ಪದ್ಯ ೫: ಕೃಷ್ಣನು ಅರ್ಜುನನನ್ನು ಎಲ್ಲಿಗೆ ಕರೆದೊಯ್ದನು?

ರಚನೆ ಚೆಲುವಿದು ನಾಳಿನಾಹವ
ಖಚರ ಕಿಂಪುರುಷರಿಗೆ ಅಸದಳ
ವಚಲಬಲಗಾಂಡಿವಿಗೆ ಹರಿಯದು ಸುಪ್ತಿಯೊಳಗವನ
ಉಚಿತದಲಿ ಕೊಂಡೊಯ್ದು ರುದ್ರನ
ವಚನದನುವನು ತಿಳಿವೆನೆಂದಾ
ಶಚಿಯಗಂಡನ ಮಗನನೀಶನ ಪದವ ಕಾಣಿಸಿದ (ದ್ರೋಣ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಯೋಚಿಸುತ್ತಾ, ನಾಳಿನ ವ್ಯೂಹರಚನೆಯನನ್ನು ಭೇದಿಸಲು ದೇವತೆಗಳಿಗೂ ಕಿಂಪುರುಷರಿಗೂ ಅಸಾಧ್ಯ. ಅರ್ಜುನನು ಅಸಮಾನ ಬಲಶಾಲಿಯಾದರೂ ಅವನಿಗೆ ಗೆಲುವು ಅಸಾಧ್ಯ. ಅರ್ಜುನನ ಜೀವವನ್ನು ಆಕರ್ಷಿಸಿ ರುದ್ರನ ಬಳಿಗೆ ಹೋಗಿ ಅವನೇನು ಹೆಳುವನೋ ಕೇಳಿ ತಿಳಿದುಕೊಳ್ಳೋಣ ಎಂದುಕೊಂಡು ಶ್ರೀಕೃಷ್ಣನು ಅರ್ಜುನನ ಜೀವದೊಂದಿಗೆ ಹೋಗಿ ಶಿವನ ಪಾದದರ್ಶನವನ್ನು ಮಾಡಿಸಿದನು.

ಅರ್ಥ:
ರಚನೆ: ನಿರ್ಮಿಸು; ಚೆಲುವು: ಅಂದ; ನಾಳೆ: ಮರುದಿನ; ಆಹವ: ಯುದ್ಧ; ಖಚರ: ಗಂಧರ್ವ; ಅಸದಳ: ಅಸಾಧ್ಯ; ಅಚಲ: ಸ್ಥಿರವಾದ; ಬಲ: ಶಕ್ತಿ; ಗಾಂಡಿವಿ: ಅರ್ಜುನ; ಹರಿ: ಕತ್ತರಿಸು; ಸುಪ್ತಿ: ನಿದ್ರೆ, ನಿದ್ರಾವಸ್ಥೆ; ಉಚಿತ: ಸರಿಯಾದ; ಕೋಂಡೊಯ್ದು: ತೆರಳು; ರುದ್ರ: ಶಿವ; ವಚನ: ಮಾತು; ಅನುವು: ರೀತಿ, ಅವಕಾಶ; ತಿಳಿ: ಅರ್ಥೈಸು; ಶಚಿ: ಇಂದ್ರನ ಹೆಂಡತಿ; ಗಂಡ: ಯಜಮಾನ; ಮಗ: ಸುತ; ಈಶ: ಶಂಕರ; ಪದ: ಚರಣ; ಕಾಣಿಸು: ತೋರು;

ಪದವಿಂಗಡಣೆ:
ರಚನೆ +ಚೆಲುವಿದು +ನಾಳಿನ+ಆಹವ
ಖಚರ +ಕಿಂಪುರುಷರಿಗೆ +ಅಸದಳವ್
ಅಚಲಬಲ+ಗಾಂಡಿವಿಗೆ +ಹರಿಯದು +ಸುಪ್ತಿಯೊಳಗ್+ಅವನ
ಉಚಿತದಲಿ +ಕೊಂಡೊಯ್ದು +ರುದ್ರನ
ವಚನದ್+ಅನುವನು +ತಿಳಿವೆನೆಂದ್+ಆ
ಶಚಿಯಗಂಡನ +ಮಗನನ್+ಈಶನ +ಪದವ +ಕಾಣಿಸಿದ

