ಪದ್ಯ ೨೬: ಶಿವನು ಯಾರನ್ನು ಪಶುಗಳೆಂದು ಕರೆದನು?

ಕರ್ಮಕಿಂಕರರಾಗಿ ಕೃತದು
ಷ್ಕರ್ಮವಾಸನೆವಿಡಿದು ತಾನೇ
ಕರ್ಮಕರ್ತನು ಭೋಗಿ ತಾನೇ ದುಃಖಿಸುಖಿಯೆಂದು
ನಿರ್ಮಳಾತ್ಮನೊಳೀಯಹಂಕೃತಿ
ಧರ್ಮವನೆ ನೇವರಿಸಿ ಮರುಗುವ
ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ (ಕರ್ಣ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೇವತೆಗಳು ದುಃಖತಪ್ತರಾಗಿರುವುದನ್ನು ಕಂಡು ಶಿವನು ಪಶುಗಳಾರು ಎಂದು ಉತ್ತರಿಸಿದನು. ಕರ್ಮಕ್ಕೆ ಸೇವಕರಾಗಿ ಮಾಡಿದ ಪಾಪಕರ್ಮಗಳ ವಾಸನೆಯಿಂದ ನಾನೇ ಕರ್ಮವನ್ನು ಮಾಡಿದವನು, ನಾನೇ ಫಲವನ್ನನುಭವಿಸುವವನು, ನಾನೇ ಸುಖಿ, ನಾನೇ ದುಃಖಿ ಎಂದು ತಿಳಿದು, ನಿರ್ಮಲನಾದ ಆತ್ಮನಲ್ಲಿ ಅಹಂಕಾರವನಾರೋಪಿಸಿ ದುಃಖಿಸುವವರನ್ನು ಪಶುಗಳೆಂದರೆ ನೀವೇಕೆ ದುಃಖ ಪಡುವಿರಿ ಎಂದು ದೇವತೆಗಳಿಗೆ ಶಿವನು ಪ್ರಶ್ನಿಸಿದನು.

ಅರ್ಥ:
ಕರ್ಮ: ಕೆಲಸ; ಕಿಂಕರ: ಆಳು, ಸೇವಕ; ಕೃತ: ಮಾಡಿದ, ಮುಗಿಸಿದ; ದುಷ್ಕರ್ಮ: ಕೆಟ್ಟ ಕೆಲಸ; ವಾಸನೆ: ಹಿಂದಿನ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ; ಹಿಡಿ: ಬಂಧನ, ಸೆರೆ; ಕರ್ತ: ಮಾದುವವ; ಭೋಗಿ: ಅನುಭವಿಸುವವ; ದುಃಖ: ಖೇದ, ಅಳಲು; ಸುಖಿ: ಆನಂದಿಸು; ನಿರ್ಮಳ: ಶುದ್ಧ; ಆತ್ಮ: ಪರಬ್ರಹ್ಮ; ಅಹಂಕೃತಿ: ಅಹಂಕಾರ, ಗರ್ವ; ಧರ್ಮ: ಧಾರಣ ಮಾಡಿದುದು; ನೇವರಿಸು: ಮೃದುವಾಗಿ – ಸವರು; ಮರುಗು: ತಳಮಳ, ಸಂಕಟ; ದುರ್ಮತಿ: ಕೆಟ್ಟಬುದ್ಧಿ; ಪಶು: ಮೃಗ; ಖೇದ: ದುಃಖ;

ಪದವಿಂಗಡಣೆ:
ಕರ್ಮಕಿಂಕರರಾಗಿ+ ಕೃತ+ದು
ಷ್ಕರ್ಮ+ವಾಸನೆವಿಡಿದು +ತಾನೇ
ಕರ್ಮಕರ್ತನು+ ಭೋಗಿ +ತಾನೇ +ದುಃಖಿ+ಸುಖಿಯೆಂದು
ನಿರ್ಮಳ+ಆತ್ಮನೊಳ್+ಈ+ಅಹಂಕೃತಿ
ಧರ್ಮವನೆ+ ನೇವರಿಸಿ+ ಮರುಗುವ
ದುರ್ಮತಿಗಳನು+ ಪಶುಗಳೆಂದರೆ+ ಖೇದವೇಕೆಂದ

ಅಚ್ಚರಿ:
(೧) ಕೃತ, ಕರ್ಮ, ದುಷ್ಕರ್ಮ, ಕರ್ತ, ಧರ್ಮ, ದುರ್ಮತಿ, ಭೋಕ್ತ – ಪದಗಳ ಬಳಕೆ
(೨) ಪಶುಯಾರೆಂದು/ಲಕ್ಷಣವನ್ನು ತಿಳಿಸುವ ಪದ್ಯ