ಕುಂಜರ
ಮಸ್ತಕ+ ಅಂಕುಶ+ ಖೇಲನಾ +ಪರಿ
ಯಸ್ತ+ ಯದುಕುಲ+ಸಿಂಹ +ಸಂಹೃತ+ಜನ್ಮ+ದುರಿತ+ಭಯ
ಹಸ್ತ +ಕಲಿತ +ಸುದರುಶನ+ಊರ್ದ್ವ+ಗ
ಭಸ್ತಿ +ಲವ +ಶಮಿತ+ಅರ್ಕ+ಶತ +ಪರಿ
ವಿಸ್ತರಣ+ ಚಿತ್ತೈಸು +ಕುಂತಿಯ +ಸುತರ +ಬಿನ್ನಪವ

ಅಚ್ಚರಿ:
(೧) ಕೃಷ್ಣನನ್ನು ಹೊಗಳಲು ಬಳಸಿದ ಉಪಮಾನಗಳು – ದಾನವರಾಯಕುಂಜರಮಸ್ತಕಾಂಕುಶ ಖೇಲನಾ ಪರಿ
ಯಸ್ತ ಯದುಕುಲಸಿಂಹ; ಸಂಹೃತಜನ್ಮದುರಿತಭಯ; ಹಸ್ತ ಕಲಿತ ಸುದರುಶನೋರ್ದ್ವಗಭಸ್ತಿ ಲವ ಶಮಿತಾರ್ಕಶತ ಪರಿ ವಿಸ್ತರಣ

ಪದ್ಯ ೧೧: ಶಿವನು ಅರ್ಜುನನ ಬಾಣಗಳಿಗೆ ಶರಣಾಗುವನೆ?

ಮಂಜು ಮುಸುಕಿದೊಡೇನು ಪರ್ವತ
ವಂಜುವುದೆ ಹಾಲಾಹಲವ ನೊಣ
ನೆಂಜಲಿಸುವುದೆ ಬಡಬಶಿಖಿ ನೆನೆವುದೆ ತುಷಾರದಲಿ
ಕಂಜನಾಳದಿ ಕಟ್ಟುವಡೆವುದೆ
ಕುಂಜರನು ನರಶರದ ಜೋಡಿನ
ಜುಂಬುವೊಳೆಯಲಿ ಜಾಹ್ನವೀಧರ ಜಾರುವನೆಯೆಂದ (ಅರಣ್ಯ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮಂಜು ಮುಸುಕಿದರೆ ಪರ್ವತವು ಹೆದರುವುದೇ? ವಿಷವನ್ನು ನೊಣವು ಎಂಜಲು ಮಾಡಲಾದೀತೇ? ಸಮುದ್ರವನ್ನು ಕಾಡನ್ನು ನುಂಗುವ ಕಿಚ್ಚು ತುಂತುರು ಮಳೆಯಿಂದ ಆರೀತೇ? ಕಮಲದ ದಂಟಿನಿಂದ ಆನೆಯನ್ನು ಕಟ್ಟಲಾದೀತೇ? ಅರ್ಜುನನ ಬಾಣಗಳ ತುಂತುರು ಮಳೆಯಿಂದ ಶಿವನು ತೋಯ್ದು ಹೋಗುವನೇ?

ಅರ್ಥ:
ಮಂಜು: ಹಿಮ; ಮುಸುಕು: ಆವರಿಸು; ಪರ್ವತ: ಬೆಟ್ಟ; ಅಂಜು: ಹೆದರು; ಹಾಲಾಹಲ: ವಿಷ, ಗರಲ; ನೊಣ: ಮಕ್ಕಿ, ಮಕ್ಷಿಕ; ಎಂಜಲಿಸು: ತಿನ್ನು; ವಡಬ: ಸಮುದ್ರದಲ್ಲಿರುವ ಬೆಂಕಿ; ಶಿಖಿ: ಬೆಂಕಿ; ನೆನೆ: ತೋಯು, ಒದ್ದೆಯಾಗು; ತುಷಾರ: ಇಬ್ಬನಿ, ಮಂಜು; ಕಂಜ: ತಾವರೆ; ನಾಳ: ದಂಟು; ಕಟ್ಟು: ಬಂಧಿಸು; ಕುಂಜರ: ಆನೆ; ನರ: ಅರ್ಜುನ; ಶರ: ಬಾಣ; ಜೋಡು: ಜೊತೆ, ಕಟ್ಟು; ಜುಂಜು: ತುಂತುರು; ಮಳೆ: ವರ್ಷ; ಜಾಹ್ನವಿ: ಗಂಗೆ ಜಾಹ್ನವೀಧರ: ಶಿವ; ಜಾರು: ನುಣುಚಿಕೊಳ್ಳು, ಮೇಲಿಂದ ಕೆಳಗೆ ಬೀಳು;

