ಪದ್ಯ ೨೭: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೪?

ಕೆಡಹಿ ದುಶ್ಯಾಸನನ ರಕುತವ
ಕುಡಿದವನು ತಾನಲ್ಲಲೇ ನಿ
ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ
ಅಡಗಿದಡೆ ಬಿಡುವೆನೆ ಭಯಜ್ವರ
ಹಿಡಿದ ನಿನ್ನನು ಸೆಳೆದು ರಣದಲಿ
ತೊಡೆಯ ಕಳಚವ ಮೃತ್ಯು ಭೀಮನ ಕಯ್ಯ ನೋಡೆಂದ (ಗದಾ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಿನ್ನ ತಮ್ಮ ದುಶ್ಯಾಸನನನ್ನು ಕೆಡವಿ ರಕ್ತವನು ಕುಡಿದವನು ನಾನಲ್ಲವೇ? ನಿನ್ನ ನೂರುಜನ ತಮ್ಮಂದಿರಿಗೆ ನಾನು ಕಾಲಯಮನಾಗಲಿಲ್ಲವೇ? ನೀರಲ್ಲಿ ಅಡಗಿ ಕುಳಿತರೆ ನಾನು ಬಿಡುವೆನೇ? ಭಯಜ್ವರವೇರಿರುವ ನಿನ್ನನ್ನು ಮೇಲಕ್ಕೆತ್ತಲು ತೊಡೆಯನ್ನು ಮುರಿಯುವ ಮೃತ್ಯುವಾದ ಭೀಮನ ಕೈನೋಡು ಎಂದು ಕೌರವನನ್ನು ಪ್ರಚೋದಿಸಿದನು.

ಅರ್ಥ:
ಕೆಡಹು: ಬೀಳು; ರಕುತ: ನೆತ್ತರು; ಕುಡಿ: ಪಾನಮಾಡು; ಹುಟ್ಟು: ಜನಿಸು; ನೂರು: ಶತ; ನುಂಗು: ಕಬಳಿಸು; ಕಾಲ: ಸಮಯ; ಯಮ: ಮೃತ್ಯುದೇವತೆ; ಅಡಗು: ಅವಿತುಕೊಳ್ಳು; ಬಿಡು: ತೆರಳು; ಭಯ: ಹೆದರು, ಅಂಜಿಕೆ; ಜ್ವರ: ಬೇಗುದಿ; ಹಿಡಿ: ಗ್ರಹಿಸು; ಸೆಳೆ: ಗ್ರಹಿಸು; ರಣ: ಯುದ್ಧ; ತೊಡೆ: ಸೊಂಟದಿಂದ ಮಂಡಿಯವರೆಗಿನ ಭಾಗ, ಊರು; ಕಳಚು: ಬೇರ್ಪಡಿಸು, ಬೇರೆಮಾಡು; ಮೃತ್ಯು: ಸಾವು; ಕಯ್ಯ: ಹಸ್ತ; ನೋಡು: ವೀಕ್ಷಿಸು;

ಪದವಿಂಗಡಣೆ:
ಕೆಡಹಿ +ದುಶ್ಯಾಸನನ+ ರಕುತವ
ಕುಡಿದವನು +ತಾನಲ್ಲಲೇ +ನಿ
ನ್ನೊಡನೆ +ಹುಟ್ಟಿದ +ನೂರ +ನುಂಗಿದ+ ಕಾಲಯಮನಲ್ಲಾ
ಅಡಗಿದಡೆ +ಬಿಡುವೆನೆ +ಭಯಜ್ವರ
ಹಿಡಿದ +ನಿನ್ನನು +ಸೆಳೆದು +ರಣದಲಿ
ತೊಡೆಯ +ಕಳಚವ+ ಮೃತ್ಯು +ಭೀಮನ +ಕಯ್ಯ +ನೋಡೆಂದ

ಅಚ್ಚರಿ:
(೧) ಹಂಗಿಸುವ ಪರಿ – ಅಡಗಿದಡೆ ಬಿಡುವೆನೆ ಭಯಜ್ವರ ಹಿಡಿದ ನಿನ್ನನು ಸೆಳೆದು ರಣದಲಿ ತೊಡೆಯ ಕಳಚವ ಮೃತ್ಯು

ಪದ್ಯ ೧೨: ಭೀಷ್ಮನ ಬಗ್ಗೆ ಪಾಂಡವ ಸೈನ್ಯದವರು ಏನೆಂದು ದೂರಿದರು?

