ಪದ್ಯ ೨೧: ಪಣಕಿಟ್ಟ ಅರ್ಜುನನ ಸ್ಥಿತಿ ಏನಾಯಿತು?

ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಂ ಮುನ್ನ ಶಕುನಿಗೆ
ಬೀಳುವುವು ಬೇಕಾದ ದಾಯವು
ಕೌಳಿಕದ ವಿಧಿಪಾಶ ತೊಡಕಿತು ಕೆಡಹಿತರ್ಜುನನ (ಸಭಾ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಜನಮೇಜಯ ಇನ್ನು ಹೇಳುವುದೇನಿದೆ, ಪಗಡೆಯಾಟದಲ್ಲಿ ಧರ್ಮಜನು ಇಟ್ಟ ಕಾಯಿಯು ಮುರಿಯಿತು. ಮೋಸದಲ್ಲಿ ಪ್ರವೀಣರಾದವರ ಕೈಚಳಕವನ್ನು ಯಾರು ತಾನೇ ತಿಳಿಯಬಲ್ಲರು. ಶಕುನಿಯು ಇಂತಹ ಗರವು ತನಗೆ ಬೇಕೆಂದು ದಾಳಕ್ಕೆ ಹೇಳುವ ಮೊದಲೇ ಆ ಗರವು ಬೀಳುತ್ತಿತ್ತು. ಕ್ರೂರವಾದ ವಂಚನೆಯ ವಿಧಿ ಪಾಶವು, ಕಾಲಿಗೆ ತೊಡಕಿಕೊಂಡು ಅರ್ಜುನನನ್ನು ಕೆಡವಿತು.

ಅರ್ಥ:
ಮೇಲೆ: ಮುಂದಿನ, ನಂತರ; ಹೇಳು: ತಿಳಿಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಸಾಲು: ಪಂಕ್ತಿ; ಮುರಿ: ಸೀಳು; ಸೆರೆ: ಬಂಧನ; ಕಳವು:ಅಪಹರಣ ; ಕಾಲುಕೀಲ್ಗಳು: ಅಡಿ, ಬುಡ, ರೀತಿ; ಬಲ್ಲರು: ತಿಳಿದವರು; ಕುಟಿಲ: ಮೋಸ; ಕೋವಿದ: ಪಂಡಿತ; ಮುನ್ನ: ಮೊದಲೇ; ಬೇಕಾದ: ಇಚ್ಛಿಸಿದ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ಕೌಳಿಕ: ಕಟುಕ, ಮೋಸ, ವಂಚನೆ; ವಿಧಿ: ಹಣೆಬರಹ, ಅದೃಷ್ಟ; ತೊಡಕು: ಸಿಕ್ಕು, ಅಡ್ಡಿ, ಗೊಂದಲ; ಕೆಡಹು: ಬೀಳಿಸು, ಸಂಹರಿಸು;

ಪದವಿಂಗಡಣೆ:
ಮೇಲೆ +ಹೇಳುವುದೇನು+ ಸಾರಿಯ
ಸಾಲು +ಮುರಿದುದು +ಸೆರೆಯ +ಕಳವಿನ
ಕಾಲು +ಕೀಲ್ಗಳನಾರು+ ಬಲ್ಲರು +ಕುಟಿಲ +ಕೋವಿದರ
ಹೇಳುವದರಿಂ +ಮುನ್ನ +ಶಕುನಿಗೆ
ಬೀಳುವುವು +ಬೇಕಾದ+ ದಾಯವು
ಕೌಳಿಕದ +ವಿಧಿಪಾಶ+ ತೊಡಕಿತು +ಕೆಡಹಿತ್+ಅರ್ಜುನನ

ಅಚ್ಚರಿ:
(೧) ಅರ್ಜುನನ ಪಣವು ಸೋತಿತೆನ್ನಲು – ಕೌಳಿಕದ ವಿಧಿಪಾಸಶ ತೊಡಕಿತು ಕೆಡಹಿತರ್ಜುನನ
(೨) ದುಷ್ಟರನ್ನು ವಿವರಿಸುವ ಪರಿ – ಕಳವಿನ ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