ಪದ್ಯ ೧೫: ಜಕ್ಕವಕ್ಕಿಗಳೇಕೆ ಮರುಗುತಿರ್ದವು?

ನಳಿನದಳದೊಳಗಡಗಿದವು ನೈ
ದಿಲುಗಳಲಿ ತನಿ ಮೊರೆವ ತುಂಬಿಯ
ಕಳರವಕೆ ಬೆಚ್ಚಿದವು ಹೊಕ್ಕವು ಬಿಗಿದು ತಿಳಿಗೊಳನ
ಝಳಕೆ ಸೈರಿಸದೆಳಲತೆಯ ನೆಳ
ಲೊಳಗೆ ನಿಂದವು ಬೇಗೆ ಬಲುಹಿಂ
ದಳುಕಿ ಮಮ್ಮಲು ಮರುಗುತಿರ್ದವು ಜಕ್ಕವಕ್ಕಿಗಳು (ದ್ರೋಣ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಚಕ್ರವಾಕ ಪಕ್ಷಿಗಳು ತಾವರೆಯಲ್ಲಿ ಅಡಗಿ, ನೈದಿಲೆಯಲ್ಲಿ ಝೇಂಕರಿಸುವ ದುಂಬಿಗಳ ಸದ್ದನ್ನು ಕೇಳಿ ಬೆಚ್ಚಿದವು. ಬೆಳದಿಂಗಳ ಝಳವನ್ನು ಸೈರಿಸಲಾರದೆ ಎಳೆ ಬಳ್ಳಿಗಳ ನೆರಳಿನಲ್ಲಿ ನಿಂತು ತಾಪವನ್ನು ತಡೆಯಲಾರದೆ ಮಮ್ಮಲ ಮರುಗಿದವು.

ಅರ್ಥ:
ನಳಿನ: ಕಮಲ; ದಳ: ಎಲೆ, ರೇಕು, ಎಸಳು; ಅಡಗು: ಬಚ್ಚಿಟ್ಟುಕೊಳ್ಳು; ನೈದಿಲೆ: ಕುಮುದ; ತನಿ: ಚೆನ್ನಾಗಿ ಬೆಳೆದುದು; ಮೊರೆ: ಧ್ವನಿ ಮಾಡು, ಝೇಂಕರಿಸು; ತುಂಬಿ: ದುಂಬಿ, ಭ್ರಮರ; ಕಳರವ: ಮಧುರ ಧ್ವನಿ; ಬೆಚ್ಚು: ಭಯ, ಹೆದರಿಕೆ; ಹೊಕ್ಕು: ಸೇರು; ಬಗಿ: ಸೀಳುವಿಕೆ; ಕೊಳ: ನೀರಿನ ಹೊಂಡ, ಸರಸಿ; ಝಳ: ಕಾಂತಿ; ಸೈರಿಸು: ತಾಳು, ಸಹಿಸು; ಎಳೆ: ಚಿಕ್ಕದಾದ; ಲತೆ: ಬಳ್ಳಿ; ನೆಳಲು: ನೆರಳು; ನಿಂದವು: ನಿಲ್ಲು; ಬೇಗೆ: ಬೆಂಕಿ, ಕಿಚ್ಚು; ಬಲು: ಬಹಳ, ಹೆಚ್ಚು; ಅಳುಕು: ಹೆದರು; ಮರುಗು: ತಳಮಳ, ಸಂಕಟ; ಜಕ್ಕವಕ್ಕಿ: ಚಾತಕ ಪಕ್ಷಿ;

ಪದವಿಂಗಡಣೆ:
ನಳಿನ+ದಳದೊಳಗ್+ಅಡಗಿದವು +ನೈ
ದಿಲುಗಳಲಿ +ತನಿ +ಮೊರೆವ +ತುಂಬಿಯ
ಕಳರವಕೆ+ ಬೆಚ್ಚಿದವು +ಹೊಕ್ಕವು +ಬಿಗಿದು +ತಿಳಿ+ಕೊಳನ
ಝಳಕೆ +ಸೈರಿಸದ್+ಎಳಲತೆಯ +ನೆಳ
ಲೊಳಗೆ +ನಿಂದವು +ಬೇಗೆ +ಬಲುಹಿಂದ್
ಅಳುಕಿ +ಮಮ್ಮಲು +ಮರುಗುತಿರ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧)

ಪದ್ಯ ೨೧: ಕರ್ಣನು ಹೇಗೆ ಯುದ್ಧಕ್ಕೆ ಬಂದನು?

