ಪದ್ಯ ೪೫: ಗೋಗ್ರಹಣದ ವಾರ್ತೆಯನ್ನು ಆಸ್ಥಾನದಲ್ಲಿ ಯಾವ ಸ್ಥಿತಿ ನಿರ್ಮಾಣವಾಯಿತು?

ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ (ವಿರಾಟ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಗೋಗ್ರಹಣದ ಸುದ್ದಿಯನ್ನು ಕೇಳಿ ವಿರಾಟನು ನಿಟ್ಟುಸಿರು ಬಿಟ್ಟು ಅಯ್ಯೋ ಕೀಚಕನು ಈ ಹಿಂದೆ ಅಳಿದನೇ, ಅವನು ಇದ್ದಿದ್ದರೆ ಹೀಗೆ ಆಕ್ರಮಿಸುವ ಧೈರ್ಯ ಯಾರಿಗೂ ಬರುತ್ತಿರಲಿಲ್ಲ ಎಂದು ಉದ್ಗರಿಸಿ, ಸುತ್ತ ಮುತ್ತಲಿರುವವರನ್ನು ನೋಡಿದನು. ಆಸ್ಥಾನದಲ್ಲಿದ್ದ ಯೋಧರು ಯುದ್ಧ ಮಾಡಲು ನನಗೆ ವೀಳೆಯವನ್ನು ಕೊಡಿ ಎಂದು ಮುಂದೆ ಬಂದರು, ಆಸ್ಥಾನದಲ್ಲಿ ಕೋಲಾಹಲವಾಯಿತು.

ಅರ್ಥ:
ಕೇಳಿ: ಆಲಿಸಿ; ಬಿಸುಸುಯ್: ನಿಟ್ಟುಸಿರು ಬಿಡು; ನೃಪಾಲ: ರಾಜ; ಅಳಿ: ನಾಶವಾಗು; ಕಟ್ಟಾಳು: ನಂಬಿಕಸ್ಥ ಸೇವಕ; ನೋಡು: ವೀಕ್ಷಿಸು; ಕೆಲ: ಕೆಲವರು; ಬಲ: ಸೈನ್ಯ; ಆಳು: ಸೇವಕ; ಗಜಬಜ: ಗೊಂದಲ; ಹಾಯಿಕು:ಕಳಚು, ತೆಗೆ; ವೀಳೆ: ಆಮಂತ್ರಣ; ಓಲಗ: ದರ್ಬಾರು, ಆಸ್ಥಾನ; ಅಬ್ಬರಣೆ: ಕೋಲಾಹಲ; ಮಸಗು: ಹರಡು; ಕದಡು: ಕಲಕು;

ಪದವಿಂಗಡಣೆ:
ಕೇಳಿ +ಬಿಸುಸುಯ್ದನು +ವಿರಾಟ +ನೃ
ಪಾಲನಿಂದ್+ಇನಲ್+ಅಳಿದನೇ +ಕ
ಟ್ಟಾಳು +ಕೀಚಕನ್+ಎನುತ+ ನೋಡಿದನ್+ಅಂದು +ಕೆಲಬಲನ
ಆಳು +ಗಜಬಜಿಸಿತ್ತು +ಹಾಯಿಕು
ವೀಳೆಯವನ್+ಇಂದ್+ಎನಗೆ +ತನಗೆಂದ್
ಓಲಗದೊಳ್+ಅಬ್ಬರಣೆ+ ಮಸಗಿತು +ಕದಡಿತ್+ಆಸ್ಥಾನ

ಅಚ್ಚರಿ:
(೧) ಓಲಗ, ಆಸ್ಥಾನ – ಸಮನಾರ್ಥಕ ಪದ – ೬ ಸಾಲಿನ ಮೊದಲ ಮತ್ತು ಕೊನೆ ಪದ
(೨) ಆಳು – ೩, ೪ ಸಾಲಿನ ಮೊದಲ ಪದ

ಪದ್ಯ ೧೬: ಗುಟ್ಟಾಗಿ ಅಡಗಿರುವ ಪಾಂಡವರನ್ನು ಹೇಗೆ ಹೊರಗೆಳೆಯ ಬೇಕು?

