ಪದ್ಯ ೨: ಅಶ್ವತ್ಥಾಮನು ಯಾರ ಪಾಳೆಯದ ಹತ್ತಿರ ಬಂದನು?

ನಿಲುವೆವಿಲ್ಲಿ ವಿರೋಧಿಸಂತತಿ
ಯುಲುಹನಾಲಿಸಬಹುದು ಕೋಟಾ
ವಳಯವಿದೆ ಹತ್ತಿರೆಯೆನುತ ಗುರುಸೂನು ರಥವಿಳಿಯೆ
ಇಳಿದರಿಬ್ಬರು ಸೂತರಿಗೆ ಕೈ
ಕೊಳಿಸಿದರು ಕುದುರೆಗಳನಾ ಕಲು
ನೆಲದೊಳೊರಗಿದರವರು ಸಮರಶ್ರಮದ ಭಾರದಲಿ (ಗದಾ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಇಲ್ಲಿಯೇ ಕೋಟೆಯ ಹೊರಭಾಗದಲ್ಲಿ ನಿಲ್ಲೋಣ, ವೈರಿಗಳ ಸದ್ದು ಕೇಳುತ್ತಿದೆ ಎಂದು ಅಶ್ವತ್ಥಾಮನು ರಥವನ್ನಿಳಿದನು. ಉಳಿದಿಬ್ಬರೂ ರಥದ ಕುದುರೆಗಳನ್ನು ಸಾರಥಿಗೆ ನೀಡಿ, ಕಲ್ಲು ನೆಲದ ಮೇಲೆ ಅತೀವ ಆಯಾಸಗೊಂಡಿದ್ದ ಕಾರಣ ಮಲಗಿ ಬಿಟ್ಟರು.

ಅರ್ಥ:
ನಿಲುವು: ನಿಲ್ಲು, ತಡೆ; ವಿರೋಧಿ: ವೈರಿ, ಅರಿ; ಸಂತತಿ: ವಂಶ, ಪೀಳಿಗೆ; ಉಲುಹ: ಸದ್ದು; ಆಲಿಸು: ಕೇಳು; ಕೋಟೆ: ಊರಿನ ರಕ್ಷಣೆಗಾಗಿ ಕಟ್ಟಿದ ಗೋಡೆ; ವಳಯ: ಆವರಣ; ಹತ್ತಿರ: ಸಮೀಪ; ಸೂನು: ಮಗ; ಗುರು: ಆಚಾರ್ಯ; ರಥ: ಬಂಡಿ; ಇಳಿ: ಕೆಳಕ್ಕೆ ನಡೆ; ಸೂತ: ಮಗ; ಕೈ: ಹಸ್ತ; ಕುದುರೆ: ಅಶ್ವ; ಕಲು: ಶಿಲ; ನೆಲ: ಭೂಮಿ; ಒರಗು: ಮಲಗು; ಸಮರ: ಯುದ್ಧ; ಶ್ರಮ: ಆಯಾಸ; ಭಾರ: ಹೊರೆ;

ಪದವಿಂಗಡಣೆ:
ನಿಲುವೆವ್+ಇಲ್ಲಿ +ವಿರೋಧಿ+ಸಂತತಿ
ಉಲುಹನ್+ಆಲಿಸಬಹುದು +ಕೋಟಾ
ವಳಯವಿದೆ +ಹತ್ತಿರೆ+ಎನುತ +ಗುರುಸೂನು +ರಥವಿಳಿಯೆ
ಇಳಿದರ್+ಇಬ್ಬರು+ ಸೂತರಿಗೆ+ ಕೈ
ಕೊಳಿಸಿದರು +ಕುದುರೆಗಳನ್+ಆ+ ಕಲು
ನೆಲದೊಳ್+ಒರಗಿದರ್+ಅವರು +ಸಮರ+ಶ್ರಮದ +ಭಾರದಲಿ

ಅಚ್ಚರಿ:
(೧) ಮಲಗಿದರು ಎಂದು ಹೇಳಲು – ಕಲುನೆಲದೊಳೊರಗಿದರವರು ಸಮರಶ್ರಮದ ಭಾರದಲಿ

ಪದ್ಯ ೯: ಭೀಮನು ದುರ್ಯೋಧನನ್ನು ಹೇಗೆ ಹಂಗಿಸಿದನು?