ನಡೆದು ಬಂದನು ರಥಕೆ ದೆಸೆ ಕಂ
ಪಿಡುತ ನೆರೆದ ಮಹಾಪ್ರಧಾನರ
ನಡುವೆ ಚಲಿಸುವ ಚಾತುರಂಗದ ಸುಳಿಯ ಸಂದಣಿಯ
ಒಡನೆ ನೆಲನಳ್ಳಿರಿಯೆ ವಾದ್ಯದ
ಗಡಣ ಮೊರೆದುದು ಪಾಠಕರ ಗಡ
ಬಡಿಯ ಕಳರವ ಬಗಿದುದಬುಜಭವಾಂಡಮಂಡಲವ (ಕರ್ಣ ಪರ್ವ, ೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮಹಾಪ್ರಧಾನರು ಸುತ್ತಲೂ ಬರುತ್ತಿದ್ದರು. ಚಲಿಸುತ್ತಿದ್ದ ಚತುರಂಗ ಸೈನ್ಯದ ಸಂದಣಿಯ ನಡುವೆ ರಣವಾದ್ಯಗಳು ಮೊರೆಯುತ್ತಿರಲು, ಪಾಠಕರು ಬಿರುದಿನ ಘೋಷಗಳನ್ನು ಕೂಗುತ್ತಿರಲು, ರಣಶಬ್ದವು ಇಡೀ ಜಗತ್ತನ್ನು ಆವರಿಸುತ್ತಿರಲು ಕರ್ಣನು ಯುದ್ಧಕ್ಕೆ ಬಂದನು.

ಅರ್ಥ:
ನಡೆ: ಮುಂದೆ ಹೋಗು; ಬಂದನು: ಆಗಮಿಸು; ರಥ: ಬಂಡಿ, ತೇರು; ದೆಸೆ: ದಿಕ್ಕು; ಕಂಪಿಡು: ಸುವಾಸನೆ ತುಂಬು; ನೆರೆ: ಸೇರಿದ, ಗುಂಪು; ಮಹಾಪ್ರಧಾನ: ಸೇನಾ ಪ್ರಮುಖರು; ನಡುವೆ: ಮಧ್ಯೆ; ಚಲಿಸು: ನಡೆ; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸುಳಿ: ಸುತ್ತು, ಆವರ್ತ; ಸಂದಣಿ: ಗುಂಪು; ಒಡನೆ: ಕೂಡಲೆ; ನೆಲ: ಭೂಮಿ; ಅಳ್ಳಿರಿ: ನಡುಗಿಸು, ಚುಚ್ಚು; ವಾದ್ಯ: ಸಂಗೀತದ ಸಾಧನ; ಗಡಣ: ಸಮೂಹ; ಮೊರೆ: ದುಂಬಿಯ ಧ್ವನಿ, ಝೇಂಕಾರ; ಪಾಠಕ: ಹೊಗಳುಭಟ್ಟ; ಗಡಬಡಿ: ಆತುರ; ಕಳರವ: ರಣಶಬ್ದ; ಬಿಗುದು: ತುಂಬು, ಆವರಿಸು; ಅಬುಜಭವಾಂಡ: ಜಗತ್ತು; ಮಂಡಲ: ವರ್ತುಲಾಕಾರ, ಜಗತ್ತು;

ಪದವಿಂಗಡಣೆ:
ನಡೆದು +ಬಂದನು +ರಥಕೆ +ದೆಸೆ +ಕಂ
ಪಿಡುತ +ನೆರೆದ +ಮಹಾಪ್ರಧಾನರ
ನಡುವೆ +ಚಲಿಸುವ +ಚಾತುರಂಗದ +ಸುಳಿಯ +ಸಂದಣಿಯ
ಒಡನೆ +ನೆಲನ್+ಅಳ್ಳಿರಿಯೆ +ವಾದ್ಯದ
ಗಡಣ +ಮೊರೆದುದು +ಪಾಠಕರ +ಗಡ
ಬಡಿಯ +ಕಳರವ +ಬಗಿದುದ್+ಅಬುಜಭವಾಂಡ+ಮಂಡಲವ

ಅಚ್ಚರಿ:
(೧) ನೆರೆ, ಗಡಣ, ಸಂದಣಿ – ಸಮನಾರ್ಥಕ ಪದ