ಪದ್ಯ ೮: ಭೀಮ ದುರ್ಯೋಧನರ ಯುದ್ಧದ ಗತಿ ಹೇಗಿತ್ತು?

ಶ್ವಾಸದಲಿ ಕಿಡಿಸಹಿತ ಕರ್ಬೊಗೆ
ಸೂಸಿದವು ಕಣ್ಣಾಲಿಗಳು ಕ
ಟ್ಟಾಸುರದಿ ಕೆಂಪೇರಿದವು ಬಿಗುಹೇರಿ ಹುಬ್ಬುಗಳು
ರೋಷ ಮಿಗಲೌಡೊತ್ತಿ ಬಹಳಾ
ಭ್ಯಾಸಿಗಳು ಡಾವರಿಸಿದರು ಡೊ
ಳ್ಳಾಸವೋ ರಿಪುಸೇನೆ ಕಾಣದು ಚಿತ್ರಪಯಗತಿಯ (ಗದಾ ಪರ್ವ, ೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಉಸಿರಿನಲ್ಲಿ ಕಪ್ಪುಹೊಗೆಯೊಡನೆ ಕಿಡಿಗಳು ಹೊರಬರುತ್ತಿದ್ದವು. ಹುಬ್ಬುಗಳು ಬಿಇದು ಕಣ್ಣುಗಳು ಕಡುಗೆಂಪೇರಿದ್ದವು. ರೋಷವೇರಿ ತುಟಿಕಚ್ಚಿ, ಮಹಾ ಚತುರರಾದ ಗದಾಯುದ್ಧದಲ್ಲಿ ಅತ್ಯಂತ ಶ್ರೇಷ್ಠರಾದ ಇಬ್ಬರ ಗದೆಗಳ ಹೊಡೆತವನ್ನು ಕಂಡರೂ, ಪಾದಗತಿ ಕಾಣಿಸುತ್ತಿರಲಿಲ್ಲ.

ಅರ್ಥ:
ಶ್ವಾಸ: ಉಸಿರು; ಕಿಡಿ: ಬೆಂಕಿ; ಸಹಿತ: ಜೊತೆ; ಕರ್ಬೊಗೆ: ಕಪ್ಪಾದ ಹೊಗೆ; ಸೂಸು: ಹೊರಹೊಮ್ಮು; ಕಣ್ಣಾಲಿ: ಕಣ್ಣಿನ ಅಂಉ; ಕಟ್ಟಾಸುರ: ಅತ್ಯಂತ ಭಯಂಕರ; ಏರು: ಹೆಚ್ಚಾಗು; ಬಿಗುಹೇರು: ಬಿಗಿಹೆಚ್ಚು; ಹುಬ್ಬು: ಕಣ್ಣಿನ ಮೇಲಿನ ರೋಮ; ರೋಷ: ಕೋಪ; ಮಿಗಲು: ಹೆಚ್ಚಾಗು; ಔಡೊತ್ತು: ಹಲ್ಲಿನಿಂದ ತುಟಿಕಚ್ಚು; ಬಹಳ: ತುಂಬ; ಅಭ್ಯಾಸಿ: ವಿದ್ಯಾರ್ಥಿ; ಡಾವರಿಸು: ತಿವಿ, ನೋಯಿಸು; ಡೊಳ್ಳಾಸ: ಮೋಸ, ಕಪಟ; ರಿಪುಸೇನೆ: ವೈರಿ ಸೈನ್ಯ; ಕಾಣು: ತೋರು; ಪಯಗತಿ: ಪಾದದ ವೇಗ;

ಪದವಿಂಗಡಣೆ:
ಶ್ವಾಸದಲಿ+ ಕಿಡಿಸಹಿತ +ಕರ್ಬೊಗೆ
ಸೂಸಿದವು +ಕಣ್ಣಾಲಿಗಳು +ಕ
ಟ್ಟಾಸುರದಿ+ ಕೆಂಪೇರಿದವು +ಬಿಗುಹೇರಿ +ಹುಬ್ಬುಗಳು
ರೋಷ +ಮಿಗಲ್+ಔಡೊತ್ತಿ+ ಬಹಳ
ಅಭ್ಯಾಸಿಗಳು +ಡಾವರಿಸಿದರು +ಡೊ
ಳ್ಳಾಸವೋ +ರಿಪುಸೇನೆ +ಕಾಣದು +ಚಿತ್ರ+ಪಯಗತಿಯ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕಿಡಿಸಹಿತ ಕರ್ಬೊಗೆಸೂಸಿದವು ಕಣ್ಣಾಲಿಗಳು ಕಟ್ಟಾಸುರದಿ ಕೆಂಪೇರಿದವು

