ಪದ್ಯ ೪೯: ಕರ್ಣನನ್ನು ಹೇಗೆ ಹೊಗಳಿದರು?

ಬರಿಯ ಕಕ್ಕುಲಿತೆಯಲಿ ಕರ್ಣನ
ಮರೆಯ ಹೊಕ್ಕೆವು ಕರ್ಣನೀತನ
ತರುಬಿದನಲಾ ಶಕ್ತಿಯಾವೆಡೆಯೆಂದು ಕೆಲಕೆಲರು
ಕರುಬುತನವೇಕಕಟ ಪುಣ್ಯದ
ಕೊರೆತೆ ನಮ್ಮದು ಕರ್ಣನೇಗುವ
ನಿರಿತಕಂಜಿದ ನಾವೆ ಬಾಹಿರರೆಂದರುಳಿದವರು (ದ್ರೋಣ ಪರ್ವ, ೧೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕೌರವ ಯೋಧರು, ಬರಿಯ ಕಕುಲಾತಿಯಿಂದ ಕರ್ಣನ ಮರೆಹೊಕ್ಕೆವು, ಕರ್ಣನು ಇವನನ್ನು ತಡೆದು ನಿಲ್ಲಿಸಿದ. ಆದರೆ ಅವನ ಬಳಿಯಿರುವ ಶಕ್ತ್ಯಾಯುಧವೆಲ್ಲಿ ಎಂದು ಕೆಲವರು, ಮತ್ಸರವೇಕೆ ನಮ್ಮ ಪುಣ್ಯಹೀನವಾದರೆ ಕರ್ಣನೇನು ಮಾಡಲು ಸಾಧ್ಯ? ಘಟೋತ್ಕಚನ ಇರಿತಕ್ಕೆ ಹೆದರಿದ ನಾವೇ ಬಾರಿರರು ಎಂದು ಇನ್ನು ಕೆಲವರು ಮಾತನಾಡಿಕೊಂಡರು.

ಅರ್ಥ:
ಕಕ್ಕುಲಿತೆ: ಚಿಂತೆ; ಮರೆ: ಅಡ್ಡಿ, ತಡೆ; ಹೊಕ್ಕು: ಸೇರು; ತರುಬು: ತಡೆ, ನಿಲ್ಲಿಸು; ಶಕ್ತಿ: ಬಲ; ಕರುಬು: ಹೊಟ್ಟೆಕಿಚ್ಚು ಪಡು; ಅಕಟ: ಅಯ್ಯೋ; ಪುಣ್ಯ: ಸದಾಚಾರ; ಕೊರತೆ: ಕಡಮೆ; ಏಗು: ಸಾಗಿಸು; ಇರಿ: ಚುಚ್ಚು; ಅಂಜು: ಹೆದರು; ಬಾಹಿರ: ಹೊರಗೆ; ಉಳಿದ: ಮಿಕ್ಕ;

ಪದವಿಂಗಡಣೆ:
ಬರಿಯ +ಕಕ್ಕುಲಿತೆಯಲಿ +ಕರ್ಣನ
ಮರೆಯ +ಹೊಕ್ಕೆವು +ಕರ್ಣನ್+ಈತನ
ತರುಬಿದನಲಾ+ ಶಕ್ತಿಯಾವೆಡೆ+ಎಂದು+ ಕೆಲಕೆಲರು
ಕರುಬುತನವೇಕ್+ಅಕಟ +ಪುಣ್ಯದ
ಕೊರೆತೆ +ನಮ್ಮದು +ಕರ್ಣನೇಗುವನ್
ಇರಿತಕ್+ಅಂಜಿದ +ನಾವೆ +ಬಾಹಿರರ್+ಎಂದರ್+ಉಳಿದವರು

ಅಚ್ಚರಿ:
(೧) ಪುಣ್ಯದ ಮಹಿಮೆ – ಕರುಬುತನವೇಕಕಟ ಪುಣ್ಯದ ಕೊರೆತೆ ನಮ್ಮದು

ಪದ್ಯ ೪೫: ಗಂಧರ್ವರು ಹೇಗೆ ಮುನ್ನುಗ್ಗಿದರು?

