ಪದ್ಯ ೧೫: ಪದ್ಮವ್ಯೂಹದ ಮೊದಲ ಸಾಲು ಏನಾಯಿತು?

ಎಸಳ ಮೊನೆ ಮೋಹರದ ಸಂದಣಿ
ಯುಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಸಲು ಮೊಳಗಿದನು ಪಾರ್ಥಕುಮಾರನಳವಿಯಲಿ (ದ್ರೋಣ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪದ್ಮವ್ಯೂಹದ ತುದಿಯ ದಳದ ಸೈನ್ಯವು ನಾಶವಾಯಿತು. ಕೇಸರಾಕೃತಿಯಲ್ಲಿ ನಿಂತ ವೀರರು ಆಕಾಶಮಾರ್ಗದಲ್ಲಿ ನಡೆದರು. ಕರ್ಣಿಕೆಯನ್ನು ಕಾದುಕೊಳ್ಳುವ ರಾಜರು ಇಲ್ಲವಾದರು ದುರ್ಯೋಧನನ ನೆಲೆಯ ಮೇಲೆ ಅಭಿಮನ್ಯುವು ಗರ್ಜಿಸುತ್ತಾ ನುಗ್ಗಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ತುದಿ; ಮೋಹರ: ಯುದ್ಧ; ಸಂದಣಿ: ಗುಂಪು; ಉಸಿರು: ಗಾಳಿ; ಉಳಿ: ಮಿಕ್ಕ; ಕೇಸರಾಕೃತಿ: ಸಿಂಹದ ರೂಪ; ಆಕೃತಿ: ರೂಪ; ಅಸಮ: ಸಮವಲ್ಲದ; ವೀರ: ಶೂರ; ಪಥಿಕ: ದಾರಿಗ, ಪ್ರಯಾಣಿಕ; ಗಗನ: ಆಗಸ; ಮಾರ್ಗ: ದಾರಿ; ನುಸುಳು: ನುಣುಚಿಕೊಳ್ಳುವಿಕೆ; ಕರ್ಣಿಕೆ: ಕಮಲದ ಮಧ್ಯ ಭಾಗ, ಬೀಜಕೋಶ; ಕಾಹು: ಕಾಪಾಡು; ವಸುಮತೀಶ: ರಾಜ; ರಾಯ: ರಾಜ; ನೆಲೆ: ಭೂಮಿ; ಎಸಗು: ಕೆಲಸ, ಉದ್ಯೋಗ; ಮೊಳಗು: ಧ್ವನಿ, ಸದ್ದು; ಕುಮಾರ: ಪುತ್ರ; ಅಳವಿ: ಯುದ್ಧ;

ಪದವಿಂಗಡಣೆ:
ಎಸಳ+ ಮೊನೆ +ಮೋಹರದ +ಸಂದಣಿ
ಉಸಿರನ್+ಉಳಿದುದು +ಕೇಸರಾಕೃತಿ
ಅಸಮ +ವೀರರು +ಪಥಿಕರಾದರು+ ಗಗನಮಾರ್ಗದಲಿ
ನುಸುಳಿದರು +ಕರ್ಣಿಕೆಯ +ಕಾಹಿನ
ವಸುಮತೀಶರು+ ರಾಯನರನ್+ಎಲೆ
ದೆಸೆಗೆಸಲು +ಮೊಳಗಿದನು +ಪಾರ್ಥಕುಮಾರನ್+ಅಳವಿಯಲಿ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಕೇಸರಾಕೃತಿಯಸಮ ವೀರರು ಪಥಿಕರಾದರು ಗಗನಮಾರ್ಗದಲಿ

ಪದ್ಯ ೧೬: ಪದ್ಮವ್ಯೂಹವು ಹೇಗೆ ರಚಿತವಾಯಿತು?

