ಪದ್ಯ ೧೫: ಭೀಮನನ್ನು ಯಾರು ಬೈದರು?

ಉಚಿತವೆಂದರು ಕೆಲವು ಕೆಲರಿದ
ನುಚಿತವೆಂದರು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ (ಗದಾ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಮಾಡಿದುದು ಸರಿ ಎಂದು ಕೆಲವರು ಹೊಗಳಿದರು, ಇದು ಅನುಚಿತವೆಂದು ಕೆಲವರು ಹೇಳಿದರು. ಪೂರ್ವಜನ್ಮದ ಸಂಚಿತ ಪಾಪವಲ್ಲವೇ ಶಿವ ಶಿವಾ ಎಂದು ಕೆಲರು ಉದ್ಗರಿಸಿದರು. ದೇವತೆಗಳು, ಕಿನ್ನರರು, ಯಕ್ಷರು, ಭೀಮನನ್ನು ಬೈದು ಕೌರವನನ್ನು ಹೊಗಳುತ್ತಾ ತಮ್ಮ ನಿವಾಸಗಳಿಗೆ ಹೋದರು.

ಅರ್ಥ:
ಉಚಿತ: ಸರಿಯಾದುದು; ಕೆಲವು: ಸ್ವಲ್ಪ; ಅನುಚಿತ: ಸರಿಯಲ್ಲದ್ದು; ಪೂರ್ವ: ಹಿಂದಿನ; ಜನ್ಮ: ಹುಟ್ಟು; ದುಷ್ಕೃತ: ಪಾಪ; ಐಸಲೇ: ಅಲ್ಲವೇ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ನಿರ್ಜರ: ದೇವತೆ; ನಿಚಯ: ಗುಂಪು; ಬೈದು: ಜರೆದು; ಅಚಲ: ಸ್ಥಿರವಾದ; ಬಲ: ಶಕ್ತಿ; ಬಣ್ಣಿಸು: ವರ್ಣಿಸು, ಹೊಗಳು; ಹೊಕ್ಕು: ಸೇರು; ಆಲಯ: ಮನೆ;

ಪದವಿಂಗಡಣೆ:
ಉಚಿತವ್+ಎಂದರು +ಕೆಲವು +ಕೆಲರ್+ಇದ್
ಅನುಚಿತವೆಂದರು +ಪೂರ್ವಜನ್ಮೋ
ಪಚಿತ+ ದುಷ್ಕೃತವ್+ಐಸಲೇ +ಶಿವ +ಎಂದು +ಕೆಲಕೆಲರು
ಖಚರ +ಕಿನ್ನರ+ ಯಕ್ಷ+ ನಿರ್ಜರ
ನಿಚಯ +ಭೀಮನ +ಬೈದು +ಕುರುಪತಿ
ಅಚಳ +ಬಲವನು +ಬಣ್ಣಿಸುತ +ಹೊಕ್ಕರು +ನಿಜಾಲಯವ

ಅಚ್ಚರಿ:
(೧) ಉಚಿತ, ಅನುಚಿತ – ವಿರುದ್ಧ ಪದಗಳು
(೨) ದೇವತೆಗಳ ಗುಂಪುಗಳು – ಖಚರ ಕಿನ್ನರ ಯಕ್ಷ

ಪದ್ಯ ೩೩: ಆಗಸವಾಣಿಯು ಯಾರೆಂದು ಪರಿಚಯಿಸಿಕೊಂಡಿತು?

