ಪದ್ಯ ೩೦: ಭೀಮ ದುರ್ಯೋಧನರ ಯುದ್ಧ ಕೌಶಲ್ಯ ಹೇಗಿತ್ತು?

ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಲವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ (ಗದಾ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅವರ ಜಾಣತನ ಕೆಲಸಕ್ಕೆ ಬಾರದೆ ಹೋಯಿತು. ಹೊಡೆತದ ತೀಕ್ಷ್ಣತೆಯು ನೋಡುತ್ತಿದ್ದಂತೆ ವ್ಯರ್ಥವಾಯಿತು. ಕಾಲಿನ ಗತಿಯ ವಿನ್ಯಾಸ ಕಣದಲ್ಲಿ ಧೂಳನ್ನೆಬ್ಬಿಸಿತೇ ಹೊರತು ವಿರೋಧಿಯನ್ನು ಬಾಗಿಸಲಿಲ್ಲ. ಶಕ್ತಿಯು ಕುಂದಿತು. ಆಯಾಸ ಹೆಚ್ಚಾಯಿತು. ಗದೆಗಳು ತಾಕಿ ಕಿಡಿಯೆದ್ದವು. ಅವರ ಕೌಶಲ್ಯ ಅತ್ಯುತ್ತತವಾಗಿತ್ತು.

ಅರ್ಥ:
ಜಾಣು: ಜಾಣತನ, ಬುದ್ಧಿವಂತ; ಜಗುಳು: ಜಾರು; ಹೊಯ್ಲು: ಹೊಡೆ; ಮೊನೆ: ಮುಖ; ಮುಂಗಾಣಿಕೆ: ಮುಂದಿನ ನೋಟ; ಲಟಕಟ: ಉದ್ರೇಕಗೊಳ್ಳು; ಬರಿ: ಕೇವಲ; ರೇಣು: ಧೂಳು, ಹುಡಿ; ಜಾಡ್ಯ: ಚಳಿ, ಸೋಮಾರಿತನ; ಪಡಪು: ಹೊಂದು, ಪಡೆ; ಪಯ: ಪಾದ; ಗತಿ: ಚಲನೆ, ವೇಗ; ತ್ರಾಣ: ಕಾಪು, ರಕ್ಷಣೆ, ಶಕ್ತಿ, ಬಲ; ತಳವೆಳ: ಬೆರಗು, ಆಶ್ಚರ್ಯ; ಶ್ರವ: ಧ್ವನಿ; ಬಿನ್ನಾಣ: ಕೌಶಲ್ಯ; ಮೇಲೆ: ಹೆಚ್ಚು; ಕುಶಲ: ಚಾತುರ್ಯ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾದು; ಗದೆ: ಮುದ್ಗರ; ಕಿಡಿ: ಬೆಂಕಿ; ತಿವಿ: ಚುಚ್ಚು;

ಪದವಿಂಗಡಣೆ:
ಜಾಣು +ಜಗುಳಿತು +ಹೊಯ್ಲ +ಮೊನೆ +ಮುಂ
ಗಾಣಿಕೆಗೆ+ ಲಟಕಟಿಸಿದುದು +ಬರಿ
ರೇಣುಜನನದ +ಜಾಡ್ಯವೇ+ ಪಡಪಾಯ್ತು+ ಪಯಗತಿಗೆ
ತ್ರಾಣ+ ತಲವೆಳಗಾಯ್ತು+ ಶ್ರವ+ ಬಿ
ನ್ನಾಣ +ಮೇಲಾಯಿತ್ತು+ ಕುಶಲದ
ಕೇಣದಲಿ +ಕಾದಿದರು +ಗದೆಗಳ +ಕಿಡಿಯ +ಕಿಡಿ +ತಿವಿಯೆ

ಅಚ್ಚರಿ:
(೧) ಧೂಳೇ ಹೆಚ್ಚಿತ್ತು ಎಂದು ಹೇಳಲು – ಬರಿ ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
(೨) ಕ ವರ್ಗದ ಪದಗಳ ಸಾಲು – ಕುಶಲದ ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ

ಪದ್ಯ ೬೭: ಶಲ್ಯನ ಅಂತ್ಯವು ಹೇಗಾಯಿತು?

