ಪದ್ಯ ೩೫: ಧೃತರಾಷ್ಟ್ರನು ವ್ಯಾಸರ ಸಲಹೆಗೆ ಏನೆಂದು ಉತ್ತರಿಸಿದ?

ಹೈ ಹಸಾದವು ನಿಮ್ಮ ಚಿತ್ತಕೆ
ಬೇಹ ಹದನೇ ಕಾರ್ಯಗತಿ ಸಂ
ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ
ಕಾಹುರರು ಕಲ್ಮಷರು ಬಂಧು
ದ್ರೋಹಿಗಳು ಗತವಾಯ್ತು ನಿಷ್ಪ್ರ
ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ (ಗದಾ ಪರ್ವ, ೧೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ವ್ಯಾಸರಿಗೆ ಉತ್ತರಿಸುತ್ತಾ, ನಿಮ್ಮ ಸಲಹೆಯು ನನಗೆ ಮಹಾಪ್ರಸಾದ, ನಿಮ್ಮ ಮನಸ್ಸಿಗೆ ಬಂದುದನ್ನೇ ನಾನು ನಡೆಸುತ್ತೇನೆ. ಪಾಂಡುವಿನ ಮಕ್ಕಳು ನನ್ನ ಮಕ್ಕಳೇ, ಮನಸ್ಸಿನಲ್ಲಿ ಕೊಳೆಯನ್ನಿಟ್ಟುಕೊಂಡು ದುಡುಕಿ ಬಂಧು ದ್ರೋಹ ಮಾಡಿದವರು ಮಡಿದುಹೋದರು. ಅದನ್ನು ತಪ್ಪಿಸುವುದಾದರೂ ಹೇಗೆ? ಎಂದು ವೇದವ್ಯಾಸರನ್ನು ಧೃತರಾಷ್ಟ್ರ ಕೇಳಿದ.

ಅರ್ಥ:
ಹಸಾದ: ಮಹಾಪ್ರಸಾದ; ಚಿತ್ತ: ಮನಸ್ಸು; ಹದ: ರೀತಿ; ಬೇಹ: ಬಂದುದು; ಕಾರ್ಯ: ಕೆಲಸ; ಗತಿ: ಚಲನೆ, ವೇಗ; ಸಂದೇಹ: ಸಂಶಯ; ಮಕ್ಕಳು: ಪುತ್ರರು; ಕಾಹುರ: ಸೊಕ್ಕು, ಕೋಪ; ಕಲ್ಮಷ: ದುಷ್ಟ; ಬಂಧು: ಸಂಬಂಧಿಕ; ದ್ರೋಹಿ: ದುಷ್ಟ; ಗತ: ಸತ್ತುಹೋದ, ಹಿಂದೆ ಆದುದು; ಪ್ರತ್ಯೂಹ: ಅಡ್ಡಿ, ಅಡಚಣೆ; ಮುನಿ: ಋಷಿ;

ಪದವಿಂಗಡಣೆ:
ಹೈ +ಹಸಾದವು +ನಿಮ್ಮ +ಚಿತ್ತಕೆ
ಬೇಹ +ಹದನೇ +ಕಾರ್ಯಗತಿ +ಸಂ
ದೇಹವೇ +ಪಾಂಡುವಿನ +ಮಕ್ಕಳು +ಮಕ್ಕಳವರ್+ಎಮಗೆ
ಕಾಹುರರು +ಕಲ್ಮಷರು +ಬಂಧು
ದ್ರೋಹಿಗಳು +ಗತವಾಯ್ತು +ನಿಷ್ಪ್ರ
ತ್ಯೂಹವ್+ಇನ್ನೇನವರಿಗೆಂದನು +ಮುನಿಗೆ +ಧೃತರಾಷ್ಟ್ರ

ಅಚ್ಚರಿ:
(೧) ಕೌರವರನ್ನು ದೂಷಿಸಿದ ಪರಿ – ಕಾಹುರರು ಕಲ್ಮಷರು ಬಂಧು ದ್ರೋಹಿಗಳು ಗತವಾಯ್ತು
(೨) ದೇಹ, ಬೇಹ – ಪ್ರಾಸ ಪದ

ಪದ್ಯ ೨೬: ದುರ್ಯೋಧನ ಭೀಷ್ಮರ ಮಾತಿಗೆ ಹೇಗೆ ಉತ್ತರಿಸಿದನು?

