ಪದ್ಯ ೩೬: ಧರ್ಮಜನು ಶಲ್ಯನಿಗೆ ಏನೆಂದು ಉತ್ತರಿಸಿದನು?

ಮಾವ ಭೀಮಾರ್ಜುನರ ಭಾರಣೆ
ಗಾವ ನಿಲುವನು ಸಾಕದಂತಿರ
ಲೀ ವಿಚಿತ್ರ ಕಳಂಬ ಖಂಡನ ಪಂಡಿತತ್ವವನು
ನೀವು ತೋರಿರೆ ಸಾಕು ಸಾಮ
ರ್ಥ್ಯಾವಲಂಬವುಳ್ಳಡೀ ಶ
ಸ್ತ್ರಾವಳಿಯ ಸೈರಿಸಿಯೆನುತ ಯಮಸೂನು ತೆಗೆದೆಚ್ಚ (ಶಲ್ಯ ಪರ್ವ, ೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಧರ್ಮಜನು ನುಡಿಯುತ್ತಾ, ಮಾವ, ಭೀಮಾರ್ಜುನರ ಯುದ್ಧವನ್ನು ಎದುರಿಸಿ ನಿಲ್ಲಬಲ್ಲವರಾರು, ಆ ಸುದ್ದಿ ಬೇಡ, ನಿಮಗೆ ಸಾಮರ್ಥ್ಯವಿದ್ದುದೇ ಆದರೆ ನಾನು ಬಿಡುವ ಬಾಣಗಳನ್ನು ಕತ್ತರಿಸಿ, ನಿಮ್ಮ ಯುದ್ಧ ಪಾಂಡಿತ್ಯವನ್ನು ತೋರಿಸೆ. ಈ ಬಾಣಗಳನ್ನು ಸಹಿಸಿಕೊಳ್ಳಿರಿ ಎಂದು ಬಾಣಗಳನ್ನು ಬಿಟ್ಟನು.

ಅರ್ಥ:
ಮಾವ: ತಾಯಿಯ ಸಹೋದರ; ಭಾರಣೆ: ಮಹಿಮೆ, ಗೌರವ; ನಿಲು: ನಿಲ್ಲು, ತಡೆ; ಸಾಕು: ಬೇಡ; ವಿಚಿತ್ರ: ಆಶ್ಚರ್ಯಕರವಾದುದು; ಕಳಂಬ: ಬಾಣ, ಅಂಬು; ಖಂಡ: ತುಂಡು, ಚೂರು; ಪಂಡಿತ: ವಿದ್ವಾಂಸ; ತೋರು: ಗೋಚರ; ಸಾಮರ್ಥ್ಯ: ಶಕ್ತಿ; ಅವಲಂಬನ: ಆಸರೆ; ಶಸ್ತ್ರಾವಳಿ: ಆಯುಧಗಳ ಗುಂಪು; ಸೈರಿಸು: ತಾಳು, ಸಹಿಸು; ಸೂನು: ಮಗ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಮಾವ+ ಭೀಮಾರ್ಜುನರ +ಭಾರಣೆಗ್
ಆವ +ನಿಲುವನು +ಸಾಕ್+ಅದಂತಿರಲ್
ಈ+ ವಿಚಿತ್ರ +ಕಳಂಬ +ಖಂಡನ +ಪಂಡಿತತ್ವವನು
ನೀವು +ತೋರಿರೆ +ಸಾಕು +ಸಾಮ
ರ್ಥ್ಯ+ಅವಲಂಬವುಳ್ಳಡ್+ಈ+ ಶ
ಸ್ತ್ರಾವಳಿಯ +ಸೈರಿಸಿ+ಎನುತ +ಯಮಸೂನು +ತೆಗೆದೆಚ್ಚ