ಅಚ್ಚರಿ:
(೧) ಅರ್ಜುನನನ್ನು ಶಚಿಯಗಂಡನ ಮಗ ಎಂದು ಕರೆದಿರುವುದು

ಪದ್ಯ ೨೩: ಗಂಧರ್ವರು ಕರ್ಣನ ಜೊತೆ ಹೇಗೆ ಯುದ್ಧ ಮಾಡಿದರು?

ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಹೆಡಹಿದವು ಕಿಂಪುರುಷ ಗುಹ್ಯಕ ಯಕ್ಷರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಸಿ ತಲೆವರಿಗೆಯಲಿ ಕರ್ಣನ
ಬಿಡು ಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ (ಅರಣ್ಯ ಪರ್ವ, ೨೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಧರ್ವನ ಬಾಣಗಳನ್ನು ಕಡಿದ ಕರ್ಣನ ಬಾಣಗಳು ಗಂಧರ್ವನ ಪಡೆಯಲ್ಲಿದ್ದ ಕಿಂಪುರುಷ, ಗುಹ್ಯಕ, ರಾಕ್ಷಸರನ್ನು ಸಂಹರಿಸಿದವು. ಆದರೆ ಗಂಧರ್ವ ಸೈನ್ಯವು ಕರ್ಣನ ಬಾಣಗಳಿಗೆ ಹೆದರದೆ ತಲೆಗಳನ್ನೇ ಗುರಾಣಿಯಾಗಿ ಒಡ್ಡಿ ಯುದ್ಧ ಮಾಡಿದರು.

ಅರ್ಥ:
ಕಡಿ: ಸೀಳು; ಗಂಧರ್ವ: ಖಚರ, ದೇವತೆಗಳ ವರ್ಗ; ಶರ: ಬಾಣ; ಔಘ: ಗುಂಪು, ಸಮೂಹ; ಅಡಸು: ಬಿಗಿಯಾಗಿ ಒತ್ತು, ತುರುಕು; ನೆಟ್ಟು: ಹೂಳು, ನಿಲ್ಲಿಸು; ಕೆಡಹು: ಹಾಳುಮಾಡು; ಹೊಡಕರಿಸು: ಕಾಣಿಸು, ಬೇಗಬೆರೆಸು; ತಲೆ: ಶಿರ; ಹೊದರು: ತೊಡಕು, ತೊಂದರೆ; ಬಲ: ಶಕ್ತಿ, ಸೈನ್ಯ; ಸಂಗಡ: ಜೊತೆ; ಬಿಡು: ತೊರೆ; ಸರಳ: ಬಾಣ; ಬೀದಿ: ಮಾರ್ಗ; ಬೆದರು: ಹೆದರು, ಅಂಜಿಕೆ; ನೂಕು: ತಳ್ಳು; ತಳ: ಸಮತಟ್ಟಾದ ಪ್ರದೇಶ;

ಪದವಿಂಗಡಣೆ:
ಕಡಿದು +ಗಂಧರ್ವನ +ಶರೌಘವನ್
ಅಡಸಿ +ನೆಟ್ಟವು +ಕರ್ಣ+ಶರ+ ಸೈ
ಹೆಡಹಿದವು +ಕಿಂಪುರುಷ +ಗುಹ್ಯಕ +ಯಕ್ಷ+ರಾಕ್ಷಸರ
ಹೊಡಕರಿಸಿ+ ಹೊದರೆದ್ದು+ ಬಲ+ ಸಂ
ಗಡಸಿ+ ತಲೆವರಿಗೆಯಲಿ +ಕರ್ಣನ
ಬಿಡು+ ಸರಳ+ ಬೀದಿಯಲಿ +ಬೆದರದೆ +ನೂಕಿ+ತಳವಿಯಲಿ

