ಪದ್ಯ ೨೭: ಯಾರ ಕೂಗು ಆಕಾಶವನ್ನು ವ್ಯಾಪಿಸಿದವು?

ಗಾಯವಡೆದೆಕ್ಕಲನ ರಭಸದ
ಜಾಯಿಲನ ಗಳಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳಕಳದ
ನೋಯಲೊರಲುವ ಶರಭ ಸಿಂಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತುಂಬಿತಂಬರವ (ಅರಣ್ಯ ಪರ್ವ, ೧೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಗಾಯಗೊಂಡ ಹಂದಿ, ಬೇಟೆನಾಯಿ, ಆಯುಧಗಳಿಂದ ನೊಂದ ಕರಡಿ, ಕಾಡಾನೆಗಳು, ನೋವಿನಿಂದ ಒರಲುವ ಶರಭ, ಸಿಂಹ, ಕಾಡುಕೋಣ, ತೋಳ, ಹುಲಿ, ಮೊಲ ನರಿಗಳ ಕೂಗುಗಳು ಆಕಾಶವನ್ನೆಲ್ಲಾ ವ್ಯಾಪಿಸಿದವು.

ಅರ್ಥ:
ಗಾಯ: ಪೆಟ್ಟು; ಇಕ್ಕೆಲ: ಎರಡೂ ಕಡೆ; ರಭಸ: ವೇಗ; ಜಾಯಿಲ: ನಾಯಿ; ಗಳ: ಕಂಠ; ಗರ್ಜನೆ: ಜೋರಾದ ಕೂಗು; ಪೂರಾಯ: ಪರಿಪೂರ್ಣ; ಪೂರಾಯದೇರು: ವಿಶೇಷವಾದ ಗಾಯ; ಆನೆ: ಗಜ; ಕಳಕಳ: ಗೊಂದಲ; ನೋವು: ಬೇನೆ; ಒರಲು: ಅರಚು; ಶರಭ: ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ ; ಸಿಂಹ: ಕೇಸರಿ; ಲುಲಾಯ: ಕೋಣ; ವೃಕ: ತೋಳ; ಶಾರ್ದೂಲ: ಹುಲಿ; ಶಶ: ಮೊಲ; ಗೋಮಾಯ: ಜಂಬುಕ, ನರಿ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಮೃಗ: ಪ್ರಾಣಿ; ರವ: ಶಬ್ದ; ತುಂಬು: ಆವರಿಸು; ಅಂಬರ: ಆಗಸ;

ಪದವಿಂಗಡಣೆ:
ಗಾಯವಡೆದ್+ಇಕ್ಕಲನ +ರಭಸದ
ಜಾಯಿಲನ +ಗಳ+ಗರ್ಜನೆಯ +ಪೂ
ರಾಯದೇರಿನ +ಕರಡಿ+ ಕಾಡಾನೆಗಳ+ ಕಳಕಳದ
ನೋಯಲ್+ಒರಲುವ +ಶರಭ +ಸಿಂಹ +ಲು
ಲಾಯ +ವೃಕ +ಶಾರ್ದೂಲ +ಶಶ+ ಗೋ
ಮಾಯು +ಮೊದಲಾದ್+ಅಖಿಳ +ಮೃಗರವ+ ತುಂಬಿತ್+ಅಂಬರವ

ಅಚ್ಚರಿ:
(೧) ಪ್ರಾಣಿಗಳ ಹೆಸರನ್ನು ತಿಳಿಸುವ ಪದ್ಯ – ಜಾಯಿಲ, ಗೋಮಾಯ, ಲುಲಾಯ, ವೃಕ, ಶಾರ್ದೂಲ, ಶಶ, ಸಿಂಹ, ಕರಡಿ, ಕಾಡಾನೆ, ಶರಭ

ಪದ್ಯ ೪೫: ಭೀಮನು ಕೌರವಸೇನೆಯನ್ನು ಹೇಗೆ ಧ್ವಂಸ ಮಾಡುತ್ತಿದ್ದನು?