ಪದ್ಯ ೧೦: ವೈರಿ ಸೈನ್ಯವನ್ನು ಹೇಗೆ ನಿರ್ನಾಮ ಮಾಡಿದರು?

ಆ ಸಮಯದಲಿ ಬಹಳ ಶೌರ್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ (ಶಲ್ಯ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಬತ್ತು ಹೋಗುತ್ತಿದ್ದ ಸಮಯದಲ್ಲಿ, ನಿನ್ನ ಮಗ ಬಹಳ ಶೌರ್ಯದಿಂದ ಮುನ್ನುಗ್ಗಿದನು. ಐವತ್ತು ಸಾವಿರ ಕುದುರೆಗಳೊಡನೆ ಶಕುನಿಯು ಯುದ್ಧಕ್ಕೆ ಮುಂದಾದನು. ಆಯುಧಗಳನ್ನು ಹಿಡಿದು ಆನೆಗಳ ಮೇಲೆ ಬರುತ್ತಿದ್ದ ಸೈನಿಕರು ಕೈ ಸನ್ನೆ ಕೊಡುವ ಮೊದಲೇ ವೈರಿ ಸೈನ್ಯವನ್ನು ನಿರ್ನಾಮ ಮಾಡಿದವು.

ಅರ್ಥ:
ಸಮಯ: ಕಾಲ; ಬಹಳ: ತುಂಬ; ಶೌರ್ಯ: ಪರಾಕ್ರಮ; ಆವೇಶ: ರೋಷ; ನೂಕು: ತಳ್ಳು; ಸಾವಿರ: ಸಹಸ್ರ; ತುರಗ: ಕುದುರೆ; ದಳ: ಗುಂಪು; ಸಹಿತ: ಜೊತೆ; ಕೇಸುರಿ: ಕೆಂಪು ಉರಿ; ಕರ್ಬೊಗೆ: ಕಪ್ಪಾದ ಧೂಮ; ನಿಟ್ಟಾಸಿ: ಭಯಂಕರವಾದ; ಆಯುಧ: ಶಸ್ತ್ರ; ಆನೆ: ಕರಿ, ಗಜ; ಕೈವೀಸು: ಕೈ ಸನ್ನೆಮಾಡು; ಮುನ್ನ: ಮುಂಚೆ; ಮೊಗೆ:ನುಂಗು, ಕಬಳಿಸು; ವೈರಿ: ಶತ್ರು; ಮೋಹರ: ಯುದ್ಧ;

ಪದವಿಂಗಡಣೆ:
ಆ +ಸಮಯದಲಿ +ಬಹಳ +ಶೌರ್ಯ
ಆವೇಶದಲಿ +ನಿನ್ನಾತ +ನೂಕಿದನ್
ಆ+ ಶಕುನಿ+ಐವತ್ತು +ಸಾವಿರ +ತುರಗದಳ +ಸಹಿತ
ಕೇಸುರಿಯ +ಕರ್ಬೊಗೆಯವೊಲು +ನಿ
ಟ್ಟಾಸಿನ್+ಆಯುಧದ್+ಆನೆಗಳು +ಕೈ
ವೀಸುವಲ್ಲಿಂ +ಮುನ್ನ +ಮೊಗೆದುವು +ವೈರಿ+ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೇಸುರಿಯ ಕರ್ಬೊಗೆಯವೊಲು

ಪದ್ಯ ೩೫: ನಾರಾಯಣಾಸ್ತ್ರವು ಹೇಗೆ ವೈರಿಸೈನ್ಯವನ್ನು ಬಂಧಿಸಿತು?

