ಪದ್ಯ ೫: ಆಲದ ಮರದಿಂದ ಕಾಗೆಗಳೇಕೆ ಬಿದ್ದವು?

ಭಾಗ ಬೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್ ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ (ಗದಾ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಅರ್ಧರಾತ್ರಿಯಾಯಿತು. ಆಗ ಗೂಬೆಯೊಂದು ಆಲದ ಮರದ ಮೇಲೆ ಬಂದು ಕುಳಿತುಕೊಂಡಿತು. ಮರದಲ್ಲಿದ್ದ ಕಾಗೆಗಲ ಗೂಡುಗಲನ್ನು ಕೊಯ್ದು ಕಾಗೆಗಳನ್ನು ಕೊಕ್ಕಿನಿಂದ ಕುಕ್ಕಲು, ಕಾಗೆಗಳು ಸಹಸ್ರ ಸಂಖ್ಯೆಯಲ್ಲಿ ಕೆಳಗೆ ಬಿದ್ದವು.

ಅರ್ಥ:
ಭಾಗ: ಅಂಶ, ಪಾಲು; ಬೀತುದು: ಕಳೆದುದು; ರಜನಿ: ರಾತ್ರಿ; ಕ್ಷಣ: ಸಮಯ; ಗೂಗೆ: ಗೂಬೆ; ಬಂದು: ಆಗಮಿಸು; ವಟಕುಜ: ಆಲದ ಮರ; ಅಗ್ರ: ಮೇಲೆ; ಕಾಗೆ: ಕಾಕ; ಗೂಡು: ಮನೆ; ಹೊಯ್ದು: ಹೊಡೆ; ವಿಭಾಗಿಸು: ಒಡೆ, ಸೀಳು; ತುಂಡ: ಹಕ್ಕಿಗಳ ಕೊಕ್ಕು, ಚಂಚು; ಬಿದ್ದು: ಬೀಳು, ಕುಸಿ; ಸುಭಟ: ಪರಾಕ್ರಮಿ; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಭಾಗ +ಬೀತುದು +ರಜನಿಯಲಿ +ಸರಿ
ಭಾಗವಿದ್ದುದು +ಮೇಲೆ +ತತ್ +ಕ್ಷಣ
ಗೂಗೆ +ಬಂದುದದ್+ಒಂದು +ವಟಕುಜದ್+ಅಗ್ರ+ಭಾಗದಲಿ
ಕಾಗೆಗಳ +ಗೂಡುಗಳ +ಹೊಯ್ದು +ವಿ
ಭಾಗಿಸಿತು +ತುಂಡದಲಿ +ಬಿದ್ದವು
ಕಾಗೆ +ಸುಭಟನ +ಸಮ್ಮುಖದಲಿ +ಸಹಸ್ರ+ಸಂಖ್ಯೆಯಲಿ

ಅಚ್ಚರಿ:
(೧) ಭಾಗ, ಸರಿಭಾಗ, ವಿಭಾಗಿಸಿ, ಅಗ್ರಭಾಗ; – ಭಾಗ ಪದದ ಬಳಕೆ

ಪದ್ಯ ೧೦: ಸಂಜಯನು ಯಾರ ನಡಿಗೆಯನ್ನು ನೋಡಿದನು – ೩?

ಓಡದಿಹ ನರಿ ಹದ್ದು ಕಾಗೆಗೆ
ಕೂಡೆ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತಪಾನದ ಶಾಕಿನೀಜನವ (ಗದಾ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಓಡಿ ಹೋಗದಿರುವ ಹದ್ದು, ಕಾಗೆ, ನರಿಗಳಿಗೆ ಅವನು ಗದೆಯನ್ನು ಬೀಸಿ ಓಡಿಸುತ್ತಿದ್ದನು. ಹೆಣಗಳನ್ನು ತಿನ್ನುವ ರಾಕ್ಷಸರನ್ನು ನೋಡುತ್ತಿದ್ದನು. ಅಲ್ಲಿ ಶಾಕಿನಿಯರು ಕೈಗಳಿಂದ ತೋಡಿ ಮಿದುಳುಗಳನ್ನು ಬಾಯಲ್ಲಿಟ್ಟುಕೊಳ್ಳುತ್ತಿದ್ದರು. ಕರುಳುಗಳನ್ನು ತಿಂದು ಚೀತ್ಕರಿಸುತ್ತಿದ್ದರು. ತಲೆ ಬುರುಡೆಗಳಲ್ಲಿ ರಕ್ತಪಾನವನ್ನು ಮಾಡುತ್ತಿದ್ದರು.

