ಪದ್ಯ ೮: ಭೀಮನು ದುರ್ಯೋಧನನನ್ನು ಹೇಗೆ ಹಂಗಿಸಿದನು?

ಊರ ಬೇಡಿದಡೈದ ನಾವೆರ
ಡೂರುಗಳನೇ ಕೊಂಡೆವೈ ನಿಜ
ಧಾರುಣಿಯ ಕೊಡೆನೆಂದಲೈ ಸೂಚ್ಯಾಗ್ರಸಮ್ಮಿತವ
ನಾರಿ ಋತುಮತಿಯೆಂದಡೆಯು ಸುಲಿ
ಸೀರೆಗಳನೆಂಬಗ್ಗಳಿಕೆ ಕಾ
ಸಾರದಲಿ ಕರಗಿತೆ ಸುಯೋಧನ ಎಂದನಾ ಭೀಮ (ಗದಾ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮನು ಮಾತನಾಡುತ್ತಾ, ಏನೈ ದುರ್ಯೋಧನ, ನಾವು ಐದು ಊರುಗಳನ್ನು ನಿನ್ನಲ್ಲಿ ಬೇಡಿದೆವು, ಎರಡು ಊರು (ತೊಡೆ) ಗಳನ್ನೇ ತೆಗೆದುಕೊಂಡೆವು. ನಮ್ಮ ಭೂಮಿಯನ್ನು ಮೊದಲೇ ಒಪ್ಪಿಕೊಂಡಂತೆ ನೀಡು ಎಂದು ಕೇಳಿದರೆ, ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡುವುದಿಲ್ಲ ಎಂದೆಯಲ್ಲವೇ? ತಾನು ರಜಸ್ವಲೆಯೆಂದು ದ್ರೌಪದಿ ಹೇಳಿದರೂ ಸೀರೆಯನ್ನು ಸೆಳೆ ಎಂದು ಮಾಡಿದ ಅಪ್ಪಣೆ ಸರೋವರದ ನೀರಿನಲ್ಲಿ ಕರಗಿ ಹೋಯಿತೇ? ಎಂದು ಹಂಗಿಸಿದನು.

ಅರ್ಥ:
ಊರ: ಪಟ್ಟಣ, ಊರು; ಬೇಡು: ಕೇಳು; ಊರು: ತೊಡೆ; ಕೊಂಡು: ಪಡೆ; ನಿಜ: ತನ್ನ, ದಿಟ; ಧಾರುಣಿ: ಭೂಮಿ; ಕೊಡೆ: ನೀಡದಿರುವ ಸ್ಥಿತಿ; ಸೂಚ್ಯ: ಸೂಚಿ; ಅಗ್ರ: ತುದಿ; ಸೂಚ್ಯಾಗ್ರಸಮ್ಮಿತ: ಸೂಜಿಯ ಮೊನೆಯಷ್ಟು; ನಾರಿ: ಹೆಣ್ಣು; ಋತುಮತಿ: ಸ್ತ್ರೀಯರ – ಮುಟ್ಟು, ರಜಸ್ಸು; ಸುಲಿ: ಕಳಚು, ತೆಗೆ; ಸೀರೆ: ಬಟ್ಟೆ; ಅಗ್ಗಳಿಕೆ: ಹೊಗಳಿಕೆ, ಶ್ರೇಷ್ಠತೆ; ಕಾಸಾರ: ಸರೋವರ; ಕರಗು: ಕಡಿಮೆಯಾಗು, ನೀರಾಗಿಸು;

ಪದವಿಂಗಡಣೆ:
ಊರ +ಬೇಡಿದಡ್+ಐದ+ ನಾವ್+ಎರಡ್
ಊರುಗಳನೇ +ಕೊಂಡೆವೈ +ನಿಜ
ಧಾರುಣಿಯ +ಕೊಡೆನೆಂದಲೈ +ಸೂಚ್ಯಾಗ್ರ+ಸಮ್ಮಿತವ
ನಾರಿ +ಋತುಮತಿಯೆಂದಡೆಯು +ಸುಲಿ
ಸೀರೆಗಳನೆಂಬ್+ಅಗ್ಗಳಿಕೆ +ಕಾ
ಸಾರದಲಿ +ಕರಗಿತೆ +ಸುಯೋಧನ +ಎಂದನಾ +ಭೀಮ

