ಪದ್ಯ೧೫: ಮಹಾಭಾರತದ ಕಥೆಯನ್ನು ಕೇಳುವುದರಿಂದಾಗುವ ಲಾಭವೇನು?

ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ
ಕಾಯಕಲ್ಮಷ ಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ ಕಥಾಮೃತವ (ಆದಿ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ವೈಶಂಪಾಯನ ಮುನಿಯು ರಾಜನೇ ಕೇಳು ಎಂದು ಸರ್ವಪಾಪಹರವಾದ ಶ್ರೀಕೃಷ್ಣನ ಬಾಲಲೀಲೆಗಳನ್ನು ಹೇಳಿದನು. ಈ ವಿಷಯವನ್ನು ಸೂತರು ಶೌನಕಾದಿ ಋಷಿಗಳಿಗೆ ಹೇಳಿದರು. ಮನುಷ್ಯನು ಮಾಡುವ ಸಮಸ್ತಪಾಪಗಲನ್ನು ನಾಶಮಾಡಿ ಆತ್ಮ ಸ್ವರೂಪವನ್ನು ಉಂಟುಮಾಡುವ ಮೋಕ್ಷದಾಯಕವಾದ ಮಹಾಭಾರತದ ಕಥೆಯನ್ನು ಹೇಳಿದರು.

ಅರ್ಥ:
ರಾಯ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ; ಹೇಳು: ತಿಳಿಯಪಡಿಸು; ಕಮಲದಳಾಯತಾಕ್ಷ: ಕಮಲದಂತ ಕಣ್ಣುಳ್ಳವ (ಕೃಷ್ಣ); ಬಾಲ: ಚಿಕ್ಕವ; ಕೇಳಿ: ಕ್ರೀಡೆ, ವಿನೋದ; ವಿಧೂತ: ಅಲುಗಾಡುವ, ತೊರೆದ; ಕಿಲ್ಬಿಷ: ಪಾಪ; ಕಾಯ: ದೇಹ; ಕಲ್ಮಷ: ಕೊಳೆ, ಮಾಲಿನ್ಯ; ಹರ: ಹೋಗಲಾಡಿಸು; ಅಖಿಳ: ಎಲ್ಲಾ; ನಿಶ್ರೇಯಸ: ಮೋಕ್ಷ; ಸದ್ರೂಪ: ಶುದ್ಧ ಇರವಿನ ರೂಪ, ಆತ್ಮಸ್ವರೂಪ; ಸಂದಾಯಕ: ಕೊಡುವಂತಹುದು; ನಿರ್ಮಲ: ಶುದ್ಧ; ಅಮೃತ: ಸುಧೆ;

ಪದವಿಂಗಡಣೆ:
ರಾಯ +ಚಿತ್ತೈಸೆಂದು +ವೈಶಂ
ಪಾಯ+ಮುನಿ +ಹೇಳಿದನು +ಕಮಲದ
ಳಾಯತಾಕ್ಷನ+ ಬಾಲ+ಕೇಳಿ +ವಿಧೂತ +ಕಿಲ್ಬಿಷವ
ಕಾಯ+ಕಲ್ಮಷ+ ಹರವ್+ಅಖಿಳ +ನಿ
ಶ್ರೇಯಸದ +ಸದ್ರೂಪುವಿನ +ಸಂ
ದಾಯಕವ+ ನಿರ್ಮಲ +ಮಹಾಭಾರತ+ ಕಥಾಮೃತವ

ಅಚ್ಚರಿ:
(೧) ಕೃಷ್ಣನನ್ನು ಕಮಲದಳಾಯತಾಕ್ಷ ಎಂದು ಕರೆದಿರುವ ಪರಿ
(೨) ಮಹಾಭಾರತದ ಹಿರಿಮೆ: ಕಾಯಕಲ್ಮಷ ಹರವಖಿಳ ನಿಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ

ಪದ್ಯ ೩೫: ಧೃತರಾಷ್ಟ್ರನು ವ್ಯಾಸರ ಸಲಹೆಗೆ ಏನೆಂದು ಉತ್ತರಿಸಿದ?