ಮುರಿದ ಬಲ ಸಂವರಿಸಿ ಪಡಿಮುಖ
ಕುರುಬಿದುದು ದುರ್ಯೋಧನಾನುನ
ರರಸಿದರು ಗಂಧರ್ವನಾವೆಡೆ ತೋರು ತೋರೆನುತ
ತರುಬುವುದು ಜಯವೊಮ್ಮೆ ಮನದಲಿ
ಕರುಬುವುದು ಮತ್ತೊಮ್ಮೆ ತಪ್ಪೇ
ನಿರಿದಸಹಸವ ತೋರೆನುತ ಬೆರಸಿದರು ಪರಬಲವ (ಅರಣ್ಯ ಪರ್ವ, ೨೦ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸೋತು ಹಿಮ್ಮೆಟ್ಟಿದ ಕುರುಸೈನ್ಯವು ಸುಧಾರಿಸಿಕೊಂಡು ಚಿತ್ರಸೇನನ ಸಮ್ಮುಖಕ್ಕೆ ನುಗ್ಗಿತು. ಕೌರವನ ತಮ್ಮಂದಿರು ಗಂಧರ್ವನೆಲ್ಲಿ, ಎಂದು ಗರ್ಜಿಸುತ್ತಾ ಅವನನ್ನು ಹುಡುಕಿದರು. ಒಮ್ಮೆ ಗೆಲುವು ಒಮ್ಮೆ ಸೋಲು ಯುದ್ಧದಲ್ಲಿ ಸಹಜ. ನೀನು ಗೆದ್ದ ಸಾಹಸವನ್ನು ಈಗ ತೋರಿಸು, ಎಂದು ಅವರು ಗಂಧರ್ವ ಸೈನ್ಯದೊಡನೆ ಕೈ ಮಾಡಿದರು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಸಂವರಿಸು: ಗುಂಪುಗೂಡು, ಸಜ್ಜು ಮಾದು; ಪಡಿಮುಖ: ಎದುರು; ಕುರುಬು: ದ್ವೇಷ, ಅಸೂಯೆ; ಅನುಜ: ತಮ್ಮ; ಅರಸು: ಹುಡುಕು; ಗಂಧರ್ವ: ದೇವತೆಗಳ ವರ್ಗ; ತೋರು: ಗೋಚರ; ತರುಬು: ತಡೆ, ನಿಲ್ಲಿಸು; ಜಯ: ಗೆಲುವು; ಮನ: ಮನಸ್ಸು; ಕರುಬು:ಹೊಟ್ಟೆಕಿಚ್ಚು ಪಡು; ತಪ್ಪು: ಸರಿಯಿಲ್ಲದ; ಹಸ: ಉತ್ತಮವಾದ; ಬೆರಸು: ಕೂಡಿರುವಿಕೆ; ಪರಬಲ: ಎದುರಾಳಿಯ ಸೈನ್ಯ;

ಪದವಿಂಗಡಣೆ:
ಮುರಿದ+ ಬಲ +ಸಂವರಿಸಿ +ಪಡಿಮುಖ
ಕುರುಬಿದುದು +ದುರ್ಯೋಧನ್+ಅನುನರ್
ಅರಸಿದರು +ಗಂಧರ್ವನ್+ಆವೆಡೆ +ತೋರು +ತೋರೆನುತ
ತರುಬುವುದು+ ಜಯವೊಮ್ಮೆ+ ಮನದಲಿ
ಕರುಬುವುದು +ಮತ್ತೊಮ್ಮೆ +ತಪ್ಪೇನ್
ಇರಿದಸಹಸವ +ತೋರೆನುತ+ ಬೆರಸಿದರು+ ಪರಬಲವ

ಅಚ್ಚರಿ:
(೧) ಕುರುಬು, ತರುಬು, ಕರುಬು – ಪದಗಳ ಬಳಕೆ

ಪದ್ಯ ೩೦: ಭಗವಂತನ ದಯೆ ಎಂತಹುದು?