ಪ್ರೌಢಿಯಲ್ಲಿದ ಕೇಳಿ ಬಲ್ಲೆವು
ರೂಢಿಯಲಿ ಸಮಬಲರು ಭೀಮ ಸ
ಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬವರು
ಗೂಢರನು ಗರುವಾಯಿಗೆಡಿಸಿಯೆ
ಗಾಢಿಕೆಯ ಸೆರೆ ಮೆರೆಯಬೇಕೆನೆ
ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕೆಂದ (ವಿರಾಟ ಪರ್ವ, ೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಸುಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಭೀಮ, ಬಲರಾಮ, ಕೀಚಕ, ಶಲ್ಯರು ಯುದ್ಧದಲ್ಲಿ ಸಮಬಲರೆಂದು ತಿಳಿದವರಿಂದ ನಾನು ಬಲ್ಲೆನು. ಗುಟ್ಟಾಗಿ ಅಡಗಿಕೊಂಡಿರುವ ಪಾಂಡವರನ್ನು ಹೊರಗೆಳೆದು ರಟ್ಟು ಮಾಡಬೇಕು ಎಂದರೆ ಸೈನ್ಯವನ್ನು ಸೇರಿಸಿ ಹೊರಡಬೇಕು ಎಂದು ಹೇಳಿದನು.

ಅರ್ಥ:
ಪ್ರೌಢಿ: ತಿಳಿದವರು; ಕೇಳಿ: ತಿಳಿದು, ಆಲಿಸಿ; ಬಲ್ಲೆ: ತಿಳಿದಿರುವೆ; ರೂಢಿ: ವಾಡಿಕೆ, ಬಳಕೆ; ಸಮ: ಸರಿಸಮಾನವಾದುದು; ಬಲರು: ಶಕ್ತಿಶಾಲಿಗಳು; ಸಗಾಢ: ಜೋರು, ರಭಸ; ಗೂಢ: ಗುಟ್ಟು, ರಹಸ್ಯ; ಗರುವಾಯಿ: ದೊಡ್ಡತನ, ಗೌರವ; ಗಾಢಿಕೆ: ಹೆಚ್ಚಳ, ಅತಿಶಯ;ಸೆರೆ: ಬಂಧಿಸು; ಮೆರೆ: ಒಪ್ಪು,ಹೊಳೆ ; ರೂಢಿ: ಪ್ರಸಿದ್ಧ; ಸಮತಳಸಿ: ಮಟ್ಟಮಾಡು; ಸೇನೆ: ಸೈನ್ಯ; ನೆರಹು: ಒಟ್ಟುಗೂಡು, ನೆರವು;

ಪದವಿಂಗಡಣೆ:
ಪ್ರೌಢಿಯಲ್ಲಿದ +ಕೇಳಿ +ಬಲ್ಲೆವು
ರೂಢಿಯಲಿ +ಸಮಬಲರು +ಭೀಮ +ಸ
ಗಾಢದಲಿ+ ಬಲಭದ್ರ +ಕೀಚಕ +ಶಲ್ಯರ್+ಎಂಬವರು
ಗೂಢರನು +ಗರುವಾಯಿ+ಗೆಡಿಸಿಯೆ
ಗಾಢಿಕೆಯ+ ಸೆರೆ+ ಮೆರೆಯಬೇಕ್+ಎನೆ
ರೂಢಿ +ಸಮತಳಿಸಿತ್ತು+ ಸೇನೆಯ +ನೆರಹಬೇಕೆಂದ

ಅಚ್ಚರಿ:
(೧) ಗಾಢ, ಗೂಢ, ಗಾಢಿ ಪದಗಳ ಬಳಕೆ
(೨) ಗಾಢಿ, ರೂಢಿ, ಪ್ರೌಢಿ – ಪ್ರಾಸ ಪದಗಳು
(೩) ರೂಢಿ – ೨, ೬ ಸಾಲಿನ ಮೊದಲ ಪದ
(೪) ೪ ಸಾಲಿನ ಪದಗಳು “ಗ” ಕಾರದಿಂದ ಆರಂಭ

ಪದ್ಯ ೧೫: ದುರ್ಯೋಧನನ ಪ್ರಕಾರ ಕೀಚಕನನ್ನು ಯಾರು ಸಂಹರಿಸಿದರು?