ಹೈ ಹಸಾದವು ನಿಮ್ಮ ಚಿತ್ತಕೆ
ಬೇಹ ಹದನೇ ಕಾರ್ಯಗತಿ ಸಂ
ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ
ಕಾಹುರರು ಕಲ್ಮಷರು ಬಂಧು
ದ್ರೋಹಿಗಳು ಗತವಾಯ್ತು ನಿಷ್ಪ್ರ
ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ (ಗದಾ ಪರ್ವ, ೧೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ವ್ಯಾಸರಿಗೆ ಉತ್ತರಿಸುತ್ತಾ, ನಿಮ್ಮ ಸಲಹೆಯು ನನಗೆ ಮಹಾಪ್ರಸಾದ, ನಿಮ್ಮ ಮನಸ್ಸಿಗೆ ಬಂದುದನ್ನೇ ನಾನು ನಡೆಸುತ್ತೇನೆ. ಪಾಂಡುವಿನ ಮಕ್ಕಳು ನನ್ನ ಮಕ್ಕಳೇ, ಮನಸ್ಸಿನಲ್ಲಿ ಕೊಳೆಯನ್ನಿಟ್ಟುಕೊಂಡು ದುಡುಕಿ ಬಂಧು ದ್ರೋಹ ಮಾಡಿದವರು ಮಡಿದುಹೋದರು. ಅದನ್ನು ತಪ್ಪಿಸುವುದಾದರೂ ಹೇಗೆ? ಎಂದು ವೇದವ್ಯಾಸರನ್ನು ಧೃತರಾಷ್ಟ್ರ ಕೇಳಿದ.

ಅರ್ಥ:
ಹಸಾದ: ಮಹಾಪ್ರಸಾದ; ಚಿತ್ತ: ಮನಸ್ಸು; ಹದ: ರೀತಿ; ಬೇಹ: ಬಂದುದು; ಕಾರ್ಯ: ಕೆಲಸ; ಗತಿ: ಚಲನೆ, ವೇಗ; ಸಂದೇಹ: ಸಂಶಯ; ಮಕ್ಕಳು: ಪುತ್ರರು; ಕಾಹುರ: ಸೊಕ್ಕು, ಕೋಪ; ಕಲ್ಮಷ: ದುಷ್ಟ; ಬಂಧು: ಸಂಬಂಧಿಕ; ದ್ರೋಹಿ: ದುಷ್ಟ; ಗತ: ಸತ್ತುಹೋದ, ಹಿಂದೆ ಆದುದು; ಪ್ರತ್ಯೂಹ: ಅಡ್ಡಿ, ಅಡಚಣೆ; ಮುನಿ: ಋಷಿ;

ಪದವಿಂಗಡಣೆ:
ಹೈ +ಹಸಾದವು +ನಿಮ್ಮ +ಚಿತ್ತಕೆ
ಬೇಹ +ಹದನೇ +ಕಾರ್ಯಗತಿ +ಸಂ
ದೇಹವೇ +ಪಾಂಡುವಿನ +ಮಕ್ಕಳು +ಮಕ್ಕಳವರ್+ಎಮಗೆ
ಕಾಹುರರು +ಕಲ್ಮಷರು +ಬಂಧು
ದ್ರೋಹಿಗಳು +ಗತವಾಯ್ತು +ನಿಷ್ಪ್ರ
ತ್ಯೂಹವ್+ಇನ್ನೇನವರಿಗೆಂದನು +ಮುನಿಗೆ +ಧೃತರಾಷ್ಟ್ರ

ಅಚ್ಚರಿ:
(೧) ಕೌರವರನ್ನು ದೂಷಿಸಿದ ಪರಿ – ಕಾಹುರರು ಕಲ್ಮಷರು ಬಂಧು ದ್ರೋಹಿಗಳು ಗತವಾಯ್ತು
(೨) ದೇಹ, ಬೇಹ – ಪ್ರಾಸ ಪದ

ಪದ್ಯ ೮: ಕೃಷ್ಣನು ಧರ್ಮರಾಯನ ಸಂಧಿಯ ವಿಚಾರಕ್ಕೆ ಏನು ಹೇಳಿದನು?