ಅಚ್ಚರಿ:
(೧) ಗಂಧರ್ವರ ಸೈನ್ಯದಲ್ಲಿದ್ದ ಪಂಗಡಗಳು – ಕಿಂಪುರುಷ, ಗುಹ್ಯಕ, ಯಕ್ಷ, ರಾಕ್ಷಸ

ಪದ್ಯ ೪೮: ಕಿಂಪುರುಷಕ್ಕೆ ಪಾಲಕರಾರು?

ರಾಮ ಕಿಂಪುರುಷಕ್ಕೆ ಭಾರತ
ಸೀಮೆಯಲಿ ನಾರಾಯಣನು ನರ
ನಾಮಧಾರಕ ಹನುಮ ವಸುಧಾದೇವಿ ನಾರದನು
ಆ ಮನು ಜಗಚ್ಚಕ್ಷು ಲಕ್ಷ್ಮಿಯು
ಪ್ರೇಮದಿಂ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು (ಅರಣ್ಯ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಶ್ರೀರಾಮನು ಕಿಂಪುರುಷ ವರ್ಷಕ್ಕೆ ಪಾಲಕ, ಭರವರ್ಷಕ್ಕೆ ನರ, ನಾರಾಯನ, ಹನುಮಂತ, ಭೂದೇವಿ, ನಾರದ, ಮನು, ಸೂರ್ಯ, ಲಕ್ಷ್ಮೀದೇವಿ, ಪ್ರಹ್ಲಾದ, ಭದ್ರಶ್ರವ, ಸದಾಶಿವ ಇವರು ಪಾಲಕರು.

ಅರ್ಥ:
ಸೀಮೆ: ಎಲ್ಲೆ, ಗಡಿ; ವಸುಧ: ಭೂಮಿ; ಚಕ್ಷು: ಕಣ್ಣು; ನಿಸ್ಸೀಮ: ಎಲ್ಲೆಯಿಲ್ಲದುದು; ಪ್ರೇಮ: ಒಲವು;

ಪದವಿಂಗಡಣೆ:
ರಾಮ+ ಕಿಂಪುರುಷಕ್ಕೆ +ಭಾರತ
ಸೀಮೆಯಲಿ +ನಾರಾಯಣನು +ನರ
ನಾಮಧಾರಕ+ ಹನುಮ +ವಸುಧಾದೇವಿ+ ನಾರದನು
ಆ +ಮನು+ ಜಗ+ಚಕ್ಷು +ಲಕ್ಷ್ಮಿಯು
ಪ್ರೇಮದಿಂ +ಪ್ರಹ್ಲಾದ +ನಿಜ +ನಿ
ಸ್ಸೀಮ +ಭದ್ರಶ್ರವ +ಸದಾಶಿವನಿವರು +ಪಾಲಕರು

ಅಚ್ಚರಿ:
(೧) ಸೂರ್ಯನನ್ನು ಜಗಚ್ಚಕ್ಷು ಎಂದು ಕರೆದಿರುವುದು

ಪದ್ಯ ೪೯: ಶಿಶುಪಾಲನು ಭೀಷ್ಮರನ್ನು ಮತ್ತೆ ಹೇಗೆ ಜರೆದನು?