ಅರ್ಥ:
ಓಡು: ಧಾವಿಸು; ಹದ್ದು: ಗರುಡ ಜಾತಿಗೆ ಸೇರಿದ ಹಕ್ಕಿ; ಕಾಗೆ: ಕಾಕ; ಕೂಡೆ: ಜೊತೆ; ಗದೆ: ಮುದ್ಗರ; ಬೀಸು: ಒಗೆ, ಎಸೆ; ಬಿಡೆ: ತೊರೆದು; ನೋಡು: ವೀಕ್ಷಿಸು; ಹೆಣ: ಜೀವವಿಲ್ಲದ ಶರೀರ; ತಿನಿಹಿ: ತಿನ್ನುವ; ಹೇರಾಳ: ಬಹಳ; ರಕ್ಕಸ: ರಾಕ್ಷಸ; ತೋಡು: ಹಳ್ಳ; ಕೈ: ಹಸ್ತ; ಮಿದುಳ: ಮಸ್ತಿಷ್ಕ; ಬಾಡು: ಕಳೆಗುಂದು; ಕರುಳು: ಪಚನಾಂಗ; ಚೀತ್ಕೃತಿ: ಕೂಗು, ಗರ್ಜಿಸು; ತಲೆ: ಶಿರ; ತನಿ: ಹೆಚ್ಚಾಗು; ರಕುತ: ನೆತ್ತರು; ಪಾನ: ಕುಡಿ; ಶಾಕಿನಿ: ರಾಕ್ಷಸಿ; ಜನ: ಗುಂಪು;

ಪದವಿಂಗಡಣೆ:
ಓಡದಿಹ +ನರಿ +ಹದ್ದು +ಕಾಗೆಗೆ
ಕೂಡೆ +ಗದೆಯನು +ಬೀಸುವನು +ಬಿಡೆ
ನೋಡುವನು +ಹೆಣ+ತಿನಿಹಿಗಳ +ಹೇರಾಳ +ರಕ್ಕಸರ
ತೋಡು+ಕೈಗಳ +ಮಿದುಳ +ಬಾಯ್ಗಳ
ಬಾಡು+ಕರುಳಿನ +ಚೀತ್ಕೃತಿಯ +ತಲೆ
ಯೋಡುಗಳ+ ತನಿ+ರಕುತ+ಪಾನದ +ಶಾಕಿನೀಜನವ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಓಡದಿಹ ನರಿ ಹದ್ದು ಕಾಗೆಗೆಕೂಡೆ ಗದೆಯನು ಬೀಸುವನು

ಪದ್ಯ ೩೩: ಪಕ್ಷಿಗಳು ಹೇಗೆ ನಲಿದವು?

ಸಿಡಿದ ಕಣ್ಣಾಲಿಗಳನಾಯಿದು
ಕುಡುಕುಗೊಂಡವು ಕಾಗೆಗಳು ಹಿ
ಮ್ಮಡಿಯ ಹೊರಳಿಯ ನರವ ಸೆಳೆದವು ಜಂಬುಕಾದಿಗಳು
ಅಡಗ ಕದುಕಿರಿದೊರಲಿ ಕರೆದವು
ಗಡಣವನು ಗೂಗೆಗಳು ರಕುತದ
ಕಡಲಲೋಕುಳಿಯಾಡಿದವು ಭೇತಾಳ ಕಾಳಿಯರು (ಭೀಷ್ಮ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕಾಗೆಗಳು ರಣರಂಗದಲ್ಲಿ ಸಿಡಿದು ಬಿದ್ದಿದ್ದ ಕಣ್ಣುಗುಡ್ಡೆಗಳನ್ನು ಆಯ್ದು ತಿಂದವು. ಹಿಮ್ಮಡಿಯ ನರಗಳನ್ನು ನರಿಗಳು ಎಳೆದು ತಿಂದವು. ಗೂಬೆಗಳು ಮಾಂಸಖಂಡವನ್ನು ಕುಕ್ಕಿ ತಮ್ಮ ಬಳಗವನ್ನು ಕರೆದವು. ಭೇತಾಳಗಳು ರಕ್ತದ ಮಡುಗಳಲ್ಲಿ ಓಕುಳಿಯಾಡಿದವು.