ಇದಿರೊಳೆಚ್ಚನು ಶಲ್ಯನಂಬಿನ
ಹೊದೆ ಸವೆಯೆ ಹರಿತಪ್ಪ ಶಕ್ತಿಯ
ತುದಿಗೆ ಕಬಳಗ್ರಾಸವಾದುದಲೈ ವಿಚಿತ್ರವಲಾ
ಹೊದರುಗಿಡಿಗಳ ಕೇಸುರಿಯ ಹಾ
ರದಲಿ ಹರಿತಂದಹಿತ ದಳಪತಿ
ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ (ಶಲ್ಯ ಪರ್ವ, ೩ ಸಂಧಿ, ೬೭ ಪದ್ಯ)

ತಾತ್ಪರ್ಯ:
ಶಲ್ಯನು ತನ್ನಲ್ಲಿದ್ದ ಬಾಣಗಳ ಹೊರೆಗಳು ಸವೆಯುವವರೆಗೂ ಆ ಶಕ್ತಿಯ ಮೇಲೆ ಬಿಟ್ಟನು. ಶಕ್ತಿಯು ಆ ಬಾಣಗಳನ್ನು ನುಂಗಿತು. ಕ್ಡಿಗಳ ಪೊದೆಯ ನಡುವೆ ಕೆಂಪನೆಯ ಉರಿಯ ಹಾರವನ್ನು ತೊಟ್ಟ ಶಕ್ತಿಯು ಶಲ್ಯ್ನ ಎದೆಗೆ ಹೊಡೆದು, ಭೇದಿಸಿ ಬೆನ್ನಿನಿಂದ ಹೊರಟು ನಾಲ್ಕು ಮುಷ್ಟಿಗಳಷ್ಟು ದೂರದಲ್ಲಿ ನೆಲಕ್ಕೆ ನೆಟ್ಟಿತು.

ಅರ್ಥ:
ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಹೊದೆ: ಬಾಣಗಳನ್ನಿಡುವ ಕೋಶ; ಸವೆ: ಶಕ್ತಿಗುಂದು, ತೀರು; ಹರಿ: ಸಾಧ್ಯವಾಗು; ಶಕ್ತಿ: ಬಲ; ತುದಿ: ಕೊನೆ; ಕಬಳಗ್ರಾಸ: ತುತ್ತು ಆಹಾರ; ವಿಚಿತ್ರ: ಆಶ್ಚರ್ಯಕರವಾದುದು; ಹೊದರು: ಗುಂಪು, ಸಮೂಹ; ಕಿಡಿ: ಬೆಂಕಿ; ಕೇಸುರಿ: ಕೆಂಪು ಉರಿ; ಹಾರ: ಮಾಲೆ; ಅಹಿತ: ವೈರ; ದಳಪತಿ: ಸೇನಾಧಿಪತಿ; ಎದೆ: ಉರು; ಒದೆ: ನೂಕು; ನೆಲ: ಭೂಮಿ; ನಟ್ಟು: ಒಳಹೋಗು; ಮುಷ್ಟಿ: ಮುಚ್ಚಿದ ಅಂಗೈ;

ಪದವಿಂಗಡಣೆ:
ಇದಿರೊಳ್+ಎಚ್ಚನು +ಶಲ್ಯನ್+ಅಂಬಿನ
ಹೊದೆ +ಸವೆಯೆ +ಹರಿತಪ್ಪ+ ಶಕ್ತಿಯ
ತುದಿಗೆ +ಕಬಳಗ್ರಾಸವಾದುದಲೈ +ವಿಚಿತ್ರವಲಾ
ಹೊದರು+ಕಿಡಿಗಳ +ಕೇಸುರಿಯ +ಹಾ
ರದಲಿ +ಹರಿತಂದ್+ಅಹಿತ +ದಳಪತಿ
ಎದೆಯನ್+ಒದೆದುದು +ನೆಲಕೆ +ನಟ್ಟುದು +ನಾಲ್ಕು +ಮುಷ್ಟಿಯಲಿ

ಅಚ್ಚರಿ:
(೧) ಧರ್ಮಜನ ಬಾಣದ ತೀವ್ರತೆ: ಹೊದರುಗಿಡಿಗಳ ಕೇಸುರಿಯ ಹಾರದಲಿ ಹರಿತಂದಹಿತ ದಳಪತಿ ಯೆದೆಯನೊದೆದುದು

ಪದ್ಯ ೨೭: ರಾತ್ರಿಯ ಯುದ್ಧ ಹೇಗೆ ಕಂಡಿತು?

