ಪದ್ಯ ೧೭: ಅರ್ಜುನನು ಯಾರನ್ನು ಕಂಡನು?

ಹರಮಹಾದೇವೀಯಘಾಟದ
ಪರಿಮಳವಿದೆತ್ತಣದೆನುತ ಮೈ
ಮುರಿದು ಕಂಡನಪೂರ್ವ ಪರಿಮಳ ಸಾರದಲಿ ಪಾರ್ಥ
ಕಿರಣಲಹರಿಯ ದಿವ್ಯ ರತ್ನಾ
ಭರಣ ರುಚಿರತರ ಪ್ರಭಾ ಪಂ
ಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ (ಅರಣ್ಯ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶಿವ ಶಿವಾ, ಇಂತಹ ಅಪೂರ್ವ ಪರಿಮಳವು ಎಲ್ಲಿಂದ ಹರಡುತ್ತಿದೆ ಎಂದು ಮಲಗಿದ್ದ ಅರ್ಜುನನು
ಮೈಮುರಿದು ತಿರುಗಿದನು. ಪರಿಮಳಸಾರವನ್ನು ಬೀರುತ್ತಾ ದಿವ್ಯರತ್ನಾಭರಣಗಳ ಕಿರಣಗಳ ಪ್ರಭಾ ಪಂಜರದ ನಡುವೆ ನಿಂತ ಕಾಮನಿಂದ ಪೀಡಿತಳಾದ ಊರ್ವಶಿಯನ್ನು ಕಂಡನು.

ಅರ್ಥ:
ಹರ: ಶಿವ; ಮಹಾದೇವ: ಶಂಕರ; ಅಘಾಟ: ಅದ್ಭುತ, ಅತಿಶಯ; ಪರಿಮಳ: ಸುಗಂಧ; ಮೈ: ತನು; ಮುರಿ: ಸೀಳು; ಮೈಮುರಿ: ದೇಹವನ್ನು ಅಲ್ಲಾಡಿಸು; ಕಂಡು: ನೋಡು; ಅಪೂರ್ವ: ಹಿಂದೆಂದೂ ಕಾಣದ, ಆಶ್ಚರ್ಯ; ಸಾರ: ರಸ; ಕಿರಣ: ಕಾಂತಿ; ಲಹರಿ: ಅಲೆ, ರಭಸ, ಆವೇಗ; ದಿವ್ಯ: ಶ್ರೇಷ್ಠ; ರತ್ನಾಭರಣ: ಒಡವೆ; ರುಚಿರ: ಸೌಂದರ್ಯ, ಚೆಲುವು; ಪ್ರಭೆ: ಕಾಂತಿ; ಪಂಜರ: ಗೂಡು; ಹೊಳೆ: ಪ್ರಕಾಶಿಸು; ಮದನಾಲಸೆ: ಮನ್ಮಥಪೀಡಿತಳು;

ಪದವಿಂಗಡಣೆ:
ಹರ+ಮಹಾದೇವ್+ಈ+ಅಘಾಟದ್
ಪರಿಮಳವಿದ್+ಎತ್ತಣದ್+ಎನುತ+ ಮೈ
ಮುರಿದು +ಕಂಡನ್+ಅಪೂರ್ವ +ಪರಿಮಳ +ಸಾರದಲಿ +ಪಾರ್ಥ
ಕಿರಣ+ಲಹರಿಯ +ದಿವ್ಯ +ರತ್ನಾ
ಭರಣ+ ರುಚಿರತರ +ಪ್ರಭಾ +ಪಂ
ಜರದೊಳಗೆ +ಹೊಳೆಹೊಳೆವ +ಮದನಾಲಸೆಯನ್+ಊರ್ವಶಿಯ

ಅಚ್ಚರಿ:
(೧) ಊರ್ವಶಿಯು ಸೌಂದರ್ಯದ ಪಂಜರದಲ್ಲಿ ಬಂಧಿಯಾಗಿದ್ದಳು, ಅತೀವ ಸುಂದರಿ ಎಂದು ಹೇಳುವ ಪರಿ – ರುಚಿರತರ ಪ್ರಭಾ ಪಂಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