ಪದ್ಯ ೨೫: ಶಲ್ಯನ ರಕ್ಷಣೆಗೆ ಯಾರು ಬಂದರು?

ದಳಪತಿಯ ಮುಕ್ಕುರುಕಿದರು ಪಡಿ
ಬಲವ ಬರಹೇಳೆನುತ ಚಾಚಿದ
ಹಿಳುಕುಗೆನ್ನೆಯ ಹೊಗರುಮೋರೆಯ ಬಿಗಿದ ಹುಬ್ಬುಗಳ
ಕಳಶಜನ ಸುತನೌಕಿದನು ಕೃಪ
ನಳವಿಗೊಟ್ಟನು ಸುಬಲಸುತನಿ
ಟ್ಟಳಿಸಿದನು ಕರ್ಣಾತ್ಮಜರು ಕೈಕೊಂಡರೊಗ್ಗಿನಲಿ (ಶಲ್ಯ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶತ್ರುಗಳು ಸೇನಾಧಿಪತಿಯನ್ನು ಮುತ್ತಿದ್ದಾರೆ. ಬೆಂಬಲಕ್ಕೆ ಸೈನ್ಯವನ್ನು ಬರ ಹೇಳು, ಎನ್ನುತ್ತಾ ಕೋಪೋದ್ರಿಕ್ತ ಮುಖದಿಂದ ಹುಬ್ಬುಗಳನ್ನು ಗಂಟಿಟ್ಟು, ಬಾಣವನ್ನು ಕಿವಿವರೆಗೆ ಸೇದಿದ ಅಶ್ವತ್ಥಾಮನು ಯುದ್ಧಕ್ಕಿಳಿದನು. ಶಕುನಿಯು ಮುನ್ನುಗ್ಗಿದನು. ಕರ್ಣನ ಮಕ್ಕಳು ಯುದ್ಧಕ್ಕಿಳಿದರು.

ಅರ್ಥ:
ದಳಪತಿ: ಸೇನಾಧಿಪತಿ; ಮುಕ್ಕುರು: ಕವಿ, ಮುತ್ತು, ಆವರಿಸು; ಪಡಿಬಲ: ವೈರಿ ಸೈನ್ಯ; ಬರಹೇಳು: ಆಗಮಿಸು; ಚಾಚು: ಹರಡು; ಹಿಳುಕು: ಬಾಣದ ಹಿಂಭಾಗ; ಹಿಳುಕುಗೆನ್ನೆ: ಬಾಣದ ಗರಿಯಿಂದ ಕೂಡಿದ ಕೆನ್ನೆ; ಹೊಗರು: ಕಾಂತಿ, ಪ್ರಕಾಶ; ಮೋರೆ: ಮುಖ; ಬಿಗಿ: ಗಟ್ಟಿಯಾದ; ಹುಬ್ಬು: ಕಣ್ಣಿನ ಮೇಲಿನ ಕೂದಲು; ಕಳಶಜ: ದ್ರೋಣ; ಸುತ: ಮಗ; ಔಕು: ಒತ್ತು; ಅಳವಿ: ಯುದ್ಧ; ಇಟ್ಟಳಿಸು: ದಟ್ಟವಾಗು, ಒತ್ತಾಗು; ಆತ್ಮಜ: ಮಗ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ದಳಪತಿಯ +ಮುಕ್ಕುರುಕಿದರು +ಪಡಿ
ಬಲವ +ಬರಹೇಳೆನುತ +ಚಾಚಿದ
ಹಿಳುಕು+ಕೆನ್ನೆಯ +ಹೊಗರು+ಮೋರೆಯ +ಬಿಗಿದ +ಹುಬ್ಬುಗಳ
ಕಳಶಜನ +ಸುತನ್+ಔಕಿದನು +ಕೃಪನ್
ಅಳವಿ+ಕೊಟ್ಟನು +ಸುಬಲಸುತನ್
ಇಟ್ಟಳಿಸಿದನು +ಕರ್ಣಾತ್ಮಜರು +ಕೈಕೊಂಡರ್+ಒಗ್ಗಿನಲಿ

