ಪದ್ಯ ೪೦: ಕೌರವನು ಯುದ್ಧಕ್ಕೆ ಏಕೆ ಸಜ್ಜಾದನು?

ಇದು ಕೃತಾಂತನ ಸೀಮೆಗಳವ
ಟ್ಟುದು ಸುಯೋಧನನೃಪತಿ ವಿಗತಾ
ಭ್ಯುದಯನಾದನೆನುತತ್ತ ಕರ್ಣಾದಿಗಳು ಕಳವಳಿಸೆ
ಹೆದರೆದೆಯ ಹೇರಾಳ ವೀರರ
ಕದನದನುವನು ಕಂಡು ಕಡುಗೋ
ಪದಲಿ ಕೌರವರಾಯ ಸಮರೋಧ್ಯೋಗಪರನಾದ (ದ್ರೋಣ ಪರ್ವ, ೧೦ ಸಂಧಿ, ೪೦ ಪದ್ಯ)

ತಾತ್ಪರ್ಯ:
ಇದು ಯಮನ ಸೀಮೆಯಾಯಿತು, ಸುಯೋಧನನ ಅಭ್ಯುದಯವು ಕುಸಿಯಿತು ಎಂದು ಕರ್ಣನೇ ಮೊದಲಾದವರು ಕಳವಳಿಸಿದರು. ಮಹಾವೀರರು ಬೆದರಿ ಕೆಂಗೆಡಲು ಕೌರವನು ಕಡುಗೋಪಗೊಂಡು ಯುದ್ಧಕ್ಕೆ ಸಜ್ಜಾದನು.

ಅರ್ಥ:
ಕೃತಾಂತ: ಯಮ; ಸೀಮೆ: ಎಲ್ಲೆ, ಗಡಿ, ಮೇರೆ; ನೃಪತಿ: ರಾಜ; ವಿಗತ: ಹಾಳು, ಕುಸಿ; ಅಭ್ಯುದಯ: ಏಳಿಗೆ; ಆದಿ: ಮುಂತಾದ; ಕಳವಳ: ಗೊಂದಲ; ಹೆದರು: ಅಂಜು; ಹೇರಾಳ: ಬಹಳ ವೀರ: ಶೂರ; ಕದನ: ಯುದ್ಧ; ಅನುವು: ಆಸ್ಪದ, ಅನುಕೂಲ; ಕಂಡು: ನೋಡು; ಕೋಪ: ಸಿಟ್ಟು, ಮುಳಿ; ರಾಯ: ರಾಜ; ಸಮರ: ಯುದ್ಧ; ಉದ್ಯೋಗ: ಕೆಲಸ;

ಪದವಿಂಗಡಣೆ:
ಇದು +ಕೃತಾಂತನ +ಸೀಮೆಗಳವ್
ಅಟ್ಟುದು +ಸುಯೋಧನ+ನೃಪತಿ +ವಿಗತ
ಅಭ್ಯುದಯನ್+ಆದನ್+ಎನುತ್+ಅತ್ತ +ಕರ್ಣಾದಿಗಳು +ಕಳವಳಿಸೆ
ಹೆದರೆದೆಯ +ಹೇರಾಳ +ವೀರರ
ಕದನದ್+ಅನುವನು +ಕಂಡು +ಕಡುಗೋ
ಪದಲಿ +ಕೌರವರಾಯ +ಸಮರ+ಉದ್ಯೋಗ+ಪರನಾದ

ಅಚ್ಚರಿ:
(೧) ಸೋಲು ಎಂದು ತಿಳಿಸಲು – ವಿಗತಾಭ್ಯುದಯನಾದನ್ ಪದದ ಬಳಕೆ
(೨) ಉಪಮಾನದ ಪ್ರಯೋಗ – ಇದು ಕೃತಾಂತನ ಸೀಮೆಗಳವಟ್ಟುದು

ಪದ್ಯ ೫೦: ಅಭಿಮನ್ಯುವು ದುಶ್ಯಾಸನನನ್ನು ಹೇಗೆ ಸೋಲಿಸಿದನು?

