ಪದ್ಯ ೬: ಕೌರವನು ಯಾರನ್ನು ತನ್ನ ಬಳಿ ನೇಮಿಸಿದನು?

ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ (ದ್ರೋಣ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಯಾರು ದುರ್ಜನರೋ, ಯಾರು ನೀಚರೋ, ನೀತಿಬಿಟ್ಟವರಾರೋ, ಯಾರು ದುರ್ಬಲರೋ, ಅವರೇ ನಿನ್ನ ಅರಮನೆಯ ಮಂತ್ರಿಗಳು, ಹಿತವರು, ನೀತಿಯನ್ನು ಚೆನ್ನಾಗಿ ಬಲ್ಲವರು, ಸುಜನರು, ಮಹಾಪರಾಕ್ರಮಿಗಳು ಯಾರಿರುವರೋ ಅವರನ್ನು ಹೊರಗಿಡಬೇಕು ಎನ್ನುವುದೇ ನಿನ್ನ ನಿರ್ಧಾರ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಕುಹಕ: ಮೋಸ, ವಂಚನೆ; ದುರ್ಜನ: ದುಷ್ಟ; ಖುಲ್ಲ: ದುಷ್ಟ, ನೀಚ; ಬಾಹಿರ: ಹೊರಗಿನವ; ದುರ್ಬಲ: ಬಲಹೀನವಾದ, ಶಕ್ತಿಹೀನ; ಅರಮನೆ: ರಾಜರ ಆಲಯ; ಮಂತ್ರಿ: ಸಚಿವ; ಹಿತ: ಒಳ್ಳೆಯದು, ಪ್ರಿಯಕರವಾದ; ನೀತಿ: ನಿಯಮ; ಕೋವಿದ: ಪಂಡಿತ; ಸುಜನ: ಒಳ್ಳೆಯ ಜನ,ಸಜ್ಜನ; ಪರಾಕ್ರಮ: ಕಲಿತನ, ಶೌರ್ಯ; ಕಾಬುದು: ಕಾಣಬೇಕು; ಮತ: ಅಭಿಪ್ರಾಯ, ಆಶಯ;

ಪದವಿಂಗಡಣೆ:
ಆರು +ಕುಹಕಿಗಳ್+ಆರು +ದುರ್ಜನರ್
ಆರು +ಖುಲ್ಲರು +ನೀತಿ +ಬಾಹಿರರ್
ಆರು +ದುರ್ಬಲರ್+ಅವರು +ನಿನ್ನ್+ಅರಮನೆಯ +ಮಂತ್ರಿಗಳು
ಆರು +ಹಿತವರು +ನೀತಿ +ಕೋವಿದರ್
ಆರು +ಸುಜನರು +ಬಹು +ಪರಾಕ್ರಮರ್
ಆರ್+ಅವರ+ ಹೊರಬೀಸಿ +ಕಾಬುದು +ನಿನ್ನ +ಮತವೆಂದ

ಅಚ್ಚರಿ:
(೧) ಆರು ಪದದ ಬಳಕೆ – ೧-೬ ಸಾಲಿನ ಮೊದಲ ಪದ
(೨) ದುಷ್ಟರನ್ನು ಹೇಳಲು ಬಳಸಿದ ಪದ – ಕುಹಕಿ, ದುರ್ಜನ, ಖುಲ್ಲ