ಜಡಿವ ಖಡುಗದ ಕಿಡಿಗಳಲಿ ಬೇ
ಗಡೆಯನಾಂತುದು ಮಕುಟಬದ್ಧರ
ಮುಡಿಯ ರತ್ನ ಪ್ರಭೆಗಳಲಿ ಜರ್ಝರಿತ ತನುವಾಯ್ತು
ಗಡಣದಂಬಿನ ಮಸೆಯ ಬೆಳಗಿನೊ
ಳಡಸಿದಾಕ್ಷಣ ಮತ್ತೆ ನಿಮಿಷಕೆ
ಹೊಡಕರಿಸಿ ಹಬ್ಬಿದುದು ಮಬ್ಬಿನ ದಾಳಿ ದೆಸೆದೆಸೆಗೆ (ದ್ರೋಣ ಪರ್ವ, ೧೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಜಡಿದ ಖಡ್ಗಗಳ ಕಿಡಿಗಳು ಕತ್ತಲಿನಲ್ಲಿ ರಂಧ್ರವನ್ನು ಕೊರೆದವು. ರಾಜರ ಕಿರೀಟ ಪ್ರಭೆಗಳಿಂದ ಕತ್ತಲು ಜರ್ಝರಿತವಾಯಿತು. ಬಾಣಗಳ ತುದಿಯ ಕಿಡಿಗಳಿಂದ ಹೊರಟ ಬೆಳಕನ್ನು ಆ ನಿಮಿಷಕ್ಕೆ ಕತ್ತಲು ಆವರಿಸಿತು. ಕತ್ತಲಿನ ದಾಳಿ ದಿಕ್ಕು ದಿಕ್ಕಿನಲ್ಲೂ ಹಬ್ಬಿತು.

ಅರ್ಥ:
ಜಡಿ: ಗದರಿಸು, ಬೆದರಿಸು; ಖಡುಗ: ಕತ್ತಿ; ಕಿಡಿ: ಬೆಂಕಿ; ಬೇಗಡೆ: ಮಿಂಚುವ ಬಣ್ಣ; ಮಕುಟ: ಕಿರೀಟ; ಬದ್ಧ: ಕಟ್ಟಿದ, ಬಿಗಿದ; ಮುಡಿ: ಶಿರ; ರತ್ನ: ಬೆಲೆಬಾಳುವ ಹರಳು; ಪ್ರಭೆ: ಕಾಂತಿ; ಜರ್ಝರಿತ: ಭಗ್ನ; ತನು: ದೇಹ; ಗಡಣ: ಕೂಡಿಸುವಿಕೆ; ಅಂಬು: ಬಾಣ; ಮಸೆ: ಹರಿತವಾದುದು; ಬೆಳಗು: ದಿನ; ಅಡಸು: ಆಕ್ರಮಿಸು, ಮುತ್ತು; ಕ್ಷಣ: ಹೊತ್ತು; ನಿಮಿಷ: ಕಾಲ; ಹೊಡಕರಿಸು: ಕಾಣಿಸು; ಹಬ್ಬು: ಹರಡು; ಮಬ್ಬು: ನಸುಗತ್ತಲೆ, ಮಸುಕು; ದಾಳಿ: ಲಗ್ಗೆ, ಆಕ್ರಮಣ; ದೆಸೆ: ದಿಕ್ಕು;

ಪದವಿಂಗಡಣೆ:
ಜಡಿವ +ಖಡುಗದ +ಕಿಡಿಗಳಲಿ +ಬೇ
ಗಡೆಯನಾಂತುದು +ಮಕುಟ+ಬದ್ಧರ
ಮುಡಿಯ +ರತ್ನ +ಪ್ರಭೆಗಳಲಿ +ಜರ್ಝರಿತ +ತನುವಾಯ್ತು
ಗಡಣದ್+ಅಂಬಿನ +ಮಸೆಯ +ಬೆಳಗಿನೊಳ್
ಅಡಸಿದ್+ಆ+ ಕ್ಷಣ +ಮತ್ತೆ +ನಿಮಿಷಕೆ
ಹೊಡಕರಿಸಿ +ಹಬ್ಬಿದುದು +ಮಬ್ಬಿನ +ದಾಳಿ +ದೆಸೆದೆಸೆಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಜಡಿವ ಖಡುಗದ ಕಿಡಿಗಳಲಿ ಬೇಗಡೆಯನಾಂತುದು
(೨) ಕಿಡಿ, ಪ್ರಭೆ, ಬೆಳಗು – ಸಾಮ್ಯಾರ್ಥ ಪದ
(೩) ಕತ್ತಲನ್ನು ವಿವರಿಸುವ ಪರಿ – ನಿಮಿಷಕೆ ಹೊಡಕರಿಸಿ ಹಬ್ಬಿದುದು ಮಬ್ಬಿನ ದಾಳಿ ದೆಸೆದೆಸೆಗೆ

ಪದ್ಯ ೬: ಆಯುಧಗಳ ಪ್ರಕಾಶವು ಯಾವುದಕ್ಕೆ ಸಮವಾಯಿತು?