ಭೀಮ ಕೀಚಕ ಶಲ್ಯ ನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು (ವಿರಾಟ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸುಯೋಧನನು ಎಲ್ಲರನ್ನು ಕರೆಸಿ ತನ್ನ ವಿಚಾರವನ್ನು ಮುಂದಿಡಲು ತನ್ನ ಮಾತನ್ನು ಶುರುಮಾಡಿದನು. ಭೀಮ, ಕೀಚಕ, ಶಲ್ಯ ಮತ್ತು ಬಲರಾಮರು ಯುದ್ಧದಲ್ಲಿ ಎಲ್ಲರೂ ಸಮಬಲರು. ಅವರು ಗಂಧರ್ವರೆಂಬುದು ಕೇವಲ ಗಾಳಿಮಾತು. ಕಾಮುಕನಾದ ಕೀಚಕನು ದ್ರೌಪದಿಯನ್ನು ಕೆಟ್ಟದೃಷ್ಟಿಯಿಂದ ನೋಡುವಾಗ ಭೀಮನೇ ಇರಬೇಕು ಅವನನ್ನು ಸಂಹರಿಸಿದ್ದು.

ಅರ್ಥ:
ನಾಲುವರು: ಚತುರ್; ಸಂಗ್ರಾಮ: ಯುದ್ಧ; ಸರಿ: ಸಮಾನರು; ಅಪವಾದ: ನಿಂದೆ, ಆರೋಪ; ಕಾಮುಕ: ಅತಿ ಮೋಹಿಸುವ, ವಿಷಯಲಂಪಟ; ಅಳುಪು: ಬಯಸು; ತಾಮಸ: ಸೋಮಾರಿತನ; ಒರೆಸು: ಸಂಪೂರ್ಣ ನಾಶಮಾಡು; ಖಚರ: ಗಂಧರ್ವ;

ಪದವಿಂಗಡಣೆ:
ಭೀಮ +ಕೀಚಕ +ಶಲ್ಯನ್ +ಈ +ಬಲ
ರಾಮನೆಂಬ+ಈ+ ನಾಲುವರು +ಸಂ
ಗ್ರಾಮದೊಳು +ಸರಿ +ಖಚರರ್+ಎಂಬುದು +ಬಯಲಿನಪವಾದ
ಭೀಮನಾಗಲು +ಬೇಕು +ಕೀಚಕ
ಕಾಮುಕನ +ದುರುಪದಿಗೆ+ ಅಳುಪಿದ
ತಾಮಸನ +ಹಿಡಿದ್+ಒರೆಸಿದವನೆಂದನು +ಸುಯೋಧನನು

ಅಚ್ಚರಿ:
(೧) ಗಾಳಿಸುದ್ದಿ ಎಂದು ಹೇಳಲು ಬಯಲಿನಪವಾದ ಪದದ ಬಳಕೆ
(೨) ಭೀಮ – ೧, ೪ ಸಾಲಿನ ಮೊದಲ ಪದ

ಪದ್ಯ ೧೧: ಭೀಷ್ಮನು ದುರ್ಯೋಧನನಿಗೆ ಯಾವ ಉಪದೇಶವನ್ನು ನೀಡಿದನು?

