ಪದ್ಯ ೨೦: ಭೀಷ್ಮರು ಯಾರನ್ನು ಅಪ್ಸರೆಯರ ಬಳಿ ಕಳುಹಿಸಿದನು?

ಅಂಗವಿಸಿ ಮರಿಹುಲ್ಲೆ ಖುರದಲಿ
ಸಿಂಗವನು ಹೊಯ್ವಂತೆ ನೃಪರು
ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ
ಅಂಗವಣೆಯನು ಹೊಗಳುತಾ ದಿವಿ
ಜಾಂಗನಾ ಕಾಮುಕರ ಮಾಡಿಯ
ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ (ಭೀಷ್ಮ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜಿಂಕೆಯ ಮರಿಗಳು ತಮ್ಮ ಗೊರಸಿನಿಂದ ಸಿಂಹವನ್ನು ಹೊಡೆವಂತೆ ರಾಜರು ಪ್ರೌಢ ಪ್ರತಾಪಿಯಾದ ಭೀಷ್ಮನನ್ನು ಖಡ್ಗದಿಮ್ದ ಹೊಡೆಯಲು ಬಂದರು. ಅವರ ಸಾಹಸವನ್ನು ಹೊಗಳುತ್ತಾ ಭೀಷ್ಮನು ಅವರು ಅಪ್ಸರ ಸ್ತ್ರೀಯರನ್ನು ಕಾಮಿಸುವಂತೆ ಮಾಡಿದನು.

ಅರ್ಥ:
ಅಂಗವಿಸು: ಬಯಸು, ಸ್ವೀಕರಿಸು; ಮರಿಹುಲ್ಲೆ: ಜಿಂಕೆಮರಿ; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಸಿಂಗ: ಸಿಂಹ, ಕೇಸರಿ; ಹೊಯ್ವ: ಹೊಡೆಯುವ; ನೃಪ: ರಾಜ; ಉತ್ತುಂಗ: ಉನ್ನತವಾದ; ಸಹಸಿ: ಪರಾಕ್ರಮಿ; ಕೈಮಾಡು: ಹೋರಾಡು; ಖಡ್ಗ: ಕತ್ತಿ; ಅಂಗವಣೆ: ಬಯಕೆ, ಉದ್ದೇಶ; ಹೊಗು: ತೆರಳು; ದಿವಿಜಾಂಗನೆ: ಅಪ್ಸರೆ; ಕಾಮುಕ: ಕಾಮಾಸಕ್ತನಾದವನು, ಲಂಪಟ; ಭಂಗ: ತುಂಡು, ಚೂರು; ಅಭಂಗ: ಸೋಲಿಲ್ಲದ; ಮೆರೆ: ಹೊಳೆ, ಪ್ರಕಾಶಿಸು; ಉನ್ನತ: ಹೆಚ್ಚು; ಬಾಹು: ಭುಜ; ವಿಕ್ರಮ: ಪರಾಕ್ರಮ;

ಪದವಿಂಗಡಣೆ:
ಅಂಗವಿಸಿ +ಮರಿಹುಲ್ಲೆ +ಖುರದಲಿ
ಸಿಂಗವನು +ಹೊಯ್ವಂತೆ +ನೃಪರ್
ಉತ್ತುಂಗ +ಸಹಸಿಯ +ಮೇಲೆ +ಕೈಮಾಡಿದರು +ಖಡ್ಗದಲಿ
ಅಂಗವಣೆಯನು +ಹೊಗಳುತಾ +ದಿವಿ
ಜಾಂಗನಾ +ಕಾಮುಕರ+ ಮಾಡಿ+
ಅಭಂಗ +ಭೀಷ್ಮನು +ಮೆರೆದನ್+ಉನ್ನತ +ಬಾಹುವಿಕ್ರಮವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಂಗವಿಸಿ ಮರಿಹುಲ್ಲೆ ಖುರದಲಿ ಸಿಂಗವನು ಹೊಯ್ವಂತೆ
(೨) ಸಾಯಿಸಿದನು ಎಂದು ಹೇಳಲು – ದಿವಿಜಾಂಗನಾ ಕಾಮುಕರ ಮಾಡಿಯಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ

ಪದ್ಯ ೭೯: ಭೀಮನು ನಾಟ್ಯ ಮಂದಿರಕ್ಕೆ ತೆರಳಲು ಹೇಗೆ ಸಿದ್ಧನಾದನು?