ದ್ರುಮನ ಕಿಂಪುರುಷಾಧಿಪನ ವಿ
ಕ್ರಮವ ಬಣ್ಣಿಸಲಾಗದೇ ಭೂ
ರಮಣರಿದೆಲಾ ಮಾಳವಾಂಗ ಕಳಿಂಗ ಕೋಸಲರು
ವಿಮಳರಿನಿಬರನುಳಿದು ಕೃಷ್ಣ
ಭ್ರಮೆ ಹಿಡಿದುದೈ ನಿನಗೆ ನಿನ್ನ
ಕ್ರಮದ ಭಣಿತೆಯ ಕರ್ಮ ಬೀಜವನರಿಯೆ ನಾನೆಂದ (ಸಭಾ ಪರ್ವ, ೧೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ದ್ರುಮನ ಪರಾಕ್ರಮವನ್ನೇಕೆ ಬಣ್ಣಿಸಬಾರದಾಗಿತ್ತು? ಮಾಳವ, ಅಂಗ, ಕಳಿಂಗ, ಕೋಸಲ ದೇಶದ ಶುದ್ಧರಾದ ರಾಜರನ್ನು ಬಿಟ್ಟು ನಿನಗೆ ಕೃಷ್ಣನ ಭ್ರಮೆ ಹಿಡಿಯಿತು. ನೀನು ಇಂತಹ ಅಕ್ರಮವಾದ ಮಾತುಗಳನ್ನಡಲು ನಿನ್ನ ಯಾವ ಕರ್ಮವು ಪ್ರೇರಕವಾಯಿತೋ ನಾನರಿಯೆ ಎಂದು ಶಿಹುಪಾಲನು ಭೀಷ್ಮರನ್ನು ಜರೆದನು.

ಅರ್ಥ:
ಅಧಿಪ: ಒಡೆಯ; ವಿಕ್ರಮ: ಶೂರ, ಸಾಹಸ; ಬಣ್ಣಿಸು: ವಿವರಿಸು; ಭೂರಮಣ: ರಾಜ; ವಿಮಳ: ನಿರ್ಮಲ; ಇನಿಬರು: ಇಷ್ಟುಜನ; ಉಳಿದು: ಹೊರತಾಗು; ಭ್ರಮೆ: ಭ್ರಾಂತಿ, ಹುಚ್ಚು; ಹಿಡಿ: ಬಂಧನ, ಸೆರೆ; ಅಕ್ರಮ: ಸರಿಯಲ್ಲದ; ಭಣಿತೆ: ಮಾತು, ಹೇಳಿಕೆ; ವಕ್ರೋಕ್ತಿ; ಕರ್ಮ: ಕಾರ್ಯದ ಫಲ, ಧರ್ಮ; ಬೀಜ:ಮೂಲ; ಅರಿ: ತಿಳಿ;

ಪದವಿಂಗಡಣೆ:
ದ್ರುಮನ +ಕಿಂಪುರುಷ+ಅಧಿಪನ +ವಿ
ಕ್ರಮವ +ಬಣ್ಣಿಸಲಾಗದೇ +ಭೂ
ರಮಣರಿದೆಲಾ +ಮಾಳವಾಂಗ +ಕಳಿಂಗ +ಕೋಸಲರು
ವಿಮಳರ್+ಇನಿಬರನ್+ಉಳಿದು +ಕೃಷ್ಣ
ಭ್ರಮೆ +ಹಿಡಿದುದೈ +ನಿನಗೆ +ನಿನ್
ಅಕ್ರಮದ +ಭಣಿತೆಯ +ಕರ್ಮ +ಬೀಜವನರಿಯೆ+ ನಾನೆಂದ

ಅಚ್ಚರಿ:
(೧) ವಿಕ್ರಮ, ಅಕ್ರಮ – ಪ್ರಾಸ ಪದ
(೨) ಅಧಿಪ, ಭೂರಮಣ – ಸಾಮ್ಯಾರ್ಥ ಪದ

ಪದ್ಯ ೨೮: ಕೃಷ್ಣನ ರೋಮರೋಮಗಳಲ್ಲಿ ಯಾರು ಕಂಡರು?