ಅರಸುತಾಯಾಮ್ನಾಯ ತತಿಕು
ಕ್ಕುರಿಸಿದವು ಮುನಿಗಳ ಸಮಾಧಿಗೆ
ಕರುಬುವವರಾವಲ್ಲ ಕಾಣರು ನಖದ ಕೊನೆಗಳನು
ಅರಸ ತಾನೇ ಹರಿಹರಿದು ತ
ನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ ರಾಯಗದುಗಿನ ವೀರನಾರಣನ (ಅರಣ್ಯ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ವೇದಗಳು ಭಗವಂತನನ್ನು ಹುಡುಕಲು ಹೊರಟು ಮುಂದೆ ಹೋಗಲು ದಾರಿ ಕಾಣದೇ ಸೋತು ಕುಳಿತುಬಿಟ್ಟವು, ಮುನಿಗಳು ಸಮಾಧಿ ಸ್ಥಿತಿಯನ್ನು ಹೋದುವರಲ್ಲಾ, ಅದನ್ನು ಕಂಡು ನಮಗೇನೂ ಹೊಟ್ಟೆಕಿಚ್ಚಿಲ್ಲ, ಆದರೆ ಅವರಿಗೆ ಭಗವಂತನ ಉಗುರುಗಳ ತುದಿಯೂ ಕಾಣಲಿಲ್ಲಾ, ಶ್ರೀ ಹರಿಯು ತನ್ನ ಭಕ್ತರನ್ನು ತಾನೆ ಮುಂದೆ ಬಂದು ಸಲಹುತ್ತಾನೆ, ಭಕ್ತರ ಮೇಲೆ ವೀರನಾರಾಯಣನ ಕರುಣೆ ಎಷ್ಟೋ ಯಾರು ಬಲ್ಲರು ಎಂದು ಜನಮೇಜಯ ರಾಜನಿಗೆ ವೈಶಂಪಾಯನರು ತಿಳಿಸಿದರು.

ಅರ್ಥ:
ಅರಸು: ಹುಡುಕು; ಆಮ್ನಾಯ: ಶೃತಿ; ತತಿ: ಸಮೂಹ; ಕುಕ್ಕುರಿಸು; ಕುಳಿತುಕೊಳ್ಳು; ಮುನಿ: ಋಷಿ; ಸಮಾಧಿ: ಏಕಾಗ್ರತೆ, ತನ್ಮಯತೆ; ಕರುಬು: ಹೊಟ್ಟೆಕಿಚ್ಚು ಪಡು; ಕಾಣು: ತೋರು; ನಖ: ಉಗುರು; ಕೊನೆ: ತುದಿ; ಅರಸ: ರಾಜ; ಹರಿಹರಿದು: ಮುಂದೆ ಬಂದು, ಚಲಿಸು; ಎರಕ: ಪ್ರೀತಿ, ಅನುರಾಗ; ಬಿಡು: ತೊರೆ; ಸಲಹು: ಕಾಪಾಡು; ಕರುಣ: ದಯೆ; ರಾಯ: ರಾಜ;

ಪದವಿಂಗಡಣೆ:
ಅರಸುತಾ+ಆಮ್ನಾಯ +ತತಿ+ಕು
ಕ್ಕುರಿಸಿದವು +ಮುನಿಗಳ +ಸಮಾಧಿಗೆ
ಕರುಬುವವರಾವಲ್ಲ+ ಕಾಣರು +ನಖದ +ಕೊನೆಗಳನು
ಅರಸ+ ತಾನೇ +ಹರಿಹರಿದು +ತನ್
ಎರಕದವರನು +ಬಿಡದೆ+ ಸಲಹುವ
ಕರುಣವೆಂತುಟೊ +ರಾಯ+ಗದುಗಿನ+ ವೀರನಾರಣನ

ಅಚ್ಚರಿ:
(೧) ಭಗವಂತನ ದಯೆ – ತಾನೇ ಹರಿಹರಿದು ತನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ

ಪದ್ಯ ೨೨:ಜರಾಸಂಧನ ಸೆರೆಯಲ್ಲಿದ್ದ ರಾಜರನ್ನು ಯಾರು ಬಿಡಿಸಿದರು?