ಕೊಲೆಯ ಮಾಡಲು ಭೀಮನಲ್ಲದೆ
ಇಳೆಯೊಳಾನುವರಿಲ್ಲ ಸುಭಟರ
ಬಲುಹುನೆರೆಯದು ಕೀಚಕನ ಜೀಮೂತನಿದಿರಿನಲಿ
ನಿಲುವರನು ತಾ ಕಾಣೆ ಕೌರವ
ತಿಲಕ ಭೀಮಾರ್ಜುನರಯಿದಿರೊಳು
ನಿಲುವನಾರೈ ಕರೆಸಿ ಬದುಕುವುದೆಂದನಾ ಭೀಷ್ಮ (ವಿರಾಟ ಪರ್ವ, ೫ ಸಂಧಿ ೧೧ ಪದ್ಯ)

ತಾತ್ಪರ್ಯ:
ಕೀಚಕ ಜೀಮೂತರನ್ನು ಕೊಲೆ ಮಾಡಲು ಭೀಮನಲ್ಲದೆ ಈ ಭೂಮಿಯಲ್ಲಿ ಮತ್ತಾರಿಗೂ ಶಕ್ತಿ ಇಲ್ಲ. ಅವನೆದುರು ಉಳಿದ ವೀರರ ಶಕ್ತಿ ನಿಲ್ಲಲ್ಲು ಸಾಧ್ಯವಿಲ್ಲ. ಭೀಮಾರ್ಜುನರೆದುರಿನಲ್ಲಿ ಯುದ್ಧ ಮಾಡಲು ಯಾರೂ ಸಮರ್ಥರಲ್ಲ. ಅವರನ್ನು ಕರೆಸಿ ಸಂಧಾನ ಮಾಡಿಕೊಂಡು ಬದುಕು ಎಂದು ಭೀಷ್ಮರು ಸಲಹೆ ನೀಡಿದರು.

ಅರ್ಥ:
ಕೊಲೆ: ಸಾಯಿಸು, ಸಾವು; ಇಳೆ: ಭೂಮಿ; ಸುಭಟ: ಒಳ್ಳೆಯ ಸೈನಿಕ; ಬಲುಹು: ಶಕ್ತಿ; ನೆರೆಯದು: ನಡೆಯುವುದಿಲ್ಲ; ಇದಿರು: ಎದುರು; ನಿಲು: ಎದುರು ನಿಲ್ಲು; ಕಾಣೆ: ನೋಡಿಲ್ಲ; ತಿಲಕ: ಕಿರೀಟಪ್ರಾಯ, ಶ್ರೇಷ್ಠ; ಕರೆಸು: ಬರೆಮಾಡು; ಬದುಕು: ಜೀವಿಸು;

ಪದವಿಂಗಡಣೆ:
ಕೊಲೆಯ +ಮಾಡಲು +ಭೀಮನ್+ಅಲ್ಲದೆ
ಇಳೆಯೊಳ್+ಆನುವರಿಲ್ಲ+ ಸುಭಟರ
ಬಲುಹು+ನೆರೆಯದು+ ಕೀಚಕನ+ ಜೀಮೂತನ್+ಇದಿರಿನಲಿ
ನಿಲುವರನು+ ತಾ +ಕಾಣೆ +ಕೌರವ
ತಿಲಕ+ ಭೀಮಾರ್ಜುನರ್+ಇಯಿದಿರೊಳು
ನಿಲುವನಾರೈ+ ಕರೆಸಿ+ ಬದುಕುವುದೆಂದನಾ+ ಭೀಷ್ಮ

ಅಚ್ಚರಿ:
(೧) ದುರ್ಯೋಧನನನ್ನು ಕೌರವ ತಿಲಕ ಎಂದು ಕರೆದಿರುವುದು
(೨) ಸಂಧಾನ ಮಾಡಿಕೊ ಎಂದು ಹೇಳಲು – ಕರೆಸಿ ಬದುಕುವುದು ಎಂಬ ಪದಪ್ರಯೋಗ

ಪದ್ಯ ೧೦: ಪಾಂಡವರು ವಿರಾಟನ ಆಸ್ಥಾನದಲ್ಲಿದ್ದಾರೆ ಎನ್ನುವುದಕ್ಕೆ ಗುರುತಾವುದು?