ಬಿಸುಟನುದಕವನಾ ನುಡಿಯನಾ
ಲಿಸಿದ ನಾರೈ ನೀನು ನಿನಗಾ
ಗಸದಲಿರವೇನಸುರನೋ ಕಿನ್ನರನೊ ನಿರ್ಜರನೊ
ಉಸುರೆನಲು ತಾಂ ಯಕ್ಷನೀಸಾ
ರಸವು ನನ್ನದು ನಿನ್ನ ತಮ್ಮದಿ
ರಸುವನೆಳೆದವ ನಾನು ಕೇಳೈ ಧರ್ಮಸುತಯೆಂದ (ಅರಣ್ಯ ಪರ್ವ, ೨೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಧರ್ಮಜನು ಆಗಸವಾಣಿಯನ್ನು ಕೇಳಿದ ಮೇಲೆ ತನ್ನ ಕೈಯಲ್ಲಿದ್ದ ನೀರನ್ನು ಚೆಲ್ಲಿದನು, ಆಗಸದ ಮಾತಿಗೆ ಉತ್ತರಿಸುತ್ತಾ, ನೀನು ಯಾರು? ಆಕಾಶದಲ್ಲೇಕಿರುವೆ? ನೀನು ರಾಕ್ಷಸನೋ, ಕಿನ್ನರನೋ, ದೇವತೆಯೋ ಹೇಳೆ ಎಂದು ಕೇಳಲು, ಆಗಸ ವಾಣಿಯು, ನಾನು ಯಕ್ಷ, ಈ ಸರೋವರ ನನ್ನದು, ನಿನ್ನ ತಮ್ಮಂದಿರ ಪ್ರಾಣವನ್ನು ತೆಗೆದವನು ನಾನೇ ಎಂದು ಉತ್ತರಿಸಿತು.

ಅರ್ಥ:
ಬಿಸುಟು: ಹೊರಹಾಕು; ನುಡಿ: ಮಾತು; ಆಲಿಸು: ಕೇಳು; ಆಗಸ: ಅಭ್ರ; ಅಸುರ: ರಾಕ್ಷಸ; ಕಿನ್ನರ: ದೇವತೆಗಳ ಒಂದು ವರ್ಗ; ನಿರ್ಜರ: ದೇವತೆ; ಉಸುರು: ಹೇಳು; ಸಾರಸ: ಸರೋವರ; ಅಸು: ಪ್ರಾಣ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೇಳು: ಆಲಿಸು; ಸುತ: ಪುತ್ರ;

ಪದವಿಂಗಡಣೆ:
ಬಿಸುಟನ್+ಉದಕವನ್+ಆ+ ನುಡಿಯನ್
ಆಲಿಸಿದನ್ + ಆರೈ +ನೀನು+ ನಿನಗ್
ಆಗಸದಲ್+ಇರವ್+ಏನ್+ಅಸುರನೋ +ಕಿನ್ನರನೊ+ ನಿರ್ಜರನೊ
ಉಸುರೆನಲು+ ತಾಂ +ಯಕ್ಷನ್+ಈ+ಸಾ
ರಸವು +ನನ್ನದು +ನಿನ್ನ +ತಮ್ಮದಿರ್
ಅಸುವನ್+ಎಳೆದವ+ ನಾನು +ಕೇಳೈ +ಧರ್ಮಸುತಯೆಂದ

ಅಚ್ಚರಿ:
(೧) ಹೇಳು ಎನಲು ಉಸುರು ಪದದ ಬಳಕೆ
(೨) ನೊ ಪದದ ಬಳಕೆ – ಅಸುರನೊ, ಕಿನ್ನರನೊ, ನಿರ್ಜರನೊ

ಪದ್ಯ ೧೫: ಹನುಮಂತ ಭೀಮನಲ್ಲಿ ಯಾವ ಪ್ರಶ್ನೆಯನ್ನು ಕೇಳಿದ?

ಮುರಿಯದಂತಿರೆ ಲಘುವಿನಲಿ ಹೆ
ಮ್ಮರನನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿದಿಶಾಪಟ ನುಡಿಸಿದನು ಪವಮಾನ ನಂದನನ
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೊ ದೈತ್ಯನೊದಿವಿಜನೋಕಿ
ನ್ನರನೊ ನೀನಾರೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಮೇಲೆ ಹನುಮಂತನು ಮಗ್ಗುಲಾಗಿ ಒಂದು ದೊಡ್ಡ ಮರಕ್ಕೆ ಬೆನ್ನು ನೀಡಿ ಸ್ವಲ್ಪ ಆ ಮರವು ಬೀಳದಂತೆ, ಅವನ ದೇಹವು ತಗುಲಿರುವಂತೆ ಕುಳಿತುಕೊಂಡನು. ವೇಗವಾಗಿ ಬರುತ್ತಿದ್ದ ಭೀಮನನ್ನು ಕಂಡು ಎಲ್ಲಿಗೆ ಹೋಗುತ್ತಿರುವೆ, ನೀನು ಮನುಷ್ಯನೋ, ಖೇಚರನೋ, ರಾಕ್ಷಸನೋ, ದೇವನೋ, ಕಿಂಪುರುಷನೋ, ನೀನಾರೆಂದು ಹನುಮನು ಪ್ರಶ್ನಿಸಿದನು.