ಅಚ್ಚರಿ:
(೧) ಕೆನ್ನೆ, ಮೋರೆ, ಹುಬ್ಬು – ಕೋಪವನ್ನು ಸೂಚಿಸಲು ಬಳಸಿದ ಮುಖದ ಅಂಗಗಳು
(೨) ಕಳಶಜನಸುತ, ಸುಬಲಸುತ – ಸುತ ಪದದ ಬಳಕೆ
(೩) ಸುತ, ಆತ್ಮಜ – ಸಮಾನಾರ್ಥಕ ಪದ

ಪದ್ಯ ೫೮: ಕರ್ಣನ ಮಗನನ್ನು ಯಾರು ಕೊಂದರು?

ಕೈದು ಮುರಿಯಲು ಮುಂದೆ ನೂಕದೆ
ಹಾಯ್ದನಾ ರವಿಸೂನು ಬಳಿಕಡ
ಹಾಯ್ದು ತಡೆದನು ಬವರವನು ಕರ್ಣಾತ್ಮಜನು ಕಡುಗಿ
ಐದು ಬಾಣದಲವನ ಕೊರಳನು
ಕೊಯ್ದನರ್ಜುನ ಸೂನುವಾತನ
ನೊಯ್ದರಂತಕದೂತರದ್ಭುತವಾಯ್ತು ಸಂಗ್ರಾಮ (ದ್ರೋಣ ಪರ್ವ, ೫ ಸಂಧಿ, ೫೮ ಪದ್ಯ)

ತಾತ್ಪರ್ಯ:
ಆಗ ಕರ್ಣನು ಕೈಸಾಗದೆ ಹೋಗಿ ಬಿಟ್ಟನು, ಕರ್ಣನ ಮಗನು ಅಭಿಮನ್ಯುವನ್ನು ತಡೆದನು. ಅಭಿಮನ್ಯುವು ಐದುಬಾಣಗಳಿಂದ ಕರ್ಣನ ಮಗನ ಕೊರಳನ್ನು ಕತ್ತರಿಸಲು, ಯಮದೂತರು ಬಂದು ಅವನ ಪ್ರಾಣವನ್ನೊಯ್ದರು.

ಅರ್ಥ:
ಕೈದು: ಆಯುಧ; ಮುರಿ: ಸೀಳು; ಮುಂದೆ: ಎದುರು; ನೂಕು: ತಳ್ಳು; ಹಾಯ್ದು: ಹೊಡೆ; ಬಳಿಕ: ನಂತರ; ಅಡ: ಮಧ್ಯಪ್ರವೇಶಿಸು; ತಡೆ: ನಿಲ್ಲಿಸು; ಬವರ: ಯುದ್ಧ; ಆತ್ಮಜ: ಮಗ; ಕಡುಗು: ಶಕ್ತಿಗುಂದು; ಬಾಣ: ಅಂಬು, ಸರಳ; ಕೊರಳು: ಗಂಟಲು, ಕುತ್ತಿಗೆ; ಕೊಯ್ದು: ಸೀಳು; ಸೂನು: ಮಗ; ಒಯ್ದು: ಎಳೆದು; ಅಂತಕ: ಯಮ; ದೂತ: ಸೇವಕ; ಅದ್ಭುತ: ಆಶ್ಚರ್ಯ; ಸಂಗ್ರಾಮ: ಯುದ್ಧ;

ಪದವಿಂಗಡಣೆ:
ಕೈದು +ಮುರಿಯಲು +ಮುಂದೆ +ನೂಕದೆ
ಹಾಯ್ದನಾ +ರವಿಸೂನು +ಬಳಿಕ್+ಅಡ
ಹಾಯ್ದು +ತಡೆದನು +ಬವರವನು +ಕರ್ಣಾತ್ಮಜನು +ಕಡುಗಿ
ಐದು +ಬಾಣದಲ್+ಅವನ +ಕೊರಳನು
ಕೊಯ್ದನ್+ಅರ್ಜುನ ಸೂನುವ್+ಆತನನ್
ಒಯ್ದರ್+ಅಂತಕದೂತರ್+ಅದ್ಭುತವಾಯ್ತು +ಸಂಗ್ರಾಮ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಆತನನೊಯ್ದರಂತಕದೂತರ್
(೨) ರವಿಸೂನು, ಕರ್ಣಾತ್ಮಜ, ಅರ್ಜುನಸೂನು – ಕರ್ಣ, ಕರ್ಣನ ಮಗ, ಅಭಿಮನ್ಯುವನ್ನು ಕರೆದ ಪರಿ

ಪದ್ಯ ೪೪: ದುಶ್ಯಾಸನನು ಭೀಮನಿಗೆ ಏನು ಹೇಳಿದ?