ಕೇಳಿದಿರೆ ಜೀಮೂತ ಮಲ್ಲನ
ಸೀಳಿದಾಕಾರವನು ಕುರುಕುಲ
ಜಾಲ ಕೇಳ್ದಿರೆ ಯೆನುತ ಹೇಳಿದ ಮಲ್ಲ ಬಿದ್ದುದನು
ಲೋಲಪಾಂಡವರಾ ವಿರಾಟನ
ಆಲಯವನಾಶ್ರಯಿಸಿ ಗುಪ್ತದ
ಬಾಳಿಕೆಯೊಳಿಹರಿದಕೆ ಸೂಚನೆ ಮಲ್ಲ ಕೀಚಕರು (ವಿರಾಟ ಪರ್ವ, ೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಕೇಳಿದಿರೆ ನೀವೆಲ್ಲಾ, ಶೂರನಾದ ಜೀಮೂತನು ಮಲ್ಲಯುದ್ಧದಲ್ಲಿ ಹತನಾದುದನ್ನು? ಚಂಚಲರಾದ ಪಾಂಡವರು ವಿರಾಟರಾಜನ ಆಸ್ಥಾನದಲ್ಲಿದ್ದಾರೆ ಎನ್ನಲು ಇದಕ್ಕಿಂತ ಸಾಕ್ಷಿಬೇಕೆ? ಅವರು ಅಲ್ಲಿ ಇರುವುದು ಜೀಮೂತ, ಕೀಚಕರ ವಧೆಯೇ ಗುರುತು ಎಂದನು.

ಅರ್ಥ:
ಕೇಳಿದಿರೆ: ಆಲಿಸು; ಮಲ್ಲ: ಶೂರ; ಸೀಳು: ಮುರಿ, ಸಾಯಿಸು; ಆಕಾರ: ರೀತಿ; ಜಾಲ: ಬಲೆ; ಬಿದ್ದುದು: ಕೆಳಕ್ಕೆ ಉರುಳು; ಲೋಲ:ಚಂಚಲ; ಆಲಯ: ಮನೆ; ಆಶ್ರಯ: ನೆರವು, ಆಸರೆ; ಗುಪ್ತ: ಗುಟ್ಟು; ಬಾಳಿಕೆ: ಬಾಳು, ಜೀವಿಸು; ಇಹರು: ಇರುವವರು; ಸೂಚನೆ: ತಿಳಿಸುವಿಕೆ;

ಪದವಿಂಗಡಣೆ:
ಕೇಳಿದಿರೆ +ಜೀಮೂತ +ಮಲ್ಲನ
ಸೀಳಿದ+ಆಕಾರವನು +ಕುರುಕುಲ
ಜಾಲ +ಕೇಳ್ದಿರೆ +ಯೆನುತ +ಹೇಳಿದ +ಮಲ್ಲ +ಬಿದ್ದುದನು
ಲೋಲ+ಪಾಂಡವರು+ಆ +ವಿರಾಟನ
ಆಲಯವನ್+ಆಶ್ರಯಿಸಿ +ಗುಪ್ತದ
ಬಾಳಿಕೆಯೊಳ್+ಇಹರ್+ಇದಕೆ+ ಸೂಚನೆ +ಮಲ್ಲ +ಕೀಚಕರು

ಅಚ್ಚರಿ:
(೧) ಕೇಳು, ಹೇಳು – ೩ ಸಾಲಿನಲ್ಲಿ ಬರುವ ಸಾಮ್ಯ ಪದಗಳು
(೨) ಮಲ್ಲ – ೧, ೩, ೬ ಸಾಲಿನ ಕೊನೆಯಲ್ಲಿ ಬರುವ ಪದ

ಪದ್ಯ ೬: ಕೀಚಕನನ್ನು ಹೇಗೆ ಸಂಹರಿಸಲಾಯಿತು?

ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದೊಳಗೆ ಸತಿಯಿರಲು
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹಕೆ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ (ವಿರಾಟ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ದೂತನು ಮುಂದುವರೆಸುತ್ತಾ, ‘ಒಡೆಯ ನಾನು ಹೇಳಿದುದು ದಿಟ, ಗಂಧರ್ವ ಸ್ತ್ರೀಯೊಬ್ಬಳು ವಿರಾಟನ ರಾಣಿಯ ಸೇವಕಿಯಾಗಿದ್ದಳು. ಕೀಚಕನು ಅವಳನ್ನು ಮೋಹಿಸಿದನು. ನಾಟ್ಯ ಗೃಹಕ್ಕೆ ಬರುವಂತೆ ಸೂಚನೆ ಕೊಟ್ಟು ಗಂಧರ್ವರು ಕೀಚಕನನ್ನು ಉಪಕೀಚಕರನ್ನು ಸಂಹರಿಸಿದರು” ಎಂದು ಹೇಳಿದನು.

ಅರ್ಥ:
ಅಹುದು: ಹೌದು, ಸರಿ; ಜೀಯ: ದೊರೆ, ಅವಧರಿಸು: ಕೇಳು; ಒಡೆಯ; ದಿವಿಜ: ದೇವತೆ; ಮಹಿಳೆ: ಸ್ರೀ; ಓಲೈಸು: ಸೇವೆಮಾಡು, ಉಪಚರಿಸು; ಬಳಿಕ: ನಂತರ; ಓಲಗ: ವಾಸಸ್ಥಾನ; ಸತಿ: ಸ್ತ್ರೀ; ಕುಹಕಿ: ಮೋಸಗಾರ; ಕಂಡಳು: ನೋಡು; ನಾಟ್ಯ: ನೃತ್ಯ; ಗೃಹ: ಮನೆ; ಸೂಚನೆ: ನಿರ್ದೇಶನೆ; ನಿಮಿಷ: ಕಾಲದ ಒಂದು ಪ್ರಮಾಣ; ರಹ: ಗುಟ್ಟು, ಆಶ್ಚರ್ಯ; ಸವರು: ಸಾಯಿಸು; ಅಖಿಳ: ಸರ್ವ, ಎಲ್ಲಾ;

ಪದವಿಂಗಡಣೆ:
ಅಹುದು +ಜೀಯ+ಅವಧರಿಸು +ದಿವಿಜರ
ಮಹಿಳೆ+ಓಲೈಸಿದಳು+ ಮತ್ಸ್ಯನ
ಮಹಿಳೆಯನು +ಬಳಿಕ+ಆಕೆಯ+ಓಲಗದೊಳಗೆ+ ಸತಿಯಿರಲು
ಕುಹಕಿ+ ಕಂಡಳುಪಿದರೆ+ ನಾಟ್ಯದ
ಗೃಹಕೆ+ ಸೂಚನೆಗೊಟ್ಟು +ನಿಮಿಷಕೆ
ರಹವ+ ಮಾಡಿದರ್+ಅವರು +ಸವರಿದರ್+ಅಖಿಳ +ಕೀಚಕರ

ಅಚ್ಚರಿ:
(೧) ಸತಿ, ಮಹಿಳೆ – ಸಮನಾರ್ಥಕ ಪದ
(೨) ಮಹಿಳೆ – ೨, ೩ ಸಾಲಿನ ಮೊದಲ ಪದ

ಪದ್ಯ ೫: ಕೌರವೇಶ್ವರನಿಗೆ ಕೀಚಕನವಧೆ ಏಕೆ ಸಂಶಯಾಸ್ಪದ ಎನಿಸಿತು?

