ಪದ್ಯ ೫೪: ಮುನಿವರ್ಯರು ಯಾರಿಗೆ ಕಾಣಿಸಿಕೊಂಡರು?

ವರಮುನೀಶ್ವರರವನಿಯಲಿ ಮೂ
ವರಿಗೆ ಗೋಚರವಾದರಿತ್ತಲು
ಮುರವಿರೋಧಿಗೆ ನರಗೆ ಕುರುಸೇನಾಧಿನಾಥಂಗೆ
ಅರಿಯರುಳಿದವರೀತನಿಂ ಸ
ತ್ಕರಿಸಿಕೊಂಡರು ನುಡಿದರಾ ಮುನಿ
ವರರು ಕಡಿದರು ಕೌರವಾನ್ವಯ ಕಲ್ಪಭೂರುಹವ (ದ್ರೋಣ ಪರ್ವ, ೧೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ರಣಭೂಮಿಯಲ್ಲಿದವರಲ್ಲಿ ಮೂವರಿಗೆ ಮಾತ್ರ ಇವರು ಕಾಣಿಸಿಕೊಂಡರು. ಶ್ರೀಕೃಷ್ಣ, ಅರ್ಜುನ ಮತ್ತು ದ್ರೋಣರಿಗೆ. ಉಳಿದವರಿಗೆ ಇದು ತಿಳಿಯದು. ದ್ರೋಣನ ಸತ್ಕಾರವನ್ನು ಸ್ವೀಕರಿಸಿ ಅವನೊಡನೆ ಮಾತಾಡಿ ಅವರು ಕೌರವ ವಂಶವೆಂಬ ಕಲ್ಪವೃಕ್ಷವನ್ನು ಕಡಿದು ಹಾಕಿದರು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ಅವನಿ: ಭೂಮಿ; ಗೋಚರ: ಕಾಣು; ವಿರೋಧಿ: ವೈರಿ; ಮುರವಿರೋಧಿ: ಕೃಷ್ಣ; ನರ: ಅರ್ಜುನ; ಸೇನಾಧಿನಾಥ: ಸೇನಾಪತಿ; ಅರಿ: ತಿಳಿ; ಉಳಿದ: ಮಿಕ್ಕ; ಸತ್ಕರಿಸು: ಗೌರವಿಸು; ನುಡಿ: ಮಾತಾಡು; ಮುನಿ: ಋಷಿ; ಕಡಿ: ಸೀಳು; ಅನ್ವಯ: ವಂಶ; ಕಲ್ಪಭೂರುಹ: ಕಲ್ಪವೃಕ್ಷ;

ಪದವಿಂಗಡಣೆ:
ವರ+ಮುನೀಶ್ವರರ್+ಅವನಿಯಲಿ +ಮೂ
ವರಿಗೆ +ಗೋಚರವಾದರ್+ಇತ್ತಲು
ಮುರವಿರೋಧಿಗೆ +ನರಗೆ +ಕುರು+ಸೇನಾಧಿನಾಥಂಗೆ
ಅರಿಯರ್+ಉಳಿದವರ್+ಈತನಿಂ +ಸ
ತ್ಕರಿಸಿಕೊಂಡರು +ನುಡಿದರಾ +ಮುನಿ
ವರರು +ಕಡಿದರು +ಕೌರವಾನ್ವಯ +ಕಲ್ಪಭೂರುಹವ

ಅಚ್ಚರಿ:
(೧) ಕೃಷ್ಣನನ್ನು ಮುರವಿರೋಧಿ, ದ್ರೋಣರನ್ನು ಕುರುಸೇನಾಧಿನಾಥ ಎಂದು ಕರೆದಿರುವುದು
(೨) ಕ ಕಾರದ ತ್ರಿವಳಿ ಪದ – ಕಡಿದರು ಕೌರವಾನ್ವಯ ಕಲ್ಪಭೂರುಹವ