ಎಲವೋ ಕರ್ಣಾತ್ಮಜನ ಹೊಯ್ದ
ಗ್ಗಳಿಕೆಯಲಿ ಹೊರೆಯೇರದಿರು ಪಡಿ
ಬಲಕೆ ಕರಸಾ ಕೃಷ್ಣ ಪಾರ್ಥರ ನಿನ್ನಲೇನಹುದು
ಬಳಿಯ ಬಿಗುಹಿನ ಬಿಂಕ ನಿನ್ನಯ
ತಲೆಗೆ ಬಹುದಾವರಿಯೆವೆನುತತಿ
ಬಳನನೆಚ್ಚನು ನಿನ್ನ ನಂದನನರಸ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಕರ್ಣನ ಮಗನನ್ನು ಕೊಂದೆನೆಂಬ ದೊಡ್ಡಸ್ತಿಕೆಯಿಂದ ಸಂತಸಗೊಳ್ಳಬೇಡ. ನಿನ್ನಿಂದ ಏನು ಆಗುವುದಿಲ್ಲ, ಕರೆಸು ಕೃಷ್ಣಾರ್ಜುನರನ್ನು ನಿನ್ನ ಬೆಂಬಲಕೆ, ನಿನ್ನ ಹೆಮ್ಮೆಯು ನಿನ್ನ ತಲೆಗೆ ಮುಳುವಾದೀತು ಎನ್ನುತ್ತಾ ದುಶ್ಯಾಸನನು ಭೀಮನನ್ನು ತನ್ನ ಸೈನ್ಯದಿಂದ ಮುತ್ತಿದನು ಎಂದು ಸಂಜಯನು ಧೃತರಾಷ್ಟ್ರನಿಗೆ ವಿವರಿಸಿದನು.

ಅರ್ಥ:
ಆತ್ಮಜ: ಪುತ್ರ; ಹೊಯ್ದು: ಹೊಡೆದು; ಅಗ್ಗಳಿಕೆ: ದೊಡ್ಡಸ್ತಿಕೆ, ಶ್ರೇಷ್ಠತೆ; ಹೊರೆ: ಭಾರ, ರಕ್ಷಣೆ; ಏರು: ಮೇಲೆ ಹತ್ತು; ಪಡಿಬಲ: ಎದುರುಪಡೆ, ಶತ್ರುಸೈನ್ಯ; ಕರಸು: ಬರೆಮಾಡು; ಬಳಿ: ಸಮೀಪ, ಕೇವಲ; ಬಿಗುಹು:ಬಿಗಿ; ಬಿಂಕ: ಗರ್ವ, ಜಂಬ; ತಲೆ: ಶಿರ; ಬಹುದು: ಬಂದಿಹುದು; ಅರಿ: ತಿಳಿ; ಅತಿ: ಬಹಳ; ನಂದನ: ಮಗ; ಅರಸ: ರಾಜ; ಕೇಳು: ಆಲಿಸು; ಎಚ್ಚು: ಬಾಣ ಬಿಡು, ಏಟು;

ಪದವಿಂಗಡಣೆ:
ಎಲವೋ+ ಕರ್ಣ+ಆತ್ಮಜನ +ಹೊಯ್ದ್
ಅಗ್ಗಳಿಕೆಯಲಿ +ಹೊರೆ+ಏರದಿರು+ ಪಡಿ
ಬಲಕೆ +ಕರಸ್+ಆ+ ಕೃಷ್ಣ +ಪಾರ್ಥರ +ನಿನ್ನಲ್+ಏನಹುದು
ಬಳಿಯ +ಬಿಗುಹಿನ +ಬಿಂಕ +ನಿನ್ನಯ
ತಲೆಗೆ +ಬಹುದಾವರಿಯೆವ್+ಎನುತ್+ಅತಿ
ಬಳನನ್+ಎಚ್ಚನು +ನಿನ್ನ +ನಂದನನ್+ಅರಸ +ಕೇಳೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಳಿಯ ಬಿಗುಹಿನ ಬಿಂಕ