ಕಾಯ್ದುಕೊಳ್ಳೈ ಕೌರವಾನುಜ
ಹೊಯ್ದು ಹೋಗಲು ಬಹುದೆ ಹರನಡ
ಹಾಯ್ದಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು
ಬಾಯ್ದೆಗೆದು ಕೇಸುರಿಯ ಕಾರುತ
ಕೈದುವೆದೆಯಲಿ ಕೊಂಡು ಬೆನ್ನಲಿ
ಹಾಯ್ದಡವನೋರ್ಗುಡಿಸಿದನು ಕುರುಸೇನೆ ಕಳವಳಿಸೆ (ದ್ರೋಣ ಪರ್ವ, ೫ ಸಂಧಿ, ೫೦ ಪದ್ಯ
)

ತಾತ್ಪರ್ಯ:
ದುಶ್ಯಾಸನ, ನಿನ್ನನ್ನು ನೀನು ರಕ್ಷಿಸಿಕೋ? ನನ್ನನ್ನು ಹೊಡೆದು ಹೋಗುವುದು ಸಾಧ್ಯವೇ? ಶಿವನೇ ಅಡ್ಡ ಬಂದರು ನಾನು ಗೆಲ್ಲುತ್ತೇನೆ, ನಿಲ್ಲು ಎಂದು ಅಭಿಮನ್ಯುವು ಬೆಂಕಿಯ ಬಾಣಗಳನ್ನು ಬಿಡಲು ಅದು ಅವನ ಎದೆಯೊಳ್ಗೆ ಹಾಯ್ದು ಬೆನ್ನಲ್ಲಿ ಬಂದು ನೆಲಕ್ಕೆ ಬಿದ್ದಿತು, ದುಶ್ಯಾಸನನು ಮೂರ್ಛಿತನಾಗಲು ಕುರುಸೇನೆಯು ಕಳವಳಗೊಂಡಿತು.

ಅರ್ಥ:
ಕಾಯ್ದು: ಕಾಪಾಡು; ಅನುಜ: ತಮ್ಮ; ಹೊಯ್ದು: ಹೊಡೆದು; ಹೋಗು: ತೆರಳು; ಹರ: ಈಶ್ವರ; ಅಡ: ಅಡ್ಡ, ಮಧ್ಯ; ಹಾಯ್ದು: ಬಂದು; ಗೆಲುವು: ಜಯ; ನಿಲ್ಲು: ತಾಳು; ತೆಗೆ: ಹೊರತರು; ಎಸಲು: ಬಾಣ ಪ್ರಯೋಗ ಮಾಡು; ತೆಗೆ: ಹೊರತರು; ಕೇಸುರಿ: ಕೆಂಪು ಉರಿ; ಕಾರು: ಹೊರಹಾಕು; ಕೈದು: ಆಯುಧ; ಎದೆ: ವಕ್ಷಸ್ಥಳ; ಕೊಂಡು: ಧರಿಸು; ಬೆನ್ನು: ಹಿಂಭಾಗ; ಊರ್ಗುಡಿಸು: ಮೂರ್ಛೆ; ಕಳವಳ: ಗೊಂದಲ;

ಪದವಿಂಗಡಣೆ:
ಕಾಯ್ದುಕೊಳ್ಳೈ+ ಕೌರವಾನುಜ
ಹೊಯ್ದು +ಹೋಗಲು +ಬಹುದೆ +ಹರನ್+ಅಡ
ಹಾಯ್ದಡೆಯು +ಗೆಲುವೆನು +ಕಣಾ +ನಿಲ್ಲೆನುತ +ತೆಗೆದ್+ಎಸಲು
ಬಾಯ್ದೆಗೆದು +ಕೇಸುರಿಯ +ಕಾರುತ
ಕೈದುವ್+ಎದೆಯಲಿ +ಕೊಂಡು +ಬೆನ್ನಲಿ
ಹಾಯ್ದಡ್+ಅವನ್+ಊರ್ಗುಡಿಸಿದನು +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ಕಾಯ್ದು, ಹೊಯ್ದು, ಹಾಯ್ದು – ಪ್ರಾಸ ಪದಗಳು
(೨) ಅಭಿಮನ್ಯುವಿನ ದಿಟ್ಟನುಡಿ – ಹರನಡ ಹಾಯ್ದಡೆಯು ಗೆಲುವೆನು ಕಣಾ

