ಪದ್ಯ ೩೩: ಯಾವುದು ಪರಬ್ರಹ್ಮನ ಲೀಲಾ ವಿನೋದ?

ಏಕಮೇವಾದ್ವಿತಿಯವೆಂಬ ನಿ
ರಾಕುಳಿತ ತೇಜೋನಿಧಿಗೆ ಮಾ
ಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ
ಆ ಕಮಲಭವನೀ ಮುಕುಂದ ಪಿ
ನಾಕಿಯೆಂಬಭಿದಾನದಲಿ ತ್ರಿಗು
ಣಾಕೃತಿಯ ಕೈಕೊಂಡನುರು ಲೀಲಾ ವಿನೋದದಲಿ (ಅರಣ್ಯ ಪರ್ವ, ೧೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ತನಗೆರಡೆಯದಿಲ್ಲದ ಒಂದೇ ಆದ ನಿಶ್ಚಿಂತನಾದ ತೇಜೋ ರೂಪಿಯಾದವನಿಗೆ ಮಾಯೆಯೆಂಬ ಪತ್ನಿಯಿಂದ ತ್ರಿಗುಣಗಳ ಭೇದವಾದಂತೆ ತೋರುತ್ತದೆ. ಆದುದರಿಂದ ಬ್ರಹ್ಮ, ವಿಷ್ಣು, ಶಿವರೆಂಬ ಹೆಸರಿನಿಂದ ತ್ರಿಗುಣಾಕೃತಿಯನ್ನು ಪಡೆದಂತೆ ತೋರುತ್ತದೆ. ಇದು ಆ ಪರಬ್ರಹ್ಮನ ಮಹಾಲೀಲಾ ವಿನೋದ.

ಅರ್ಥ:
ಏಕಮೇವ: ಒಂದೇ ಒಂದು; ಅದ್ವಿತೀಯ: ಎರಡನೆಯದಿಲ್ಲದ, ತನಗೆ ಸಮನಾದ ಬೇರೊಂದಿಲ್ಲದ; ನಿರಾಕುಳ: ನಿರಾತಂಕ; ತೇಜಸ್ಸು: ಕಾಂತಿ; ನಿಧಿ: ಐಶ್ವರ್ಯ; ಮಾಯಾ: ಗಾರುಡಿ; ಕಳತ್ರ: ಹೆಂಡತಿ; ನಿಜಗುಣ: ತನ್ನ ಸ್ವಭಾವ; ಭೇದ: ಮುರಿ, ಬಿರುಕು; ಕಮಲಭವ: ಬ್ರಹ್ಮ; ಮುಕುಂದ: ಕೃಷ್ಣ; ಪಿನಾಕಿ: ಶಿವ; ಅಭಿದಾನ: ಹೆಸರು; ತ್ರಿಗುಣ: ಮೂರು ಗುಣಗಳು; ಆಕೃತಿ: ರೂಪ; ಕೈಕೊಂಡು: ಜವಾಬ್ದಾರಿ ವಹಿಸು; ಉರು: ಹೆಚ್ಚಿನ; ಲೀಲಾ: ವಿಲಾಸ, ಬೆಡಗು; ವಿನೋದ: ಸಂತೋಷ, ಹಿಗ್ಗು;

ಪದವಿಂಗಡಣೆ:
ಏಕಮೇವ+ಅದ್ವಿತಿಯವೆಂಬ +ನಿ
ರಾಕುಳಿತ +ತೇಜೋನಿಧಿಗೆ+ ಮಾ
ಯಾ+ಕಳತ್ರದೊಳ್+ಆಯ್ತು +ನಿಜಗುಣ+ ಭೇದವ್+ಅದರಿಂದ
ಆ +ಕಮಲಭವನ್+ಈ+ ಮುಕುಂದ +ಪಿ
ನಾಕಿ+ಎಂವ್+ಅಭಿದಾನದಲಿ+ ತ್ರಿಗು
ಣಾಕೃತಿಯ +ಕೈಕೊಂಡನ್+ಉರು +ಲೀಲಾ +ವಿನೋದದಲಿ

ಅಚ್ಚರಿ:
(೧) ಸಂಸ್ಕೃತ ನುಡಿಯ ಬಳಕೆ – ಏಕಮೇವಾದ್ವಿತಿಯ
(೨) ಗುಣಗಳು ಹುಟ್ಟಿದ ಪರಿ – ನಿರಾಕುಳಿತ ತೇಜೋನಿಧಿಗೆ ಮಾಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ

ಪದ್ಯ ೧೭: ಅಧರ್ಮದಿಂದವೇಕೆ ರಾಜ್ಯವನ್ನಾಳಬಾರದು?