ಕಾಲಯಮನೋ ಭೀಷ್ಮನೋ ಫಡ
ಮೇಳವೇ ಮಝ ಭಾಪು ಮಾರಿಯ
ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
ಆಳು ಮುರಿದುದು ಮೋಹರದ ಭೂ
ಪಾಲಕರು ಹುರಿಯೊಡೆದು ದೊರೆಗಳ
ಮೇಲೆ ಬಿಸುಟರು ವೀರಗಂಗಾತನುಜನುಪಟಳವ (ಭೀಷ್ಮ ಪರ್ವ, ೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವ ಸೇನಾನಾಯಕರು ಭೀಷ್ಮರ ಠೀವಿಯನ್ನು ನೋಡುತ್ತಾ, ಇವನೇನು ಭೀಷ್ಮನೋ, ಪ್ರಳಯಕಾಲದ ಯಮನೋ, ಭಲೇ ನಾವಿಂದು ಮಾರಿಗೆ ಬಲಿಯಾದ ಹಾಗಾಯಿತು, ನಾವೆಲ್ಲಿ ಅವನೆಲ್ಲಿ, ಎನ್ನುತ್ತಾ ಹೋಗಿ ತಮ್ಮ ದೊರೆಗಳಿಗೆ ಭೀಷ್ಮನ ಪರಾಕ್ರಮದ ತಾಪ ನಮಗೆ ಬಹಳ ದುಸ್ಸಾಧ್ಯವಾಗಿದೆ ಎಂದು ದೂರಿದರು.

ಅರ್ಥ:
ಕಾಲ: ಪ್ರಳಯಕಾಲ, ಸಮಯ; ಯಮ: ಮೃತ್ಯುದೇವತೆ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಮೇಳ: ಗುಂಪು; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಮಾರಿ: ಕ್ಷುದ್ರ ದೇವತೆ; ತಾಳಿಗೆ: ಗಂಟಲು; ತುತ್ತು: ಆಹಾರ; ತಡ: ನಿಧಾನ; ತೆಗೆ: ಹೊರತರು; ಆಳು: ಸೈನಿಕ; ಮುರಿ: ಸೀಳು; ಮೋಹರ: ಯುದ್ಧ; ಭೂಪಾಲಕ: ರಾಜ; ಹುರಿ: ನಾಶವಾಗು; ದೊರೆ: ರಾಜ; ಒಡೆ: ಸೀಳು; ಬಿಸುಟು: ಹೊರಹಾಕು; ವೀರ: ಶೂರ; ತನುಜ: ಮಗ; ಉಪಟಳ: ಹಿಂಸೆ, ಕಿರುಕುಳ;

ಪದವಿಂಗಡಣೆ:
ಕಾಲಯಮನೋ +ಭೀಷ್ಮನೋ +ಫಡ
ಮೇಳವೇ+ ಮಝ+ ಭಾಪು+ ಮಾರಿಯ
ತಾಳಿಗೆಗೆ +ತುತ್ತಾದವೇ +ತಡವೇಕೆ+ ತೆಗೆಯೆನುತ
ಆಳು+ ಮುರಿದುದು +ಮೋಹರದ+ ಭೂ
ಪಾಲಕರು +ಹುರಿಯೊಡೆದು+ ದೊರೆಗಳ
ಮೇಲೆ +ಬಿಸುಟರು +ವೀರ+ಗಂಗಾತನುಜನ್+ಉಪಟಳವ

ಅಚ್ಚರಿ:
(೧) ತ ಕಾರದ ಸಾಲು ಪದ – ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
(೨) ಪ ವರ್ಗದ ಸಾಲು ಪದಗಳು – ಭೀಷ್ಮನೋ ಫಡ ಮೇಳವೇ ಮಝ ಭಾಪು ಮಾರಿಯ
(೩) ಭೂಪಾಲಕ, ದೊರೆ – ಸಮನಾರ್ಥಕ ಪದ

ಪದ್ಯ ೬೯: ಕರ್ಣಾಟ ರಾವುತರು ಹೇಗೆ ಆಕ್ರಮಣ ಮಾಡಿದರು?