ಪದ್ಯ ೩೮: ಭೀಮನೊಡನೆ ಯಾರು ಯುದ್ಧಕ್ಕಿಳಿದರು?

ಭೀಮನಿನ್ನ ರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಮ್ತಿಯ
ತಾಮಸಿಕೆ ಘನ ತೆಗಿಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈ ಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು (ದ್ರೋಣ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಇನ್ನು ಅರೆಗಳಿಗೆಯಲ್ಲಿ ನಿರ್ನಾಮನಾಗುತ್ತಾನೆ. ಹೆಚ್ಚು ಹೊತ್ತು ಬೇಕಾಗಿಲ್ಲ. ಆನೆಯ ಬಲ ಕೋಪಗಳು ಅತಿಶಯವಾಗಿವೆ. ಅವನನ್ನು ಯುದ್ಧದಿಂದ ಹಿಂದಕ್ಕೆ ತೆಗೆಸಿ ಎನ್ನುತ್ತಾ ಧರ್ಮಜನು ಯುದ್ಧಕ್ಕೆ ಮುಂದಾಗಲು, ನಕುಲ, ಸಾತ್ಯಕಿ, ಘಟೋತ್ಕಚ, ಅಭಿಮನ್ಯು, ದ್ರುಪದ, ಶಿಖಂಡಿ, ಕೈಕೆಯರು ಅವನೊಡನೆ ಯುದ್ಧಕ್ಕಿಳಿದರು.

ಅರ್ಥ:
ಅರೆ: ಅರ್ಧ; ಘಳಿಗೆ: ಸಮಯ; ನಿರ್ನಾಮ: ನಾಶ; ತಡ: ನಿಧಾನ; ದಂತಿ: ಆನೆ; ತಾಮಸ: ಜಾಡ್ಯ, ಜಡತೆ; ಘನ: ಶ್ರೇಷ್ಠ; ತೆಗೆ: ಹೊರತರು; ತಮ್ಮ: ಸಹೋದರ; ಕಳವಳ: ಗೊಂದಲ; ಭೂಮಿಪತಿ: ರಾಜ; ಒಡನೆ: ಕೂಡಲೆ; ಸನಾಮ: ಪ್ರಸಿದ್ಧವಾದ ಹೆಸರುಳ್ಳ; ಐದು: ಬಂದು ಸೇರು; ಸುತ: ಮಗ;

ಪದವಿಂಗಡಣೆ:
ಭೀಮನ್+ಇನ್ನ್+ಅರೆ+ಘಳಿಗೆಯಲಿ +ನಿ
ರ್ನಾಮನೋ +ತಡವಿಲ್ಲ+ ದಂತಿಯ
ತಾಮಸಿಕೆ +ಘನ +ತೆಗಿಯಿ +ತಮ್ಮನನ್+ಎನುತ +ಕಳವಳಿಸೆ
ಭೂಮಿಪತಿ +ಕೈ +ಕೊಂಡನೊಡನೆ +ಸನಾಮರ್
ಐದಿತು +ನಕುಲ +ಸಾತ್ಯಕಿ
ಭೀಮಸುತನ್+ಅಭಿಮನ್ಯು +ದ್ರುಪದ +ಶಿಖಂಡಿ +ಕೈಕೆಯರು

ಅಚ್ಚರಿ:
(೧) ಭೀಮ – ೧, ೬ ಸಾಲಿನ ಮೊದಲ ಪದ

ಪದ್ಯ ೭೫: ದುರ್ಯೋಧನನ ಸಹಾಯಕ್ಕೆ ಯಾರು ಬಂದರು?