ಎಲೆ ಕೃತಾಂತಜ ವೈರಿಭೂಮಿಪ
ಕುಲ ಕೃತಾಂತ ಸರಾಗನಹೆನಿ
ರ್ಮಲಿನ ಧರ್ಮದಲಾ ಸುಯೋಧನನಧಿಕ ಕಲ್ಮಷನು
ನೆಲವ ಕೊಡಲರಿಯನು ವೃಥಾಕ
ಕ್ಕುಲಿತೆಯಲ್ಲದೆ ಕಾಣೆನಿದರಲಿ
ಫಲವನೆನುತಸುರಾರಿ ನುಡಿದನು ಧರ್ಮತನಯಂಗೆ (ಉದ್ಯೋಗ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ಧರ್ಮರಾಯನ ಮಾತುಗಳನ್ನು ಕೇಳಿದ ಕೃಷ್ಣನು, ಎಲೆ ಯುಧಿಷ್ಠಿರ, ಶತ್ರುಗಳ ಕುಲಕ್ಕೆ ಕಾಲನಂತಿರುವವನೇ, ನೀನು ನಿರ್ಮಲ ಧರ್ಮದಲಿ ಮನಸ್ಸಿಟ್ಟಿರುವವನು, ಆದರೆ ದುರ್ಯೋಧನನ ಮನಸ್ಸು ಕಲ್ಮಷಭರಿತವಾಗಿದೆ. ಅವನು ಖಂಡಿತವಾಗಿಯೂ ಭೂಮಿಯನ್ನು ಕೊಡುವುದಿಲ್ಲ. ನಿನ್ನ ಮನಸ್ಸಿನ ಚಿಂತೆಯೇ ಹೊರತು ಇದರಿಂದ ಯಾವ ಪ್ರಯೋಜನವೂ ಇಲ್ಲವೆಂದು ಕೃಷ್ಣನು ಧರ್ಮರಾಯನಿಗೆ ತಿಳಿಸಿದನು.

ಅರ್ಥ:
ಕೃತಾಂತ: ಯಮ; ಕೃತಾಂತಜ: ಧರ್ಮರಾಯ; ವೈರಿ: ಶತ್ರು; ಭೂಮಿಪ: ರಾಜ; ಕುಲ: ವಂಶ; ಸರಾಗ: ಸುಲಭ; ನಿರ್ಮಲ: ಶುದ್ಧ; ಕಲ್ಮಷ: ಕೊಳೆ, ಮಾಲಿನ್ಯ; ನೆಲ: ಭೂಮಿ;ಕೊಡು: ನೀಡು; ಅರಿ: ತಿಳಿ; ವೃಥ: ವ್ಯರ್ಥ; ಕಕ್ಕುಲಿತೆ: ಚಿಂತೆ, ಪ್ರೀತಿ; ಕಾಣೆ: ನೋಡೆನು; ಫಲ: ಫಲಿತಾಂಶ, ಪ್ರಯೋಜನ; ಅಸುರಾರಿ: ಕೃಷ್ಣ; ನುಡಿ: ಮಾತಾಡು; ತನಯ: ಮಗ; ಧರ್ಮ: ಯಮ;

ಪದವಿಂಗಡಣೆ:
ಎಲೆ +ಕೃತಾಂತಜ+ ವೈರಿ+ಭೂಮಿಪ
ಕುಲ +ಕೃತಾಂತ +ಸರಾಗನಹೆ+ನಿ
ರ್ಮಲಿನ+ ಧರ್ಮದಲಾ +ಸುಯೋಧನನ್+ಅಧಿಕ+ ಕಲ್ಮಷನು
ನೆಲವ+ ಕೊಡಲರಿಯನು +ವೃಥಾ+ಕ
ಕ್ಕುಲಿತೆ+ಯಲ್ಲದೆ +ಕಾಣೆನ್+ಇದರಲಿ
ಫಲವನ್+ಎನುತ್+ಅಸುರಾರಿ +ನುಡಿದನು+ ಧರ್ಮತನಯಂಗೆ

ಅಚ್ಚರಿ:
(೧) ಕೃತಾಂತ ಪದ – ೧, ೨ ಸಾಲಿನ ೨ನೇ ಪದ
(೨) ಧರ್ಮರಾಯನನ್ನು – ಕೃತಾಂತಜ, ಧರ್ಮತನಯ ಎಂದು ಕರೆದಿರುವುದು
(೩) ಧರ್ಮರಾಯನಿಗೆ ಉಪಯೋಗಿಸಿದ ಗುಣವಾಚಕ ಪದ – ವೈರಿಭೂಮಿಪಕುಲ ಕೃತಾಂತ
(೪) ಮಲಿನ, ಕಲ್ಮಷ – ಸಮನಾರ್ಥಕ ಪದ
(೫) ನಿರ್ಮಲ, ಕಲ್ಮಷ – ವಿರುದ್ಧ ಪದ