ಅರ್ಥ:
ಮುರಿ: ಸೀಳು; ಲಘು: ಹಗುರ; ಹೆಮ್ಮರ: ದೊಡ್ಡ ವೃಕ್ಷ; ಒಯ್ಯನೆ: ಮೆಲ್ಲಗೆ; ನೆಮ್ಮು: ಆಧಾರವನ್ನು ಪಡೆ; ಕುಳ್ಳಿರ್ದ: ಆಸೀನನಾದ; ಅರಿ: ವೈರಿ; ದಿಶಾಪಟ: ಎಲ್ಲಾ ದಿಕ್ಕುಗಳಿಗೆ ಓಡಿಸುವವ; ನುಡಿಸು: ಮಾತಾಡು; ಪವಮಾನ: ಗಾಳಿ, ವಾಯು; ನಂದನ: ಮಗ; ಭರ: ರಭಸ; ಮರ್ತ್ಯ: ಮನುಷ್ಯ; ಖೇಚರ: ಗಂಧರ್ವ; ದೈತ್ಯ: ರಾಕ್ಷಸ; ದಿವಿಜ: ಸುರ, ದೇವತೆ; ಕಿನ್ನರ: ಕಿಂಪುರುಷ; ನುಡಿಸು: ಮಾತಾಡು;

ಪದವಿಂಗಡಣೆ:
ಮುರಿಯದಂತಿರೆ +ಲಘುವಿನಲಿ +ಹೆ
ಮ್ಮರನನ್+ಒಯ್ಯನೆ +ನೆಮ್ಮಿ +ಕುಳ್ಳಿರ್ದ್
ಅರಿದಿಶಾಪಟ+ ನುಡಿಸಿದನು +ಪವಮಾನ +ನಂದನನ
ಭರವಿದ್+ಎಲ್ಲಿಗೆ +ಮರ್ತ್ಯನೋ +ಖೇ
ಚರನೊ+ ದೈತ್ಯನೊ+ದಿವಿಜನೋ+ಕಿ
ನ್ನರನೊ +ನೀನಾರೆಂದು +ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಹನುಮನನ್ನು ಕರೆದ ಪರಿ – ಅರಿದಿಶಾಪಟ
(೨) ಹಲವು ಬಗೆಯ ಜನರ ಪರಿಚಯ – ಮರ್ತ್ಯ, ಖೇಚರ, ದೈತ್ಯ, ದಿವಿಜ, ಕಿನ್ನರ

ಪದ್ಯ ೫: ರಾಕ್ಷಸ ಪುತ್ರರು ಯಾವ ವರವನ್ನು ಕೇಳಿದರು?

ರಚಿಸುವೆವು ಪುರಮೂರನಗ್ಗದ
ಖಚರ ಕಿನ್ನರ ಸಿದ್ಧ ನಿರ್ಜರ
ನಿಚಯವೆಮಗೋಲೈಸಿ ಹೋಗಲಿ ಹಲವು ಮಾತೇನು
ಉಚಿತದಲಿ ನಿಮ್ಮಡಿಗಳನು ಪರಿ
ರಚಿಸಲಾವೋಲೈಸುವೆವು ವರ
ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ (ಕರ್ಣ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ಆ ಮೂವರು ರಾಕ್ಷಸ ಪುತ್ರರು ನಾವು ಮೂರು ಊರುಗಳನ್ನು ರಚಿಸುತ್ತೇವೆ, ದೇವತೆಗಳು, ಕಿನ್ನರರು, ಸಿದ್ಧರು, ಮೊದಲಾದವರೆಲ್ಲರೂ ನಮಗೆ ಸೇವಕರಾಗಿರಬೇಕು, ಕೇಳಿದುದನ್ನು ಕೊಡುತ್ತೇವೆ ಎಂದಿರಿ, ಅದಕ್ಕಾಗಿ ಕೇಳುತ್ತಿದ್ದೇವೆ, ನಮಗೆ ಮರಣವೇ ಬರಬಾರದು ಎಂದು ಕೇಳಿದರು.