ಪದವಿಂಗಡಣೆ:
ಮಂಜು +ಮುಸುಕಿದೊಡೇನು +ಪರ್ವತವ್
ಅಂಜುವುದೆ +ಹಾಲಾಹಲವ+ ನೊಣನ್
ಎಂಜಲಿಸುವುದೆ +ಬಡಬಶಿಖಿ+ ನೆನೆವುದೆ+ ತುಷಾರದಲಿ
ಕಂಜನಾಳದಿ +ಕಟ್ಟುವಡೆವುದೆ
ಕುಂಜರನು+ ನರ+ಶರದ +ಜೋಡಿನ
ಜುಂಬುವೊಳೆಯಲಿ +ಜಾಹ್ನವೀಧರ+ ಜಾರುವನೆಯೆಂದ

ಅಚ್ಚರಿ:
(೧) ಶಿವನನ್ನು ಜಾಹ್ನವೀಧರ ಎಂದು ಕರೆದಿರುವುದು
(೨) ಜ ಕಾರದ ಸಾಲು ಪದಗಳು – ಜೋಡಿನ ಜುಂಬುವೊಳೆಯಲಿ ಜಾಹ್ನವೀಧರ ಜಾರುವನೆಯೆಂದ
(೩) ಉಪಮಾನಗಳ ಪ್ರಯೋಗ – ಮಂಜು ಮುಸುಕಿದೊಡೇನು ಪರ್ವತವಂಜುವುದೆ, ಹಾಲಾಹಲವ ನೊಣನೆಂಜಲಿಸುವುದೆ, ಬಡಬಶಿಖಿ ನೆನೆವುದೆ ತುಷಾರದಲಿ,ಕಂಜನಾಳದಿ ಕಟ್ಟುವಡೆವುದೆ ಕುಂಜರನು

ಪದ್ಯ ೧೦೮: ಯಾವ ಗುಣಗಳು ರಾಜನಲ್ಲಿರಬೇಕು?