ಬೆರೆತನಗ್ಗದ ಮಾಗಧೇಂದ್ರನ
ಮುರಿದ ಮುರುಕಕೆ ಭೀಮನಾತನ
ಸೆರೆಯ ಮನೆಯಲಿ ಸಿಕ್ಕಿದವನೀಪಾಲ ಪಂತಿಗಳ
ಸೆರೆಯನಿವ ಬಿಡಿಸಿದನು ಗಡ ಬೊ
ಬ್ಬಿರಿವ ಪೌರುಷವೇಕೆ ಕಡೆಯಲಿ
ಕರುಬುವವರಾವೈಸಲೇ ನಿಮಗೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮಹಾಪರಾಕ್ರಮಿಯಾದ ಜರಾಸಂಧನನ್ನು ಇವನು ತಡಕಿದ್ದು ನಿಜ, ಆದರೆ ಅವನನ್ನು ಸಂಹರಿಸಿದವನು ಭೀಮ. ಇವನು ಜರಾಸಂಧನ ಸೆರೆಮನೆಯಲ್ಲಿದ್ದ ರಾಜರ ಸೆರೆಯನ್ನು ಬಿಡಿಸಿದನಲ್ಲವೇ? ಇದನ್ನೇಕೆ ಇವನ ಪೌರುಷವೆಂದು ಕೂಗಿ ಹೇಳುವಿರಿ? ಕೊನೆಗೆ ಇವನನ್ನು ಕಂಡರೆ ನಮಗೆ ಹೊಟ್ಟೆಕಿಚ್ಚು ಎಂದು ಹೇಳುವಿರಲ್ಲವೇ ಎಂದು ಶಿಶುಪಾಲನು ಹೇಳಿದನು.

ಅರ್ಥ:
ಬೆರೆತು: ಸೇರು; ಅಗ್ಗ: ಶ್ರೇಷ್ಠ; ಮಾಗಧೇಂದ್ರ: ಜರಾಸಂಧ; ಇಂದ್ರ: ಒಡೆಯ; ಮುರಿ: ಸೀಳು; ಮುರುಕು: ವಿರೋಧಿಸು, ಎದುರು ಬೀಳು; ಸೆರೆ: ಬಂಧನ; ಮನೆ: ಆಲಯ; ಸಿಕ್ಕು: ಬಂಧನಕ್ಕೊಳಗಾಗು, ಸೆರೆಯಾಗು; ಅವನೀಪಾಲ: ರಾಜ; ಪಂತಿ: ಸಾಲು, ಪಂಕ್ತಿ; ಸೆರೆ: ಬಂಧನ; ಬಿಡಿಸು: ಕಳಚು, ಸಡಿಲಿಸು, ನಿವಾರಿಸು; ಗಡ: ಅಲ್ಲವೇ; ಬೊಬ್ಬಿರಿ: ಜೋರಾಗಿ ಕೂಗು; ಪೌರುಷ: ಶೌರ್ಯ; ಕಡೆ: ಕೊನೆ; ಕರುಬು: ಹೊಟ್ಟೆಕಿಚ್ಚು ಪಡು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಬೆರೆತನ್+ಅಗ್ಗದ +ಮಾಗಧ+ಇಂದ್ರನ
ಮುರಿದ+ ಮುರುಕಕೆ+ ಭೀಮನ್+ಆತನ
ಸೆರೆಯ +ಮನೆಯಲಿ +ಸಿಕ್ಕಿದ್+ಅವನೀಪಾಲ +ಪಂತಿಗಳ
ಸೆರೆಯನ್+ಇವ +ಬಿಡಿಸಿದನು +ಗಡ+ ಬೊ
ಬ್ಬಿರಿವ+ ಪೌರುಷವೇಕೆ+ ಕಡೆಯಲಿ
ಕರುಬುವವರಾವೈಸಲೇ +ನಿಮಗೆಂದನಾ +ಚೈದ್ಯ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಾಗಧೇಂದ್ರನ ಮುರಿದ ಮುರುಕಕೆ

ಪದ್ಯ ೪೯: ಭೀಮನು ಶಲ್ಯಾದಿಗಳಿಗೆ ಏನೆಂದು ಹೇಳಿ ಅಪ್ಪಳಿಸಿದನು?

