ಪದ್ಯ ೩೭: ಕೃಷ್ಣನ ಗುಣಗಾನವನ್ನು ಮಾಡಲು ಯಾರು ಆಯಾಸಗೊಳ್ಳುವುದಿಲ್ಲ?

ಹೊಗಳಿ ತಣಿಯವು ವೇದತತಿ ಕೈ
ಮುಗಿದು ದಣಿಯರು ಕಮಲಭವಭವ
ರೊಗುಮಿಗೆಯ ಮಾನಸ ಸಮಾಧಿಯ ಸಾರಸತ್ವದಲಿ
ಬಗೆದು ದಣಿಯರು ಯೋಗಿಗಳು ಕೈ
ಮುಗುಚಿದಣಿಯರು ಕರ್ಮಿಗಳು ಮೂ
ಜಗದ ದೈವದ ದೈವ ಕೃಷ್ಣನ ಬೈವನಿವನೆಂದ (ಸಭಾ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ವೇದಗಳು ಇವನನ್ನು ಎಷ್ಟು ಹೊಗಳಿದರೂ ಬೇಸತ್ತುಕೊಳ್ಳುವುದಿಲ್ಲ. ಬ್ರಹ್ಮ ಶಿವರಿಗೆ ಎಷ್ಟು ಬಾರಿ ಇವನಿಗೆ ಕೈಮುಗಿದರೂ ದಣಿವಾಗುವುದಿಲ್ಲ. ಯೋಗಿಗಳು ಸಮಾಧಿಸ್ಥಿತಿಯಲ್ಲಿ ಇವನನ್ನು ಎಷ್ಟು ಧ್ಯಾನಿಸಿದರೂ ಆಯಾಸಗೊಳ್ಳುವುದಿಲ್ಲ. ಕರ್ಮಿಗಳು ಕೈಯನ್ನು ಎಷ್ಟುಬಾರಿ ನಮಸ್ಕರಿಸಿದರೂ ಆಯಾಸಗೊಳ್ಳುವುದಿಲ್ಲ. ಮೂರುಲೋಕಗಳಲ್ಲಿರುವ ದೈವಗಳ ದೈವವಾದ ಇಂತಹ ಶ್ರೀಕೃಷ್ಣನನ್ನು ಇವನು ಬೈಯುತ್ತಾನೆ.

ಅರ್ಥ:
ಹೊಗಳು: ಪ್ರಶಂಶಿಸು; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ವೇದ: ಜ್ಞಾನ, ಶೃತಿ; ತತಿ: ಗುಂಪು, ಸಾಲು; ಕೈಮುಗಿ: ಎರಗು; ದಣಿ: ಆಯಾಸಪಡು, ಬಳಲು; ಕಮಲಭವ: ಕಮಲದಲ್ಲಿ ಹುಟ್ಟಿದವ- ಬ್ರಹ್ಮ; ಭವ: ಶಿವ, ಪರಮೇಶ್ವರ; ಒಗುಮಿಗೆ: ಆಧಿಕ್ಯ, ಹೆಚ್ಚಳ; ಮಾನಸ: ಮನಸ್ಸು; ಸಮಾಧಿ: ಏಕಾಗ್ರತೆ, ತನ್ಮಯತೆ; ಸಾರಸತ್ವ: ಸೃಜನಾತ್ಮಕ; ಬಗೆ: ಎಣಿಸು, ಲಕ್ಷಿಸು; ಯೋಗಿ: ಮುನಿ; ಕೈ: ಕರ, ಹಸ್ತ; ಮುಗುಚು: ಮುಗಿ, ನಮಸ್ಕರಿಸು; ಕರ್ಮಿ: ಕಾಯಕವನ್ನು ಮಾಡುವವರು; ಮೂಜಗ: ತ್ರಿಜಗ; ದೈವ: ಭಗವಂತ; ಬೈವನು: ಜರೆವನು;

ಪದವಿಂಗಡಣೆ:
ಹೊಗಳಿ +ತಣಿಯವು +ವೇದ+ತತಿ +ಕೈ
ಮುಗಿದು +ದಣಿಯರು +ಕಮಲಭವ+ಭವರ್
ಒಗುಮಿಗೆಯ +ಮಾನಸ +ಸಮಾಧಿಯ +ಸಾರಸತ್ವದಲಿ
ಬಗೆದು+ ದಣಿಯರು +ಯೋಗಿಗಳು+ ಕೈ
ಮುಗುಚಿ+ದಣಿಯರು+ ಕರ್ಮಿಗಳು+ ಮೂ
ಜಗದ+ ದೈವದ +ದೈವ +ಕೃಷ್ಣನ +ಬೈವನಿವನೆಂದ

ಅಚ್ಚರಿ:
(೧) ದಣಿ, ತಣಿ; ಬಗೆದು, ಮುಗಿದು – ಪ್ರಾಸ ಪದ
(೨) ಜೋಡಿ ಪದ – ಕಮಲಭವಭವ, ದೈವದ ದೈವ

ಪದ್ಯ ೮೮: ಕಾರ್ಯಸಿದ್ಧಿಯ ಮರ್ಮವಾವುದು?