ಭೀಮ ನಿಂದಿರು ನಾಟ್ಯ ನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸದ ಮಾಡದಿರು ಹೂಡದಿರಲ್ಪಬುದ್ಧಿಗಳ
ಕಾಮುಕನನಡೆಗೆಡಹಿ ನಿಜಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟಿನಲಿ (ವಿರಾಟ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಭೀಮ ನೀನು ನಾಟ್ಯ ಮಂದಿರದಲ್ಲಿ ನಿಲ್ಲು, ನಾಟ್ಯ ನಿಲಯಕ್ಕೆ ಬಾಯೆಂದು ಆ ಮದಾಂಧನಿಗೆ ಹೇಳಿ ಬಂದಿದ್ದೇನೆ. ಸೋಮಾರಿತನ ಮಾಡಬೇಡ, ಅಲ್ಪ ಬುದ್ಧಿಗಲನ್ನು ತೀಗ್ಯಬೇಡ. ಕಾಮುಕನಾದ ಕೀಚಕನನ್ನು ಸಂಹರಿಸಿ, ನನ್ನ ಮೇಲಿರುವ ನಿನ್ನ ಪ್ರೇಮವನ್ನು ತೋರಿಸು, ಎಂದು ದ್ರೌಪದಿಯು ಹೇಳಲು, ಭೀಮನು ನಗುತ್ತಾ ಎದ್ದು ಮಲ್ಲಗಂಟಿನ ಮಡಿಕೆಯನ್ನು ಹಾಕಿ ವಸ್ತ್ರವನ್ನುಟ್ಟನು.

ಅರ್ಥ:
ನಿಲ್ಲು: ಕಾಯು, ಎದುರು ನೋಡು; ನಾಟ್ಯ: ನೃತ್ಯ; ನಿಲಯ: ಮನೆ, ಮಂದಿರ; ಮದಾಂಧ: ಗರ್ವದಿಂದ ವಿವೇಕವನ್ನು ಕಳೆದುಕೊಂಡವನು; ನುಡಿ: ಮಾತಾದು; ಬಂದೆ: ಆಗಮನ; ತಾಮಸ: ಜಾಡ್ಯ, ಮೂಢತನ; ಹೂಡು: ಅಣಿಗೊಳಿಸು; ಅಲ್ಪ: ಸಣ್ಣದಾದ; ಬುದ್ಧಿ: ತಿಳಿವು, ಅರಿವು; ಕಾಮುಕ: ಕಾಮಾಸಕ್ತನಾದವನು, ಲಂಪಟ; ಪ್ರೇಮ: ಒಲವು; ತೋರು: ಪ್ರದರ್ಶಿಸು; ನಗು: ಸಂತಸ; ಉದ್ದಾಮ: ಶ್ರೇಷ್ಠ; ಘಳಿ: ಮಡಿಕೆ, ನೆರಿಗೆ ಸೀರೆ; ಮಲ್ಲಗಂಟು: ಕಾಸಿಯನ್ನು ಕಟ್ಟುವುದು; ಕೆಡಹು: ಕೆಳಕ್ಕೆ ತಳ್ಳು, ಸೋಲಿಸು; ಅಡೆಕೆಡಹು: ಅಡ್ಡಹಾಕಿ ಸೋಲಿಸು;

ಪದವಿಂಗಡಣೆ:
ಭೀಮ+ ನಿಂದಿರು +ನಾಟ್ಯ +ನಿಲಯವ
ನಾ +ಮದಾಂಧಗೆ+ ನುಡಿದು+ ಬಂದೆನು
ತಾಮಸದ+ ಮಾಡದಿರು +ಹೂಡದಿರ್+ಅಲ್ಪಬುದ್ಧಿಗಳ
ಕಾಮುಕನನ್+ಅಡೆಗೆಡಹಿ+ ನಿಜಸು
ಪ್ರೇಮವನು +ತೋರೆನಲು +ನಗುತ್
ಉದ್ದಾಮನೆದ್ದನು+ ಫಳಿಯನುಟ್ಟನು +ಮಲ್ಲಗಂಟಿನಲಿ

ಅಚ್ಚರಿ:
(೧) ಭೀಮನು ಸಿದ್ಧನಾದ ಪರಿ – ಉದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟನಲಿ

ಪದ್ಯ ೨೬: ಯಾರಿಗೆ ಪರಲೋಕವು ಲಭಿಸುವುದಿಲ್ಲ -೩?

ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮವಿ
ರಾಮಕಾರಿಗೆ ಕೂಟ ಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ (ಅರಣ್ಯ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನ ಕೇಳು, ಸ್ವಾಮಿಕಾರ್ಯವನ್ನು ಕೆಡಿಸುವವನಿಗೆ, ಅತಿ ಕಾಮುಕನಿಗೆ, ಸುಳ್ಳು ಅಪವಾದವನ್ನು ಹೊರಿಸುವವನಿಗೆ, ಬ್ರಾಹ್ಮಣ ದ್ವೇಷಿಗೆ, ಅತಿ ಆಶೆಯನ್ನಿಟ್ಟು ಕೊಂಡವನಿಗೆ, ಅತಿ ಆಸೆಯನ್ನಿಟ್ಟುಕೊಂಡವನಿಗೆ, ಅನುಪಕಾರಿಗೆ, ಮೋಸಮಾಡುವವನಿಗೆ, ಡಂಭಾಚಾರಿಯಾದವನಿಗೆ, ಸುಳ್ಳು ಲೆಕ್ಕಗಳನ್ನು ಹೇಳುವ ಗ್ರಾಮದ ಒಡೆಯನಿಗೆ, ಪಾಷಂಡಿಗೆ, ಆತ್ಮವನ್ನು ಮರೆತವನಿಗೆ, ಸುಳ್ಳು ಸಾಕ್ಷಿಹೇಳುವವನಿಗೆ, ನಾಮಧಾರಿಗೆ ಸೋಗು ಹಾಕುವವನಿಗೆ ಪರಲೋಕವಿಲ್ಲೆಂದು ಧರ್ಮಜನು ಹೇಳಿದನು.

ಅರ್ಥ:
ಸ್ವಾಮಿ: ಒಡೆಯ; ಕಾರ್ಯ: ಕೆಲಸ; ವಿಘಾತ: ನಾಶ; ಅತಿ: ಬಹಳ; ಕಾಮುಕ: ಕಾಮಾಸಕ್ತನಾದವನು, ಲಂಪಟ; ಮಿಥ್ಯ: ಸುಳ್ಳು; ಅಪವಾದ: ನಿಂದೆ, ಆರೋಪ; ಭೂಮಿ: ಪೃಥ್ವಿ; ದೇವ: ಒಡೆಯ;ದ್ವೇಷಿ: ಶತ್ರು; ಅತ್ಯಾಶಿ: ಅತಿ ಆಸೆ ಪಡುವ; ಬಕ: ಕಪಟಿ, ವಂಚಕ; ಗ್ರಾಮ: ಹಳ್ಳಿ; ಪಾಷಂಡ: ಪಾಖಂಡ, ವೈದಿಕ ಸಂಪ್ರ ದಾಯಕ್ಕೆ ವಿರುದ್ಧವಾದ ಮತ; ಆತ್ಮ: ಜೀವ; ವಿರಾಮ: ಬಿಡುವು, ವಿಶ್ರಾಂತಿ; ಕೂಟ: ಒಡನಾಟ; ಸಾಕ್ಷಿ: ಪುರಾವೆ, ರುಜುವಾತು; ನಾಮಧಾರಿ: ಹರಿದಾಸ ದೀಕ್ಷೆ ಹೊಂದಿದವ, ವೈಷ್ಣವ; ಪರಲೋಕ: ಬೇರೆ ಲೋಕ;

ಪದವಿಂಗಡಣೆ:
ಸ್ವಾಮಿಕಾರ್ಯ+ ವಿಘಾತಕಂಗ್+ಅತಿ
ಕಾಮುಕಗೆ +ಮಿಥ್ಯ+ಅಪವಾದಿಗೆ
ಭೂಮಿದೇವ +ದ್ವೇಷಿಗ್+ಅತಿ+ಆಶಿಗೆ+ ಬಕವ್ರತಿಗೆ
ಗ್ರಾಮಣಿಗೆ +ಪಾಷಂಡಗ್+ಆತ್ಮ+ವಿ
ರಾಮಕಾರಿಗೆ +ಕೂಟ +ಸಾಕ್ಷಿಗೆ
ನಾಮಧಾರಿಗೆ +ಪಾರ್ಥ +ಕೇಳ್ +ಪರಲೋಕವಿಲ್ಲೆಂದ

ಅಚ್ಚರಿ:
(೧) ವಿಘಾತ, ಕಾಮುಕ, ಅಪವಾದಿ, ದ್ವೇಷಿ, ಬಕವ್ರತಿ, ಪಾಷಂಡ,ವಿರಾಮಕಾರಿ, ನಾಮಧಾರಿ – ಮನುಷ್ಯರ ಸ್ವಭಾವಗಳನ್ನು ಹೇಳುವ ಪದ್ಯ

ಪದ್ಯ ೭೫: ಯಾರಿಗೆ ಧರ್ಮದ ಪರಿವೆಯಿರುವುದಿಲ್ಲ?