ಅರ್ಥ:
ಸಿಡಿ: ಚಿಮ್ಮು; ಕಣ್ಣು: ನಯನ; ಆಲಿ: ಕಣ್ಣು ಗುಡ್ಡೆ; ಆಯಿದು: ಆರಿಸಿ; ಕುಡುಕಗೊಳ್: ಕುಕ್ಕು ತಿನ್ನು; ಕಾಗೆ: ಕಾಕ; ಹಿಮ್ಮಡಿ: ಪಾದದ ಹಿಂಬದಿ; ಹೊರಳು: ತಿರುವು, ಬಾಗು; ನರ: ತಂತು, ಸೆರೆ; ಸೆಳೆ: ಎಳೆದು; ಜಂಬುಕ: ನರಿ; ಅಡಗು: ಮಾಂಸ; ಕದುಕು: ಕೊಕ್ಕಿನಿಂದ ಕುಕ್ಕು, ಕಡಿ; ಇರಿ: ಚುಚ್ಚು; ಒರಲು: ಕೂಗು, ಅರುಚು; ಕರೆ: ಬರೆಮಾಡು; ಗಡಣ: ಗುಂಪು; ಗೂಗೆ: ಗೂಬೆ; ರಕುತ: ನೆತ್ತರು; ಕಡಲು: ಸಾಗರ; ಓಕುಳಿ: ಬಣ್ಣದ ನೀರು; ಆಡು: ಕ್ರೀಡೆ; ಭೇತಾಳ: ದೆವ್ವ; ಕಾಳಿ: ಉಗ್ರಸ್ವರೂಪದ ಹೆಣ್ಣು;

ಪದವಿಂಗಡಣೆ:
ಸಿಡಿದ +ಕಣ್ಣಾಲಿಗಳನ್+ಆಯಿದು
ಕುಡುಕುಗೊಂಡವು +ಕಾಗೆಗಳು +ಹಿ
ಮ್ಮಡಿಯ +ಹೊರಳಿಯ +ನರವ +ಸೆಳೆದವು +ಜಂಬುಕಾದಿಗಳು
ಅಡಗ+ ಕದುಕ್+ಇರಿದ್+ಒರಲಿ +ಕರೆದವು
ಗಡಣವನು +ಗೂಗೆಗಳು +ರಕುತದ
ಕಡಲಲ್+ಓಕುಳಿ+ಆಡಿದವು +ಭೇತಾಳ +ಕಾಳಿಯರು

ಅಚ್ಚರಿ:
(೧) ಕಾಗೆ, ಜಂಬುಕ, ಗೂಗೆಗಳು ಸಂಭ್ರಮಿಸಿದರು ಎಂದು ಹೇಳಿ ರಣರಂಗದ ರೌದ್ರತೆಯನ್ನು ಚಿತ್ರಿಸಿರುವುದು.

ಪದ್ಯ ೧೨೪: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೩?

ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾದೆನೈ ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ
ಕೊಲುವನೈ ಕಾಗೆಗಳಕಟ ಕೋ
ಗಿಲೆಯ ಮರಿಯನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೪ ಪದ್ಯ)