ಹೇಳು ಕೇಳಿನ್ನೊಮ್ಮೆ ಮತ್ಸ್ಯನ
ತೋಳು ಮುರಿದುದೆ ಸುಭಟರೊಳುಕ
ಟ್ಟಾಳು ಕೀಚಕ ಮಡಿದನೇ ಗಂಧರ್ವರಿರಿದವರೆ
ಮೇಲಣವರಿಗೆ ಮರ್ತ್ಯರಿಗೆ ಕೈ
ಕಾಲುಮೆಟ್ಟಿನ ತೋಟಿಯೇತಕೆ
ಹೋಲದಿದು ಹುಸಿ ಹೋಗೆನುತ ಮುಖದಿರುಹಿದನು ಭೂಪ (ವಿರಾಟ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ಕೀಚಕನನ್ನು ಗಂಧರ್ವರು ಸಾಯಿಸಿದರು ಎಂದು ಕೇಳಿ ಆಶ್ಚರ್ಯ ಪಟ್ಟ ದುರ್ಯೋಧನನು, “ಹೇಳು, ಇನ್ನೊಮ್ಮೆ ಹೇಳು, ವಿರಾಟನ ತೋಳು ಮುರಿಯಿತೆ? ಸುಭಟ ಶ್ರೇಷ್ಠನಾದ ಕೀಚಕನು ಸತ್ತನೇ? ಇವನನ್ನು ಕೊಂದವರು ಗಂಧರ್ವರೇ? ದೇವಲೋಕದ ಗಂಧರ್ವರಿಗೂ ಭೂಲೋಕದ ಮನುಷ್ಯರಿಗೂ ಯಾವ ಜಗಳ? ಇದು ಸುಳ್ಳು” ಎಂದು ದುರ್ಯೋಧನನು ಮುಖವನ್ನು ತಿರುಗಿಸಿದನು.

ಅರ್ಥ:
ಹೇಳು: ಮಾತಾಡು, ತಿಳಿಸು; ಕೇಳು: ಆಲಿಸು; ತೋಳು: ಭುಜ; ಮುರಿ: ಧ್ವಂಸಗೊಳಿಸು; ಭಟ: ಸೈನಿಕ; ಕಟ್ಟಾಳು: ನಿಷ್ಠಾವಂತ ಸೈನಿಕ; ಮಡಿ: ಸಾವು; ಇರಿ: ಸಾಯಿಸು; ಮೇಲಣ: ಸ್ವರ್ಗ, ದೇವತೆ; ಮರ್ತ್ಯ: ಭೂಮಿಯಲ್ಲಿ ವಾಸಿಸುವರು; ಕೈ: ಹಸ್ತ; ಕಾಲು: ಪಾದ; ತೋಟಿ: ಜಗಳ; ಹೋಲು: ಸಾಮ್ಯ; ಹುಸಿ: ಸುಳ್ಳು; ಮುಖ: ಆನನ; ತಿರುಹು: ತಿರುಗಿಸು; ಭೂಪ: ರಾಜ;

ಪದವಿಂಗಡಣೆ:
ಹೇಳು +ಕೇಳ್+ಇನ್ನೊಮ್ಮೆ +ಮತ್ಸ್ಯನ
ತೋಳು+ ಮುರಿದುದೆ +ಸುಭಟರೊಳು+ಕ
ಟ್ಟಾಳು +ಕೀಚಕ +ಮಡಿದನೇ +ಗಂಧರ್ವರ್+ಇರಿದವರೆ
ಮೇಲಣವರಿಗೆ+ ಮರ್ತ್ಯರಿಗೆ+ ಕೈ
ಕಾಲುಮೆಟ್ಟಿನ +ತೋಟಿ+ಯೇತಕೆ
ಹೋಲದಿದು +ಹುಸಿ +ಹೋಗೆನುತ+ ಮುಖ+ ತಿರುಹಿದನು+ ಭೂಪ