ಕಳವಳಿಸಿತರಿಸೇನೆ ಚೂಣಿಯ
ಕೊಳುಗಿಡಿಯ ಸೆಖೆ ತಾಗಿ ಸುಭಟಾ
ವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು
ಬಲದ ಸುತ್ತಲು ಕಟ್ಟಿತುರಿ ಕೆಂ
ಬೆಳಗು ಕುಡಿದವು ಕರ್ಬೊಗೆಗಳ
ಗ್ಗಳದ ಬಾಣದ ಬಂದಿಯಲಿ ಸಿಲುಕಿತ್ತು ರಿಪುಸೇನೆ (ದ್ರೋಣ ಪರ್ವ, ೧೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶತ್ರು ಸೈನ್ಯವು ಕಳವಳಿಸಿತು. ಕಿಡಿಗಳ ಶಾಖದಿಂದ ಯೋಧರ ಮೀಸೆಗಳು ಉರಿದುಹೋದವು, ಮೋರೆಗಳು ಬಾಡಿದವು. ಸೈನ್ಯದ ಸುತ್ತಲೂ ಉರಿಹೊಗೆಗಳು ಆವರಿಸಿದವು. ಶ್ರೇಷ್ಠವಾದ ನಾರಾಯಣಾಸ್ತ್ರದ ಕಪ್ಪು ಹೊಗೆಗಳು ವೈರಿಸೈನ್ಯವನ್ನು ಆವರಿಸಿತು.

ಅರ್ಥ:
ಕಳವಳ: ಗೊಂದಲ; ಅರಿ: ವೈರಿ; ಸೇನೆ: ಸೈನ್ಯ; ಚೂಣಿ: ಮುಂದೆ; ಕಿಡಿ: ಬೆಂಕಿ; ಸೆಖೆ: ಧಗೆ; ತಾಗು: ಮುಟ್ತು; ಭಟಾವಳಿ: ಸೈನಿಕರ ಗುಂಪು; ಉರಿ: ದಹಿಸು; ನೆರೆ: ಗುಂಪು; ಕಂದು: ಕಳಂಕ; ಮೊರೆ: ಮುಖ; ಬಲ: ಸೈನ್ಯ; ಸುತ್ತ: ಬಳಸಿಕೊಂಡು; ಉರಿ: ಬೆಂಕಿ; ಕೆಂಬೆಳಗು: ಕೆಂಪಾದ ಪ್ರಕಾಶ; ಕುಡಿ: ತುದಿ, ಕೊನೆ; ಕರ್ಬೊಗೆ: ಕಪ್ಪಾದ ಹೊಗೆ; ಅಗ್ಗ: ಶ್ರೆಷ್ಠ; ಬಾಣ: ಸರಳು; ಬಂದಿ: ಸೆರೆ, ಬಂಧನ; ಸಿಲುಕು: ಬಂಧನಕ್ಕೊಳಗಾಗು; ರಿಪು: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಕಳವಳಿಸಿತ್+ಅರಿಸೇನೆ +ಚೂಣಿಯ
ಕೊಳುಕಿಡಿಯ +ಸೆಖೆ +ತಾಗಿ +ಸುಭಟ
ಆವಳಿಯ +ಮೀಸೆಗಳ್+ಉರಿಯೆ +ನೆರೆ +ಕಂದಿದವು +ಮೋರೆಗಳು
ಬಲದ +ಸುತ್ತಲು +ಕಟ್ಟಿತ್+ಉರಿ +ಕೆಂ
ಬೆಳಗು +ಕುಡಿದವು +ಕರ್ಬೊಗೆಗಳ್
ಅಗ್ಗಳದ +ಬಾಣದ +ಬಂದಿಯಲಿ +ಸಿಲುಕಿತ್ತು +ರಿಪುಸೇನೆ

ಅಚ್ಚರಿ:
(೧) ಪರಾಕ್ರಮ ಕಡಿಮೆಯಾಯಿತು ಎಂದು ಹೇಳಲು – ಸುಭಟಾವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು

ಪದ್ಯ ೪೨: ದ್ರೋಣನ ಕೋಪವನ್ನು ಎದುರಿಸಲು ಯಾರು ಬಂದರು?

