ಪದ್ಯ ೧೩: ರಣರಂಗವು ಯಾವುದರಿಂದ ಸಮೃದ್ಧವಾಗಿತ್ತು?

ಮಂಡಿಸಿತು ನೊರೆರಕುತ ಕರುಳಿನ
ಜೊಂಡು ಮಸಗಿತು ಕಡಿದ ಖಂಡದ
ದಿಂಡು ತಳಿತುದು ತೊಗಲ ಕೊಯ್ಲಿನ ಮುರಿದ ಮೂಳೆಗಳ
ಜೋಂಡೆ ನರಗಳ ಜುರಿತ ಮಿದುಳಿನ
ಹೊಂಡೆಯದ ತೊರಳಿಗಳ ಕೊರಳಿನ
ತುಂಡುಗಳ ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು (ಭೀಷ್ಮ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ನೊರೆ ರಕ್ತ ಹರಿಯಿತು, ಕರುಳುಗಳ ಜೊಂಡು ಎಲ್ಲೆಡೆ ಬಿದ್ದವು. ತುಂಡಾದ ಮಾಂಸಖಂಡಗಳು, ಹರಿದ ಚರ್ಮ, ಮುರಿದ ಮೂಳೆಗಳು, ನರಗಳ ಜೋಂಡು, ಮಿದುಳಿನ ತೊರೆಳಿಗಳು, ಕತ್ತರಿಸಿದ ಕುತ್ತಿಗೆಗಳಿಂದ ಯಮನು ಸಮೃದ್ಧವಾದ ಸುಗ್ಗಿ ಮಾಡುತ್ತಿರುವನೋ ಎಂಬಂತಿತ್ತು.

ಅರ್ಥ:
ಮಂಡಿಸು: ಕುಳಿತುಕೊಳ್ಳು; ನೊರೆ: ಬುರುಗು, ಫೇನ; ರಕುತ: ನೆತ್ತರು; ಕರುಳು: ಪಚನಾಂಗ; ಜೊಂಡು: ನೀರಿನಲ್ಲಿ ಬೆಳೆಯುವ ಒಂದು ಬಗೆಯ ಹುಲ್ಲು; ಮಸಗು: ಕೆರಳು; ತಿಕ್ಕು; ಕಡಿ: ತುಂಡು, ಹೋಳು; ಖಂಡ: ತುಂಡು, ಚೂರು; ದಿಂಡು: ಶರೀರ, ದೇಹ; ತಳಿತ: ಚಿಗುರಿದ; ತೊಗಲು: ಚರ್ಮ, ತ್ವಕ್ಕು; ಕೊಯ್ಲು: ಕೊಯ್ಯುವಿಕೆ ಕಟಾವು; ಮುರಿ: ಸೀಳು; ಮೂಳೆ: ಎಲುಬು; ನರ: ಶಕ್ತಿ, ಸಾಮರ್ಥ್ಯ; ಜುರಿತ: ರಕ್ತಸ್ರಾವ; ಮಿದುಳು: ಮಸ್ತಿಷ್ಕ; ಕೊರಳು: ಕಂಠ; ತುಂಡು: ಚೂರು, ಭಾಗ, ಖಂಡ; ಕಾಲಾಂತಕ: ಯಮ; ಹೆಬ್ಬೆಳಸು: ಹೆಚ್ಚಾಗಿಸು, ವೃದ್ಧಿಸು; ಹುಲುಸು: ಹೆಚ್ಚಳ, ಸಮೃದ್ಧಿ;

ಪದವಿಂಗಡಣೆ:
ಮಂಡಿಸಿತು +ನೊರೆ+ರಕುತ +ಕರುಳಿನ
ಜೊಂಡು +ಮಸಗಿತು +ಕಡಿದ +ಖಂಡದ
ದಿಂಡು +ತಳಿತುದು +ತೊಗಲ +ಕೊಯ್ಲಿನ+ ಮುರಿದ+ ಮೂಳೆಗಳ
ಜೊಂಡೆ +ನರಗಳ +ಜುರಿತ+ ಮಿದುಳಿನ
ಹೊಂಡೆಯದ +ತೊರಳಿಗಳ+ ಕೊರಳಿನ
ತುಂಡುಗಳ+ ಕಾಲಾಂತಕನ+ ಹೆಬ್ಬೆಳಸು+ ಹುಲುಸಾಯ್ತು

ಅಚ್ಚರಿ:
(೧) ಜೊಂಡು, ದಿಂಡು, ತುಂಡು; ಕರುಳಿನ, ಮಿದುಳಿನ, ಕೊರಳಿನ – ಪ್ರಾಸ ಪದಗಳು
(೨) ರೂಪಕದ ಪ್ರಯೋಗ – ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು

ಪದ್ಯ ೩೬: ಉತ್ತರನಿಗೆ ಆಯುಧಗಳು ಹೇಗೆ ಕಂಡವು?

