ಪದ್ಯ ೨: ಸಂಜಯನನ್ನು ಯಾರು ಪ್ರಶ್ನಿಸಿದರು?

ಇಳಿದು ರಥವನು ಸಂಜಯನ ಬರ
ಸೆಳೆದು ತಕ್ಕೈಸಿದರು ಹಗೆಯಲಿ
ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರ ಭೂಪತಿಯ
ಕಲಹಗತಿಯೇನಾಯ್ತು ಶಕುನಿಯ
ದಳದೊಳಿದ್ದನು ಕೌರವೇಶ್ವರ
ಸುಳಿದನೇ ಹದನಾವುದೆಂದರು ಭಟರು ಸಂಜಯನ (ಗದಾ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ಕೃಪ ಅಶ್ವತ್ಥಾಮ ಕೃತವರ್ಮರು ರಥವನ್ನಿಳಿದು ಸಂಜಯನನ್ನು ಬರಸೆಳೆದು ಅಪ್ಪಿಕೊಂಡರು. ಧೃತರಾಷ್ಟ್ರನ ಪುಣ್ಯದಿಂದ ಶತ್ರುಗಳಿಗೆ ಸಿಕ್ಕು ಉಳಿದು ಬಂದೆ. ಯುದ್ಧದ ಪರಿಣಾಮವೇನು? ಕೌರವೇಶ್ವರನು ಶಕುನಿಯ ದಳದಲ್ಲಿದ್ದುದು ನಮಗೆ ಗೊತ್ತು ಎಂದು ಕೇಳಿದರು.

ಅರ್ಥ:
ಇಳಿ: ಜಾರು; ರಥ: ಬಂಡಿ; ಸೆಳೆ: ಎಳೆತ, ಸೆಳೆತ; ತಕ್ಕೈಸು: ಆಲಿಂಗಿಸು; ಹಗೆ: ವೈರಿ; ಸಿಲುಕು: ಬಂಧನ; ಬಂದು: ಆಗಮಿಸು; ಭಾಗ್ಯ: ಶುಭ, ಅದೃಷ್ಟ; ಭೂಪತಿ: ರಾಜ; ಕಲಹ: ಜಗಳ; ಗತಿ: ವೇಗ; ದಳ: ಸೈನ್ಯ; ಸುಳಿ: ಕಾಣಿಸಿಕೊಳ್ಳು; ಹದ: ಸ್ಥಿತಿ; ಭಟ: ಸೈನಿಕ;

ಪದವಿಂಗಡಣೆ:
ಇಳಿದು +ರಥವನು +ಸಂಜಯನ +ಬರ
ಸೆಳೆದು +ತಕ್ಕೈಸಿದರು +ಹಗೆಯಲಿ
ಸಿಲುಕಿ +ಬಂದೈ +ಭಾಗ್ಯದಲಿ +ಧೃತರಾಷ್ಟ್ರ +ಭೂಪತಿಯ
ಕಲಹಗತಿ+ಏನಾಯ್ತು +ಶಕುನಿಯ
ದಳದೊಳ್+ಇದ್ದನು +ಕೌರವೇಶ್ವರ
ಸುಳಿದನೇ +ಹದನಾವುದೆಂದರು +ಭಟರು +ಸಂಜಯನ

ಅಚ್ಚರಿ:
(೧) ಸಂಜಯನು ಉಳಿದ ಕಾರಣ – ಹಗೆಯಲಿ ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರ ಭೂಪತಿಯ