ಮತ್ತೆ ಮಸೆದುದು ಖಾತಿ ಕರ್ಬೊಗೆ
ಸುತ್ತಿದುಸುರಲಿ ಮೀಸೆಗಡಿದೌ
ಡೊತ್ತಿ ಸೆಳೆದನು ಶರವನೆಚ್ಚನು ಪವನನಂದನನ
ಹತ್ತೆಗಡಿದನು ಭೀಮ ಮಗುಳಿವ
ನೊತ್ತಿ ಹೊಕ್ಕರೆ ಕೈ ನೆರವ ಹಾ
ರುತ್ತ ಮುರಿದನು ಬಳಿಕ ಧೃಷ್ಟದ್ಯುಮ್ನನಿದಿರಾದ (ದ್ರೋಣ ಪರ್ವ, ೧೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ದ್ರೋಣನು ಮತ್ತೆ ಕೋಪಗೊಂಡು ಔಡೊತ್ತಿ, ಹೊಗೆಯುಗುಳುವ ಉಸಿರನ್ನು ಬಿಡುತ್ತ, ಭೀಮನ ಮೇಲೆ ಬಾಣವನ್ನು ಬಿಡಲು ಭೀಮನು ಅದನ್ನು ಕಡಿದನು. ದ್ರೋಣನು ಮತ್ತೆ ಮುನ್ನುಗ್ಗಲು, ಭೀಮನು ಸಹಾಯಕ್ಕಾಗಿ ಬೇರೆಡೆಗೆ ಹೋದನು. ಆಗ ಧೃಷ್ಟದ್ಯುಮ್ನನು ಎದುರಿಗೆ ಬಂದನು.

ಅರ್ಥ:
ಮಸೆ: ಹರಿತವಾದುದು; ಖಾತಿ: ಕೋಪ; ಕರ್ಬೊಗೆ: ದಟ್ಟವಾದ ಹೊಗೆ; ಸುತ್ತು: ಆವರಿಸು; ಉಸುರು: ಗಾಳಿ; ಕಡಿ: ಸೀಳು; ಔಡೊತ್ತು: ಹಲ್ಲಿನಿಂದ ತುಟಿಕಚ್ಚು; ಸೆಳೆ: ಎಳೆತ, ಸೆಳೆತ; ಶರ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ನಂದನ: ಮಗ; ಹತ್ತೆ: ಹತ್ತಿರ, ಸಮೀಪ; ಕದಿ: ಸೀಳು; ಮಗುಳು: ಪುನಃ, ಮತ್ತೆ; ಒತ್ತು: ತಳ್ಳು; ಹೊಕ್ಕು: ಸೇರು; ಕೈ: ಹಸ್ತ; ನೆರವು: ಸಹಾಯ; ಹಾರು: ಜಿಗಿ; ಮುರಿ: ಸೀಳು; ಬಳಿಕ: ನಂತರ; ಇರಿದು: ಎದುರು;

ಪದವಿಂಗಡಣೆ:
ಮತ್ತೆ +ಮಸೆದುದು +ಖಾತಿ +ಕರ್ಬೊಗೆ
ಸುತ್ತಿದ್+ಉಸುರಲಿ +ಮೀಸೆ+ಕಡಿದ್+ಔ
ಡೊತ್ತಿ +ಸೆಳೆದನು +ಶರವನ್+ಎಚ್ಚನು +ಪವನ+ನಂದನನ
ಹತ್ತೆ+ಕಡಿದನು +ಭೀಮ +ಮಗುಳಿವನ್
ಒತ್ತಿ +ಹೊಕ್ಕರೆ +ಕೈ +ನೆರವ+ ಹಾ
ರುತ್ತ +ಮುರಿದನು+ ಬಳಿಕ +ಧೃಷ್ಟದ್ಯುಮ್ನನ್+ಇದಿರಾದ

ಅಚ್ಚರಿ:
(೧) ಸುತ್ತಿ, ಔಡೊತ್ತಿ, ಒತ್ತಿ – ಪ್ರಾಸ ಪದಗಳು
(೨) ಕೋಪವನ್ನು ವರ್ಣಿಸುವ ಪರಿ – ಮತ್ತೆ ಮಸೆದುದು ಖಾತಿ ಕರ್ಬೊಗೆ ಸುತ್ತಿದುಸುರಲಿ

ಪದ್ಯ ೧೧ : ಸರ್ಪಾಸ್ತ್ರದ ತಾಪ ಹೇಗಿತ್ತು?

ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ (ಕರ್ಣ ಪರ್ವ, ೨೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಹೆಡೆಯಿಂದ ಉರಿಯ ಜೀರ್ಕೊಳವೆಗಳು ಬಂದವು. ದಳ್ಳುರಿಯು ಸಿಮಿಸಿಮಿ ಸದ್ದು ಮಾಡಿತು. ಕಿಡಿಯ ತುಂತುರುಗಳು, ಕಿಡಿಗಳ ತೆಕ್ಕೆ ಉಸಿರಾಟದಿಂದ ಬಂದ ಝಳ, ಕಪ್ಪುಹೊಗೆಯ ಹೊರಳಿಗಳು ಹಬ್ಬುತ್ತಿರಲು ಸರ್ಪವು ನನಗೆ ಅಪ್ಪಣೆಯೇನು ಎಂದು ಬೇಡಿತು.

ಅರ್ಥ:
ಉರಿ: ಬೆಂಕಿಯ ಕಿಡಿ; ಜೀರ್ಕೊಳವಿ: ಪಿಚಕಾರಿ; ಪೂತ್ಕರಿಸು: ಹೊರಹಾಕು; ಫಣಿ: ಹಾವು; ವದನ: ಮುಖ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಸಿಮಿಸಿಮಿ: ಉರಿಯ ಶಬ್ದದ ವರ್ಣನೆ; ತುಷಾರ: ಹಿಮ, ಇಬ್ಬನಿ; ತುಂತುರು: ಸಣ್ಣ ಸಣ್ಣ ಹನಿ; ಕಿಡಿ: ಬೆಂಕಿ; ಹೊರಳು: ತಿರುಗು, ಬಾಗು; ಕಿಡಿ: ಬೆಂಕಿ; ಕರ್ಬೊಗೆ: ಕಪ್ಪಾದ ಹೊಗೆ; ಕಾಹುರ: ಆವೇಶ, ಸೊಕ್ಕು, ಕೋಪ; ಸುಯ್ಲು: ನಿಟ್ಟುಸಿರು; ಝಳ: ಪ್ರಕಾಶ, ಕಾಂತಿ; ಗರಳ:ವಿಷ; ಜಿಗಿ: ಹಾರು; ಮಾತು: ವಾಣಿ; ತೋರು: ಗೋಚರಿಸು; ಬೆಸಸು: ಹೇಳು, ಆಜ್ಞಾಪಿಸು;

ಪದವಿಂಗಡಣೆ:
ಉರಿಯ+ ಜೀರ್ಕೊಳವಿಗಳವೊಲು +ಪೂ
ತ್ಕರಿಸಿದವು +ಫಣಿ +ವದನದಲಿ+ ದ
ಳ್ಳುರಿಯ +ಸಿಮಿಸಿಮಿಗಳ+ ತುಷಾರದ+ ಕಿಡಿಯ +ತುಂತುರಿನ
ಹೊರಳಿ+ಕಿಡಿಗಳ +ಕರ್ಬೊಗೆಯ +ಕಾ
ಹುರದ +ಸುಯ್ಲಿನ +ಝಳವ +ಗರಳಾ
ಕ್ಷರದ +ಜಿಗಿಯಲಿ +ಮಾತು +ತೋರಿತು +ಬೆಸಸು +ಬೆಸಸೆನುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಜೀರ್ಕೊಳವಿಗಳವೊಲು ಪೂತ್ಕರಿಸಿದವು ಫಣಿ
(೨) ಸರ್ಪಾಸ್ತ್ರದ ವರ್ಣನೆ – ಫಣಿ ವದನದಲಿ ದಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
(೩) ಬೆಂಕಿಯನ್ನು ಶಬ್ದದಲ್ಲಿ ಹಿಡಿಯುವ ಪರಿ – ಸಿಮಿಸಿಮಿ
(೪) ದಳ್ಳುರಿಯನ್ನು ತಂಪಾದ ತುಂತುರು ಎಂದು ಹೇಳುವ ಕವಿಯ ಕಲ್ಪನೆ

ಪದ್ಯ ೩೧: ದೇವತೆಗಳೇಕೆ ಆಶ್ಚರ್ಯಚಕಿತರಾದರು?