ತಾತ್ಪರ್ಯ:
ದಾರಿ ತಪ್ಪಿದ ಜಿಂಕೆಯು ಬೇಡನು ಹಾಸಿದ ಬಲೆಯಲ್ಲಿ ಸಿಕ್ಕುಬೀಳುವ ಪರಿ ನನ್ನ ಸ್ಥಿತಿಯಾಗಿದೆ, ತಾಯಿಯು ಕಾಡಿನಲ್ಲಿ ಎಸೆದು ಹೋದ ಮಗುವಿನಂತೆ ನನ್ನ ಸ್ಥಿತಿಯಾಗಿದೆ, ಕಾಗೆಗಳು ಕೋಗಿಲೆಯ ಮರಿಯನ್ನು ಕೊಲ್ಲುತ್ತಿವೆ, ಕರುಣಾಸಮುದ್ರನಾದ ಶ್ರೀಕೃಷ್ಣನೇ ನೀನೇ ನನ್ನನ್ನು ರಕ್ಷಿಸಬೇಕೆಂದು ಕೃಷ್ಣನಲ್ಲಿ ಮೊರೆಯಿಟ್ಟಳು ದ್ರೌಪದಿ.

ಅರ್ಥ:
ಹೊಲಬು: ದಾರಿ, ಪಥ; ತಪ್ಪು: ಸರಿಯಲ್ಲದ; ಹುಲ್ಲೆ: ಜಿಂಕೆ; ಬೇಡ: ಬೇಟೆಯಾಡುವವ; ಬಲೆ: ಜಾಲ, ಬಂಧನ; ಬಿದ್ದು: ಬೀಳು; ಬಲು: ಬಹಳ; ಹಳುವ: ಕಾಡು; ತಾಯಿ: ಮಾತೆ; ಬಿಸುಟು: ಬಿಸಾಡಿ, ಹೊರಹಾಕು; ಶಿಶು: ಮಗು; ಹರಿ: ಕೃಷ್ಣ; ಕೊಲು: ಸಾಯಿಸು; ಕಾಗೆ: ಕಾಕಾ; ಕೋಗಿಲೆ: ಪಿಕ; ಮರಿ: ಎಳೆಯದು, ಕೂಸು; ಕರುಣಾಜಲಧಿ: ದಯಾಸಾಗರ; ಕೈಗಾಯು: ಕಾಪಾಡು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಹೊಲಬು+ ತಪ್ಪಿದ +ಹುಲ್ಲೆ +ಬೇಡನ
ಬಲೆಗೆ+ ಬಿದ್ದಂತಾದೆನೈ +ಬಲು
ಹಳುವದಲಿ +ತಾಯ್+ಬಿಸುಟ +ಶಿಶು +ತಾನಾದೆನೆಲೆ+ ಹರಿಯೆ
ಕೊಲುವನೈ+ ಕಾಗೆಗಳ್+ಅಕಟ+ ಕೋ
ಗಿಲೆಯ +ಮರಿಯನು +ಕೃಷ್ಣ +ಕರುಣಾ
ಜಲಧಿಯೇ +ಕೈಗಾಯಬೇಕೆಂದ್+ಒರಲಿದಳು+ ತರಳೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊಲಬುದಪ್ಪಿದ ಹುಲ್ಲೆ ಬೇಡನ ಬಲೆಗೆ ಬಿದ್ದಂತಾದೆನೈ; ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ; ಕೊಲುವನೈ ಕಾಗೆಗಳಕಟ ಕೋಗಿಲೆಯ ಮರಿಯನು

ಪದ್ಯ ೧೮: ಶಲ್ಯನು ದುರ್ಯೋಧನನ ಹೋಲಿಕೆ ಏಕೆ ಸರಿಯಿಲ್ಲನೆಂದನು?