ಕಾಲ ಭುಜಗನ ನಾಲಗೆಯೊ ಶರ
ಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ
ತೋಳು ಧರಿಸುವುವೆಂತು ನೋಡಿದ
ಡಾಲಿಯುರೆ ಬೆಂದವು ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆಂದೋರಂತೆ ಹಲುಬಿದನು (ವಿರಾಟ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಉತ್ತರನು ಆಯುಧಗಳನ್ನು ನೋಡಿ, ಇವೇನು ಬಾಣಗಳೋ ಅಥವ ಪ್ರಳಯ ಕಾಲದ ಸರ್ಪದ ನಾಲಿಗೆಗಳೋ? ಪ್ರಳಯಾಗ್ನಿಯ ಜ್ವಾಲೆಗಳೋ ಪ್ರಳಯ ಕಾಲನ ಕೋರೆಯಹಲ್ಲುಗಳೋ ಇವನ್ನು ನೋಡಿದರೆ ಕಣ್ಣು ಗುಡ್ಡೆಗಳು ಸುಟ್ತು ಹೋದೀತು, ಎಂದ ಮೇಲೆ ಇವನ್ನು ತೋಳಲ್ಲಿ ಹಿಡಿಯುವುದಾದರೂ ಹೇಗೆ, ಬೃಹನ್ನಳೆ, ನೀನು ಕೆಲಸ ಕೆಡಿಸಿ ನನ್ನನ್ನು ಕೊಂದೆ ಎಂದು ಉತ್ತರನು ಹಲುಬಿದನು.

ಅರ್ಥ:
ಕಾಲ: ಸಮಯ; ಭುಜಗ: ಹಾವು; ನಾಲಗೆ: ಜಿಹ್ವೆ; ಶರ: ಬಾಣ; ಜಾಲ: ಬಲೆ, ಸಮೂಹ; ಕಲ್ಪಾಂತ: ಯುಗಾಂತ್ಯ; ವಹ್ನಿ: ಬೆಂಕಿ; ಜ್ವಾಲೆ:ಬೆಂಕಿಯ ನಾಲಗೆ; ಕೈದು: ಆಯುಧ; ಕಾಲಾಂತಕ: ಯುಗಾಂತಕ; ದಾಡೆ: ಹಲ್ಲು; ತೋಳು: ಬಾಹು; ಧರಿಸು: ಹಿಡಿ; ಆಲಿ: ಕಣ್ಣು; ಉರೆ: ಅಧಿಕವಾಗಿ; ಬೆಂದು: ಸುಡು; ಕಾಳು: ಕೆಟ್ಟದ್ದು, ಕೇಡು; ಕೊಂದು: ಸಾಯಿಸು; ಹಲುಬು: ದುಃಖಪಡು;

ಪದವಿಂಗಡಣೆ:
ಕಾಲ +ಭುಜಗನ +ನಾಲಗೆಯೊ +ಶರ
ಜಾಲವೋ +ಕಲ್ಪಾಂತ +ವಹ್ನಿ
ಜ್ವಾಲೆಯೋ +ಕೈದುಗಳೊ +ಕಾಲಾಂತಕನ +ದಾಡೆಗಳೊ
ತೋಳು +ಧರಿಸುವುವೆಂತು+ ನೋಡಿದಡ್
ಆಲಿಯುರೆ+ ಬೆಂದವು+ ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆಂದೋರಂತೆ ಹಲುಬಿದನು

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಕಾಲ ಭುಜಗನ ನಾಲಗೆಯೊ ಶರಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ

ಪದ್ಯ ೩೮: ಅರ್ಜುನ ಮತ್ತು ರಾಕ್ಷಸರ ನಡುವೆ ಹೇಗೆ ಯುದ್ಧ ನಡೆಯಿತು?

