ಪದ್ಯ ೪೭: ಘಟೋತ್ಕಚನ ಸೈನ್ಯವು ಹೇಗಿತ್ತು?

ಕಾಳರಾತ್ರಿಯ ಕಟಕವೋ ಮೇಣ್
ಕಾಲರುದ್ರನ ಪಡೆಯೊ ದಾನವ
ನಾಳಿನಗ್ಗಳಿಕೆಗಳ ಬಣ್ಣಿಸಬಲ್ಲ ಕವಿಯಾರು
ಆಳ ಬೋಳೈಸಿದನು ಕಪ್ಪುರ
ವೀಳೆಯವ ಹಾಯ್ಕಿದನು ಲೋಹದ
ಗಾಲಿ ಘೀಳಿಡೆ ರಥವನೇರಿದನನಿಲಸುತಸೂನು (ದ್ರೋಣ ಪರ್ವ, ೧೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕಾಳರಾತ್ರಿಯ ಸೈನ್ಯವೋ, ಕಾಲರುದ್ರನ ಸೈನ್ಯವೋ ಎಂಬಂತೆ ಘಟೋತ್ಕಚನ ಸೈನಿಕರ ಹೆಚ್ಚಳವನ್ನು ಯಾವ ಕವಿತಾನೆ ವರ್ಣಿಸಲು ಸಾಧ್ಯ? ಸೈನಿಕರೆಲ್ಲರನ್ನೂ ಮನ್ನಿಸಿ ಕರ್ಪೂರ ವೀಳೆಯವನ್ನು ಕೊಟ್ಟು, ರಥದ ಚಕ್ರಗಳು ಘೀಳಿಡುತ್ತಿರಲು, ರಥವನ್ನು ಹತ್ತಿದನು.

ಅರ್ಥ:
ಕಾಳರಾತ್ರಿ: ಭಯಂಕರವಾದ ಇರುಳು, ದಟ್ಟವಾದ ರಾತ್ರಿ; ಕಟಕ: ಸೈನ್ಯ; ಮೇಣ್: ಅಥವ; ಕಾಲರುದ್ರ: ಶಿವನ ಒಂದು ರೂಪ; ಪಡೆ: ಗುಂಪು; ದಾನವ: ರಾಕ್ಷಸ; ಆಳಿ: ಗುಂಪು; ಅಗ್ಗಳಿಕೆ: ಶ್ರೇಷ್ಠತೆ; ಬಣ್ಣಿಸು: ವರ್ಣಿಸು; ಕವಿ: ಕಬ್ಬಿಗ; ಆಳ: ಸೈನಿಕ; ಬೋಳೈಸು: ಸಂತೈಸು, ಸಮಾಧಾನ ಮಾಡು; ವೀಳೆ: ತಾಂಬೂಲ; ಹಾಯ್ಕು: ಇಡು, ಇರಿಸು; ಲೋಹ: ಕಬ್ಬಿಣ, ಉಕ್ಕು; ಗಾಲಿ: ಚಕ್ರ; ಘೀಳಿಡು: ಕಿರಿಚು, ಅರಚು; ರಥ: ಬಂಡಿ; ಏರು: ಮೇಲೆ ಹತ್ತು; ಅನಿಲ: ವಾಯು; ಸುತ: ಮಗ; ಸೂನು: ಮಗ;

ಪದವಿಂಗಡಣೆ:
ಕಾಳರಾತ್ರಿಯ+ ಕಟಕವೋ +ಮೇಣ್
ಕಾಲರುದ್ರನ +ಪಡೆಯೊ +ದಾನವನ್
ಆಳಿನ್+ಅಗ್ಗಳಿಕೆಗಳ +ಬಣ್ಣಿಸಬಲ್ಲ +ಕವಿಯಾರು
ಆಳ +ಬೋಳೈಸಿದನು +ಕಪ್ಪುರ
ವೀಳೆಯವ +ಹಾಯ್ಕಿದನು +ಲೋಹದ
ಗಾಲಿ +ಘೀಳಿಡೆ +ರಥವನ್+ಏರಿದನ್+ಅನಿಲಸುತ+ಸೂನು

ಅಚ್ಚರಿ:
(೧) ಸುತ, ಸೂನು – ಸಮಾನಾರ್ಥಕ ಪದ
(೨) ಸೈನ್ಯವನ್ನು ಹೋಲಿಸುವ ಪರಿ – ಕಾಳರಾತ್ರಿಯ ಕಟಕವೋ ಮೇಣ್ ಕಾಲರುದ್ರನ ಪಡೆಯೊ