ಎನಲು ಕಿಡಿಕಿಡಿವೋಗಿ ಭೀಮಾ
ರ್ಜುನರ ತೋರಾದರೆ ಎನುತ ನಿಜ
ಧನುವ ಮಿಡಿದಬ್ಬರಿಸಲಿತ್ತಲು ರಾಯದಳದೊಳಗೆ
ಅನಿಲಜನ ಕಾಲಾಟ ಕದಳೀ
ವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ (ಕರ್ಣ ಪರ್ವ, ೧೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಶಲ್ಯನು ಕರ್ಣನಿಗೆ ಭೀಮಾರ್ಜುನರ ಮೇಲೆ ಹೋರಾಡಲು ಹಂಗಿಸುತ್ತಾ ಹೇಳಲು, ಇವನ ಮಾತನ್ನು ಕೇಳಿದ ಕರ್ಣನು ಕಿಡಿಕಿಡಿಯಾಗಿ ಕೋಪಗೊಂಡು ಹಾಗಾದರೆ ಭೀಮಾರ್ಜುನರನ್ನು ತೋರಿಸು ಎಂದು ಧನುಷ್ಟಂಕಾರವನ್ನು ಮಾಡಿ ಗರ್ಜಿಸಿದನು. ಇತಾ ಭೀಮನು ಕಾಡಾನೆಯು ಬಾಳೆಯವನದಲ್ಲಿ ನುಗ್ಗಿದಂತೆ ವನಚರರು ಕಾಡಿನಲ್ಲಿ ಮೃಗಗಳನ್ನು ಬೇಟೆಯಾಡಿದಂತೆ ಕೌರವ ಸೇನೆಯ ಮೇಲೆ ಸ್ವೇಚ್ಛೆಯಿಂದ ಯುದ್ಧ ಮಾಡುತ್ತಿದ್ದರು.

ಅರ್ಥ:
ಕಿಡಿಕಿಡಿವೋಗು: ಅತ್ಯಂತ ಕೋಪಗೊಳ್ಳು; ತೋರು: ಕಾಣಿಸು, ಗೋಚರವಾಗು; ಧನು: ಧನಸ್ಸು, ಬಿಲ್ಲು; ಮಿಡಿ: ಬಿಲ್ಲಿನ ಹೆದೆಯನ್ನು ಮೀಟು; ಅಬ್ಬರಿಸು: ಗರ್ಜಿಸು; ರಾಯ: ರಾಜ; ದಳ: ಸೈನ್ಯ; ಅನಿಲಜ: ವಾಯು ಪುತ್ರ (ಭೀಮ); ಕಾಲಾಟ: ಕುಣಿತ; ಕದಳೀ: ಬಾಳೆ; ವನ: ಕಾಡು; ಆನೆ: ಗಜ; ಮೃಗ: ಪ್ರಾಣಿಗಳ ಗುಂಪು; ಆಳಿ: ಸಾಲು; ವನಚರ: ಕಾಡಿನ ಪ್ರಾಣಿಗಳು; ದೆಖ್ಖಾಳ:ಗಲಭೆ; ಅಬ್ಬರ: ಗರ್ಜನೆ; ಕಾಣಲು: ತೋರಲು;

ಪದವಿಂಗಡಣೆ:
ಎನಲು +ಕಿಡಿಕಿಡಿವೋಗಿ +ಭೀಮಾ
ರ್ಜುನರ +ತೋರಾದರೆ+ ಎನುತ+ ನಿಜ
ಧನುವ +ಮಿಡಿದಬ್ಬರಿಸಲ್+ಇತ್ತಲು +ರಾಯದಳದೊಳಗೆ
ಅನಿಲಜನ +ಕಾಲಾಟ +ಕದಳೀ
ವನದ +ಕಾಡಾನೆಯ +ಮೃಗಾಳಿಯ
ವನಚರರ+ ದೆಖ್ಖಾಳದ್+ಅಬ್ಬರ +ಕಾಣಲಾಯ್ತೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅನಿಲಜನ ಕಾಲಾಟ ಕದಳೀವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