ಅಚ್ಚರಿ:
(೧)ಊರ, ಊರು ಪದಗಳ ಬಳಕೆ
(೨) ಹಂಗಿಸುವ ಪರಿ – ಸುಲಿಸೀರೆಗಳನೆಂಬಗ್ಗಳಿಕೆ ಕಾಸಾರದಲಿ ಕರಗಿತೆ

ಪದ್ಯ ೨೩: ಕಾಡು ಏಕೆ ಸುಗಂಧಮಯವಾಗಿತ್ತು?

ತಾರಕೆಗಳುಳಿದಂಬರದ ವಿ
ಸ್ತಾರವೋ ಗತಹಂಸಕುಲ ಕಾ
ಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ
ನಾರಿಯದ ದಳ ನೂಕಿದರೆ ತನು
ಸೌರಭದ ದಳ ತೆಗೆಯದಾ ಕಾಂ
ತಾರದೊಳಗೇನೆಂಬೆನಾ ಸೌಗಂಧ ಬಂಧುರವ (ಅರಣ್ಯ ಪರ್ವ, ೧೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆ ತರುಣಿಯರು ಕಾಡನ್ನು ತೊರೆದು ದುರ್ಯೋಧನನ ಜಲಕ್ರೀಡೆಗೆ ತೆರಳಲು, ತಾರೆಗಳು ಹೋದ ಆಗಸವೋ, ಹಂಸಗಳಿಲ್ಲದ ಸರೋವರವೋ ಎಂಬಂತೆ ತಪೋವನತು ನಿಸ್ಸಾರವಾಯಿತು. ಆ ಗಣಿಕೆಯರ ಗುಂಪು ಕಾಡನ್ನು ಬಿಟ್ಟುಹೋದರೂ ಅವರ ದೇಹಗಳ ಸುಗಂಧವು ಆ ಕಾಡಿನಲ್ಲಿ ಉಳಿಯಿತು.

ಅರ್ಥ:
ತಾರಕೆ: ನಕ್ಷತ್ರ; ಉಳಿದ: ಮಿಕ್ಕ; ಅಂಬರ: ಆಗಸ; ವಿಸ್ತಾರ: ಹರಹು, ಗತ: ತೆರಳು; ಹಂಸ: ಮರಾಲ; ಕಾಸಾರ: ಸರೋವರ; ನಿಸ್ಸಾರ: ಸಾರವಿಲ್ಲದುದು, ನೀರಸವಾದುದು; ನಿರ್ಮಳ: ಸ್ವಚ್ಛ; ತಪೋವನ: ತಪಸ್ಸು ಮಾಡುವ ಕಾಡು; ನಾರಿ: ಹೆಣ್ಣು; ದಳ: ಗುಂಪು; ನೂಕು: ತಳ್ಳು; ತನು: ದೇಹ; ಸೌರಭ: ಸುಗಂಧ; ತೆಗೆ: ಈಚೆಗೆ ತರು; ಕಾಂತಾರ: ಅಡವಿ, ಅರಣ್ಯ; ಸೌಗಂಧ: ಪರಿಮಳ; ಬಂಧುರ: ಸುಂದರವಾದ;

ಪದವಿಂಗಡಣೆ:
ತಾರಕೆಗಳ್+ಉಳಿದ್+ಅಂಬರದ+ ವಿ
ಸ್ತಾರವೋ +ಗತ+ಹಂಸಕುಲ +ಕಾ
ಸಾರವೋ +ನಿಸ್ಸಾರವೋ +ನಿರ್ಮಳ +ತಪೋವನವೋ
ನಾರಿಯದ +ದಳ +ನೂಕಿದರೆ +ತನು
ಸೌರಭದ+ ದಳ +ತೆಗೆಯದಾ +ಕಾಂ
ತಾರದೊಳಗ್+ಏನೆಂಬೆನ್+ಆ+ ಸೌಗಂಧ +ಬಂಧುರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಾರಕೆಗಳುಳಿದಂಬರದ ವಿಸ್ತಾರವೋ ಗತಹಂಸಕುಲ ಕಾ
ಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