ಪದ್ಯ ೧೮: ಸಂಜಯನು ದುರ್ಯೋಧನನನ್ನು ಏನೆಂದು ಕೇಳಿದನು?

ಕಡಲತಡಿ ಪರಿಯಂತ ರಾಯರ
ಗಡಣದಲಿ ನೀನೊಬ್ಬನೆಂಬೀ
ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ
ಬಿಡದೆ ಬಾಗುವ ನೃಪರ ಮಕುಟದೊ
ಳಿಡುವ ಕೋಮಲ ಚರಣವಿದರೊಳು
ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ (ಗದಾ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅಪ್ಪಾ, ಕುರುರಾಜ, ಸಮುದ್ರದವರೆಗೆ ಹಬ್ಬಿದ ಭೂಮಿಯಲ್ಲಿರುವ ರಾಜರಲ್ಲಿ ನೀನೊಬ್ಬನೇ ಸಾರ್ವಭೌಮ ಎಂಬ ಮಾತು ಇದೀಗ ನಿಶ್ಚಿತವಾಯಿತು. ನಿರಂತರವೂ ನಮಸ್ಕರಿಸುವ ರಾಜರ ಕಿರೀಟಗಳಿಂದ ಶೋಭಿತವಾದ ಈ ಪಾದಗಳಿಂದ ನಡೆಯಲು ಹೇಗೆ ಕಲಿತೆ? ಎಂದು ಸಂಜಯನು ದುಃಖಿಸುತ್ತಾ ಕೇಳಿದನು.

ಅರ್ಥ:
ಕಡಲು: ಸಾಗರ; ತಡಿ: ದಡ; ಪರಿಯಂತ: ಅಲ್ಲಿಯವರೆಗೂ; ರಾಯ: ರಾಜ; ಗಡಣ: ಗುಂಪು; ನುಡಿ: ಮಾತು; ನಿಶ್ಚಯ: ನಿರ್ಧಾರ; ತಂದೆ: ಒಡೆಯ, ಪಿತ; ಬಿಡು: ತೊರೆ; ಬಾಗು: ಕುಗ್ಗು, ಬಗ್ಗು, ಮಣಿ; ನೃಪ: ರಾಜ; ಮಕುಟ: ಕಿರೀಟ; ಕೋಮಲ: ಮೃದು; ಚರಣ: ಪಾದ; ನಡೆ: ಚಲಿಸು; ಕಲಿ: ಅರ್ಥೈಸು; ನೃಪ: ರಾಜ;

ಪದವಿಂಗಡಣೆ:
ಕಡಲ+ತಡಿ +ಪರಿಯಂತ +ರಾಯರ
ಗಡಣದಲಿ +ನೀನೊಬ್ಬನ್+ಎಂಬೀ
ನುಡಿಗೆ+ ನಿಶ್ಚಯವ್+ಈಗಲಾಯಿತು +ತಂದೆ +ಕುರುರಾಯ
ಬಿಡದೆ +ಬಾಗುವ +ನೃಪರ +ಮಕುಟದೊಳ್
ಇಡುವ +ಕೋಮಲ +ಚರಣವಿದರೊಳು
ನಡೆಯಲೆಂತೈ+ ಕಲಿತೆ +ಎಂದನು +ಸಂಜಯನು +ನೃಪನ

ಅಚ್ಚರಿ:
(೧) ದುರ್ಯೋಧನನ ಪಾದವನ್ನು ವರ್ಣಿಸುವ ಪರಿ – ಬಿಡದೆ ಬಾಗುವ ನೃಪರ ಮಕುಟದೊಳಿಡುವ ಕೋಮಲ ಚರಣವಿದರೊಳುನಡೆಯಲೆಂತೈ ಕಲಿತೆ