ಪದ್ಯ ೩೪: ಊರ್ವಶಿಯು ಯಾವ ತಾಪದಿಂದ ಬಳಲುತ್ತಿದ್ದಳು?

ತಿಳುಹಿದೊಡೆ ಸುರಲೋಕದವರತಿ
ಗಳಹೆಯರಲಾಯೆಂಬೆ ಮನ್ಮಥ
ಖಳಕಣಾ ನಿಷ್ಕರುಣಿ ನೀ ಸೌಭಾಗ್ಯಗರ್ವದಲಿ
ಒಲುಮೆಬಿದ್ದುದು ವಾಸಿಯಲಿ ಕಂ
ದೊಳಸುಗೊಂಡುದು ಕಾಮಶರ ಮನ
ವಳುಕೆ ಕೆಡಹಿತು ವಿರಹತಾಪದಲೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ನಾನು ಬಾಯಿ ಬಿಟ್ಟು ಹೇಳಿದರೆ, ಸ್ವರ್ಗಲೋಕದವರು ಬಾಯಿ ಬಡುಕಿಯರು ಎಂದು ಹೇಳುತ್ತೀಯ. ಆದರೆ ಕಾಮನು ಮಹಾ ನೀಚನು, ನೀನೋ ಮಹಾ ಸೌಭಾಗ್ಯಶಾಲಿ ಎಂಬ ಗರ್ವದಿಂದ ಕರುಣೆಯನ್ನೇ ಕಳೆದುಕೊಂಡಿರುವೆ. ನನಗಾದರೋ ಛಲ ಹುಟ್ಟಿದೆ. ಮನ್ಮಥನ ಪುಷ್ಪಬಾಣಗಳು ನನ್ನ ಅಂತರಂಗವನ್ನು ಹೊಕ್ಕಿವೆ, ನನ್ನ ಮನಸ್ಸು ಅಳುಕಿ ವಿರಹತಾಪಕ್ಕೆ ಪಕ್ಕಾಗಿದೆ ಎಂದು ಊರ್ವಶಿ ಹೇಳಿದಳು.

ಅರ್ಥ:
ತಿಳುಹಿ: ತಿಳಿಸು, ಗೋಚರಿಸು; ಸುರಲೋಕ: ಸ್ವರ್ಗ; ಗಳಹು: ಪ್ರಲಾಪಿಸು, ಹೇಳು; ಎಂಬೆ: ಹೇಳುವೆ; ಮನ್ಮಥ: ಕಾಮ; ಖಳ: ದುಷ್ಟ; ನಿಷ್ಕರುಣಿ: ದಯೆಯಿಲ್ಲದವ; ಸೌಭಾಗ್ಯ: ಅದೃಷ್ಟವಂತ; ಗರ್ವ: ಸೊಕ್ಕು, ಹೆಮ್ಮೆ; ಒಲುಮೆ: ಪ್ರೀತಿ; ವಾಸಿ: ಛಲ, ಹಠ; ಕಂದೊಳಸು: ಕಕ್ಕಾಬಿಕ್ಕಿಯಾಗು; ಕಾಮ: ಮನ್ಮಥ; ಶರ: ಬಾಣ; ಮನ: ಮನಸ್ಸು; ಅಳುಕು: ಹೆದರು; ಕೆಡಹು: ಅವ್ಯವಸ್ಥಿತವಾಗು, ಹದಗೆಡು; ವಿರಹ: ಅಗಲಿಕೆ, ವಿಯೋಗ; ತಾಪ: ಬಿಸಿ, ಶಾಖ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ತಿಳುಹಿದೊಡೆ +ಸುರಲೋಕದವರ್+ಅತಿ
ಗಳಹೆಯರಲಾ+ಎಂಬೆ +ಮನ್ಮಥ
ಖಳ+ಕಣಾ +ನಿಷ್ಕರುಣಿ+ ನೀ +ಸೌಭಾಗ್ಯ+ಗರ್ವದಲಿ
ಒಲುಮೆ+ಬಿದ್ದುದು +ವಾಸಿಯಲಿ +ಕಂ
ದೊಳಸುಗೊಂಡುದು+ ಕಾಮಶರ+ ಮನವ್
ಅಳುಕೆ +ಕೆಡಹಿತು+ ವಿರಹ+ತಾಪದಲ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಮನ್ಮಥನನ್ನು ವರ್ಣಿಸುವ ಪರಿ – ಮನ್ಮಥ ಖಳಕಣಾ ನಿಷ್ಕರುಣಿ
(೨) ಊರ್ವಶಿಯನ್ನು ಆವರಿಸಿದ ತಾಪ – ಕಾಮಶರ ಮನವಳುಕೆ ಕೆಡಹಿತು ವಿರಹತಾಪದಲ್

ಪದ್ಯ ೨೩: ಊರ್ವಶಿಯು ಅರ್ಜುನನನ್ನು ಏನೆಂದು ಪ್ರಶ್ನಿಸಿದಳು?