ಶ್ವಾನ ಕುಕ್ಕುಟ ಕಾಕ ಬಕ ಪವ
ಮಾನ ಖಗಪತಿ ದಿವಿಜ ರಜನಿ ಕೃ
ಶಾನುವಿನ ಗಾರ್ಧಭನ ವೃಷಭನ ಶಿಂಶುಮಾರಕನ
ವಾನರನ ಹಯ ಕುಂಜರನ ಪಂ
ಚಾನನನ ಮೃಗ ಪೋತಕನ ಗುಣ
ವಾನರೆಂದ್ರನೊಳಿರಲು ಬೇಹುದು ಭೂಪ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ರಾಜನಾದವನಿಗೆ ಇರಬೇಕಾದ ಗುಣಲಕ್ಷಣಗಳನ್ನು ಹಲವಾರು ಉಪಮಾನಗಳ ಮೂಲಕ ತಿಳಿಸಿದ್ದಾರೆ. ರಾಜನಾದವನಿಗೆ ನಾಯಿಯಂತೆ ಸದಾ ಎಚ್ಚರಿಕೆ, ಕೋಳಿಯಂತೆ ಆಹಾರ ಶೋಧನೆ, ಕಾಗೆಯಂತೆ ಬಾಂಧವರೊಡನೆ ಭೋಜನ, ಕೊಕ್ಕರೆಯಂತೆ ಏಕಾಗ್ರತೆ, ಗಾಳಿಯಂತೆ ಸರ್ವರಿಗೂ ಒಂದೇ ಆಗಿರುವ ಲಕ್ಷಣ, ಗರುಡನಂತೆ ದೂರದೃಷ್ಟಿ, ದೇವತೆಗಳಂತೆ ಆಶ್ರಿತ ರಕ್ಷಣೆ, ರಾತ್ರಿಯಂತೆ ಅಭೇದ್ಯವಾಗಿರುವುದು, ಅಗ್ನಿಯಂತೆ ಉಗ್ರತೆ, ಕತ್ತೆಯ ಸಹಿಷ್ಣುತೆ, ಎತ್ತಿನ ಗಾಂಭೀರ್ಯ, ಮೊಸಳೆಯ ಗೂಢತೆ, ಕಪಿಯಂತೆ ಕಾರ್ಯ ಸಾಧನೆ, ಕುದುರೆಯಂತೆ ಅಲ್ಪ ನಿದ್ರೆ, ಆನೆಯ ಸೂಕ್ಷ್ಮ ದೃಷ್ಟಿ, ಸಿಂಹದ ಶೌರ್ಯಪರಾಕ್ರಮ, ಜಿಂಕೆಯ ಚಟುವಟಿಕೆಯ ಪ್ರವೃತ್ತಿ, ಹೀಗೆ ಈ ಎಲ್ಲಾ ಗುಣಗಳು ರಾಜನಲ್ಲಿರಬೇಕೆಂದು ವಿದುರ ಧೃತರಾಷ್ಟ್ರನಿಗೆ ತಿಳಿಸಿದ.

ಅರ್ಥ:
ಶ್ವಾನ: ನಾಯಿ; ಕುಕ್ಕುಟ: ಕೋಳಿ; ಕಾಕ: ಕಾಗೆ; ಬಕ: ಕೊಕ್ಕರೆ; ಪವಮಾನ: ಗಾಳಿ; ಖಗಪತಿ: ಗರುಡ; ದಿವಿಜ: ದೇವತೆ; ರಜನಿ:ರಾತ್ರಿ; ಕೃಶಾನು: ಅಗ್ನಿ;ಗಾರ್ಧಭ: ಕತ್ತೆ; ವೃಷಭ: ಎತ್ತು; ಶಿಂಶುಮಾರಕ: ಮೊಸಳೆ; ವಾನರ: ಕೋತಿ, ಹಯ: ಕುದುರೆ; ಕುಂಜರ: ಆನೆ; ಪಂಚಾನನ: ಸಿಂಹ; ಮೃಗ: ಜಿಂಕೆ, ಪೋತಕ: ಹರಿಗೋಲು, ದಾಟಿಸುವವ; ಗುಣ:ನಡತೆ, ಸ್ವಭಾವ; ವಾನರ: ಕಪಿ; ನರೇಂದ್ರ: ರಾಜ; ಬೇಹುದು: ಬೇಕು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಶ್ವಾನ +ಕುಕ್ಕುಟ +ಕಾಕ +ಬಕ +ಪವ
ಮಾನ +ಖಗಪತಿ+ ದಿವಿಜ+ ರಜನಿ +ಕೃ
ಶಾನುವಿನ+ ಗಾರ್ಧಭನ +ವೃಷಭನ +ಶಿಂಶುಮಾರಕನ
ವಾನರನ +ಹಯ +ಕುಂಜರನ+ ಪಂ
ಚಾನನನ+ ಮೃಗ +ಪೋತಕನ+ ಗುಣವ್
ಆ+ನರೆಂದ್ರನೊಳ್+ಇರಲು +ಬೇಹುದು +ಭೂಪ +ಕೇಳೆಂದ

ಅಚ್ಚರಿ:
(೧) ೧೭ ರೀತಿಯ ಗುಣಗಳನ್ನು ವಿವರಿಸಿರುವ ಪದ್ಯ
(೨) ವಾನರ, ವಾನರೇಂದ್ರ – ಪದಗಳ ಬಳಕೆಯ ವೈಖರಿ
(೩) ಶ್ವಾನ, ಪವಮಾನ – ಪ್ರಾಸ ಪದ