ಅಚ್ಚರಿ:
(೧) ಭೀಮಾರ್ಜುನರನ್ನು ಹೊಗಳುವ ಪರಿ – ಭೀಮಾರ್ಜುನರ ಭಾರಣೆಗಾವ ನಿಲುವನು
(೨) ಶಲ್ಯನನ್ನು ಪ್ರಚೋದಿಸುವ ಪರಿ – ಲೀ ವಿಚಿತ್ರ ಕಳಂಬ ಖಂಡನ ಪಂಡಿತತ್ವವನು ನೀವು ತೋರಿರೆ ಸಾಕು

ಪದ್ಯ ೫೨: ಅರ್ಜುನನ ಬಾಣವನ್ನು ಎದುರಿಸಲು ಯಾರು ಬಂದರು?

ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯುಕೊಳ್ಳೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶಲ್ಯನಿಗೆ ಸಹಾಯಮಾಡಲು ಅಶ್ವತ್ಥಾಮನೇ ಮೊದಲಾದ ವೀರರು ಅರ್ಜುನನ ಬಾಣಗಳ ಸಮುದ್ರವನ್ನು ತಮ್ಮ ಬಾಣಗಳಿಂದ ಇದಿರಿಸಿದರು. ದುರ್ಬಲ ಯೋಧರು ಉಬ್ಬಿದರೆ, ನೊಂದವರು ಉತ್ಸಾಹದಿಂದ ಮುಂದೆ ಬಂದರೆ, ತಪ್ಪೇನು? ಈ ಬಾಣದಿಂದ ನಿನ್ನನ್ನು ರಕ್ಷಿಸಿಕೋ ಎಂದು ಅರ್ಜುನನು ಹೊಡೆದನು.

ಅರ್ಥ:
ನೂಕು: ತಳ್ಳು; ಪಡಿಬಲ: ವೈರಿಸೈನ್ಯ; ಆಕೆವಾಳ: ಪರಾಕ್ರಮಿ; ಸುತ: ಮಗ; ಆದಿ: ಮುಂತಾದ; ತೋಕು: ಎಸೆ, ಪ್ರಯೋಗಿಸು, ಚೆಲ್ಲು; ಶರ: ಬಾಣ; ಜಾಲ: ಗುಂಪು; ಅಂಬು: ಬಾಣ; ಅಂಬುಧಿ: ಸಾಗರ; ಬೀಕಲು: ಕೊನೆ, ಅಂತ್ಯ; ಭಟ: ಸೈನಿಕ; ಉಬ್ಬು: ಅತಿಶಯ, ಉತ್ಸಾಹ; ವ್ಯಾಕುಲ: ದುಃಖ, ವ್ಯಥೆ; ತುಬ್ಬು: ಪತ್ತೆ ಮಾಡು, ಶೋಧಿಸು; ಕಳಂಬ: ಬಾಣ, ಅಂಬು; ಕಾಯ್ದು: ಕಾಪಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ನೂಕಿದರು +ಶಲ್ಯಂಗೆ +ಪಡಿಬಲದ್
ಆಕೆವಾಳರು +ಗುರುಸುತಾದ್ಯರು
ತೋಕಿದರು +ಶರಜಾಳವ್+ಅರ್ಜುನನ್+ಅಂಬಿನ್+ಅಂಬುಧಿಯ
ಬೀಕಲಿನ+ ಭಟರ್+ಉಬ್ಬಿದರೆ+ ಸು
ವ್ಯಾಕುಲರು +ತುಬ್ಬಿದರೆ +ತಪ್ಪೇನ್
ಈ+ ಕಳಂಬವ+ ಕಾಯ್ದುಕೊಳ್ಳೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಶರಜಾಳವರ್ಜುನನಂಬಿನಂಬುಧಿಯ – ಅಂಬು ಪದದ ಬಳಕೆ
(೨) ಉಬ್ಬಿದರೆ, ತುಬ್ಬಿದರೆ – ಪ್ರಾಸ ಪದಗಳು
(೩) ಕಳಂಬ, ಅಂಬು, ಶರ – ಸಮಾನಾರ್ಥಕ ಪದ