ಪದ್ಯ ೨೭: ಕೃಷ್ಣನು ಧರ್ಮಜನಿಗೆ ಏನು ಹೇಳಿದ?

ಹಗೆಗಳಮರಾರಿಗಳು ನಮ್ಮಯ
ನಗರಿ ಶೂನ್ಯಾಸನದಲಿರ್ದುದು
ವಿಗಡ ರಾಮಾದಿಗಳು ವಿಷಯಂಗಳ ವಿನೋದಿಗಳು
ಅಗಲಲಾರೆನು ನಿಮ್ಮವನದೋ
ಲಗಕೆ ಬಿಡೆಯವ ಕಾಣೆನೆಂದನು
ನಗುತ ಕರುಣಾಸಿಂಧು ಯಮನಂದನನ ಮೊಗ ನೋಡಿ (ಅರಣ್ಯ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ನಮ್ಮ ದ್ವಾರಕಾಪುರಿಗೆ ರಾಕ್ಷಸರದ್ದೇ ದೊಡ್ಡ ವಿಪತ್ತು, ನಮಗೆ ರಾಕ್ಷಸರೇ ಶತ್ರುಗಳು, ನಮ್ಮ ಊರನ್ನು ಕಾಪಾಡಲು ಜನರಿಲ್ಲ, ಬಲರಾಮನೇ ಮೊದಲಾದವರು ವಿಷಯ ವಸ್ತುಗಳಲ್ಲಿ ಆಸಕ್ತರು. ಊರನ್ನು ಬಿಟ್ಟಿರಲಾರೆ, ನಿಮ್ಮೊಡನೆ ವನವಾಸದಲ್ಲಿರಲು ನನಗೆ ಪುರುಸೊತ್ತು ಇಲ್ಲ, ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ಹಗೆ: ವೈರಿ; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ನಗರ: ಊರು; ಶೂನ್ಯ: ಬರಿದಾದುದು; ವಿಗಡ: ಶೌರ್ಯ, ಪರಾಕ್ರಮ; ಆದಿ: ಮೊದಲಾದ; ವಿಷಯ: ಭೋಗಾಭಿಲಾಷೆ; ವಿನೋದ: ಸಂತೋಷ, ಹಿಗ್ಗು; ಅಗಲು: ಬಿಟ್ಟಿರು, ಬೇರೆ; ವನ: ಕಾಡು; ಓಲಗ: ದರ್ಬಾರು; ಬಿಡೆ: ಬಿಡುವು; ಕಾಣು: ತೋರು; ನಗು: ಸಂತ್ಸ; ಕರುಣಾಸಿಂಧು: ಕರುಣಾ ಸಾಗರ; ನಂದನ: ಮಗ; ಮೊಗ: ಮುಖ; ನೋಡಿ: ವೀಕ್ಷಿಸು; ಆಸನ: ಪೀಠ;

ಪದವಿಂಗಡಣೆ:
ಹಗೆಗಳ್+ಅಮರಾರಿಗಳು+ ನಮ್ಮಯ
ನಗರಿ+ ಶೂನ್ಯಾಸನದಲ್+ಇರ್ದುದು
ವಿಗಡ +ರಾಮಾದಿಗಳು+ ವಿಷಯಂಗಳ+ ವಿನೋದಿಗಳು
ಅಗಲಲಾರೆನು +ನಿಮ್ಮ+ವನದ್
ಓಲಗಕೆ +ಬಿಡೆಯವ+ ಕಾಣೆನೆಂದನು
ನಗುತ +ಕರುಣಾಸಿಂಧು +ಯಮನಂದನನ +ಮೊಗ +ನೋಡಿ

ಅಚ್ಚರಿ:
(೧) ಹಗೆ, ಅರಿ – ಸಾಮ್ಯಾರ್ಥ ಪದ

ಪದ್ಯ ೨೩: ದುಶ್ಯಾಸನ ಹೇಗೆ ಗರ್ಜಿಸಿದ?