ಪದ್ಯ ೪೦: ಕೌರವ ಸೇನೆಯಲ್ಲಿ ಯಾವ ಗೊಂದಲವಾಯಿತು?

ಶಿವ ಶಿವಾ ಕರ್ಣಾತ್ಮಜನೆ ಮಡಿ
ದವನು ದಳಪತಿ ಮಡಿದನೋ ಕೌ
ರವನ ಕೇಡೋ ಹಾಯೆನುತ ಕುರುಸೇನೆ ಕಳವಳಿಸೆ
ಕವಿದರಶ್ವತ್ಥಾಮ ಕೃಪ ಕೌ
ರವ ಶಕುನಿ ದುಶ್ಯಾಸನಾದಿಗ
ಳವಗಡಿಸಲನಿಬರನು ತೊಲಗಿಸಿ ಕರ್ಣನಿದಿರಾದ (ಕರ್ಣ ಪರ್ವ, ೧೦ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೌರವಸೇನೆಯು ಶಿವ ಶಿವಾ ಕರ್ಣನ ಮಗನು ಸತ್ತನೋ ಅಥವ ಕರ್ಣನೇ ಮಡಿದನೋ? ದುರ್ಯೋಧನನಿಗೆ ಏನೋ ಕೇಡುಂಟಾಗಿದೆ ಎಂದು ಕಳವಳಿಸಿತು. ಆಗ ಅಶ್ವತ್ಥಾಮ, ಕೃಪ, ಕೌರವ, ಶಕುನಿ, ದುಶ್ಯಾಸನಾದಿಗಳು ಭೀಮನನ್ನು ಮುತ್ತಿ ಮುನ್ನುಗಲು, ಕರ್ಣನು ಅವರನ್ನು ಆಚೆಗೆ ತಳ್ಳಿ ತಾನೇ ಭೀಮನ ಎದುರು ನಿಂತನು.

ಅರ್ಥ:
ಆತ್ಮಜ: ಮಗ; ಮಡಿ: ಸಾವು, ಮರಣ; ದಳಪತಿ: ಸೇನಾಧಿಪತಿ; ಕೇಡು: ಕೆಟ್ಟದ್ದು; ಸೇನೆ: ಸೈನ್ಯ; ಕಳವಳ: ಗೊಂದಲ; ಕವಿ: ಆವರಿಸು; ಆದಿ: ಮುಂತಾದ; ಅವಗಡಿಸು: ಅವಸರಗೊಳ್ಳು; ಇನಿಬರು: ಇಷ್ಟುಜನ; ತೊಲಗು: ಹೊರಹಾಕು; ಇದಿರು: ಎದುರು;

ಪದವಿಂಗಡಣೆ:
ಶಿವ +ಶಿವಾ +ಕರ್ಣಾತ್ಮಜನೆ+ ಮಡಿ
ದವನು+ ದಳಪತಿ+ ಮಡಿದನೋ +ಕೌ
ರವನ +ಕೇಡೋ +ಹಾ+ಎನುತ+ ಕುರುಸೇನೆ +ಕಳವಳಿಸೆ
ಕವಿದರ್+ಅಶ್ವತ್ಥಾಮ +ಕೃಪ +ಕೌ
ರವ +ಶಕುನಿ +ದುಶ್ಯಾಸನಾದಿಗಳ್
ಅವಗಡಿಸಲ್+ಅನಿಬರನು +ತೊಲಗಿಸಿ +ಕರ್ಣನ್+ಇದಿರಾದ

ಅಚ್ಚರಿ:
(೧) ಕಳವಳವನ್ನು ಸೂಚಿಸುವ ಪದ – ಶಿವ ಶಿವಾ