ಅರ್ಥ:
ರಚಿಸು: ನಿರ್ಮಿಸು; ಪುರ: ಊರು; ಮೂರು: ತ್ರಿ, ತ್ರಯ; ಅಗ್ಗ: ಶ್ರೇಷ್ಠ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ, ಕಿಂಪುರುಷ; ಸಿದ್ಧ:ದೇವತೆಗಳಲ್ಲಿ ಒಂದು ಪಂಗಡ; ನಿರ್ಜರ: ದೇವತೆಗಳು; ನಿಚಯ: ಗುಂಪು; ಓಲೈಸು: ಉಪಚರಿಸು; ಹಲವು: ಬಹಳ; ಮಾತು: ನುಡಿ; ಉಚಿತ: ಸರಿಯಾದ; ನಿಮ್ಮಡಿ: ನಿಮ್ಮ ಸೇವೆ; ಪರಿ: ರೀತಿ; ವರ: ಶ್ರೇಷ್ಠ; ವಚನ: ನುಡಿ; ಅಮರ: ಮರಣವಿಲ್ಲದ;

ಪದವಿಂಗಡಣೆ:
ರಚಿಸುವೆವು +ಪುರ+ಮೂರನ್+ಅಗ್ಗದ
ಖಚರ+ ಕಿನ್ನರ +ಸಿದ್ಧ +ನಿರ್ಜರ
ನಿಚಯವ್+ಎಮಗ್+ಓಲೈಸಿ +ಹೋಗಲಿ +ಹಲವು +ಮಾತೇನು
ಉಚಿತದಲಿ +ನಿಮ್ಮಡಿಗಳನು +ಪರಿ
ರಚಿಸಲಾವ್+ಓಲೈಸುವೆವು +ವರ
ವಚನ +ನಿಮ್ಮದು +ಕರುಣಿಸುವುದ್+ಅಮರತ್ವವನು +ನಮಗೆ

ಅಚ್ಚರಿ:
(೧) ರಚಿಸು – ೧, ೫ ಸಾಲಿನ ಮೊದಲ ಪದ
(೨) ದೇವತೆಗಳ ಗುಂಪುಗಳು: ಖಚರ, ಕಿನ್ನರ, ಸಿದ್ಧ
(೩) ಅಗ್ಗ, ವರ – ಸಾಮ್ಯಾರ್ಥಪದಗಳು

ಪದ್ಯ ೨೮: ಕೃಷ್ಣನ ರೋಮರೋಮಗಳಲ್ಲಿ ಯಾರು ಕಂಡರು?

ಸುರರು ಖಚರರು ಕಿನ್ನರರು ಕಿಂ
ಪುರುಷರನುಪಮ ಸಿದ್ಧ ವಿದ್ಯಾ
ಧರರು ವಸುಗಳು ಮನುಗಳಾದಿತ್ಯರು ಭುಜಂಗಮಯ
ಗರುಡ ಗಂಧರ್ವಾಶ್ವಿನಿ ದೇ
ವರುಗಳಖಿಳಾಪ್ಸರಿಯರೆಸೆದರು
ಪರಮ ಪುರುಷನ ರೋಮರೋಮದ ಕುಳಿಯ ಚೌಕದೊಳು (ಉದ್ಯೋಗ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ದೇವತೆಗಳು, ಕಿನ್ನರರು, ಕಿಂಪುರುಷರು, ಸಿದ್ಧರು, ವಿದ್ಯಾಧರರು, ವಸುಗಳು, ಮನುಗಳು, ಆದಿತ್ಯರು, ಉರಗರು, ಗರುಡ, ಗಂಧರ್ವರು, ಅಶ್ವಿನೀ ದೇವತೆಗಳು, ಅಪ್ಸರೆಯರು, ಇವರೆಲ್ಲರೂ ಕೃಷ್ಣನ ಆ ವಿಶ್ವರೂಪದ ರೋಮರೋಮಗಳಲ್ಲಿ ತೋರಿದರು.