ಸುರರು ಖಚರರು ಕಿನ್ನರರು ಕಿಂ
ಪುರುಷರನುಪಮ ಸಿದ್ಧ ವಿದ್ಯಾ
ಧರರು ವಸುಗಳು ಮನುಗಳಾದಿತ್ಯರು ಭುಜಂಗಮಯ
ಗರುಡ ಗಂಧರ್ವಾಶ್ವಿನಿ ದೇ
ವರುಗಳಖಿಳಾಪ್ಸರಿಯರೆಸೆದರು
ಪರಮ ಪುರುಷನ ರೋಮರೋಮದ ಕುಳಿಯ ಚೌಕದೊಳು (ಉದ್ಯೋಗ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ದೇವತೆಗಳು, ಕಿನ್ನರರು, ಕಿಂಪುರುಷರು, ಸಿದ್ಧರು, ವಿದ್ಯಾಧರರು, ವಸುಗಳು, ಮನುಗಳು, ಆದಿತ್ಯರು, ಉರಗರು, ಗರುಡ, ಗಂಧರ್ವರು, ಅಶ್ವಿನೀ ದೇವತೆಗಳು, ಅಪ್ಸರೆಯರು, ಇವರೆಲ್ಲರೂ ಕೃಷ್ಣನ ಆ ವಿಶ್ವರೂಪದ ರೋಮರೋಮಗಳಲ್ಲಿ ತೋರಿದರು.

ಅರ್ಥ:
ಸುರರು: ದೇವತೆಗಳು; ಖಚರ: ಗಂಧರ್ವ; ಕಿನ್ನರ:ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ; ಸಿದ್ಧ: ಸಾಧಿಸಿದವನು; ವಿದ್ಯಾಧರ: ದೇವತೆಗಳ ವರ್ಗ; ವಸು: ದೇವತೆಗಳ ಒಂದು ವರ್ಗ, ೮ರ ಸಂಕೇತ;
ಮನು: ಮನುಷ್ಯ ಕುಲದ ಮೂಲಪುರುಷ, ೧೪ರ ಸಂಕೇತ; ಆದಿತ್ಯ: ಸೂರ್ಯ; ಭುಜಂಗ: ಸರ್ಪ; ಗರುಡ: ವಿಷ್ಣುವಿನ ವಾಹನ, ಪಕ್ಷಿ, ಖಗ; ಗಂಧರ: ಗಂಧರ್ವರು; ಅಶ್ವಿನಿ: ದೇವತೆಗಳ ವರ್ಗ; ಅಖಿಳ: ಎಲ್ಲಾ; ಅಪ್ಸರೆ: ದೇವಕನ್ಯೆ; ಎಸೆ: ತೋರು; ಪರಮ: ಶ್ರೇಷ್ಠ; ಪುರುಷ: ಮನುಷ್ಯ; ರೋಮ: ಕೂದಲು; ಕುಳಿ:ಹಳ್ಳ; ಚೌಕ: ಕ್ರಮಬದ್ಧವಾದ, ಮೇರೆ; ಅನುಪಮ:ಉತ್ಕೃಷ್ಟವಾದುದು;

ಪದವಿಂಗಡಣೆ:
ಸುರರು +ಖಚರರು +ಕಿನ್ನರರು+ ಕಿಂ
ಪುರುಷರ್+ಅನುಪಮ +ಸಿದ್ಧ +ವಿದ್ಯಾ
ಧರರು +ವಸುಗಳು +ಮನುಗಳ್+ಆದಿತ್ಯರು +ಭುಜಂಗಮಯ
ಗರುಡ+ ಗಂಧರ್ವ+ಅಶ್ವಿನಿ+ ದೇ
ವರುಗಳ್+ಅಖಿಳ+ಅಪ್ಸರಿಯರ್+ಎಸೆದರು
ಪರಮ +ಪುರುಷನ +ರೋಮರೋಮದ +ಕುಳಿಯ +ಚೌಕದೊಳು