ಎಸಳೆಸಳು ಮಿಗೆ ಸರಿಸದಲಿ ಜೋ
ಡಿಸಿದನವನೀಪಾಲರನು ತ
ದ್ಬಿಸಜ ಕರ್ಣಿಕೆಯೊಡ್ಡಿನಲಿ ಬಲಿದನು ಸುಯೋಧನನ
ಪಸರಿಸಿತು ಕೌರವಕುಮಾರ
ಪ್ರಸರ ಕೇಸರವಾಯ್ತು ಮೃತ್ಯುವಿ
ನೊಸಗೆಗೆತ್ತಿದ ಗುಡಿಗಳೆನೆ ತಳಿತವು ಪತಾಕೆಗಳು (ದ್ರೋಣ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ರಾಜರನ್ನು ಪದ್ಮದ ದಳಗಳಂತೆ ಸರಿಸಮಾನವಾಗಿ ಜೋಡಿಸಿ ನಿಲ್ಲಿಸಿದನು. ಪದ್ಮದ ಕರ್ಣಿಕೆಯ ಸೈನ್ಯದ ನಡುವೆ ದುರ್ಯೋಧನನನ್ನು ಭದ್ರವಾಗಿ ನಿಲ್ಲಿಸಿದನು. ಕೌರವ ಕುಮಾರರು ಕಮಲದ ಹೂವಿನ ಕುಸುರಾದರು. ಮೃತ್ಯುವಿನ ಶುಭಕಾರ್ಯಕ್ಕೆ ನಿಲ್ಲಿಸಿದ ಧ್ವಜಸ್ಥಂಭಗಳಂತೆ ಪತಾಕೆಗಳು ಭಯಂಕರವಾಗಿ ಕಾಣಿಸಿದವು.

ಅರ್ಥ:
ಎಸಳು: ಹೂವಿನ ದಳ; ಮಿಗೆ: ಮತ್ತು, ಅಧಿಕವಾಗಿ; ಸರಿಸ: ನೇರವಾಗಿ; ಜೋಡಿಸು: ಜೊತೆ; ಅವನೀಪಾಲ: ರಾಜ; ಬಿಸಜ: ಕಮಲ; ಕರ್ಣಿಕೆ:ಮಧ್ಯ ಭಾಗ; ಬಲಿ: ಗಟ್ಟಿ, ದೃಢ; ಪಸರಿಸು: ಹರಡು; ಕುಮಾರ: ಸುತ; ಪ್ರಸರ: ವಿಸ್ತಾರ, ಹರಹು; ಕೇಸರ: ಹೂವಿನಲ್ಲಿರುವ ಕುಸುರು; ಮೃತ್ಯು: ಸಾವು; ಒಸಗು:ಶುಭ, ಮಂಗಳಕಾರ್ಯ; ಗುಡಿ: ಕುಟೀರ, ಮನೆ; ತಳಿತ:ಚಿಗುರು; ಪತಾಕೆ: ಬಾವುಟ;

ಪದವಿಂಗಡಣೆ:
ಎಸಳ್+ಎಸಳು +ಮಿಗೆ +ಸರಿಸದಲಿ +ಜೋ
ಡಿಸಿದನ್+ಅವನೀಪಾಲರನು +ತ
ದ್ಬಿಸಜ+ ಕರ್ಣಿಕೆ+ಒಡ್ಡಿನಲಿ +ಬಲಿದನು +ಸುಯೋಧನನ
ಪಸರಿಸಿತು +ಕೌರವ+ಕುಮಾರ
ಪ್ರಸರ +ಕೇಸರವಾಯ್ತು +ಮೃತ್ಯುವಿನ್
ಒಸಗೆಗ್+ಎತ್ತಿದ +ಗುಡಿಗಳ್+ಎನೆ +ತಳಿತವು +ಪತಾಕೆಗಳು

ಅಚ್ಚರಿ:
(೧) ಕಮಲವನ್ನು ಬಿಸಜ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಎಸಳೆಸಳು ಮಿಗೆ ಸರಿಸದಲಿ ಜೋಡಿಸಿದನವನೀಪಾಲರನು