ಪದ್ಯ ೬೮: ಘಟೋತ್ಕಚನು ಯಾರನ್ನು ನಾಶ ಮಾಡಿದನು?

ಒರಸಿದನು ರಣದಲಿ ಹಿಡಿಂಬಾ
ಸುರನ ಮಕ್ಕಳ ಚೈದ್ಯ ಮಾಗಧ
ನರಕ ಕಿಮ್ಮೀರಕ ಜಟಾಸುರಸೂನು ಸಂತತಿಯ
ಬರಲಿ ಕರ್ಣ ದ್ರೋಣರುಳಿದೀ
ಜರಡ ಜೋಡಿಸಬೇಡ ಭೀಮನ
ನರನ ಬಯಸುವರೆನ್ನೊಡನೆ ಕೈಮಾಡಹೇಳೆಂದ (ದ್ರೋಣ ಪರ್ವ, ೧೫ ಸಂಧಿ, ೬೮ ಪದ್ಯ)

ತಾತ್ಪರ್ಯ:
ಘಟೋತ್ಕಚನ ಯುದ್ಧದಲ್ಲಿ ಹಿಡಿಂಬ, ಶಿಶುಪಾಲ, ಜರಾಸಂಧ, ನರಕ, ಕಿಮ್ಮೀರ, ಜಟಾಸುರರ ಮಕ್ಕಳು ಅವರ ವಂಶದವರನ್ನು ನಾಶ ಮಾಡಿದನು. ಈ ಬಲಹೀನರನ್ನೇಕೆ ನನ್ನ ಮೇಲೆ ನುಗ್ಗಿಸುವಿರಿ, ಬರುವಂತಿದ್ದರೆ ಕರ್ಣ ದ್ರೋಣರು ಬರಲಿ, ಭೀಮಾರ್ಜುನರ ಮೇಲೆ ಯುದ್ಧಮಾಡ ಬಯಸುವವರು ನನ್ನ ಮೇಲೆ ಕೈಮಾಡಲಿ ಎಂದನು.

ಅರ್ಥ:
ಒರಸು: ನಾಶ; ರಣ: ಯುದ್ಧ; ಅಸುರ: ರಾಕ್ಷಸ; ಮಕ್ಕಳು: ಸುತ; ಸೂನು: ಮಗ; ಸಂತತಿ: ವಂಶ; ಬರಲಿ: ಆಗಮಿಸು; ಉಳಿದ: ಮಿಕ್ಕ; ಜರಡು: ಹುರುಳಿಲ್ಲದುದು; ಜೋಡಿಸು: ಕೂಡಿಸು; ನರ: ಅರ್ಜುನ; ಬಯಸು: ಇಚ್ಛಿಸು; ಕೈಮಾಡು: ಯುದ್ಧಮಾಡು;

ಪದವಿಂಗಡಣೆ:
ಒರಸಿದನು+ ರಣದಲಿ +ಹಿಡಿಂಬ
ಅಸುರನ +ಮಕ್ಕಳ +ಚೈದ್ಯ +ಮಾಗಧ
ನರಕ +ಕಿಮ್ಮೀರಕ +ಜಟಾಸುರ+ಸೂನು +ಸಂತತಿಯ
ಬರಲಿ+ ಕರ್ಣ+ ದ್ರೋಣರ್+ಉಳಿದೀ
ಜರಡ +ಜೋಡಿಸಬೇಡ +ಭೀಮನ
ನರನ +ಬಯಸುವರ್+ಎನ್ನೊಡನೆ +ಕೈಮಾಡ+ಹೇಳೆಂದ

ಅಚ್ಚರಿ:
(೧) ಮಕ್ಕಳು, ಸೂನು – ಸಮಾನಾರ್ಥಕ ಪದ
(೨) ಘಟೋತ್ಕಚನ ಬಲವನ್ನು ಹೇಳುವ ಪರಿ – ಬರಲಿ ಕರ್ಣ ದ್ರೋಣರುಳಿದೀಜರಡ ಜೋಡಿಸಬೇಡ

ಪದ್ಯ ೩೪: ಕಾಮ್ಯಕವನವನ್ನು ಯಾರು ಪ್ರವೇಶಿಸಿದರು?

ಅರಸ ಹೇಳುವುದೇನು ಹೋರಿದ
ನರೆಗಳಿಗೆ ಕೊಂಡಾಡಿ ಬಳಿಕಿ
ಟ್ಟೊರಸಿ ಹುಡಿಯಲಿ ಹೂಳಿದನು ಕಿಮ್ಮೀರ ದಾನವನ
ಬೆರೆಸಿತೀ ವಿಪ್ರೌಘವೀ ಮುನಿ
ವರಿಯರೀ ಕಾಮಿನಿಯರೀ ನೃಪ
ವರನ ಪರಿಕರವಾ ಮಹಾಕಾಮ್ಯಕವನಾಂತರವ (ಅರಣ್ಯ ಪರ್ವ, ೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ, ಇನ್ನು ಹೇಳುವುದೇನಿದೆ, ಭೀಮನು ಸ್ವಲ್ಪ ಹೊತ್ತಿನಲ್ಲೇ ಕಿಮ್ಮೀರನ ಜೊತೆ ಹೋರಾಡಿ ಅವನನ್ನು ಭೂಮಿಗೆ ಕೆಡವಿ ಮಣ್ಣಿನಲ್ಲಿ ಹೂಳಿದನು. ನೆರೆದಿದ್ದ ಬ್ರಾಹ್ಮಣರು, ಮುನಿಗಳು, ಹೆಂಗಸರು, ಪರಿವಾರದ ಜನರು ನಿಟ್ಟುಸಿರಿಟ್ಟು ಕಾಮ್ಯಕವನವನ್ನು ಸೇರಿದರು.