ರಾಯ ಕೇಳಭಿಮಂತ್ರಿಸಿದನಾ
ಗ್ನೇಯವನು ಹೂಡಿದನು ಸುರಕುಲ
ಬಾಯಬಿಡಲಂಬುಗಿದು ಹಾಯ್ದುದು ಬಿಲುದಿರುವ ನೊದೆದು
ವಾಯು ಪಡಿಬಲವಾಗೆ ಕಿಡಿಗಳ
ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ (ಕರ್ಣ ಪರ್ವ, ೨೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕರ್ಣನು ಆಗ್ನೇಯಾಸ್ತ್ರವನ್ನು ಹೂಡಿ ಬಿಡಲು ಅದು ಹೆದೆಯನ್ನೊದೆದು ಮುಂದೆ ಹೋಯಿತು. ಅದಕ್ಕೆ ವಾಯುವಿನ ಬೆಂಬಲವೂ ಒದಗಿತು. ಅದರ ಮುಖದಿಂದ ದಟ್ಟವಾದ ಕಪ್ಪುಹೊಗೆ ಕಿಡಿಗಳು, ದಳ್ಳುರಿಗಳು ಹಬ್ಬುತ್ತಿದ್ದವು. ಅದನ್ನು ನೋಡಿ ದೇವತೆಗಳು ಬಾಯಿಬಿಟ್ಟರು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ಅಭಿಮಂತ್ರಿಸಿದ: ಮಂತ್ರದಿಂದ ಆಶೀರ್ವದಿಸಿದ; ಆಗ್ನೇಯ: ಅಗ್ನಿ;ಹೂಡು: ತೊಡು; ಸುರಕುಲ: ದೇವತೆಗಳ ವಂಶ; ಬಾಯಬಿಡು: ಆಶ್ಚರ್ಯ;ಅಂಬು: ಬಾಣ; ಹಾಯ್ದು: ಹಾರು; ಬಿಲುದಿರುವ: ಬಿಲ್ಲಿನ ಹಗ್ಗ; ಒದೆ: ತಳ್ಳು; ವಾಯು: ಗಾಳಿ; ಪಡಿಬಲ: ವೈರಿಸೈನ್ಯ, ಬೆಂಬಲ, ಸಹಾಯ; ಕಿಡಿ: ಬೆಂಕಿ; ಬಾಯಿಧಾರೆ: ಮೊನೆಯಾದ ಅಲಗು; ಹೊದರು:ತೊಡಕು, ತೊಂದರೆ, ಗುಂಪು; ಕರ್ಬೊಗೆ: ಕಪ್ಪು ಹೊಗೆ; ಲವಣಿ: ಕಾಂತಿ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಇರುಳು: ರಾತ್ರಿ; ಚೂಣಿ: ಮೊದಲು;

ಪದವಿಂಗಡಣೆ:
ರಾಯ +ಕೇಳ್+ಅಭಿಮಂತ್ರಿಸಿದನ್
ಆಗ್ನೇಯವನು +ಹೂಡಿದನು +ಸುರಕುಲ
ಬಾಯಬಿಡಲ್+ಅಂಬುಗ್+ಇದು+ ಹಾಯ್ದುದು +ಬಿಲುದಿರುವನ್ +ಒದೆದು
ವಾಯು +ಪಡಿಬಲವಾಗೆ +ಕಿಡಿಗಳ
ಬಾಯಿಧಾರೆಯ +ಹೊದರ +ಕರ್ಬೊಗೆ
ಲಾಯದಲಿ +ಲವಣಿಸುವ+ ದಳ್ಳುರಿದಿರುಳ+ ಚೂಣಿಯಲಿ

ಅಚ್ಚರಿ:
(೧) ಆಗ್ನೇಯಾಸ್ತ್ರದ ಪ್ರಭಾವ – ಕಿಡಿಗಳ ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