ಸಾರಿದೆವು ನಿಮ್ಮೊಡನೆ ಬಾರೆವು
ದೂರಲಾಗದು ನಮ್ಮನಿನಿಬರ
ಮೀರಿದೊಡೆ ರಣಭಂಗ ತಪ್ಪನು ಹೋಗಬೇಡೆನಲು
ದೂರತಾರೆವು ನಿಮಗೆ ನಾವ್ ಕೈ
ಮೀರಿ ನಡೆಯೆವು ಕಾರ್ಯಗತಿಯಲಿ
ಜಾರಿ ಜಡಿತೆಯ ಮಾಡೆವೆಂದನು ಕೌರವರ ರಾಯ (ಅರಣ್ಯ ಪರ್ವ, ೧೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಷ್ಮರು ಘೋಷಿಸಿದರು, ನಾವು ನಿಮ್ಮೊಡನೆ ಬರುವುದಿಲ್ಲ. ನೀವು ನಮ್ಮ ಜೊತೆ ಬಿಟ್ಟು ಹೊರಟೆವಾದರೆ ನಮ್ಮನ್ನು ನೀವು ತೆಗಳಬೇಡಿರಿ, ನಮ್ಮ ಮಾತನ್ನು ಮೀರಿದರೆ ಯುದ್ದದಲ್ಲಿ ಸೋಲು ಮತ್ತು ಅಪಮಾನ ನಿಶ್ಚಿತ, ನೀವು ಘೋಷಯಾತ್ರೆಗೆ ಹೋಗಬೇಡಿರಿ ಎಂದು ಭೀಷ್ಮರು ಹೇಳಲು, ದುರ್ಯೋಧನನು ಇದಕ್ಕೆ ಉತ್ತರಿಸುತ್ತಾ, ನಾವು ನಿಮ್ಮನ್ನು ದೂರುವುದಿಲ್ಲ, ಮೀರಿ ವರ್ತಿಸುವುದಿಲ್ಲ, ನಮ್ಮ ಕರ್ತವ್ಯವನ್ನು ಬಿಟ್ಟು ಯುದ್ಧಕ್ಕೆ ತೊಡಗುವುದಿಲ್ಲ ವೆಂದು ಹೇಳಿದನು.

ಅರ್ಥ:
ಸಾರು: ಘೋಷಿಸು; ಬಾರೆವು: ಬರುವುದಿಲ್ಲ; ದೂರು: ಆರೋಪ ಮಾಡು; ಇನಿಬರ: ಇಷ್ಟು ಜನ; ಮೀರು: ಉಲ್ಲಂಘಿಸು, ದಾಟು; ರಣ: ಯುದ್ಧ; ಭಂಗ: ನಾಶ, ಹಾಳು; ತಪ್ಪು:ನೀತಿಬಿಟ್ಟ ನಡೆ, ಸುಳ್ಳಾಗು; ಹೋಗು: ತೆರಳು; ದೂರ: ಅಂತರ; ನಡೆ: ಆಚರಣೆ; ಕಾರ್ಯ: ಕೆಲಸ; ಗತಿ: ವೇಗ; ಜಾರು: ಕಳಚಿಕೊಳ್ಳು; ಜಡಿ: ಗದರಿಸು; ರಾಯ: ರಾಜ;