ಅಚ್ಚರಿ:
(೧) ದೇವತೆಗಳ ವರ್ಗಗಳ ವಿವರ – ಸುರ, ಖಚರ, ಕಿನ್ನರ,ಕಿಂಪುರುಷ, ಸಿದ್ಧ, ವಿದ್ಯಾಧರ, ವಸು, ಮನು, ಆದಿತ್ಯ, ಭುಜಂಗ, ಗರುಡ, ಗಂಧರ್ವ, ಅಶ್ವಿನಿ ದೇವರು, ಅಪ್ಸರೆ

ಪದ್ಯ ೬೬:ಅರ್ಜುನನ ಸೈನ್ಯವು ದಕ್ಷಿಣಕ್ಕೆ ಬರುವಾಗ ಯಾವ ಖಂಡಗಳನ್ನು ದಾಟಿತು?

ತಿರುಗಿತಲ್ಲಿಂದಿತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ
ಭರದಿನೈದುತ ಹರಿವರುಷಕಿಂ
ಪುರುಷವನು ದಾಟುತ ಹಿಮಾನ್ವಿತ
ಗಿರಿಯ ನೇರಿದುದಿಳಿದು ಬಂದುದು ತೆಂಕಮುಖವಾಗಿ (ಸಭಾ ಪರ್ವ, ೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ಅರ್ಜುನನ ಸೈನ್ಯವು ಉತ್ತರ ಕುರುಗಳಿಹ ಸಂಸ್ಥಾನದಿಂದ ಹಿಂದಿರುಗಿ ಹಿರಣ್ಮಯ, ರಮ್ಯಕ, ಇಳಾವೃತ, ಹರಿವರ್ಷ, ಕಿಂಪುರುಷ ಖಂಡಗಳನ್ನು ದಾಟಿ ದಕ್ಷಿಣಮುಖವಾಗಿ ಬಂದಿತು.

ಅರ್ಥ:
ತಿರುಗು: ದಿಕ್ಕನ್ನು ಬದಲಾಯಿಸು, ಸಂಚರಿಸು; ಪಾಳೆ: ಸೈನ್ಯ; ಮುರಿ: ಬಾಗಿಸು; ಆಕರಿಸು: ಹಿಡಿ; ಭರ: ಬೇಗ, ವೇಗ; ಐದು: ಹೋಗಿಸೇರು; ದಾಟು: ಹಾದುಹೋಗು; ಗಿರಿ: ಬೆಟ್ಟ; ಏರು: ಹತ್ತು; ಇಳಿ: ಕೆಳಕ್ಕೆ ಬರುವುದು; ಬೆಂಕ: ತೆಂಕಣ: ದಕ್ಷಿಣ ದಿಕ್ಕು;

ಪದವಿಂಗಡಣೆ:
ತಿರುಗಿತ್+ಅಲ್ಲಿಂದ್+ಇತ್ತ +ಪಾಳೆಯ
ಮುರಿದು+ ಬಿಟ್ಟು+ ಹಿರಣ್ಮಯವನ್+
ಆಕರಿಸಿ+ ರಮ್ಯಕದಿಂ+ಇಳಾವೃತದಿಂದ+ ದಕ್ಷಿಣಕೆ
ಭರದಿನ್+ಐದುತ +ಹರಿವರುಷ+ಕಿಂ
ಪುರುಷವನು +ದಾಟುತ +ಹಿಮಾನ್ವಿತ
ಗಿರಿಯನ್ + ಏರಿದುದ್+ಇಳಿದು+ ಬಂದುದು +ತೆಂಕಮುಖವಾಗಿ

ಅಚ್ಚರಿ:
(೧) ದಕ್ಷಿಣ, ತೆಂಕಣ – ಸಮನಾರ್ಥಕ ಪದ, ೩, ೬ ಸಾಲಿನ ಕೊನೆ ಪದ
(೨) ಏರಿದು, ಇಳಿದು, ಬಂದುದು – ಪ್ರಾಸ ಪದಗಳ ಪ್ರಯೋಗ, ೬ ಸಾಲು

ಪದ್ಯ ೩೧: ಹಿಮಾಲಯದ ಶಿಖರವನ್ನು ದಾಟಿ ಸೈನ್ಯವು ಎಲ್ಲಿ ತಂಗಿತು?