ಝಳಪದಲಿ ಬೊಬ್ಬಿಡುವಡಾಯುಧ
ಹೊಳವುಗಳ ಡೊಂಕಣೆಯ ತಳಪದ
ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ
ಅಲಗಿನುಬ್ಬರಗಿಡಿಯ ಹಬ್ಬುಗೆ
ಥಳಥಳಿಸಿ ಸೈಗರೆದುದೈ ಹೆ
ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ (ಭೀಷ್ಮ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ಝಳಪಿಸುವ ಕತ್ತಿಗಳ ಹೊಳಪು, ಈಟಿಯ ಪ್ರಕಾಶಗಳು ಬಳ್ಳಿ ಮಿಂಚುಗಳಂತೆ ಹಬ್ಬಿ, ಆಯುಧಗಳ ಮುಂಭಾಗದ ಪ್ರಕಾಶವು ನೂರಾರು ಸೂರ್ಯರ ಪ್ರಕಾಶಕ್ಕೆ ಸಮವಾಯಿತು. ಅದನ್ನು ಯಾವ ಹೆಸರಿನಿಂದ ಕರೆಯಲು ಸಾಧ್ಯ!

ಅರ್ಥ:
ಝಳ: ತಾಪ; ಬೊಬ್ಬಿಡು: ಅರಚು, ಗರ್ಜಿಸು; ಆಯುಧ: ಶಸ್ತ್ರ; ಹೊಳವು: ಕಾಂತಿ, ಪ್ರಕಾಶ; ಡೊಂಕಣಿ: ಈಟಿ; ತಳಪಥ: ಕಾಂತಿ; ಬೆಳಗು: ಹೊಳಪು, ಕಾಂತಿ; ಬಟ್ಟೆ: ದಾರಿ; ಧಾರೆ: ಹರಿಯುವಿಕೆ; ಬಳ್ಳಿ: ಲತೆ, ಹಂಬು; ಮಿಂಚು:ಹೊಳಪು, ಕಾಂತಿ; ಅಲಗು: ಆಯುಧಗಳ ಹರಿತವಾದ ಅಂಚು; ಉಬ್ಬರ: ಅತಿಶಯ; ಹಬ್ಬು: ಹರಡು; ಥಳಥಳಿಸು: ಹೊಳೆ; ಸೈ: ಸರಿಯಾದುದು; ಹೆಬ್ಬಲ: ದೊಡ್ಡದಾದ ಸೈನ್ಯ; ದಿವಾಕರ: ಸೂರ್ಯ; ಶತ: ನೂರು; ಹೆಸರು: ನಾಮ;

ಪದವಿಂಗಡಣೆ:
ಝಳಪದಲಿ +ಬೊಬ್ಬಿಡುವಡ್+ಆಯುಧ
ಹೊಳವುಗಳ +ಡೊಂಕಣೆಯ +ತಳಪದ
ಬೆಳಗುಗಳ+ ಬಟ್ಟೇರ +ಧಾರೆಯ +ಬಳ್ಳಿ+ಮಿಂಚುಗಳ
ಅಲಗಿನ್+ಉಬ್ಬರ+ಕಿಡಿಯ +ಹಬ್ಬುಗೆ
ಥಳಥಳಿಸಿ +ಸೈ+ಕರೆದುದೈ +ಹೆ
ಬ್ಬಲ +ದಿವಾಕರ+ಶತವನ್+ಎನೆ +ಹೆಸರಿಡುವನ್+ಆರೆಂದ

ಅಚ್ಚರಿ:
(೧) ಝಳಪ, ಹೊಳಪು, ಬೆಳಗು, ಕಿಡಿ, ಮಿಂಚು, ಥಳಥಳ – ಪ್ರಕಾಶವನ್ನು ವಿವರಿಸುವ ಪದಗಳು
(೨) ಉಪಮಾನದ ಪ್ರಯೋಗ – ಅಲಗಿನುಬ್ಬರಗಿಡಿಯ ಹಬ್ಬುಗೆ ಥಳಥಳಿಸಿ ಸೈಗರೆದುದೈ ಹೆಬ್ಬಲ ದಿವಾಕರಶತವ

ಪದ್ಯ ೨೫: ಭೀಮನು ಯಾರ ಮೇಲೆ ಕೋಪಗೊಂಡನು?