ಏಸುಧರ್ಮದಲಾರ್ಜಿಸಿದ ಧನ
ವೈಸು ಸಿರಿವರ್ಧಿಸುವುದದರಿಂ
ದೇಶ ಮಂಗಳ ಪುತ್ರಮಿತ್ರ ಕಳತ್ರವರಿವಿಜಯ
ಪೈಸರಿಸುವುದು ಬಂದ ಬಳಿವಿಡಿ
ದಾಸುರದ ಪಥವಿದನರಿದು ಭೂ
ಮೀಶ ಧರ್ಮದ ಹಿಡಿಯಧರ್ಮವ ಬಿಟ್ಟು ಕಳೆಯೆಂದ (ಉದ್ಯೋಗ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಧರ್ಮದಿಂದ ನಾವು ಎಷ್ಟು ಧನವನ್ನು ಗಳಿಸುವೆವೆಯೋ ಅಷ್ಟರ ಮಟ್ಟಿಗೆ ದೇಶಕ್ಕೆ ಮಂಗಳ ಉಂಟಾಗುತ್ತದೆ. ಪುತ್ರ, ಮಿತ್ರ, ಸತಿ ವರ್ಗಕ್ಕೆ ಶುಭವು, ವೈರಿಗಳ ಮೇಲೆ ವಿಜಯವೂ ಉಂಟಾಗುತ್ತದೆ. ಅಧರ್ಮದ ರಾಕ್ಷಸೀ ಮಾರ್ಗದಿಂದ ಇವೆಲ್ಲವೂ ಸರಿದು ಹೋಗುತ್ತದೆ. ಆದ್ದರಿಂದ ರಾಜನಾದವನು ಧರ್ಮವನ್ನು ಅವಲಂಬಿಸಬೇಕು, ಅಧರ್ಮವನ್ನು ಬಿಟ್ಟುಬಿಡಬೇಕು.

ಅರ್ಥ:
ಏಸು: ಎಷ್ಟು; ಧರ್ಮ: ಧಾರಣ ಮಾಡಿದುದು, ನಿಯಮ; ಆರ್ಜಿಸು:ಸಂಪಾದಿಸು; ಧನ: ಐಶ್ವರ್ಯ; ಸಿರಿ: ಸಂಪತ್ತು; ವರ್ಧಿಸು: ಹೆಚ್ಚಳ; ದೇಶ: ರಾಷ್ಟ್ರ; ಮಂಗಳ: ಶುಭ; ಪುತ್ರ: ಮಗ; ಮಿತ್ರ: ಸ್ನೇಹಿತ; ಕಳತ್ರ: ಹೆಂಡತಿ; ವಿಜಯ: ಗೆಲುವು; ಪೈಸರಿಸು:ಹಿಮ್ಮೆಟ್ಟು, ಹಿಂಜರಿ; ಅರಿ: ವೈರಿ; ಬಳಿವಿಡಿ:ಅನುಸರಿಸು, ದಾರಿಹಿಡಿ; ಅಸುರ: ರಾಕ್ಷಸ; ಪಥ: ದಾರಿ; ಅರಿ: ತಿಳಿ; ಭೂಮೀಶ: ರಾಜ; ಹಿಡಿ: ಬಂಧನ, ಸೆರೆ; ಬಿಟ್ಟು:ಬರಿದು, ಅನಿರ್ಬಂಧತೆ; ಐಸು: ಎಲ್ಲಾ

ಪದವಿಂಗಡಣೆ:
ಏಸು+ಧರ್ಮದಲ್+ಆರ್ಜಿಸಿದ +ಧನವ್
ಐಸು +ಸಿರಿ+ವರ್ಧಿಸುವುದ್+ಅದರಿಂ
ದೇಶ +ಮಂಗಳ +ಪುತ್ರ+ಮಿತ್ರ +ಕಳತ್ರವ್+ಅರಿ+ವಿಜಯ
ಪೈಸರಿಸುವುದು +ಬಂದ +ಬಳಿವಿಡಿದ್
ಅಸುರದ+ ಪಥವಿದನ್+ಅರಿದು+ ಭೂ
ಮೀಶ +ಧರ್ಮದ +ಹಿಡಿ+ಅಧರ್ಮವ +ಬಿಟ್ಟು +ಕಳೆಯೆಂದ

ಅಚ್ಚರಿ:
(೧) ಧರ್ಮ ಅಧರ್ಮ – ವಿರುದ್ಧ ಪದ – ೬ ಸಾಲು
(೨) ಧನ, ಸಿರಿ – ಸಮನಾರ್ಥಕ ಪದ
(೩) ‘ತ್ರ’ ಕಾರದ ಜೋಡಿ ಪದಗಳು – ಪುತ್ರ, ಮಿತ್ರ, ಕಳತ್ರ