ಅರ್ಥ:
ಅರಸ: ರಾಜ; ಹೇಳು: ತಿಳಿಸು; ಹೋರು: ಜಗಳ, ಕಲಹ; ಅರೆಗಳಿಗೆ: ಸ್ವಲ್ಪ ಸಮಯ; ಕೊಂಡಾಡು: ಹೊಗಳು; ಬಳಿಕ: ನಂತರ; ಒರಸು: ನಾಶಮಾಡು, ಅಳಿಸು; ಹುಡಿ: ಮಣ್ಣು; ಹೂಳು: ಹೂತು ಹಾಕು, ಮುಚ್ಚು; ದಾನವ: ರಾಕ್ಷಸ; ಬೆರೆಸು: ಕೂಡು; ವಿಪ್ರ: ಬ್ರಾಹ್ಮಣ; ಔಘ: ಗುಂಪು, ಸಮೂಹ; ಮುನಿ: ಋಷಿ; ಕಾಮಿನಿ: ಹೆಂಗಸರು; ನೃಪ: ರಾಜ; ಪರಿಕರ: ಸುತ್ತುಮುತ್ತಲಿನ ಜನ, ಪರಿಜನ; ವನ: ಕಾಡು;

ಪದವಿಂಗಡಣೆ:
ಅರಸ +ಹೇಳುವುದೇನು+ ಹೋರಿದನ್
ಅರೆಗಳಿಗೆ+ ಕೊಂಡಾಡಿ +ಬಳಿಕಿಟ್ಟ್
ಒರಸಿ +ಹುಡಿಯಲಿ +ಹೂಳಿದನು +ಕಿಮ್ಮೀರ +ದಾನವನ
ಬೆರೆಸಿತ್+ಈ+ ವಿಪ್ರೌಘವ್+ಈ+ಮುನಿ
ವರಿಯರ್+ಈ+ ಕಾಮಿನಿಯರ್+ಈ+ ನೃಪ
ವರನ +ಪರಿಕರವ್+ಆ+ ಮಹಾಕಾಮ್ಯಕ+ವನಾಂತರವ

ಅಚ್ಚರಿ:
(೧) ಅರಸ, ನೃಪ – ಸಮನಾರ್ಥಕ ಪದ
(೨) ಭೀಮನ ಪರಾಕ್ರಮದ ಪರಿಚಯ – ಹೋರಿದನರೆಗಳಿಗೆ ಕೊಂಡಾಡಿ ಬಳಿಕಿ
ಟ್ಟೊರಸಿ ಹುಡಿಯಲಿ ಹೂಳಿದನು ಕಿಮ್ಮೀರ ದಾನವನ

ಪದ್ಯ ೨೩: ಭೀಮನಿಗೆ ಯಾರು ಎದುರಾದರು?

ಅರಸ ಕೇಳಂದೇಕ ಚಕ್ರದೊ
ಳೊರಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಿಂಬಕಗೆ
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ (ಅರಣ್ಯ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಪ್ರಶ್ನೆಗೆ ಉತ್ತರಿಸುತ್ತಾ, ರಾಜ ಕೇಳು, ಹಿಂದೆ ಏಕಚಕ್ರಪುರದಲ್ಲಿ ಭೀಮನು ಬಕಾಸುರನನ್ನು ಕೊಲ್ಲಲಿಲ್ಲವೇ? ಬಕನ ಅಣ್ಣನೇ ಕಿಮ್ಮೀರ, ಹಿಡಿಂಬಕನಿಗೆ ಸಂಬಂಧಿಕ. ಪರಿವಾರದೊಡನೆ ಧರ್ಮಜನು ಬರುವುದನ್ನು ಕಂಡು, ತನ್ನ ತಮ್ಮನ ವಧೆಯ ನೋವನ್ನು ತೀರಿಸಿಕೊಳ್ಳಲು ಕಿಮ್ಮೀರನು ಎದುರಾಗಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಒರಸು: ನಾಶಮಾದು; ಹಿರಿಯ: ದೊಡ್ಡವ; ಬಾಂಧವ: ಸಂಬಂಧಿಕ; ಧರಣಿಪಾಲ: ರಾಜ; ಧರಣಿ: ಭೂಮಿ; ಸಪರಿವಾರ: ಪರಿಜನ; ಬರವ: ಆಗಮನ; ಕಂಡು: ನೋಡು; ತಮ್ಮ: ಅನುಜ; ಹರಿಬ: ಕಷ್ಟ, ತೊಂದರೆ; ಮರಳು: ಹಿಂದಿರುಗು; ಇದಿರು: ಎದುರು; ಅಮರ: ದೇವತೆ; ಅಮರಾರಿ: ದೇವತೆಗಳ ವೈರಿ, ರಾಕ್ಷಸ;