ಅರ್ಥ:
ಸುರರು: ದೇವತೆಗಳು; ಖಚರ: ಗಂಧರ್ವ; ಕಿನ್ನರ:ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ; ಸಿದ್ಧ: ಸಾಧಿಸಿದವನು; ವಿದ್ಯಾಧರ: ದೇವತೆಗಳ ವರ್ಗ; ವಸು: ದೇವತೆಗಳ ಒಂದು ವರ್ಗ, ೮ರ ಸಂಕೇತ;
ಮನು: ಮನುಷ್ಯ ಕುಲದ ಮೂಲಪುರುಷ, ೧೪ರ ಸಂಕೇತ; ಆದಿತ್ಯ: ಸೂರ್ಯ; ಭುಜಂಗ: ಸರ್ಪ; ಗರುಡ: ವಿಷ್ಣುವಿನ ವಾಹನ, ಪಕ್ಷಿ, ಖಗ; ಗಂಧರ: ಗಂಧರ್ವರು; ಅಶ್ವಿನಿ: ದೇವತೆಗಳ ವರ್ಗ; ಅಖಿಳ: ಎಲ್ಲಾ; ಅಪ್ಸರೆ: ದೇವಕನ್ಯೆ; ಎಸೆ: ತೋರು; ಪರಮ: ಶ್ರೇಷ್ಠ; ಪುರುಷ: ಮನುಷ್ಯ; ರೋಮ: ಕೂದಲು; ಕುಳಿ:ಹಳ್ಳ; ಚೌಕ: ಕ್ರಮಬದ್ಧವಾದ, ಮೇರೆ; ಅನುಪಮ:ಉತ್ಕೃಷ್ಟವಾದುದು;

ಪದವಿಂಗಡಣೆ:
ಸುರರು +ಖಚರರು +ಕಿನ್ನರರು+ ಕಿಂ
ಪುರುಷರ್+ಅನುಪಮ +ಸಿದ್ಧ +ವಿದ್ಯಾ
ಧರರು +ವಸುಗಳು +ಮನುಗಳ್+ಆದಿತ್ಯರು +ಭುಜಂಗಮಯ
ಗರುಡ+ ಗಂಧರ್ವ+ಅಶ್ವಿನಿ+ ದೇ
ವರುಗಳ್+ಅಖಿಳ+ಅಪ್ಸರಿಯರ್+ಎಸೆದರು
ಪರಮ +ಪುರುಷನ +ರೋಮರೋಮದ +ಕುಳಿಯ +ಚೌಕದೊಳು

ಅಚ್ಚರಿ:
(೧) ದೇವತೆಗಳ ವರ್ಗಗಳ ವಿವರ – ಸುರ, ಖಚರ, ಕಿನ್ನರ,ಕಿಂಪುರುಷ, ಸಿದ್ಧ, ವಿದ್ಯಾಧರ, ವಸು, ಮನು, ಆದಿತ್ಯ, ಭುಜಂಗ, ಗರುಡ, ಗಂಧರ್ವ, ಅಶ್ವಿನಿ ದೇವರು, ಅಪ್ಸರೆ

ಪದ್ಯ ೩೨: ಯಕ್ಷಕಿಂಪುರಷರು ಅರ್ಜುನನ ಜೊತೆ ಯುದ್ಧಮಾಡಿದರೆ?

ಅದು ಗಣನೆಗೊಂಬತ್ತು ಸಾವಿರ
ವರದೊಳಿದ್ದುದು ಯಕ್ಷಕಿನ್ನರ
ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆ+ಗಾನಲೇನ
ಪ್ಪುದು +ತದೀಯ +ಜನಂಗಳ್+ಇತ್ತುದು
ಸುದತಿಯರನಾಮಂಡಲಕೆ+ ಮೀಟಾದ +ವಸ್ತುಗಳ (ಸಭಾ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹಿಮಾಲಯದ ಬೆಟ್ಟಗಳನ್ನು ತನ್ನ ವಶಕ್ಕೆ ತೆಗೆದುಕೊಂಡಮೇಲೆ, ಅರ್ಜುನನು ತನ್ನ ಸೈನ್ಯವನ್ನು ಕಿಂಪುರುಷರಿದ್ದ ಪ್ರದೇಶಕ್ಕೆ ಬಂದನು, ಅದು ಒಂಬತ್ತು ಸಾವಿರ ಯೋಜನದ ವಿಸ್ತಾರವುಳ್ಳ ಪ್ರದೇಶ. ಅಲ್ಲಿ ಯಕ್ಷಕಿನ್ನರ ಕಿಂಪುರುಷರಿದ್ದರು, ಅವರು ಸುಖವಾಗಿ, ಅತಿಶಯರಾಗದಿಂದ ಜೀವಿಸಿದವರು. ಈ ಸೈನ್ಯವನ್ನು ಎದುರಿಸದೆ ಅವರು ತಮ್ಮಲ್ಲಿದ್ದ ಉತ್ತಮ ವಸ್ತುಗಳನ್ನು ಕೊಟ್ಟರು.