ಮತ್ತನತಿಶಾಂತ ಪ್ರಮತ್ತೋ
ನ್ಮತ್ತನತಿ ಕುಪಿತಾನನನು ಚಲ
ಚಿತ್ತನತಿಕಾಮುಕನು ಲುಬ್ಧನು ಶೂರನೆಂಬವನು
ಕ್ಷುತ್ತು ಘನವಾಗುಳ್ಳನಿಂತೀ
ಹತ್ತು ಜನವಾವಾಗ ಧರ್ಮದ
ತತ್ತವಣೆಗಳನರಿಯರೈ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೭೫ ಪದ್ಯ)

ತಾತ್ಪರ್ಯ:
ಅಮಲೇರಿದವನು, ಅತಿಯಾದ ಶಾಂತಸ್ವಭಾವನು, ಸೊಕ್ಕಿನ ಸ್ವಭಾವದವನು, ಬಹಳ ಕೊಬ್ಬಿದವನು, ಬಹಳ ಕೋಪಗೊಂಡ ಮುಖವುಳ್ಳವನು, ಚಂಚಲ ಸ್ವಭಾವದವನು, ಅತಿ ಕಾಮುಕನು, ಲೋಭಿ, ಶೂರನು, ತುಂಬ ಹಸಿದವನು ಈ ಹತ್ತು ರೀತಿಯ ಜನರಿಗೆ ಧರ್ಮದ ಪರಿವೆಯಿರುವುದಿಲ್ಲ.

ಅರ್ಥ:
ಮತ್ತ: ಮತ್ತೇರಿದ, ಅಮಲೇರಿದ; ಅತಿ: ತುಂಬ; ಶಾಂತ:ತಳಮಳವಿಲ್ಲದ, ಕ್ಷೋಭೆಯಿಲ್ಲದ; ಪ್ರಮತ್ತ: ಸೊಕ್ಕುವ, ಮದವೇರುವ; ಉನ್ಮತ್ತ: ಹುಚ್ಚು ಹಿಡಿದವನು, ಕೊಬ್ಬಿದ; ಕುಪಿತ: ಕೋಪ; ಆನನ: ಮುಖ; ಚಲ: ಚಂಚಲ; ಚಿತ್ತ: ಮನಸ್ಸು; ಕಾಮುಕ: ಕಾಮಾಸಕ್ತ, ಲಂಪಟ; ಲುಬ್ಧ: ಲೋಭಿ, ಜಿಪುಣ; ಶೂರ: ಬಲಶಾಲಿ; ಕ್ಷುತ್ತು: ಹಸಿವೆ; ಘನ: ಶ್ರೇಷ್ಠ, ಭಾರ; ಹತ್ತು: ದಶ; ಧರ್ಮ: ಧಾರಣೆ ಮಾಡುವುದು, ನಿಯಮ, ಆಚಾರ; ತತ್ತವಣೆ: ವಿಸ್ತಾರ, ವ್ಯಾಪ್ತಿ; ಅರಿ: ತಿಳಿ; ಭೂಪಾಲ: ರಾಜ;

ಪದವಿಂಗಡಣೆ:
ಮತ್ತನ್+ಅತಿ+ಶಾಂತ +ಪ್ರಮತ್ತ
ಉನ್ಮತ್ತನ್+ಅತಿ ಕುಪಿತ+ಆನನನು +ಚಲ
ಚಿತ್ತನ್ + ಅತಿ+ಕಾಮುಕನು +ಲುಬ್ಧನು +ಶೂರನೆಂಬವನು
ಕ್ಷುತ್ತು +ಘನವಾಗುಳ್ಳನ್+ಇಂತೀ
ಹತ್ತು +ಜನವ್+ ಆವಾಗ+ ಧರ್ಮದ
ತತ್ತವಣೆಗಳನ್+ಅರಿಯರೈ +ಭೂಪಾಲ +ಕೇಳೆಂದ

ಅಚ್ಚರಿ:
(೧) ಹತ್ತು ರೀತಿಯ ಜನ – ಮತ್ತ, ಶಾಂತ, ಪ್ರಮತ್ತ ಉನ್ಮತ್ತ, ಕುಪಿತ, ಚಲಚಿತ್ತ, ಕಾಮುಕ, ಲುಬ್ಧ, ಶೂರ, ಕ್ಷುತ್ತು