ಪದ್ಯ೩೦: ಕೃಷ್ಣನ ಗುಣಗಾನವನ್ನು ಭೀಷ್ಮರು ಹೇಗೆ ಮಾಡಿದರು?

ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಾಕ್ಷಸರಾದ ಮಧು ಕೈಟಭರನ್ನು ಸಂಹರಿಸಿದ ಈ ಮಹಾತ್ಮನನೊಡನೆ ವಾದಮಾಡುವ ಮೂರ್ಖತನ ತೋರಿದ ಶಿಶುಪಾಲ ಬಾಲಕನೆಂಬ ಹುಚ್ಚನಿಗೆ ಏನೆಂದು ಹೇಳಲಿ, ಕಲ್ಪಾಂತದಲ್ಲಿ ಶಿವನ ಹಣೆಗಣ್ಣುರಿಯೂ ಇವನೇ, ಆಕಾಶದಂತೆ ನಿರ್ಲೇಪನು ಈತ, ಭಕ್ತರಿಗಾಗಿ ಔದಾರ್ಯದಿಂದ ಸಗುಣರೂಪದಲ್ಲಿ ಅವತರಿಸುತ್ತಾನೆ, ಇವನು ಪ್ರಸಿದ್ಧ ಚಿನ್ಮಯನು, ಇಂತಹವನನ್ನು ತಿಳಿಯಬಲ್ಲವರಾರು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಮುರಿ: ಸೀಳು; ಮಹಾತ್ಮ: ಶ್ರೇಷ್ಠ; ವಾದಿಸು: ಚರ್ಚಿಸು; ಮರುಳ: ಮೂಢ, ಹುಚ್ಚ; ಬಾಲಕ: ಶಿಶು; ಕಾಮರಿಪು: ಶಿವ; ಕಾಮ: ಮನ್ಮಥ; ರಿಪು: ವೈರಿ; ಕಲ್ಪ:ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಅಂತ: ಕೊನೆ; ವಹ್ನಿ: ಬೆಂಕಿ; ವ್ಯೋಮ:ಆಕಾಶ, ಗಗನ; ರೂಪ: ಆಕಾರ; ಸಗುಣ:ಯೋಗ್ಯಗುಣಗಳಿಂದ ಕೂಡಿದ; ಸನಾಮ: ಒಳ್ಳೆಯ ಹೆಸರು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅರಿ: ತಿಳಿ;

ಪದವಿಂಗಡಣೆ:
ಆ +ಮಧುವನ್+ಆ+ ಕೈಟಭನ+ ಮುರಿದ್
ಈ+ ಮಹಾತ್ಮಕನೊಡನೆ+ ವಾದಿಸುವ್
ಈ+ ಮರುಳನ್+ಏನೆಂಬೆನೈ +ಶಿಶುಪಾಲ +ಬಾಲಕನ
ಕಾಮರಿಪು+ ಕಲ್ಪಾಂತ+ವಹ್ನಿ
ವ್ಯೋಮ+ರೂಪನ್+ಉದಾರ+ ಸಗುಣ+ ಸ
ನಾಮ +ಚಿನ್ಮಯನ್+ಈತನ್+ಅರಿವರಾರೆಂದ

ಅಚ್ಚರಿ:
(೧) ಶಿಶುಪಾಲಕನನ್ನು ತೆಗಳುವ ಪರಿ – ಬಾಲಕ, ಮರುಳ
(೨) ಶಿವನನ್ನು ಕಾಮರಿಪು ಎಂದು ಕರೆದಿರುವುದು
(೩) ಕೃಷ್ಣನ ಗುಣಗಾನ: ಸಗುಣ, ಸನಾಮ, ಚಿನ್ಮಯ, ವಹ್ನಿ ವ್ಯೋಮ ರೂಪ, ಉದಾರ

ಪದ್ಯ ೧೧: ಇಂದ್ರಪ್ರಸ್ಥದ ಸಿರಿಸೊಬಗು ಹೇಗಿತ್ತು?