ಝಗಝಗಿಪ ಬಾಣಾಗ್ನಿ ಭುಗುಭುಗು
ಭುಗಿಲೆನಲು ದಿವ್ಯಾಸ್ತ್ರ ತತಿಯಲಿ
ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ
ವಿಗಡರದ ಲೆಕ್ಕಿಸದೆ ಲೋಟಿಸಿ
ಮಗುಚಿದರು ಮದ್ಬಾಣ ಮಹಿಮೆಯ
ನೊಗಡಿಸಿತು ಕಾಲಾಗ್ನಿ ಕಾಲಾಂತಕರಿಗಾ ಸಮರ (ಅರಣ್ಯ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಗ ನಾನು ಭುಗುಭುಗಿಸುವ ಜ್ವಾಲೆಯನ್ನುಳ್ಳ ದಿವ್ಯಾಸ್ತ್ರಗಳಿಂದ ಹದಿನಾಲ್ಕು ಲೋಕಗಳನ್ನು ಆವರಿಸುವ ಹೊಗೆಯನ್ನುಂಟು ಮಾಡಿದೆನು. ವೀರರಾದ ರಾಕ್ಷಸರು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ನನ್ನ ಬಾನಗಳನ್ನು ಹೊಡೆದುರುಳಿಸಿದರು. ಕಾಲಾಗ್ನಿಗೂ ಕಾಲಯಮನಿಗೂ ನಡೆಯಬಹುದಾದ ಯುದ್ಧದಮ್ತೆ ನನ್ನ ಮತ್ತು ಅಸುರರ ನಡುವೆ ಯುದ್ಧ ನಡೆಯಿತು.

ಅರ್ಥ:
ಝಗಝಗಿಸು: ಕಾಂತಿಯುಕ್ತವಾಗಿ ಹೊಳೆ; ಬಾಣ: ಸರಳು; ಅಗ್ನಿ: ಬೆಂಕಿ; ಭುಗುಭುಗಿಲು: ಭುಗು ಎಂದು ಶಬ್ದ ಮಾಡು; ದಿವ್ಯಾಸ್ತ್ರ: ಶ್ರೇಷ್ಠವಾದ ಶಸ್ತ್ರ; ತತಿ: ಸಮೂಹ; ಹೊಗೆ: ಧೂಮ; ತೋರಿಸು: ಪ್ರದರ್ಶಿಸು; ಭುವನ: ಲೋಕ; ಭವನ: ಆಲಯ; ವಿಗಡ: ಶೌರ್ಯ, ಪರಾಕ್ರಮ; ಲೆಕ್ಕಿಸು: ಎಣಿಸು; ಲೋಟಿಸು: ಉರುಳಿಸು, ಬೀಳಿಸು; ಮಗುಚು: ಹಿಂದಿರುಗಿಸು, ಮರಳಿಸು; ಮಹಿಮೆ: ಶ್ರೇಷ್ಠತೆ; ಒಗಡಿಸು: ಧಿಕ್ಕರಿಸು, ಹೇಸು; ಕಾಲಾಗ್ನಿ: ಪ್ರಳಯಕಾಲದ ಬೆಂಕಿ; ಕಾಲಾಂತಕ: ಶಿವ; ಸಮರ: ಯುದ್ಧ;

ಪದವಿಂಗಡಣೆ:
ಝಗಝಗಿಪ +ಬಾಣಾಗ್ನಿ +ಭುಗುಭುಗು
ಭುಗಿಲೆನಲು +ದಿವ್ಯಾಸ್ತ್ರ +ತತಿಯಲಿ
ಹೊಗೆಯ +ತೋರಿಸಿದೆನು+ ಚತುರ್ದಶ +ಭುವನ +ಭವನದಲಿ
ವಿಗಡರ್+ಅದ +ಲೆಕ್ಕಿಸದೆ +ಲೋಟಿಸಿ
ಮಗುಚಿದರು +ಮದ್ಬಾಣ +ಮಹಿಮೆಯನ್
ಒಗಡಿಸಿತು +ಕಾಲಾಗ್ನಿ +ಕಾಲಾಂತಕರಿಗಾ+ ಸಮರ

ಅಚ್ಚರಿ:
(೧) ಮ ಕಾರದ ಪದ – ಮಗುಚಿದರು ಮದ್ಬಾಣ ಮಹಿಮೆಯನ್
(೨) ಜೋಡಿ ಪದ – ಝಗಝಗಿಪ, ಭುಗುಭುಗು

ಪದ್ಯ ೧೪: ಭೀಮನು ಯಾರ ರೂಪವಾಗಿ ಶಲ್ಯನಿಗೆ ಕಂಡನು?