ಎಲವೊ ರಾಯನ ಹೇಳಿಕೆಯಲಂ
ಡಲೆದನೆನ್ನನು ಚಿತ್ರಸೇನಕ
ನಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ
ಒಲಿದು ಬಂದಬಲೆಯರ ಟಕ್ಕರಿ
ಗಳೆವುದೇ ವಿಟಧರ್ಮವಕಟಾ
ತಿಳಿಯಲಾ ತಾನಾವಳೆಂಬುದನೆಂದಳಿಂದು ಮುಖಿ (ಅರಣ್ಯ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನೊಂದಿಗೆ ಮಾತನಾಡುತ್ತಾ, ಎಲವೋ ಅರ್ಜುನ, ಇಂದ್ರನು ಹೇಳಿದುದರಿಂದ, ಚಿತ್ರಸೇನನು ನನ್ನ ಬೆನ್ನುಹತ್ತಿ ಬಿಡದೆ ಕಾಡಿದುದರಿಂದ ನಾನಿಲ್ಲಿಗೆ ಬಂದೆ, ಪ್ರೀತಿಸಿ ಬಂದ ತರುಣಿಯನ್ನು ತಿರಸ್ಕರಿಸುವದು ವಿಟರ ಧರ್ಮವೇ? ಅಯ್ಯೋ ನಾನು ಯಾರೆಂಬುದು ನಿನಗೆ ತಿಳಿಯದೇ? ಎಂದು ಅರ್ಜುನನನ್ನು ಪ್ರಶ್ನಿಸಿದಳು.

ಅರ್ಥ:
ರಾಯ: ರಾಜ; ಹೇಳಿಕೆ: ತಿಳಿಸು; ಅಂಡಲೆ: ಪೀಡೆ, ಕಾಡು; ಅಲುಗು: ಅಲ್ಲಾಡಿಸು, ಅದುರು; ನೆಟ್ಟು: ಒಳಹೊಕ್ಕು; ಕಾಮ: ಮನ್ಮಥ; ಶರ: ಬಾಣ; ಅಂತರಂಗ: ಆಂತರ್ಯ; ಒಲಿ: ಪ್ರೀತಿಸು; ಬಂದ: ಆಗಮಿಸು; ಅಬಲೆ: ಹೆಣ್ಣು; ಟಕ್ಕ: ವಂಚಕ; ವಿಟ: ಕಾಮುಕ, ವಿಷಯಾಸಕ್ತ; ಅಕಟಾ: ಅಯ್ಯೋ; ತಿಳಿ: ಅರಿವು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಚೆಲುವೆ;

ಪದವಿಂಗಡಣೆ:
ಎಲವೊ+ ರಾಯನ +ಹೇಳಿಕೆಯಲ್+
ಅಂಡಲೆದನ್+ಎನ್ನನು +ಚಿತ್ರಸೇನಕನ್
ಅಲುಗಿ+ ನೆಟ್ಟವು+ ಕಾಮಶರವ್+ಎನ್+ಅಂತರಂಗದಲಿ
ಒಲಿದು+ ಬಂದ್+ಅಬಲೆಯರ +ಟಕ್ಕರಿ
ಕಳೆವುದೇ +ವಿಟ+ಧರ್ಮವ್+ಅಕಟಾ
ತಿಳಿಯಲಾ +ತಾನ್+ಆವಳ್+ಎಂಬುದನ್+ಎಂದಳ್+ಇಂದು ಮುಖಿ

ಅಚ್ಚರಿ:
(೧) ಊರ್ವಶಿಯು ಬಂದ ಕಾರಣ – ಅಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ
(೨) ವಿಟ ಧರ್ಮವಾವುದು – ಒಲಿದು ಬಂದಬಲೆಯರ ಟಕ್ಕರಿಗಳೆವುದೇ ವಿಟಧರ್ಮವ್?