ಗಿರಿಯ ಕೋಣೆಯ ಕುಹರ ಗುಹೆಗಳ
ಗರುವರುಂಟೆಂದಾ ಪುಳಿಂದರ
ನೊರಸಿ ಕಾಣಿಸಿಕೊಂಡು ಕೊಂಡನು ಸಕಲ ವಸ್ತುಗಳ
ಗಿರಿಯನಿಳಿದುದು ನಡೆದು ಬಲಕಿಂ
ಪುರುಷಖಂಡದ ಬಹಳ ನದಿಗಳ
ಲೆರಡು ತಡಿಯಲಿ ತಳಿತು ಬಿಟ್ಟುದು ವನವನಂಗಳಲಿ (ಸಭಾ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಹಿಮಾಲಯದ ಗುಹೆಗಳು, ಮೂಲೆಗಳಲ್ಲಿದ್ದ ಪುಳಿಂದರನ್ನು ಗೆದ್ದು, ಅವರ ಸಮಸ್ತ ವಸ್ತುಗಳನ್ನು ತೆಗೆದುಕೊಂಡನು. ಪರ್ವತವನ್ನಿಳಿದು ಕಿಂಪುರುಷ ಖಂಡಕ್ಕೆ ಬಂದು, ಅಲ್ಲಿನ ಅನೇಕ ನದಿಗಳ ತಡಿಯಲ್ಲಿದ್ದ ವನಗಳಲ್ಲಿ ಸೈನ್ಯವು ಬೀಡು ಬಿಟ್ಟಿತು.

ಅರ್ಥ:
ಗಿರಿ: ಬೆಟ್ಟ; ಕೋಣೆ: ಮೂಲೆ; ಕುಹರ:ಗವಿ, ರಂಧ್ರ; ಗುಹೆ: ಗವಿ; ಗರುವ: ಶೂರ, ಬಲಶಾಲಿ; ಒರಸು: ನಾಶಮಾದು; ಕೊಂಡು: ತೆಗೆದುಕೊ; ಸಕಲ: ಸರ್ವ; ವಸ್ತು: ಸಾಮಗ್ರಿ; ಇಳಿದು: ಕೆಳಕ್ಕೆ ಬಂದು; ತಡಿ: ದಡ; ತಳಿ: ಸಮೂಹ; ವನ: ಕಾಡು;

ಪದವಿಂಗಡಣೆ:
ಗಿರಿಯ+ ಕೋಣೆಯ +ಕುಹರ +ಗುಹೆಗಳ
ಗರುವರುಂಟೆಂದಾ+ ಪುಳಿಂದರನ್
ಒರಸಿ +ಕಾಣಿಸಿಕೊಂಡು +ಕೊಂಡನು +ಸಕಲ +ವಸ್ತುಗಳ
ಗಿರಿಯನಿಳಿದುದು+ ನಡೆದು +ಬಲಕಿಂ
ಪುರುಷ+ಖಂಡದ +ಬಹಳ +ನದಿಗಳಲ್
ಎರಡು+ ತಡಿಯಲಿ +ತಳಿತು +ಬಿಟ್ಟುದು +ವನವನಂಗಳಲಿ

ಅಚ್ಚರಿ:
(೧) ಗಿರಿ – ೧, ೪ ಸಾಲಿನ ಮೊದಲನೆ ಪದ
(೨) ಗ, ಕ – ಪರ್ಯಾಯ ಪದಗಳ ಮೊದಲನೆ ಅಕ್ಷರ
(೩) ಕೊಂಡು ಕೊಂಡನು – ಪದಗಳ ಬಳಕೆ