ಪವನಸುತನಿಂಗಿತವ ಮನದಂ
ಘವಣೆಯನು ಮಾದ್ರೇಶ ಕಂಡನು
ರವಿಸುತನ ನೋಡಿದನು ಮುಖದಲಿ ಮುರಿದು ತೋರಿದನು
ಇವನ ಬಲ್ಲೈ ಭೀಮನೋ ಭೈ
ರವನೊ ಭರ್ಗನೊ ಮನುಜ ಕಂಠೀ
ರವನೊ ಕಾಲಾಂತಕನೊ ಕೋಳಾಹಲವಿದೇನೆಂದ (ಕರ್ಣ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನ ಇಂಗಿತವನ್ನು ಅವನು ಮನಸ್ಸಿನಲ್ಲಿ ಏನನ್ನು ದೃಢೀಕರಿಸಿ ಬರುತ್ತಿರುವ ರೀತಿಯನ್ನು ಶಲ್ಯ ಗಮನಿಸಿ ಕರ್ಣನನ್ನು ನೋಡಿ, ಭೀಮನನ್ನು ನೋಡೆಂದು ಸನ್ನೆ ಮಾಡಿ, ಇವನಾರೆಂದು ಬಲ್ಲೆಯ ಕರ್ಣ ಎಂದು ಕೇಳಿದ. ಇವನು ಭೀಮನೋ, ಭೈರವನೋ, ಶಿವನೋ, ನರಸಿಂಹನೋ, ಕಾಲಾಂತಕನೋ ತಿಳಿಯದಗಿದೆ ಇದೆಂತಹ ಕೋಲಾಹಲ ಎಂದನು.

ಅರ್ಥ:
ಪವನ: ಗಾಳಿ, ವಾಯು; ಸುತ: ಮಗ; ಪವನಸುತ: ವಾಯುವಿನ ಮಗ (ಭೀಮ); ಮನ: ಮನಸ್ಸು; ಅಂಘವಣೆ: ರೀತಿ, ಬಯಕೆ, ಉದ್ದೇಶ; ಮಾದ್ರೇಶ: ಮದ್ರ ದೇಶದ ಒಡೆಯ (ಶಲ್ಯ); ಕಂಡು: ನೋಡು; ರವಿಸುತ: ಕರ್ಣ; ಮುಖ: ಆನನ, ವಕ್ತ್ರ; ಮುರಿ: ಸೀಳು; ತೋರು: ಪ್ರದರ್ಶಿಸು; ಬಲ್ಲೈ: ತಿಳಿದು; ಭೈರವ: ಶಿವನ ಅವತಾರ; ಭರ್ಗ: ಶಿವ; ಮನುಜ: ನರ; ಕಂಠೀರವ: ಸಿಂಹ; ಕಾಲ: ಸಮಯ; ಅಂತಕ: ಯಮ; ಕೋಲಾಹಲ:ಗದ್ದಲ, ಅವಾಂತರ;

ಪದವಿಂಗಡಣೆ:
ಪವನಸುತನ್+ಇಂಗಿತವ +ಮನದ್
ಅಂಘವಣೆಯನು +ಮಾದ್ರೇಶ +ಕಂಡನು
ರವಿಸುತನ +ನೋಡಿದನು +ಮುಖದಲಿ +ಮುರಿದು +ತೋರಿದನು
ಇವನ+ ಬಲ್ಲೈ +ಭೀಮನೋ +ಭೈ
ರವನೊ+ ಭರ್ಗನೊ +ಮನುಜ +ಕಂಠೀ
ರವನೊ +ಕಾಲಾಂತಕನೊ +ಕೋಳಾಹಲವ್+ಇದೇನೆಂದ

ಅಚ್ಚರಿ:
(೧) ಭೀಮನು ಕಂಡ ಪರಿ – ಭರ್ಗ, ಮನುಜಕಂಠೀರವ, ಕಾಲಾಂತಕ, ಭೈರವ
(೨) ನರಸಿಂಹನನ್ನು ಮನುಜಕಂಠೀರವ ಎಂದು ಕರೆದಿರುವುದು