ಅರ್ಥ:
ಗಣನೆ: ಎಣಿಕೆ; ಸಾವಿರ: ಸಹಸ್ರ; ಸುದತಿ: ಸುಂದರಿ, ಸುಂದರವಾದ ಹಲ್ಲುಗಳನ್ನುಳ್ಳವಳು; ರಾಗಿ: ಭೋಗಭಾಗ್ಯಗಳಲ್ಲಿ ಅನುರಾಗವುಳ್ಳ; ಅತಿ: ಹೆಚ್ಚು; ಸುಖ: ಸಂತೋಷ; ಮೀಟು: ಶ್ರೇಷ್ಠ; ತದೀಯ: ಅದಕ್ಕೆ ಸಂಬಂಧಪಟ್ಟ; ಜನ: ಗುಂಪು; ಇತ್ತು: ಕೊಡು; ಫಲ್ಲಣೆ: ಘಲ್ ಘಲ್ ಶಬ್ದ; ವಸ್ತು: ಸಾಮಾನು, ಸಾಮಗ್ರಿ; ಮಂಡಲ: ನಾಡಿನ ಒಂದು ಭಾಗ;

ಪದವಿಂಗಡಣೆ:
ಅದು +ಗಣನೆಗ್+ಒಂಬತ್ತು +ಸಾವಿರವ್
ಅರದೊಳ್+ಇದ್ದುದು +ಯಕ್ಷ+ಕಿನ್ನರ
ಸುದತಿಯರು +ಕಿಂಪುರುಷರ್+ಅತಿರಾಗಿಗಳು+ ಸುಖಮಯರು
ಇದರ+ ಫಲ್ಲಣೆಗಾನಲೇನ
ಪ್ಪುದು ತದೀಯ ಜನಂಗಳಿತ್ತುದು
ಸುದತಿಯರನಾಮಂಡಲಕೆ ಮೀಟಾದ ವಸ್ತುಗಳ

ಅಚ್ಚರಿ:
(೧) ಸುದತಿ – ೩, ೬ ಸಾಲಿನ ಮೊದಲ ಪದ
(೨) ಅದು ಇದರ – ೧, ೪ ಸಾಲಿನ ಮೊದಲ ಪದ, (ಅದು, ಇದು ಎಂದು ಹೇಳುವ ಪದಗಳು)

ಪದ್ಯ ೨೪: ದ್ರೌಪದಿಯ ಸ್ವಯಂವರವನ್ನು ಆಗಸದಿಂದ ಯಾರು ನೋಡುತ್ತಿದ್ದರು?