ಪದವಿಂಗಡಣೆ:
ಸಾರಿದೆವು +ನಿಮ್ಮೊಡನೆ +ಬಾರೆವು
ದೂರಲಾಗದು +ನಮ್ಮನ್+ಇನಿಬರ
ಮೀರಿದೊಡೆ +ರಣಭಂಗ +ತಪ್ಪನು +ಹೋಗಬೇಡೆನಲು
ದೂರತಾರೆವು+ ನಿಮಗೆ+ ನಾವ್+ ಕೈ
ಮೀರಿ +ನಡೆಯೆವು+ ಕಾರ್ಯಗತಿಯಲಿ
ಜಾರಿ +ಜಡಿತೆಯ+ ಮಾಡೆವೆಂದನು+ ಕೌರವರ+ ರಾಯ

ಅಚ್ಚರಿ:
(೧) ದೂರ, ಮೀರಿ – ೨,೪;೩,೫ ಸಾಲಿನ ಮೊದಲ ಪದ
(೨) ಸಾರಿ, ಜಾರಿ – ಪ್ರಾಸ ಪದಗಳು

ಪದ್ಯ ೧೦೮: ಶಿವನು ಏನನ್ನು ಹೇಳಿ ಅರ್ಜುನನನ್ನು ಬೀಳ್ಕೊಟ್ಟನು?

ಸರಳ ಸಾಂಗೋಪಾಂಗವನು ನಿನ
ಗರುಹಿದೆನು ನೀನಿನ್ನು ಶಕ್ರನ
ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ
ಹರಿ ಸಹಾಯನು ನಮ್ಮ ಸತ್ವದ
ಪರಮರೂಪಾತನು ಕಣಾ ನೀ
ನರಿದಿರೆಂದು ಮಹೇಶ ಬೀಳ್ಕೊಟ್ಟನು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ಬಳಿಕ ಶಂಕರನು ಅರ್ಜುನನಿಗೆ ವಿಧಿವತ್ತಾಗಿ ಪಾಶುಪತಾಸ್ತ್ರದ ಅಂಗ ಉಪಾಂಗಗಳ ಸಹಿತ ಎಲ್ಲವನ್ನೂ ಉಪದೇಶ ಮಾಡಿದನು. ನೀನಿನ್ನು ಇಂದ್ರನ ಪುರವಾದ ಅಮರಾವತಿಗೆ ತೆರಳು, ಮುಂದಿನ ನಿನ್ನ ಕಾರ್ಯಭಾರಗಳಿಗೆ ನಮ್ಮ ಸತ್ವಸ್ವರೂಪನಾದ ಶ್ರೀಕೃಷ್ಣನೇ ನಿಮಗೆ ಸಹಾಯ ಮಾಡುತ್ತಾನೆಂದು ಹೇಳಿ ಅರ್ಜುನನನ್ನು ಬೀಳ್ಕೊಟ್ಟನು.

ಅರ್ಥ:
ಸರಳ: ಸರಾಗ; ಸಾಂಗೋಪಾಂಗ: ವಿಧಿವತ್ತಾದುದು, ಶಾಸ್ತ್ರೋಕ್ತವಾದುದು; ಅರುಹು: ತಿಳಿಸು, ಹೇಳು; ಶಕ್ರ: ಇಂದ್ರ; ಪುರ: ಊರು; ನಡೆ: ಚಲಿಸು; ಉತ್ತರೋತ್ತರ: ಏಳಿಗೆ, ಬೆಳವಣಿಗೆ; ಕಾರ್ಯ: ಕೆಲಸ; ಹರಿ: ವಿಷ್ಣು; ಸಹಾಯ: ನೆರವು; ಸತ್ವ: ಸಾರ; ಪರಮ: ಶ್ರೇಷ್ಠ; ರೂಪ: ಆಕಾರ; ಅರಿ: ತಿಳಿ; ಮಹೇಶ: ಶಂಕರ; ಬೀಳ್ಕೊಟ್ಟು: ತೆರಳು;