ತೋಳನಳವಿಗೆ ಸಿಕ್ಕಿತೋ ಮೃಗ
ಜಾಲ ಶಿವಶಿವ ದಿವಿಜ ವಧುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ
ಆಳು ಮಿಗೆ ಕಳವಳಿಸೆ ಕುರುಭೂ
ಪಾಲಕನ ಹಿಂದಿಕ್ಕಿ ಕಿವಿಗಡಿ
ಗೋಲ ತೆಗಹಿನೊಳೊದಗಿದರು ದುಶ್ಯಾಸನಾದಿಗಳು (ದ್ರೋಣ ಪರ್ವ, ೨ ಸಂಧಿ, ೭೫ ಪದ್ಯ
)

ತಾತ್ಪರ್ಯ:
ತೋಳನ ಬಾಯಿಗೆ ಮೃಗಗಳು ಸಿಕ್ಕಹಾಗಾಯಿತು, ದೊರೆಯು ಅಪ್ಸರೆಯರ ಆಲಿಂಗನ ಮಾಡುವ ಹಾಗಾಯಿತು, ಎಂದು ಸೈನ್ಯವು ಕಳವಳಿಸಿತು. ಆಗ ದುಶ್ಯಾಸನನೇ ಮೊದಲಾದವರು ಕೌರವರನ್ನು ಹಿಂದಿಟ್ಟು ಕಿವಿಯವರೆಗೆ ಹೆದೆಯನ್ನು ಸೆಳೆದು ಬಾಣಗಳನ್ನು ಬಿಟ್ಟರು.

ಅರ್ಥ:
ತೋಳು: ಭುಜ; ಅಳವಿ: ಯುದ್ಧ; ಸಿಕ್ಕು: ಬಂಧನಕ್ಕೊಳಗಾಗು, ಸೆರೆಯಾಗು; ಜಾಲ: ಗುಂಪು; ಮೃಗ: ಜಿಂಕೆ; ದಿವಿಜ: ದೈವ; ವಧು: ಹೆಣ್ಣು; ತೆಕ್ಕೆ: ಅಪ್ಪುಗೆ, ಆಲಿಂಗನ; ಒಡಲು: ದೇಹ; ರಾಯ: ರಾಜ; ಅಕಟ: ಅಯ್ಯೋ; ಆಳು: ಸೇವಕ; ಮಿಗೆ: ಅಧಿಕ; ಕಳವಳ: ಗೊಂದಲ; ಭೂಪಾಲಕ: ರಾಜ; ಹಿಂದಿಕ್ಕು: ಹಿಂಭಾಗ; ಕಿವಿ: ಕರ್ಣ; ತೆಗಹು: ಹಿಂದಕ್ಕೆ – ತೆಗೆಯುವಿಕೆ; ಒದಗು: ಲಭ್ಯ, ದೊರೆತುದು; ಆದಿ: ಮುಂತಾದ; ಕೋಲು: ಬಾಣ;

ಪದವಿಂಗಡಣೆ:
ತೋಳನ್+ಅಳವಿಗೆ +ಸಿಕ್ಕಿತೋ +ಮೃಗ
ಜಾಲ +ಶಿವಶಿವ+ ದಿವಿಜ+ ವಧುಗಳ
ತೋಳ +ತೆಕ್ಕೆಗೆ+ ಒಡಲನ್+ಇತ್ತನು+ ರಾಯನ್+ಅಕಟೆನುತ
ಆಳು +ಮಿಗೆ +ಕಳವಳಿಸೆ +ಕುರು+ಭೂ
ಪಾಲಕನ +ಹಿಂದಿಕ್ಕಿ +ಕಿವಿಗ್+ಅಡಿ
ಕೋಲ +ತೆಗಹಿನೊಳ್+ಒದಗಿದರು +ದುಶ್ಯಾಸನ್+ಆದಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ತೋಳನಳವಿಗೆ ಸಿಕ್ಕಿತೋ ಮೃಗಜಾಲ; ದಿವಿಜ ವಧುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ

ಪದ್ಯ ೫೮: ಭೀಷ್ಮಾರ್ಜುನರ ಯುದ್ಧ ಹೇಗೆ ನಡೆಯಿತು?

ಒರೆತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ (ವಿರಾಟ ಪರ್ವ, ೯ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅರ್ಜುನನ ದೇಹದಿಂದ ರಕ್ತವು ರಭಸದಿಂದ ಹರಿಯಿತು. ಅದನ್ನು ತಡೆದುಕೊಂಡು ಅರ್ಜುನನು ಮಹಾಬಾಣವೊಂದನ್ನು ಬಿಡಲು ಭೀಷ್ಮನು ಗರ್ಜಿಸಿ ಆ ಬಾಣವನ್ನು ಮಧ್ಯದಲ್ಲೇ ಕಡಿದು ಹಾಕಿದನು. ಅರ್ಜುನನು ಆಗ್ನೇಯಾಸ್ತ್ರವನ್ನು ಬಿಡಲು ಕೌರವ ಸೇನೆಯು ಗೊಂದಲಕ್ಕೀಡಾಯಿತು.

ಅರ್ಥ:
ಒರೆ: ಗುಣ, ದೋಷ ಪರೀಕ್ಷೆಮಾಡು, ಶೋಧಿಸಿ ನೋಡು; ಒಡಲು: ದೇಹ; ದುರುದುರಿಸಿ: ರಭಸ; ಸುರಿ: ಹರಿ; ಅರುಣ: ಕೆಂಪು; ಜಲ: ನೀರು; ನೆರವಣಿಗೆ: ಪರಿಪೂರ್ಣತೆ; ನಿಂದು: ನಿಲ್ಲು; ತೊಟ್ಟು: ತೊಡು; ನರ: ಅರ್ಜುನ; ಮಹಾಶರ: ಶ್ರೇಷ್ಠವಾದ ಬಾಣ; ತರಿ: ಕಡಿ, ಕತ್ತರಿಸು; ಉರೆ: ಹೆಚ್ಚು; ಬೊಬ್ಬಿರಿ: ಕೂಗು, ಗಟ್ಟಿಯಾಗಿ ಹೇಳು, ಉದ್ಘೋಷಿಸು; ಬಳಿಕ: ನಂತರ; ಆಗ್ನಿ: ಬೆಂಕಿ; ಬಾಣ: ಶರ; ಗರಿ: ಪುಕ್ಕ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಹೂಡು: ತೊಡು; ಕಳವಳ: ಗೊಂದಲ;

ಪದವಿಂಗಡಣೆ:
ಒರೆತುದ್+ಅರ್ಜುನನ್+ಒಡಲಿನಲಿ+ ದುರು
ದುರಿಸಿ +ಸುರಿದುದು +ಅರುಣಮಯ +ಜಲ
ನೆರವಣಿಗೆಯಲಿ +ನಿಂದು+ ತೊಟ್ಟನು+ ನರ +ಮಹಾ+ಶರವ
ತರಿದನ್+ಎಡೆಯಲಿ +ಭೀಷ್ಮನ್+ಉರೆ +ಬೊ
ಬ್ಬಿರಿದು +ಬಳಿಕ್+ಆಗ್ನೇಯ +ಬಾಣದ
ಗರಿಯ +ಮಂತ್ರಿಸಿ +ಹೂಡಿದನು +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ರಕ್ತ ಹರಿಯಿತು ಎಂದು ಹೇಳುವ ಪರಿ – ಒರೆತುದರ್ಜುನನೊಡಲಿನಲಿ ದುರುದುರಿಸಿ ಸುರಿದುದು ಅರುಣಮಯ ಜಲ