ಬಂಧು ಕೃತ್ಯದ ಮಾತು ಸೂರ್ಯಂ
ಗಂಧಕಾರವು ಸೇರುವುದೆ ನಿ
ರ್ಬಂಧದಲಿ ನೀವೇಕೆ ನುಡಿವಿರಿ ರಾಜಕಾರಿಯವ
ಸಂಧಿಯಾಗದು ಪಾಂಡವರ ಸಂ
ಬಂಧ ನಮಗೇಕೆನುತ ಕರುಣಾ
ಸಿಂಧುವಿನ ಮೊಗ ನೋಡಿ ದುಶ್ಯಾಸನನು ಗರ್ಜಿಸಿದ (ಉದ್ಯೋಗ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಈ ವಿಷಯ ಬಂಧುಗಳ ನಡುವೆ ನಡೆಯುವ ಮಾತಿಗೆ ಸಂಬಂಧಿಸಿದ್ದು. ಸೂರ್ಯನಿಗೆ ಅಂಧಕಾರವು ಸರಿಹೊಂದುತ್ತದೆಯೇ? ಹಾಗೆಯೆ ನೀವೇಕೆ ನಿರ್ಬಂಧದಿಂದ ರಾಜಕಾರ್ಯವನ್ನು ನಮ್ಮ ಮೇಲೆ ಹೇರುತ್ತೀರಿ? ಸಂಧಿಯನ್ನು ನಾವು ಮಾಡಿಕೊಳ್ಳುವುದಿಲ್ಲ, ಪಾಂಡವರ ಜೊತೆ ಸಂಬಂಧವಾದರೂ ನಮಗೇಕೆ ಎಂದು ಶ್ರೀಕೃಷ್ಣನ ಮುಖವನ್ನು ನೋಡುತ್ತಾ ಆರ್ಭಟಿಸಿದನು.

ಅರ್ಥ:
ಬಂಧು: ಸಂಬಂಧಿಕ; ಕೃತ್ಯ: ಕೆಲಸ; ಮಾತು: ವಾಣಿ; ಸೂರ್ಯ: ಭಾನು; ಅಂಧಕಾರ: ಕತ್ತಲು; ಸೇರು: ಜೊತೆಗೂಡು; ನಿರ್ಬಂಧ: ಬಂಧುತ್ವವಿಲ್ಲದ; ರಾಜಕಾರಿಯ: ರಾಜಕಾರಣ; ಸಂಧಿ: ಸಂಯೋಗ; ಸಂಬಂಧ: ಸಹವಾಸ, ಜೋಡಣೆ; ಕರುಣೆ: ದಯೆ; ಸಿಂಧು: ಸಾಗರ; ಮೊಗ: ಮುಖ; ಗರ್ಜಿಸು: ಆರ್ಭಟಿಸು;

ಪದವಿಂಗಡಣೆ:
ಬಂಧು +ಕೃತ್ಯದ +ಮಾತು +ಸೂರ್ಯಂಗ್
ಅಂಧಕಾರವು +ಸೇರುವುದೆ+ ನಿ
ರ್ಬಂಧದಲಿ +ನೀವೇಕೆ +ನುಡಿವಿರಿ +ರಾಜಕಾರಿಯವ
ಸಂಧಿಯಾಗದು +ಪಾಂಡವರ+ ಸಂ
ಬಂಧ +ನಮಗೇಕ್+ಎನುತ +ಕರುಣಾ
ಸಿಂಧುವಿನ +ಮೊಗ +ನೋಡಿ +ದುಶ್ಯಾಸನನು +ಗರ್ಜಿಸಿದ

ಅಚ್ಚರಿ:
(೧) ಕೃಷ್ಣನನ್ನು ಕರುಣಾಸಿಂಧು ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಸೂರ್ಯಂಗಂಧಕಾರವು ಸೇರುವುದೆ