ಹೇಮನಿರ್ಮಿತ ದೇವಸದನ
ಸ್ತೋಮದಲಿ ಮಣಿಮಯದ ಫಣಿಪನ
ಹೇಮ ವಿಧಿಯಲಿ ವಿವಿಧರತ್ನಾವಳಿಯ ಹಸರದಲಿ
ಕಾಮರಿಪುವಿಂಗೊರೆಯ ಕಟ್ಟುವ
ವಾಮಲೋಚನೆಯರ ವಿಲಾಸದ
ಲಾ ಮಹಾಪುರವೆಸೆದುದಿಂದ್ರಪ್ರಸ್ಥನಾಮದಲಿ (ಆದಿ ಪರ್ವ, ೧೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಂಗಾರದಿಂದ ನಿರ್ಮಿತವಾದ ದೇವಸ್ಥಾನಗಳ ಗುಂಪು, ನಾಗೇಂದ್ರನ ಹೆಡೆಯ ರತ್ನಗಳನ್ನು ಹಳಿಯುವ ರತ್ನಗಳ ಅಲಂಕಾರ, ನವರತ್ನಗಳನ್ನು ಮಾರುವ ಅಂಗಡಿಗಳು, ಮನ್ಮಥನನ್ನು ದಹಿಸಿದ ಶಿವನ ವೈರಾಗ್ಯವನ್ನು ಒರೆಯಲ್ಲಿ ಪರೀಕ್ಷಿಸಬಲ್ಲ ಸುಂದರಿಯರು ಇದ್ದ ಆ ನಗರಕ್ಕೆ ಇಂದ್ರಪ್ರಸ್ಥ ಎಂಬ ಹೆಸರು.

ಅರ್ಥ:
ಹೇಮ: ಸುವರ್ಣ, ಬಂಗಾರ; ನಿರ್ಮಿತ: ನಿರ್ಮಿಸಿದ, ಕಟ್ಟಿದ; ದೇವ: ಸುರ; ಸದನ: ಆಲಯ, ಮನೆ; ಸ್ತೋಮ: ಗುಂಪು; ಮಣಿ: ವಜ್ರ ವೈಡುರ್ಯ;ಪಣಿ: ಹಾವು; ವಿಧಿ: ನಿಯಮ, ನೀತಿ; ವಿವಿಧ: ಹಲವು; ರತ್ನ: ಮಣಿ; ಆವಳಿ: ಸಾಲು, ಗುಂಪು; ಹಸರ: ಹರಡುವಿಕೆ, ವ್ಯಾಪ್ತಿ;ಕಾಮ: ಮನ್ಮಥ; ರಿಪು: ವೈರಿ; ಕಾಮರಿಪು: ಶಿವ; ಒರೆ: ಪರೀಕ್ಷಿಸು; ಕಟ್ಟು: ಬಂಧಿಸು, ಅಡ್ಡಗಟ್ಟು; ವಾಮ: ಎಡ; ಲೋಚನೆ: ಕಣ್ಣು; ವಾಮಲೋಚನೆ: ಸುಂದರಿ; ವಿಲಾಸ: ಅಂದ, ಸೊಬಗು; ಮಹಾಪುರ: ದೊಡ್ಡನಗರ; ಎಸೆದುದು: ತೋರಿದುದು; ನಾಮ: ಹೆಸರು;

ಪದವಿಂಗಡಣೆ:
ಹೇಮ+ನಿರ್ಮಿತ +ದೇವ+ಸದನ
ಸ್ತೋಮದಲಿ+ ಮಣಿಮಯದ +ಫಣಿಪನ
ಹೇಮ +ವಿಧಿಯಲಿ +ವಿವಿಧ+ರತ್ನಾವಳಿಯ+ ಹಸರದಲಿ
ಕಾಮ+ರಿಪುವಿಂಗ್+ಒರೆಯ +ಕಟ್ಟುವ
ವಾಮಲೋಚನೆಯರ+ ವಿಲಾಸದಲ್
ಆ+ ಮಹಾಪುರವ್+ಎಸೆದುದ್+ಇಂದ್ರಪ್ರಸ್ಥ+ನಾಮದಲಿ

ಅಚ್ಚರಿ:
(೧) ಸೌಂದ್ರಯ್ವನ್ನು ವರ್ಣಿಸಿರುವ ಬಗೆ: ಶಿವನನ್ನು ಪರೀಕ್ಷಿಸುವ ಸುಂದರಿಯರು ಎಂದು ಹೇಳಲು – ಕಾಮರಿಪುವಿಂಗೊರೆಯ ಕಟ್ಟುವ ವಾಮಲೋಚನೆಯರ ವಿಲಾಸ
(೨) ಹೇಮ – ೧, ೩ ಸಾಲಿನ ಮೊದಲ ಪದ
(೩) ಕಾಮ, ವಾಮ – ಪ್ರಾಸ ಪದ, ೪, ೫ ಸಾಲಿನ ಮೊದಲ ಪದ