ಪದ್ಯ ೩೨: ಅರ್ಜುನನ ಆರೈಕೆಗೆ ಯಾರನ್ನು ನೇಮಿಸಿದನು?

ಇವರನರಮನೆಯೊಳಗೆ ಕನ್ಯಾ
ಭವನ ಮಧ್ಯದೊಳಿರಿಸಿ ಬಳಿಕಿನೊ
ಳಿವರ ಶುಶ್ರೂಷೆಗೆ ಸುಭದ್ರಾದೇವಿಯನು ಕರೆಸಿ
ಇವರಪೂರ್ವ ಮಹಾತ್ಮಕರು ನೀ
ನಿವರ ದೇವಾರ್ಚನೆ ಸಮಾಧಿ
ಪ್ರವರದಲಿ ಬೆಸಸಿದನು ಮಾಡುವುದೆಂದು ನೇಮಿಸಿದ (ಆದಿ ಪರ್ವ, ೧೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸನ್ಯಾಸಿ ವೇಷದಲ್ಲಿದ್ದ ಅರ್ಜುನನನ್ನು ಅರಮನೆಯ ಕನ್ಯಾಭವನದ ಮಧ್ಯಭಾಗದಲ್ಲಿರಿಸಿ, ತನ್ನ ತಂಗಿಯಾದ ಸುಭದ್ರೆಯನ್ನು ಇವರ ಶುಶ್ರೂಷೆಗೆ ನೇಮಿಸಿ, ಇವರು ಅಪೂರ್ವ ಮಹಾತ್ಮರು, ಇವರು ಮಾಡುವ ದೇವತಾರ್ಚನೆ ಇವರು ಸಮಾಧಿಸ್ಥಿತಿಯಲ್ಲಿರಲು ಅನುಕೂಲಗಳನ್ನು ಇವರು ಹೇಳಿದಂತೆ ಮಾಡು ಎಂದು ಆಜ್ಞಾಪಿಸಿದನು.

ಅರ್ಥ:
ಅರಮನೆ: ರಾಜರ ವಾಸಸ್ಥಾನ; ಕನ್ಯ: ಹುಡುಗಿ; ಭವನ: ಮನೆ; ಮಧ್ಯ: ನಡು; ಶುಶ್ರೂಷೆ: ಆರೈಕೆ; ಕರೆಸಿ: ಬರೆಮಾಡು; ಅಪೂರ್ವ: ಅಪರೂಪವಾದ; ಮಹಾತ್ಮ: ಘನವಂತ;ಅರ್ಚನೆ: ಪೂಜೆ; ಸಮಾಧಿ: ಒಂದು ಸ್ಥಿತಿ, ತನ್ಮಯತೆ; ಪ್ರವರ: ಶ್ರೇಷ್ಠ; ಬೆಸಸು:ಹೇಳು; ನೇಮಿಸು: ಮನಸ್ಸನ್ನು ನಿಯಂತ್ರಿಸು;

ಪದವಿಂಗಡಣೆ:
ಇವರನ್+ ಅರಮನೆಯೊಳಗೆ +ಕನ್ಯಾ
ಭವನ +ಮಧ್ಯದೊಳ್+ಇರಿಸಿ+ ಬಳಿಕಿನೊಳ್
ಇವರ +ಶುಶ್ರೂಷೆಗೆ +ಸುಭದ್ರಾದೇವಿಯನು +ಕರೆಸಿ
ಇವರ್+ ಅಪೂರ್ವ +ಮಹಾತ್ಮಕರು+ ನೀನ್
ಇವರ+ ದೇವಾರ್ಚನೆ+ ಸಮಾಧಿ
ಪ್ರವರದಲಿ+ ಬೆಸಸಿದನು +ಮಾಡುವುದೆಂದು +ನೇಮಿಸಿದ

ಅಚ್ಚರಿ:
(೧) ಇವರ – ೪ ಸಾಲುಗಳಲ್ಲಿ ಮೊದಲ ಪದ
(೨) ಇರಿಸಿ, ಕರೆಸಿ, ಬೆಸಸಿ, ನೇಮಿಸಿ – ಪ್ರಾಸ ಪದಗಳು

ಪದ್ಯ ೩: ಅರ್ಜುನನ ಅಭಯ ಹೇಗಿತ್ತು?