ಮನ್ನಣೆಗೆ ಹಿರಿಯಯ್ಯನೆಂದಾ
ನಿನ್ನು ಬೆಗೆವೆನೆ ಜವನಗಂಟಲ
ಮುನ್ನ ತಿರುಹುವೆನೆನುತ ಕಿಡಿಕಿಡಿಯೋದನಾ ಭೀಮ
ಇನ್ನೊದರಿ ಫಲವೇನು ಕುಡಿವೆನು
ಮುನ್ನಜಲವನು ಬಳಿಕ ನೋಡುವೆ
ನೆನ್ನವರ ಮಾರ್ಗವನೆನುತ ಮೊಗೆದನು ವಿಷೋದಕವ (ಅರಣ್ಯ ಪರ್ವ, ೨೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ದೊಡ್ಡಪ್ಪನೆಂದು ನಾನು ಯಮನನ್ನು ಇನ್ನು ಗೌರವಿಸುವುದಿಲ್ಲ. ಅವನ ಕತ್ತನ್ನು ತಿರುವಿ ಹಿಂಡುತ್ತೇನೆ, ಎಂದು ಭೀಮನು ಕಿಡಿಕಿಡಿಯಾಗಿ ಒದರಿ, ಬಳಿಕ ಸುಮ್ಮನೆ ಒದರಿದರೇನು ಬಂತು, ಮೊದಲು ನೀರನ್ನು ಕುಡಿದು, ಬಳಿಕ, ತಮ್ಮಂದಿರ ದಾರಿಯನ್ನು ನೋಡುತ್ತೇನೆ ಎಂದುಕೊಂಡು ಸರೋವರದ ವಿಷಜಲವನ್ನು ಬೊಗಸೆಯಲ್ಲಿ ತೆಗೆದುಕೊಂಡನು.

ಅರ್ಥ:
ಮನ್ನಣೆ: ಗೌರವ; ಹಿರಿ: ದೊಡ್ಡವ; ಅಯ್ಯ: ತಂದೆ; ಬಗೆ:ಆಲೋಚನೆ, ಯೋಚನೆ; ಜವ: ಯಮ; ಗಂಟಲು: ಕತ್ತು; ಮುನ್ನ: ಮೊದಲು; ತಿರುಹುವೆ: ತಿರುಗಿಸು; ಕಿಡಿ: ಬೆಂಕಿಯ ಜ್ವಾಲೆ, ಕೋಪ; ಒದರು: ಕೂಗು, ಗರ್ಜಿಸು; ಫಲ: ಪ್ರಯೋಜನ; ಕುಡಿ: ಪಾನಮಾದು; ಮುನ್ನ: ಮೊದಲು; ಜಲ: ನೀರು; ಬಳಿಕ: ನಂತರ; ನೋಡು: ವೀಕ್ಷಿಸು; ಮಾರ್ಗ: ದಾರಿ; ಮೊಗೆ: ತೋಡು, ತುಂಬಿಕೊಳ್ಳು; ವಿಷ: ಗರಳ; ಉದಕ: ನೀರು;

ಪದವಿಂಗಡಣೆ:
ಮನ್ನಣೆಗೆ+ ಹಿರಿ+ಅಯ್ಯನ್+ಎಂದಾ
ನಿನ್ನು+ ಬೆಗೆವೆನೆ +ಜವನ+ಗಂಟಲ
ಮುನ್ನ +ತಿರುಹುವೆನ್+ಎನುತ +ಕಿಡಿಕಿಡಿ+ಯೋದನಾ +ಭೀಮ
ಇನ್ನೊದರಿ+ ಫಲವೇನು +ಕುಡಿವೆನು
ಮುನ್ನ+ಜಲವನು +ಬಳಿಕ +ನೋಡುವೆನ್
ಎನ್ನವರ +ಮಾರ್ಗವನ್+ಎನುತ +ಮೊಗೆದನು +ವಿಷ+ಉದಕವ

ಅಚ್ಚರಿ:
(೧) ಉದಕ, ಜಲ – ಸಮನಾರ್ಥಕ ಪದ
(೨) ಹಿರಿಯಯ್ಯ, ಜವ – ಯಮನನ್ನು ಕರೆದ ಪರಿ