ಪದ್ಯ ೨೦: ಶ್ರೀಕೃಷ್ಣನು ಉಳಿದವರ ಬಳಿ ಹೇಗೆ ಮಾತಾಡಿದನು?

ಎಂದು ಬುದ್ಧಿಯ ಹೇಳಿ ಪಾರ್ಥನ
ನಂದನನ ಕರೆಸಿದನು ತಾಯ್ಸಹಿ
ತೆಂದನವರಿಗೆ ನಯದಲುಚಿತ ಪ್ರೀತಿ ವಚನದಲಿ
ಬಂದು ಕುಂತಿಗೆ ಸಾರನಗೆ ನುಡಿ
ಯಿಂದ ವಿನಯವ ಮಾಡಿ ಪಾಂಡವ
ನಂದನರ ಮನ್ನಿಸಿದನತಿ ಕಾರುಣ್ಯಭಾವದಲಿ (ಸಭಾ ಪರ್ವ, ೧೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದ್ರೌಪದಿಗೆ ಬುದ್ಧಿಯ ಮಾತುಗಳನ್ನು ಹೇಳಿ, ಸುಭದ್ರೆ ಮತ್ತು ಅಭಿಮನ್ಯುರನ್ನು ಕರೆಸಿ ಪ್ರೀತಿಯ ಮಾತುಗಳನ್ನಾಡಿದನು. ನಂತರ ಕುಂತಿಯ ಬಳಿಗೆ ಹೋಗಿ ಸಂತೋಷದಿಂದ ವಿನಯ, ಪ್ರೀತಿ ಭರಿತವಾದ ಮಾತುಗಳನ್ನಾಡಿ, ಪಾಂಡವರನ್ನು ಕರುಣೆಯಿಂದ ಅನುಗ್ರಹಿಸಿದನು.

ಅರ್ಥ:
ಬುದ್ಧಿ: ತಿಳಿವು, ಅರಿವು; ಹೇಳು: ತಿಳಿಸು; ನಂದನ: ಮಗ; ಕರೆಸು: ಬರೆಮಾಡು; ತಾಯಿ: ಮಾತೆ; ಸಹಿತ; ಜೊತೆ; ನಯ: ನುಣುಪು, ಮೃದುತ್ವ; ಉಚಿತ: ಸರಿಯಾದ; ಪ್ರೀತಿ: ಒಲವು; ವಚನ: ನುಡಿ; ಬಂದು: ಆಗಮಿಸು; ಸಾರ: ಶ್ರೇಷ್ಠವಾದ, ಉತ್ಕೃಷ್ಟವಾದ; ನಗೆ: ಸಂತಸ; ನುಡಿ: ಮಾತು; ವಿನಯ: ಸೌಜನ್ಯ; ಮನ್ನಿಸು: ಗೌರವಿಸು, ಅನುಗ್ರಹಿಸು; ಅತಿ: ಬಹಳ; ಕಾರುಣ್ಯ: ದಯೆ; ಭಾವ: ಭಾವನೆ, ಸಂವೇದನೆ;

ಪದವಿಂಗಡಣೆ:
ಎಂದು+ ಬುದ್ಧಿಯ +ಹೇಳಿ +ಪಾರ್ಥನ
ನಂದನನ+ ಕರೆಸಿದನು+ ತಾಯ್+ಸಹಿತ್
ಎಂದನ್+ಅವರಿಗೆ +ನಯದಲ್+ಉಚಿತ +ಪ್ರೀತಿ +ವಚನದಲಿ
ಬಂದು +ಕುಂತಿಗೆ +ಸಾರ+ನಗೆ +ನುಡಿ
ಯಿಂದ +ವಿನಯವ+ ಮಾಡಿ +ಪಾಂಡವ
ನಂದನರ+ ಮನ್ನಿಸಿದನ್+ಅತಿ+ ಕಾರುಣ್ಯ+ಭಾವದಲಿ

ಅಚ್ಚರಿ:
(೧) ನಂದನ – ೨, ೬ ಸಾಲಿನ ಮೊದಲ ಪದ
(೨) ವಚನ, ನುಡಿ – ಸಮನಾರ್ಥಕ ಪದ