ಬವರ ಸವೆಯದೆ ತೇಜಿಗಳ ಬಲು
ಜವವು ಜಾರದೆ ಬಿಡುವ ತಿವಿದರೆ
ಸವಗವುಚ್ಚಳಿಸುವು ಕವಿದರೆ ಕಾಲಯಮನಂತೆ
ಕವಿವರವಗಡಿಸಿದರೆ ಹಿಮ್ಮೆ
ಟ್ಟುವರು ಭೂಮಾನದೊಳುಪಾಯದ
ಬವರದೋಜೆಯಲೊದಗಿದರು ಕರ್ಣಾಟರಾವುತರು (ಭೀಷ್ಮ ಪರ್ವ, ೪ ಸಂಧಿ, ೬೯ ಪದ್ಯ)

ತಾತ್ಪರ್ಯ:
ಕದನವು ಮುಂದುವರೆದರೂ, ಅವರ ಕುದುರೆಗಳ ವೇಗವು ಕಡಿಮೆಯಾಗದು, ಕಾಲ ಯಮನಮ್ತೆ ತಿವಿದರೆ ಶತ್ರುಗಳ ಕವಚಗಳು ಮುರಿದುಬೀಳಬೇಕು, ಶತ್ರುಗಳು ಮೇಲೆ ಬಿದ್ದಾಗ ಹಿಂದೆ ಸರಿದು ನಿಂತು ಯುದ್ಧವನ್ನು ಉಪಾಯದಿಂದ ಮಾಡುವರು. ಇದು ಕರ್ಣಾಟ ದೇಶದ ರಾವುತರ ಯುದ್ಧದ ರೀತಿ.

ಅರ್ಥ:
ಬವರ: ಕಾಳಗ, ಯುದ್ಧ; ಸವೆ: ತೀರು; ತೇಜಿ: ಕುದುರೆ; ಬಲು: ಬಹಳ; ಜವ: ವೇಗ, ರಭಸ; ಜಾರು: ಬೀಳು; ಬಿಡು: ಅಂತರ, ಅವಕಾಶ; ತಿವಿ: ಚುಚ್ಚು; ಸವಗ: ಕವಚ; ಉಚ್ಚಳಿಸು: ಮೇಲಕ್ಕೆ ಹಾರು; ಕಾಲ: ಸಮಯ, ಪ್ರಳಯಕಾಲ; ಯಮ: ಜವ; ಕವಿ: ಆವರಿಸು; ಅವಗಡಿಸು: ಕಡೆಗಣಿಸು; ಹಿಮ್ಮೆಟ್ಟು: ಹಿಂದಕ್ಕೆ ಸರಿ; ಭೂಮಾನ: ಭೂಮಿಯ ತೂಕ, ಕುಸ್ತಿಯ ಕಣ; ಉಪಾಯ: ಯುಕ್ತಿ; ಬವರ: ಕಾಳಗ, ಯುದ್ಧ; ಓಜೆ: ಶಕ್ತಿ, ಸಾಮರ್ಥ್ಯ; ಒದಗು: ಲಭ್ಯ, ದೊರೆತುದು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಬವರ +ಸವೆಯದೆ +ತೇಜಿಗಳ +ಬಲು
ಜವವು +ಜಾರದೆ +ಬಿಡುವ +ತಿವಿದರೆ
ಸವಗವ್+ಉಚ್ಚಳಿಸುವವು+ ಕವಿದರೆ +ಕಾಲಯಮನಂತೆ
ಕವಿವರ್+ಅವಗಡಿಸಿದರೆ +ಹಿಮ್ಮೆ
ಟ್ಟುವರು +ಭೂಮಾನದೊಳ್+ಉಪಾಯದ
ಬವರದ್+ಓಜೆಯಲ್+ಒದಗಿದರು +ಕರ್ಣಾಟ+ರಾವುತರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕವಿದರೆ ಕಾಲಯಮನಂತೆ ಕವಿವರವ್

ಪದ್ಯ ೬೨: ಪಾಂಡವರನ್ನು ದ್ರೌಪದಿ ಹೇಗೆ ಬಯ್ದಳು?