ಎತ್ತಿ ಕಳೆದೈ ಬನಕೆ ನಾವ್ ನಿ
ಮ್ಮೆತ್ತುಗಳಲೈ ಬೆರಳಲೇಡಿಸಿ
ದೆತ್ತುಗಳ ಕೂಡೇಕೆ ಸರಿನುಡಿ ಸಾರ್ವಭೌಮರಿಗೆ
ಇತ್ತಲೇತಕೆ ಬಿಜಯಮಾಡಿದಿ
ರೊತ್ತದೇ ಕಲುನೆಲನು ಪವಡಿಸಿ
ಮತ್ತೆ ತೊಡೆಗಳ ತಿವಿಯ ಬೇಕೇ ಎಂದನಾ ಭೀಮ (ಗದಾ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ಎಲೈ ಸುಯೋಧನ, ನಮ್ಮನ್ನು ಕಾಡಿಗೆ ಓಡಿಸಿದೆಯಲ್ಲವೇ? ನಾವು ನಿಮ್ಮ ಎತ್ತುಗಳಲ್ಲವೇ? ಬೆರಳಿನಲ್ಲಿ ಅಣಗಿಸಿದ ಎತ್ತುಗಳ ಜೊತೆಗೆ ಸಾರ್ವಭೌಮರಾದ ನಿಮಗೆಂತಹ ಮಾತುಕತೆ? ಒಡೆಯ ಇಲ್ಲಿಗೆ ಏಕೆ ಬಂದಿರುವಿರಿ? ಮಲಗಿದಾಗ ಕಲ್ಲು ನೆಲವು ಒತ್ತುವುದಿಲ್ಲವೇ? ಮತ್ತೆ ನಿಮ್ಮ ತೊಡೆಗಳನ್ನು ಚುಚ್ಚಬೇಕೆ ಎಂದು ಹಂಗಿಸಿದನು.

ಅರ್ಥ:
ಎತ್ತು: ಮೇಲೆ ಬರುವಂತೆ ಮಾಡು; ಕಳೆದೈ: ಓಡಿಸು, ದೂರತಳ್ಳು; ಬನ: ಕಾಡು; ಎತ್ತು: ಹೋರಿ; ಬೆರಳು: ಅಂಗುಲಿ; ಏಡಿಸು: ಅಣಕಿಸು, ನಿಂದಿಸು; ಕೂಡ: ಜೊತೆ; ಸರಿನುಡಿ: ಸರಿಯಾದ ಮಾತು; ಸಾರ್ವಭೌಮ: ರಾಜ; ಬಿಜಯ: ಬರುವಿಕೆ, ಆಗಮನ; ಒತ್ತು: ಚುಚ್ಚು; ಕಲು: ಕಲ್ಲು; ನೆಲ: ಭೂಮಿ; ಪವಡಿಸು: ಮಲಗು; ತೊಡೆ: ಊರು; ತಿವಿ: ಚುಚ್ಚು;

ಪದವಿಂಗಡಣೆ:
ಎತ್ತಿ +ಕಳೆದೈ +ಬನಕೆ +ನಾವ್ +ನಿ
ಮ್ಮೆತ್ತುಗಳಲೈ +ಬೆರಳಲ್+ಏಡಿಸಿದ್
ಎತ್ತುಗಳ +ಕೂಡೇಕೆ +ಸರಿನುಡಿ +ಸಾರ್ವಭೌಮರಿಗೆ
ಇತ್ತಲೇತಕೆ +ಬಿಜಯ+ಮಾಡಿದಿರ್
ಒತ್ತದೇ +ಕಲುನೆಲನು +ಪವಡಿಸಿ
ಮತ್ತೆ+ ತೊಡೆಗಳ +ತಿವಿಯ +ಬೇಕೇ +ಎಂದನಾ +ಭೀಮ

ಅಚ್ಚರಿ:
(೧) ಹಂಗಿಸುವ ಪರಿ – ಒತ್ತದೇ ಕಲುನೆಲನು ಪವಡಿಸಿ ಮತ್ತೆ ತೊಡೆಗಳ ತಿವಿಯ ಬೇಕೇ
(೨) ಎತ್ತು – ಪದದ ಬಳಕೆ, ೨,೩ ಸಾಲಿನ ಮೊದಲ ಪದ