ಕೋಗಿಲೆಯ ಠಾಯಕ್ಕೆ ಬಂದುದು
ಕಾಗೆಗಳ ಧುರಪಥವದಂತಿರ
ಲಾಗಳಬುಜಾಸನನ ಸಾರಥಿತನವದೇನಾಯ್ತೊ
ಹೋಗಲದು ಸಾರಥ್ಯಕಾಯತ
ವಾಗಿ ಬಂದು ವಿರಿಂಚ ಮಕುಟವ
ತೂಗಿದನು ಹೊಗಳಿದನು ತ್ರಿಪುರ ನಿವಾಸಿಗಳ ಬಲುಹ (ಕರ್ಣ ಪರ್ವ, ೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ದುರ್ಯೋಧನನು ನೀವು ಕರ್ಣನಿಗೆ ಸಾರಥಿಯಾದರೆ ನನ್ನ ಅಭಿಮತವು ಸಿದ್ಧಿಸುವುದೆಂದ್ ಹೇಳುತ್ತಿರಲು, ಶಲ್ಯನು ಇದೇನು ನಿನ್ನ ಮಾತು ಕೋಗಿಲೆಯನ್ನು ಕಾಗೆಗೆ ಹೋಲಿಸುತ್ತಿರುವಂತಾಯಿತು, ನೀನು ಬ್ರಹ್ಮನ ಸಾರಥ್ಯವೇನಾಯಿತೆಂದು ಹೇಳು ಎಂದನು. ಆಗ ದುರ್ಯೋಧನನು ಸರಿ ಆ ಮಾತು ಹಾಗಿರಲಿ, ಬ್ರಹ್ಮನು ಆಗಮಿಸಿ, ದೇವತೆಗಳು ಬಿನ್ನಹಕ್ಕೆ ತನ್ನ ಸಮ್ಮತಿಯನ್ನು ತಲೆದೂಗುವುದರ ಮೂಲಕ ಸೂಚಿಸಿ ತ್ರಿಪುರವಾಸಿಗಳ ಬಳವನ್ನು ಪ್ರಶಂಶಿಸಿದನು.

ಅರ್ಥ:
ಕೋಗಿಲೆ: ಕೋಕಿಲ, ಪಿಕ; ಠಾಯ:ರಾಗಾಲಾಪನೆಯಲ್ಲಿ ಒಂದು ಲಯ; ಬಂದುದು: ಆಗಮಿಸು; ಕಾಗೆ: ಕಾಕ; ದುರ: ಯುದ್ಧ, ಕಾಳಗ; ಪಥ: ಮಾರ್ಗ; ಅಬುಜಾಸನ: ಬ್ರಹ್ಮ; ಅಬುಜ: ತಾವರೆ; ಆಸನ: ಕುಳಿತುಕೊಳ್ಳುವ ಪೀಠ; ಸಾರಥಿ: ರಥವನ್ನು ಓಡಿಸುವವ; ಹೋಗಲದು: ಹಾಗಿರಲಿ; ಆಯತ: ಅಣಿಗೊಳಿಸು; ಬಂದು: ಆಗಮಿಸಿ; ವಿರಿಂಚಿ: ಬ್ರಹ್ಮ; ಮಕುಟ: ಶಿರ; ತೂಗು: ಅಲ್ಲಾಡಿಸು; ಹೊಗಳು: ಪ್ರಶಂಶಿಸು; ತ್ರಿಪುರ: ಮೂರು ಊರುಗಳು; ನಿವಾಸಿ: ವಾಸಿಸುವ ಜನರು; ಬಲುಹ: ಬಲ, ಶಕ್ತಿ;

ಪದವಿಂಗಡಣೆ:
ಕೋಗಿಲೆಯ +ಠಾಯಕ್ಕೆ +ಬಂದುದು
ಕಾಗೆಗಳ +ಧುರಪಥವ್+ಅದಂತಿರಲ್
ಆಗಳ್+ಅಬುಜಾಸನನ +ಸಾರಥಿತನವದ್+ಏನಾಯ್ತೊ
ಹೋಗಲದು +ಸಾರಥ್ಯಕ್+ಆಯತ
ವಾಗಿ +ಬಂದು +ವಿರಿಂಚ +ಮಕುಟವ
ತೂಗಿದನು +ಹೊಗಳಿದನು +ತ್ರಿಪುರ +ನಿವಾಸಿಗಳ +ಬಲುಹ

ಅಚ್ಚರಿ:
(೧) ಅಬುಜಾಸನ, ವಿರಿಂಚ – ಬ್ರಹ್ಮನನ್ನು ಕರೆದ ಬಗೆ
(೨) ಉಪಮಾನದ ಪ್ರಯೋಗ – ಕೋಗಿಲೆಯ ಠಾಯಕ್ಕೆ ಬಂದುದು ಕಾಗೆಗಳ ಧುರಪಥವ್