ಪದವಿಂಗಡಣೆ:
ಅರಸ +ಕೇಳ್+ಅಂದ್+ಏಕ ಚಕ್ರದೊಳ್
ಒರಸಿದನಲ್+ಆ+ ಭೀಮನ್+ಆತಗೆ
ಹಿರಿಯನ್+ಈ+ ಕಿಮ್ಮೀರ+ ಬಾಂಧವನಾ+ ಹಿಡಿಂಬಕಗೆ
ಧರಣಿಪಾಲನ +ಸಪರಿವಾರದ
ಬರವ +ಕಂಡನು +ತನ್ನ +ತಮ್ಮನ
ಹರಿಬವನು +ಮರಳಿಚುವೆನ್+ಎನುತ್+ಇದಿರಾದನ್+ಅಮರಾರಿ

ಅಚ್ಚರಿ:
(೧) ಸಾಯಿಸಿದನು ಎಂದು ಹೇಳಲು – ಒರಸಿದ ಪದದ ಬಳಕೆ
(೨) ಅರಸ, ಧರಣಿಪಾಲ – ಸಮನಾರ್ಥಕ ಪದ

ಪದ್ಯ ೨೨: ಪಾಂಡವರು ಯಾರನ್ನು ಸಂಹರಿಸಿ ಅರಣ್ಯವನ್ನು ಸಂಹರಿಸಿದರು?

ಜನಪ ಕೇಳ್ಕಿಮ್ಮೀರನೆಂಬವ
ನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ
ದನುಜನೇ ಕಿಮ್ಮೀರನಾತನ
ನನಿಲಜನೊ ಫಲುಗುಣನೊ ಕೊಂದಾ
ತನು ಯುಧಿಷ್ಠಿರನೋ ಸವಿಸ್ತರವಾಗಿ ಹೇಳೆಂದ (ಅರಣ್ಯ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ರಾಜ ಕೇಳು, ದೇವತೆಗಳಿಗೆ ಅಜೇಯನಾದ ಕಿಮ್ಮೀರನೆನ್ನುವ ರಾಕ್ಷಸನನ್ನು ಸಂಹರಿಸಿ ಅವರು ಅರಣ್ಯ ಪ್ರವೇಶ ಮಾಡಿದರು. ವಿದುರನ ಮಾತನ್ನು ಕೇಳಿ ಧೃತರಾಷ್ಟ್ರನು, ಕಿಮ್ಮೀರನೆಂಬುವನು ರಾಕ್ಷಸನೇ? ಅವನನ್ನು ಯಾರು ಸಂಹಾರ ಮಾಡಿದರು? ಅರ್ಜುನನೋ, ಭೀಮನೋ, ಯುಧಿಷ್ಠಿರನೋ?

ಅರ್ಥ:
ಜನಪ: ರಾಜ; ಕೇಳು: ಆಲಿಸು; ಅನಿಮಿಷ: ದೇವತೆ; ಉಬ್ಬಸ: ಮೇಲುಸಿರು; ಖಳ: ದುಷ್ಟ; ವಿಭಾಡಿಸು: ನಾಶಮಾಡು; ಹೊಕ್ಕು: ಸೇರು; ಅರಣ್ಯ: ಕಾನನ, ಕಾಡು; ಮಂದಿರ: ಆಲಯ; ದನುಜ: ರಾಕ್ಷಸ; ಅನಿಲಜ: ವಾಯುಪುತ್ರ (ಭೀಮ); ಕೊಂದು: ಸಾಯಿಸು; ಸವಿಸ್ತರ: ವಿವರವಾಗಿ;

ಪದವಿಂಗಡಣೆ:
ಜನಪ +ಕೇಳ್+ಕಿಮ್ಮೀರನ್+ಎಂಬವನ್
ಅನಿಮಿಷರಿಗ್+ಉಬ್ಬಸದ +ಖಳನ್
ಆತನ+ ವಿಭಾಡಿಸಿ+ ಹೊಕ್ಕರ್+ಅವರ್+ಅರಣ್ಯ +ಮಂದಿರವ
ದನುಜನೇ +ಕಿಮ್ಮೀರನ್+ಆತನನ್
ಅನಿಲಜನೊ +ಫಲುಗುಣನೊ +ಕೊಂದಾ
ತನು +ಯುಧಿಷ್ಠಿರನೋ +ಸವಿಸ್ತರವಾಗಿ+ ಹೇಳೆಂದ

ಅಚ್ಚರಿ:
(೧) ಪಾಂಡವರು ಅರಣ್ಯವನ್ನು ಸೇರಿದ ಪರಿ – ಕೇಳ್ಕಿಮ್ಮೀರನೆಂಬವನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