ಪದವಿಂಗಡಣೆ:
ಸರಳ +ಸಾಂಗೋಪಾಂಗವನು+ ನಿನಗ್
ಅರುಹಿದೆನು +ನೀನಿನ್ನು +ಶಕ್ರನ
ಪುರಕೆ+ ನಡೆ +ನಿನ್+ಉತ್ತರೋತ್ತರ +ಕಾರ್ಯಗತಿಗಳಿಗೆ
ಹರಿ +ಸಹಾಯನು +ನಮ್ಮ +ಸತ್ವದ
ಪರಮರೂಪ+ಆತನು +ಕಣಾ +ನೀನ್
ಅರಿದಿರೆಂದು +ಮಹೇಶ +ಬೀಳ್ಕೊಟ್ಟನು+ ಧನಂಜಯನ

ಅಚ್ಚರಿ:
(೧) ನಿನಗರುಹಿದೆನು, ನೀನಿನ್ನು, ನಿನ್ನುತ್ತರೋತ್ತರ, ನೀನರಿದಿರೆಂದು – ನೀನ್ ಪದದ ಬಳಕೆ

ಪದ್ಯ ೫೮: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮ್ದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ (ಸಭಾ ಪರ್ವ, ೧೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ನೀನು ಪಾಂಡವರ ರಾಜ್ಯವನ್ನು ಅಪಹರಿಸಲು ಏನು ಮಾಡಬೇಕೆಂದು ನಿಶ್ಚೈಸಿರುವೆ, ಅದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತೀಯ? ಸಾಮ, ದಾನ, ಭೇದ, ದಂಡ ಈ ನಾಲ್ಕರಲ್ಲಿ ಯಾವ ಮಾರ್ಗವನ್ನು ಆರಿಸಿಕೊಂಡಿರುವೆ ಅಂಜದೆ ಹೇಳು ಎಂದು ಕೇಳಿದನು.

ಅರ್ಥ:
ನೆನೆ:ವಿಚಾರಿಸು, ಆಲೋಚಿಸು; ಮಗ: ಕುಮಾರ; ಸೂನು: ಪುತ್ರ; ರಾಜ್ಯ: ರಾಷ್ಟ್ರ; ಅಪಹಾರ: ದೋಚುವ; ಬುದ್ಧಿ: ಮನಸ್ಸು, ಚಿತ್ತ; ವಿಳಾಸ: ಯೋಜನೆ, ವಿಚಾರ; ಕಾರ್ಯ: ಕೆಲಸ; ಗತಿ: ವೇಗ; ಕಾರ್ಯಗತಿ: ಕಾರ್ಯರೂಪ; ದಾನ, ಸಾಮ, ಭೇದ, ದಂಡ: ಚತುರೋಪಾಯಗಳು; ನಿಶ್ಚೈಸು: ತೀರ್ಮಾನಿಸು; ಅಂಜು: ಹೆದರು;

ಪದವಿಂಗಡಣೆ:
ಏನ +ನೆನೆದೈ+ ಮಗನೆ +ಕುಂತೀ
ಸೂನುಗಳ +ರಾಜ್ಯ+ಅಪಹಾರದೊಳ್
ಳೇನು +ಬುದ್ಧಿ +ವಿಳಾಸವಾವುದು +ಕಾರ್ಯಗತಿ +ನಿನಗೆ
ದಾನದಲಿ +ಮೇಣ್ +ಸಾಮದಲಿ +ಭೇ
ದ+ಆನು+ಮತದಲಿ +ದಂಡದಲಿ+ ನೀ
ವೇನ+ ನಿಶ್ಚೈಸಿದಿರಿ+ ಹೇಳ್+ಇನ್+ಅಂಜಬೇಡೆಂದ

ಅಚ್ಚರಿ:
(೧) ಚತುರೋಪಾಯಗಳು – ಸಾಮ, ದಾನ, ಭೇದ, ದಂಡ