ಅರಸ ಕೇಳೈ ಮೇಲೆ ವಿದ್ಯಾ
ಧರ ಮಹೋರಗ ಯಕ್ಷರಾಕ್ಷಸ
ಗರುಡ ಕಿನ್ನರ ಸಿದ್ಧ ವಸುಗಂಧರ್ವ ಭೂತಗಣ
ವರಮರುದ್ಗಣ ರುದ್ರ ಮನು ಭಾ
ಸ್ಕರ ಸುಧಾಕರ ತಾರಕಾಗ್ರಹ
ಸುರಮುನಿಪ ದಿಕ್ಪಾಲತತಿ ನೆರೆದುದು ವಿಮಾನದಲಿ (ಆದಿ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಆ ದ್ರೌಪದಿಯ ಸ್ವಯಂವರ ಭೂಮಿಜನಗಳನ್ನು ಆಕರ್ಷಿಸಿದಂತೆ ಆಗಸದಲ್ಲಿ ದೇವತೆಗಳನ್ನು ಆಕರ್ಷಿಸಿತ್ತು. ಆಕಾಶದಲ್ಲಿ, ವಿದ್ಯಾಧರರು, ಹಾವುಗಳು, ಯಕ್ಷರು, ರಾಕ್ಷಸರು, ಗರುಡರು, ಕಿನ್ನರರು, ಸಿದ್ಧರು, ವಸುಗಳು, ಗಂಧರ್ವರು, ಭೂತಗಳು, ಮರುದ್ಗಣ, ರುದ್ರರು, ಮನುಗಳು, ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು, ದೇವರ್ಷಿಗಳು, ದಿಕ್ಪಾಲಕರು, ಎಲ್ಲರೂ ತಮ್ಮ ವಿಮಾನಗಳಲ್ಲಿ ಕುಳಿತು ನೋಡುತ್ತಿದ್ದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮೇಲೆ:ತುದಿ, ಅಗ್ರಭಾಗ; ವಿದ್ಯಾಧರ: ದೇವತೆಗಳ ಒಂದು ವರ್ಗ; ಮಹ: ದೊಡ್ಡ; ಉರಗ: ಹಾವು; ಯಕ್ಷ: ದೇವತೆಗಳ ಒಂದು ವರ್ಗ; ರಾಕ್ಷಸ: ರಕ್ಕಸ, ದನುಜ, ದೈತ್ಯ; ಗರುಡ: ವಿಷ್ಣುವಿನ ವಾಹನ; ಕಿನ್ನರ: ಕುದುರೆಯ ತಲೆ ಮನುಷ್ಯನ ಮುಖ ವಿರುವ ದೇವತೆ; ಸಿದ್ಧ: ಸಾಧಿಸಿದವನು, ದೇವತೆಗಳ ಒಂದು ವರ್ಗ; ವಸು: ದೇವತೆಗಳ ಒಂದು ವರ್ಗ;ಭೂತ: ಪಿಶಾಚಿ; ಗಣ: ಗುಂಪು; ಗಂಧರ್ವ: ದೇವಲೋಕದ ಸಂಗೀತಗಾರ; ಮರುದ್ಗಣ: ದೇವತೆಗಳ, ವಾಯುಗಳ ಸಮೂಹ; ರುದ್ರ: ಭಯಂಕರವಾದ, ಹನ್ನೊಂದು ಗಣದೇವತೆಗಳು; ಮನು: ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ; ಭಾಸ್ಕರ: ಸೂರ್ಯ; ಸುಧಾಕರ: ಚಂದ್ರ; ತಾರಕ: ತಾರೆ, ನಕ್ಷತ್ರ; ಗ್ರಹ: ಹಿಡಿಯುವುದು, ಹಿಡಿತ, ನವಗ್ರಹಗಳನ್ನು ಸೂಚಿಸುವ ಪದ; ಸುರ: ದೇವತೆಗಳು; ಸುರಮುನಿ: ದೇವರ್ಷಿಗಳು; ದಿಕ್ಕು: ದಿಶೆ, ಎಂಟು ಎಂಬ ಸಂದೇಶ; ಪಾಲಕ: ಅಧಿಪತಿ; ನೆರೆದು: ಸೇರು; ವಿಮಾನ: ಹಾರಾಡುವ ಯಂತ್ರ;

ಪದವಿಂಗಡಣೆ:
ಅರಸ +ಕೇಳೈ +ಮೇಲೆ +ವಿದ್ಯಾ
ಧರ +ಮಹೋರಗ+ ಯಕ್ಷ+ರಾಕ್ಷಸ
ಗರುಡ+ ಕಿನ್ನರ +ಸಿದ್ಧ +ವಸು+ಗಂಧರ್ವ +ಭೂತಗಣ
ವರಮರುದ್ಗಣ +ರುದ್ರ+ ಮನು +ಭಾ
ಸ್ಕರ+ ಸುಧಾಕರ+ ತಾರಕಾ+ಗ್ರಹ
ಸುರ+ಮುನಿಪ+ ದಿಕ್ಪಾಲತತಿ +ನೆರೆದುದು +ವಿಮಾನದಲಿ

ಅಚ್ಚರಿ:
(೧) ಎಲ್ಲಾ ರೀತಿಯ ದೇವತೆಗಳ ಹೆಸರನ್ನು ಉಲ್ಲೇಖಿಸಿರುವುದು
(೨) ವಿಮಾನದ ಕಲ್ಪನೆ, ಈ ಹಿಂದೆ ಪದ್ಯ ೧೭ ರಲ್ಲಿ ರೊಬೋಟ್ ಕಲ್ಪನೆ ಇತ್ತು (ಯಂತ್ರಮಯ ಪುತ್ಥಳಿ)