ಪದ್ಯ ೭: ನಳನು ಪುನಃ ರಾಜನಾದುದು ಹೇಗೆ?

ಬಳಿಕ ಕಾರ್ಕೋಟಕನ ದೆಸೆಯಿಂ
ದಳಿಯೆ ನಿಜ ಋತುಪರ್ಣಭೂಪನ
ನಿಳಯಕೋಲೈಸಿದನು ಬಾಹುಕನೆಂಬ ನಾಮದಲಿ
ಲಲನೆ ತೊಳಲಿದು ಬರುತ ತಮ್ದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿಂದಾಯ್ತು ನಳಭೂಪತಿಗೆ ನಿಜರಾಜ್ಯ (ಅರಣ್ಯ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ನಂತರ ನಳನು ಕಾರ್ಕೋಟಕನ ದೆಸೆಯಿಂದ ರೂಪವನ್ನು ಕಳೆದುಕೊಂಡು ಬಾಹುಕನೆಂಬ ಹೆಸರಿನಿಂದ ಋತುಪರ್ಣನ ಸಾರಥಿಯಾದನು. ಬಳಿಕ ದಮಯಂತಿಯು ತನ್ನ ತಂದೆ ಮನೆಗೆ ಹೋದಳು, ಅವಳ ದೆಸೆಯಿಂದ ನಳನು ಮತ್ತೆ ತನ್ನ ರಾಜ್ಯವನ್ನು ಪಡೆದು ರಾಜನಾದನು.

ಅರ್ಥ:
ಬಳಿಕ: ನಂತರ; ದೆಸೆ: ಕಾರಣ; ಅಳಿ: ನಾಶ; ನಿಜ: ತನ್ನ, ದಿಟ; ಭೂಪ: ರಾಜ; ನಿಳಯ: ಆಲಯ; ಓಲೈಸು: ಉಪಚರಿಸು; ನಾಮ: ಹೆಸರು; ಲಲನೆ: ಹುಡುಗಿ; ತೊಳಲು: ಬವಣೆ, ಸಂಕಟ; ಬರುತ: ಆಗಮನ; ತಂದೆ: ಪಿತ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ನಳಿನಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು; ಭೂಪತಿ: ರಾಜ; ರಾಜ್ಯ: ದೇಶ;

ಪದವಿಂಗಡಣೆ:
ಬಳಿಕ +ಕಾರ್ಕೋಟಕನ +ದೆಸೆಯಿಂದ್
ಅಳಿಯೆ +ನಿಜ+ ಋತುಪರ್ಣ+ಭೂಪನ
ನಿಳಯಕ್+ಓಲೈಸಿದನು +ಬಾಹುಕನೆಂಬ +ನಾಮದಲಿ
ಲಲನೆ +ತೊಳಲಿದು +ಬರುತ+ ತಂದೆಯ
ನಿಳಯವನು +ಸಾರಿದಳು +ಬಳಿಕಾ
ನಳಿನಮುಖಿಯಿಂದ್+ಆಯ್ತು +ನಳ+ಭೂಪತಿಗೆ+ ನಿಜ+ರಾಜ್ಯ

ಅಚ್ಚರಿ:
(೧) ಕಾರ್ಕೋಟಕ, ಋತುಪರ್ಣ, ಬಾಹುಕ, ನಳ, ನಳಿನಮುಖಿ (ದಮಯಂತಿ), ತಂದೆ (ಭೀಮರಾಜ)
(೨) ಲಲನೆ, ನಳಿನಮುಖಿ; ಭೂಪ, ಭೂಪತಿ – ಸಮನಾರ್ಥಕ ಪದಗಳು

ಪದ್ಯ ೭: ಯಾವ ಖಗಮೃಗಗಳು ಯಾವ ಪಕ್ಷವನ್ನು ಸೇರಿದರು?

ಶೇಷ ಕಾರ್ಕೋಟಕನು ತಕ್ಷಕ
ವಾಸುಕಿ ಪ್ರಮುಖರಿಗೆ ವಿಜಯದ
ವಾಸಿ ಪಾರ್ಥನ ಮೇಲೆಯುಳಿದೀ ಕ್ರೂರಫಣಿಗಳಿಗೆ
ಆಸೆ ಕರ್ಣನ ಮೇಲೆ ಖಗಮೃಗ
ಕೇಸರಿಗಳಾಚೆಯಲಿ ಜಂಬುಕ
ಕಾಸರ ವ್ಯಾಳಾದಿ ಖಗಮೃಗವಿತ್ತ ಲಾಯ್ತೆಂದ (ಕರ್ಣ ಪರ್ವ, ೨೨ ಸಂಧಿ, ೭ ಪದ್ಯ)

ತಾತ್ಪರ್ಯ:
ಹಾವುಗಳಾದ ಆದಿಶೇಷ, ಕಾರ್ಕೋಟಕ, ತಕ್ಷಕ, ವಾಸುಕಿ ಇವರಿಗೆ ಅರ್ಜುನನು ಗೆಲ್ಲಬೇಕೆಂಬ ಆಸೆ, ಉಳಿದ ಕ್ರೂರ ಸರ್ಪಗಳು ಕರ್ಣನ ಪರವಾಲಿದರು. ಸಿಂಹವೇ ಮೊದಲಾದ ಮೃಗ ಪಕ್ಷಿಗಳು ಅರ್ಜುನನ ಕಡೆ ಉಳಿದರೆ, ನರಿ, ಕಾಡುಕೋಣ, ಹಾವು ಮೊದಲಾದವು ಕರ್ಣನ ಬಳಗ ಸೇರಿದವು.

ಅರ್ಥ:
ಶೇಷ: ಆದಿಶೇಷ, ಹಾವಿನ ಹೆಸರು; ಪ್ರಮುಖ: ಮುಖ್ಯವಾದ; ವಿಜಯ: ಗೆಲುವು; ವಾಸಿ: ಸ್ಥಾನ; ಉಳಿದ: ಮಿಕ್ಕ; ಕ್ರೂರ: ಕೆಟ್ಟ; ಫಣಿ: ಹಾವು; ಆಸೆ: ಇಚ್ಛೆ; ಖಗ: ಪಕ್ಷಿ; ಮೃಗ: ಪ್ರಾಣಿ; ಕೇಸರಿ: ಸಿಂಹ; ಆಚೆ: ಆ ಬದಿ; ಜಂಬುಕ: ನರಿ; ಕಾಸರ: ಕಾಡುಕೋಣ; ವ್ಯಾಳ: ಹಾವು;

ಪದವಿಂಗಡಣೆ:
ಶೇಷ +ಕಾರ್ಕೋಟಕನು +ತಕ್ಷಕ
ವಾಸುಕಿ +ಪ್ರಮುಖರಿಗೆ +ವಿಜಯದ
ವಾಸಿ +ಪಾರ್ಥನ +ಮೇಲೆ+ಉಳಿದ್+ಈ+ ಕ್ರೂರ+ಫಣಿಗಳಿಗೆ
ಆಸೆ +ಕರ್ಣನ +ಮೇಲೆ +ಖಗ+ಮೃಗ
ಕೇಸರಿಗಳ್+ಆಚೆಯಲಿ +ಜಂಬುಕ
ಕಾಸರ +ವ್ಯಾಳಾದಿ +ಖಗ+ಮೃಗವ್+ಇತ್ತಲ್ +ಆಯ್ತೆಂದ

ಅಚ್ಚರಿ:
(೧) ಸರ್ಪಗಳ ಹೆಸರು – ಶೇಷ, ಕಾರ್ಕೋಟಕ, ತಕ್ಷಕ, ವಾಸುಕಿ