ಕಾಲಯಮ ಕೆರಳಿದರೆ ಮುರಿವೆ
ಚ್ಚಾಳುತನದವರೆನ್ನನೊಬ್ಬಳೆ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ
ತೋಳ ಹೊರೆ ನಿಮಗೇಕೆ ಭೂಮೀ
ಪಾಲವಂಶದೊಳುದಿಸಲೇತಕೆ
ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಪ್ರಳಯಕಾಲದ ಯಮನೇ ಕೆರಳಿ ಎದುರು ಯುದ್ಧಕ್ಕೆ ಬಂದರೂ ಅವನನ್ನು ಸೋಲಿಸುವಷ್ಟು ಸಾಮರ್ಥ್ಯವಿರುವ ನೀವು, ನನ್ನೊಬ್ಬಳನ್ನು ಆಳಲಾರಿರಿ, ಪಾಪಿಗಳಿರಾ, ನೀವು ಅಪಕೀರ್ತಿಗೂ ಹೆದರುವವರಲ್ಲ, ನಿಮಗೆ ಇಂತಹ ಸದೃಢ ತೋಳುಗಳೇಕೆ, ಕ್ಷತ್ರಿಯರಾಗಿ ಏಕೆ ಹುಟ್ಟಿದಿರಿ, ನಿಮಗೆ ಕೂಳುಹಾಕುವುದೊಂದು ಕೇಡು ಎಂದು ದ್ರೌಪದಿಯು ಪಾಂಡವರನ್ನು ನಿಂದಿಸಿದಳು.

ಅರ್ಥ:
ಕಾಲ: ಸಮಯ; ಕಾಲಯಮ: ಪ್ರಳಯಕಾಲದ ಯಮ; ಯಮ: ಮೃತ್ಯುದೇವತೆ; ಕೆರಳು: ರೇಗು; ಮುರಿ: ಸೀಳು; ಎಚ್ಚು: ಸವರು, ಬಾಣಬಿಡು; ಆಳು: ಅಧಿಕಾರ ನಡೆಸು; ಪಾಪಿ: ದುಷ್ಟ; ಅಪಕೀರ್ತಿ: ಅಪಯಶಸ್ಸು; ಅಳುಕು: ಹೆಅರು; ತೋಳು: ಬಾಹು; ಹೊರೆ: ಭಾರ; ಭೂಮೀಪಾಲ: ರಾಜ; ವಂಶ: ಕುಲ; ಉದಿಸು: ಹುಟ್ಟು; ಕೂಳು: ಊಟ; ಒಡಲು: ದೇಹ; ಹೊರು: ಹೇರು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಕಾಲಯಮ+ ಕೆರಳಿದರೆ +ಮುರಿವ್
ಎಚ್ಚಾಳುತನದವರ್+ಎನ್ನನೊಬ್ಬಳೆನ್
ಆಳಲಾರಿರಿ+ ಪಾಪಿಗಳಿರ್+ಅಪಕೀರ್ತಿರ್+ಅಳುಕಿರಲ
ತೋಳ +ಹೊರೆ +ನಿಮಗೇಕೆ +ಭೂಮೀ
ಪಾಲ+ವಂಶದೊಳ್+ಉದಿಸಲೇತಕೆ
ಕೂಳುಗೇಡಿಂಗ್+ಒಡಲ+ ಹೊರುವಿರಿ+ಎಂದಳ್+ಇಂದುಮುಖಿ

ಅಚ್ಚರಿ:
(೧) ಬಯ್ಯುವ ಪರಿ – ಪಾಪಿಗಳಿರಪಕೀರ್ತಿಗಳುಕಿರಲ, ಭೂಮೀಪಾಲವಂಶದೊಳುದಿಸಲೇತಕೆ ಕೂಳುಗೇಡಿಂಗೊಡಲ ಹೊರುವಿರಿ