ಕರೆಸಿ ವಿಪ್ರರ ಬಾಧೆಗಳನಾ
ದರಿಸಿ ಕೇಳಿದು ಸಂತವಿಸಿ ಪರಿ
ಹರಿಸಿಕೊಡುವೆನು ದುಷ್ಟ ಪಾಟಚ್ಚರ ಪರಿಪ್ಲವವ
ಮರಳಿ ನೀವೆಂದವರ ಬೀಳ್ಕೊಂ
ಡರಿ ನಿವಾರಣ ಬಂದನಗ್ಗದ
ಶರಧನುವ ಕೊಳಲೆಂದು ರಾಯನ ಸೆಜ್ಜೆಯರಮನೆಗೆ (ಆದಿ ಪರ್ವ, ೧೯ ಸಂಧಿ, ೩ ಪದ್ಯ)

ತಾತ್ಪರ್ಯ:
ಬ್ರಾಹ್ಮಣರ ಆಕ್ರಂದನವನ್ನು ಕೇಳಿ ಅವರ ತೊಂದರೆಗಳನ್ನು ಕೇಳಿ, ಅವರಿಗೆ ಸಾಂತ್ವಾನವನ್ನು ಹೇಳಿ, ಆ ದುಷ್ಟ ಕಳ್ಳರನ್ನು ಬಂಧಿಸಿ ನಿಮ್ಮ ದಿಗ್ಭ್ರಮೆಯನ್ನು ಹೋಗಲಾಡಿಸುತ್ತೇನೆ, ನೀವೆಲ್ಲರು ನಿಮ್ಮ ಸ್ಥಳಕ್ಕೆ ಹಿಂದಿರುಗಿ ಎಂದು ಹೇಳಿ, ತನ್ನ ಬಿಲ್ಲು ಬಾಣಗಳನ್ನು ತೆಗೆದುಕೊಳ್ಳಲು ಯುಧಿಷ್ಠಿರನ ಶಯ್ಯಾಗೃಹಕ್ಕೆ ಹೋದನು.

ಅರ್ಥ:
ಕರೆಸಿ: ಬರೆಮಾಡಿಕೊಂಡು; ವಿಪ್ರ: ಬ್ರಾಹ್ಮಣ; ಬಾಧೆ: ತೊಂದರೆ; ಆದರಿಸಿ:ಉಪಚಾರಮಾಡು; ಕೇಳಿ: ಆಲಿಸು; ಸಂತವಿಸು: ಸಂತೈಸು, ಸಮಧಾನ ಮಾಡು; ಪರಿಹರಿಸು: ನಿವಾರಿಸು, ನೀಗು; ದುಷ್ಟ: ನೀಚ, ಕೆಟ್ಟವ; ಪಾಟಚ್ಚರ: ಕಳ್ಳ; ಪರಿಪ್ಲವ: ಉಪದ್ರವ; ಮರಳಿ: ಹಿಂದಿರುಗಿ; ಬೀಳ್ಕೊಡು: ಹಿಂದಿರುಗು; ನಿವಾರಣ: ಹೋಗಲಾಡಿಸು; ಬಂದನ:ಸೆರೆ; ಅಗ್ಗ:ಶ್ರೇಷ್ಠ; ಶರ: ಬಾಣ; ಧನು: ಬಿಲ್ಲು; ರಾಯ: ರಾಜ; ಸೆಜ್ಜೆ:ಶಯ್ಯಾಗೃಹ;

ಪದವಿಂಗಡಣೆ:
ಕರೆಸಿ +ವಿಪ್ರರ +ಬಾಧೆಗಳನ್
ಆದರಿಸಿ +ಕೇಳಿದು +ಸಂತವಿಸಿ+ ಪರಿ
ಹರಿಸಿಕೊಡುವೆನು +ದುಷ್ಟ +ಪಾಟಚ್ಚರ+ ಪರಿಪ್ಲವವ
ಮರಳಿ +ನೀವೆಂದ್+ಅವರ +ಬೀಳ್ಕೊಂ
ಡರಿ +ನಿವಾರಣ +ಬಂದನ+ ಅಗ್ಗದ
ಶರಧನುವ+ ಕೊಳಲೆಂದು +ರಾಯನ +ಸೆಜ್ಜೆಯರಮನೆಗೆ

ಅಚ್ಚರಿ:
(೧) “ಸಿ” ಕಾರದ ಪದಗಳು – ಕರೆಸಿ, ಆದರಿಸಿ, ಪರಿಹರಿಸಿ, ಸಂತವಿಸಿ