ಅಚ್ಚರಿ:
(೧) ಹೇಳು, ಕೇಳು, ತೋಳು, ಕಟ್ಟಾಳು – ಪ್ರಾಸ ಪದಗಳು
(೨) ಕೀಚಕನನ್ನು ಸುಭಟರೊಳು ಕಟ್ಟಾಳು ಎಂದು ಕರೆದಿರುವುದು
(೩) “ಹ” ಕಾರದ ಜೋಡಿ ಪದಗಳು – ಹೋಲದಿದು ಹುಸಿ ಹೋಗೆನುತ
(೪) ಜಗಳವನ್ನು ಸೂಚಿಸುವುದಕ್ಕೆ – ಕೈಕಾಲುಮೆಟ್ಟಿನ ತೋಟಿಯೇತಕೆ

ಪದ್ಯ ೪: ಕೌರವನು ಏಕೆ ಮೌನಕ್ಕೆ ಶರಣಾದನು?

ಒಂದು ವಾರ್ತೆಯಲೈ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೌನವ ಹಿಡಿದು ಬೆರಗಾದ (ವಿರಾಟ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಒಬ್ಬ ದೂತನು, “ತ್ರಿಗರ್ತರಿಗೆ ಆನಂದಕರವಾದ ಒಂದು ಸುದ್ದಿಯಿದೆ. ಅವರ ಶತ್ರುವಾದ ಕೀಚಕನನ್ನು ಗಂಧರ್ವರು ಒಂದು ರಾತ್ರಿಯಲ್ಲಿ ಕೊಂದು ಹೋದರು. ಹಿಂದೆ ರಾವಣನಿಗಾದ ಗತಿಯೇ ಈಗ ಕೀಚಕನಿಗಾಯಿತು”, ಎಂದು ಹೇಳಲು ದುರ್ಯೋಧನನು ಬೆರಗಾಗಿ ಒಂದು ನಿಮಿಷ ಮೌನದಿಂದಿದ್ದನು.

ಅರ್ಥ:
ವಾರ್ತೆ: ಸುದ್ದಿ; ತ್ರಿ: ಮೂರು; ನಂದಕ: ಸಂತೋಷ, ಆನಂದ; ಜೀಯ: ಒಡೆಯ; ವೃಂದ: ಗುಂಪು; ಇರುಳು: ರಾತ್ರಿ; ಖಾತಿ: ಕೋಪ; ಕೊಂದು: ಸಾಯಿಸಿ; ವಿಧಿ: ನಿಯಮ; ನಿಮಿಷ: ಕಾಲದ ಒಂದು ಪ್ರಮಾಣ; ಮಹೀಶ: ರಾಜ; ಮೌನ: ಮಾತನಾಡದೆ ಇರುವುದು; ಹಿಡಿದು: ತಾಳಿ; ಬೆರಗು: ಆಶ್ಚರ್ಯ; ತ್ರಿಗರ್ತ: ಒಂದು ದೇಶ;

ಪದವಿಂಗಡಣೆ:
ಒಂದು +ವಾರ್ತೆಯಲೈ +ತ್ರಿಗರ್ತ
ಆನಂದಕರವಿದು+ ಜೀಯ +ಕೀಚಕ
ವೃಂದವನು +ಗಂಧರ್ವರ್+ಇರುಳ್+ಐತಂದು +ಖಾತಿಯಲಿ
ಕೊಂದು +ಹೋದರು +ರಾವಣನ +ವಿಧಿ
ಯಿಂದು +ಕೀಚಕಗಾಯಿತ್+ಎನೆ+ ಕೇಳ್ದ್
ಒಂದು +ನಿಮಿಷ+ ಮಹೀಶ+ ಮೌನವ+ ಹಿಡಿದು+ ಬೆರಗಾದ

ಅಚ್ಚರಿ:
(೧) ಮಹೀಶ, ಜೀಯ – ದುರ್ಯೋಧನನನ್ನು ಸಂಭೋದಿಸುವ ಬಗೆ
(೨) ಒಂದು – ೧, ೬ ಸಾಲಿನ ಮೊದಲ ಪದ
(೩) ಒಂದು, ಕೊಂದು, ಇಂದು – ಪ್ರಾಸ ಪದಗಳು