ತಮ್ಮ ಕಾರ್ಯನಿಮಿತ್ತ ಗರ್ವವ
ನೆಮ್ಮಿದೊಡೆ ತದ್ಗರ್ವದಿಂದುರೆ
ದಿಮ್ಮಿತಹುದಾ ಕಾರ್ಯ ಮರ್ತ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಕೃತಿಯೊ
ಳಮ್ಮಹವನೈದುವ ವೊಲೊದಗುವ
ಕರ್ಮಿಗಳನೊಳಹೊಯ್ದುಕೊಳ್ವುದು ಮರ್ಮ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೮ ಪದ್ಯ)

ತಾತ್ಪರ್ಯ:
ತನ್ನ ಕಾರ್ಯ ಸಾಧನೆಯಾಗಬೇಕೆಂದರೆ, ಗರ್ವವನ್ನು ಬಿಡಬೇಕು, ಏಕೆಂದರೆ ಗರ್ವದಿಂದ ಕಾರ್ಯವು ಕಠಿಣವಾಗುತ್ತದೆ. ಮನುಷ್ಯರಾಗಲಿ, ಪ್ರಾಣಿಗಳಾಗಲಿ, ಚರಾಚರಗಳಾಗಲಿ ಅವುಗಳ ಬಳಿಗೆ ಹೋಗಿ ಅವರ ಉಪಕಾರವನ್ನು ಪಡೆದು ಅದರಿಂದ ಪರಮ ಸಂತೋಷಗೊಂಡು ಅವರ ಸೌಹಾರ್ದವನ್ನು ಗಳಿಸಿಕೊಳ್ಳುವುದೇ ಕಾರ್ಯಸಿದ್ಧಿಯ ಮರ್ಮವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ತಮ್ಮ: ಅವರ; ಕಾರ್ಯ: ಕೆಲಸ; ನಿಮಿತ್ತ: ನೆಪ, ಕಾರಣ; ಗರ್ವ: ಅಹಂಕಾರ; ಉರೆ: ವಿಶೇಷವಾಗಿ; ದಿಮ್ಮಿತು: ದೊಡ್ಡದಾದ, ಬಲಿಷ್ಠವಾದ; ಮರ್ತ್ಯ: ಭೂಮಿ; ಚರಾಚರ: ಜೀವಿಸುವ ಮತ್ತು ಜೀವಿಸದ; ಮಮತೆ: ಪ್ರೀತಿ, ಅಭಿಮಾನ; ನಡೆದು: ಸಾಗಿ; ಉಪಕೃತಿ: ಉಪಕಾರ, ನೆರವು; ಐದು:ಹೊಂದು, ಸೇರು, ಹೋಗು; ಒದಗು: ಸಿಗುವ; ಕರ್ಮಿ: ಕೆಲಸಗಾರ; ಒಳಹೊಯ್ದು: ಸೇರಿಸಿಕೊಳ್ಳು; ಮರ್ಮ: ರಹಸ್ಯವಾಗಿ ಕಾರ್ಯ ನಿರ್ವಹಿಸುವವನು;

ಪದವಿಂಗಡಣೆ:
ತಮ್ಮ+ ಕಾರ್ಯ+ನಿಮಿತ್ತ +ಗರ್ವವನ್
ಎಮ್ಮಿದೊಡೆ +ತದ್ಗರ್ವದಿಂದ್+ಉರೆ
ದಿಮ್ಮಿತಹುದಾ +ಕಾರ್ಯ +ಮರ್ತ್ಯ +ಚರಾಚರಂಗಳಲಿ
ನಿರ್ಮಮತೆಯಲಿ +ನಡೆದ್+ಉಪಕೃತಿಯೊಳ್
ಅಮ್ಮಹವನ್+ಐದುವ +ವೊಲ್+ಒದಗುವ
ಕರ್ಮಿಗಳನ್+ಒಳಹೊಯ್ದುಕೊಳ್ವುದು +ಮರ್ಮ +ಕೇಳೆಂದ

ಅಚ್ಚರಿ:
(೧)ನಿರ್ಮಮತೆ, ಮರ್ಮ, ಕರ್ಮಿ, ಕರ್ಮ – ಪದಗಳ ಬಳಕೆ