ತರುಬಿದನು ಮಾದ್ರೇಶ ಪವನಜ
ನುರುಬೆಯನು ಫಲುಗುಣನ ಬಾಣವ
ಮುರಿಯೆನುತ ರಾಧೇಯನಿರಿದನು ಸಿಂಹನಾದದಲಿ
ಕರುಬರೋ ಘನಯಂತ್ರ ಭೇದಿಯ
ನರಿದು ಕಾಡುವ ಕುರುಡರೋ ನೀ
ವಿರಿತಕಂಘೈಸಿದಿರೆನುತ ಕೈಕೊಂಡನಾ ಭೀಮ (ಆದಿ ಪರ್ವ, ೧೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಮನ ಆವೇಶಭರಿತ ಮುಂದುವರಿಯುವುದನ್ನು ಮದ್ರ ದೇಶದ ದೊರೆ, ಶಲ್ಯ ತಡೆದನು. ಇತ್ತ ಕರ್ಣನು ಅರ್ಜುನನ ಬಾಣಗಳನ್ನು ಕತ್ತರಿಸಿ ಘರ್ಜಿಸಿದನು. ನೀವೇನು ಹೊಟ್ಟೆಕಿಚ್ಚು ಪಟ್ಟು ಈ ರೀತಿ ಯುದ್ಧವನ್ನು ಸಾರಿರುವರೋ, ನೀವು ಮಿಸುಕಿಸಲಾಗದ ಬಿಲ್ಲನ್ನೆತ್ತಿ ಯಂತ್ರವನ್ನು ಭೇದಿಸಿ ಪರಾಕ್ರಮವನ್ನು ಮೆರೆದು ಅದನ್ನು ನೋಡಲಾಗದಂತಹ ಕುರುಡರೋ ಯುದ್ಧಕ್ಕೆ ಬಂದಿರುವಿರಲ್ಲ, ಎಂದು ಭೀಮನು ಶಲ್ಯನಿಗೆ ಹೇಳುತ್ತಾ, ಮರದಿಂದಪ್ಪಳಿಸಿದನು.

ಅರ್ಥ:
ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಮಾದ್ರೇಶ: ಮದ್ರ ದೇಶದ ರಾಜ-ಶಲ್ಯ; ಪವನ: ಅನಿಲ, ವಾಯು; ಪವನಜ: ಭೀಮ; ಉರುಬು: ರಭಸ; ಫಲಗುಣ: ಅರ್ಜುನ; ಬಾಣ: ಶರ; ಮುರಿ: ಬಗ್ಗು; ಇರಿ: ಚುಚ್ಚು; ಸಿಂಹ: ಕೇಸರಿ; ಸಿಂಹನಾದ: ಘರ್ಜಿಸು; ಕರುಬ:ಮತ್ಸರಿಸು, ಹೊಟ್ಟೆಕಿಚ್ಚು; ಘನ: ಭಾರ, ದೊಡ್ಡ, ಶ್ರೇಷ್ಠ; ಯಂತ್ರ: ಉಪಕರಣ; ಭೇದಿಸು: ಸೀಳು; ಅರಿ: ತಿಳಿ; ಕಾಡು: ಏಡಿಸು, ಅವಹೇಳನ ಮಾಡು; ಕುರುಡ: ಕಣ್ಣು ಕಾಣದವ; ಅಂಗೈಸು: ಒಪ್ಪು, ಸ್ವೀಕರಿಸು;

ಪದವಿಂಗಡಣೆ:
ತರುಬಿದನು +ಮಾದ್ರೇಶ +ಪವನಜನ್
ಉರುಬೆಯನು +ಫಲುಗುಣನ+ ಬಾಣವ
ಮುರಿಯೆನುತ+ ರಾಧೇಯನ್+ಇರಿದನು +ಸಿಂಹನಾದದಲಿ
ಕರುಬರೋ +ಘನಯಂತ್ರ +ಭೇದಿಯನ್
ಅರಿದು +ಕಾಡುವ +ಕುರುಡರೋ +ನೀವ್
ಇರಿತಕಂಘೈಸಿದಿರ್+ಎನುತ +ಕೈಕೊಂಡನಾ +ಭೀಮ

ಅಚ್ಚರಿ:
(೧) ತರುಬು, ಉರುಬು, ಕರುಬು – ಬು ಕಾರದಿಂದ ಕೊನೆಗೊಳ್ಳುವ ಪದಗಳ ಬಳಕೆ
(೨) ಮಾದ್ರೇಶ, ಪವನಜ, ಫಲುಗುಣ, ರಾಧೇಯ – ಶಲ್ಯ, ಭೀಮ, ಅರ್ಜುನ ಮತ್ತು ಕರ್ಣನನ್ನು ಸಂಭೋದಿಸಿರುವುದು